ಗದಗ: ಸಮಾಜ ಮತ್ತು ಕುಟುಂಬ ಸುಧಾರಣೆಯಲ್ಲಿ ಮಹಿಳೆಯರ ಪಾತ್ರ ಮಹತ್ವದ್ದಾಗಿದೆ. ಮಹಿಳೆಯರಲ್ಲಿ ಆತ್ಮವಿಶ್ವಾಸ ಮೂಡಿಸಿದಾಗ ಮಾತ್ರ ಸಮಗ್ರ ಅಭಿವೃದ್ಧಿ ಸಾಧ್ಯವೆಂದು ನಂಬಿರುವ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಮಹಿಳೆಯರ ಆರ್ಥಿಕ ಸ್ವಾವಲಂಬನೆಗೆ ಬೆನ್ನೆಲುಬಾಗಿ ನಿಂತಿದೆ. ಕಳೆದ 10 ವರ್ಷಗಳಲ್ಲಿ ಜಿಲ್ಲೆಯ ಸಾವಿರಾರು ಮಹಿಳೆಯರು ಸ್ವಾವಲಂಬಿ ಬದುಕು ಕಂಡುಕೊಂಡು, ಕುಟುಂಬದ ಆರ್ಥಿಕತೆಗೆ ಹೆಗಲೊಡ್ಡಿದ್ದಾರೆ.
ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ನೇತೃತ್ವದ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಜಿಲ್ಲೆಯಲ್ಲಿ ಕಾರ್ಯಾರಂಭಿಸಿ ಇದೀಗ ದಶಮಾನೋತ್ಸವದ ಹೊಸ್ತಿಲಲ್ಲಿದೆ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿ ಜಿಲ್ಲೆಯಲ್ಲಿ ಈ ವರೆಗೆ 8100 ಸ್ವಸಹಾಯ ಸಂಘಗಳು ರಚನೆಯಾಗಿದ್ದು, 60 ಸಾವಿರ ಮಹಿಳೆಯರು ಫಲಾನುಭವಿಗಳಾಗಿದ್ದಾರೆ.
ಭರವಸೆ ಬೆಳಕು: ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯಡಿ ಹೆಚ್ಚಿನ ದಾಖಲೆಗಳ ಜಂಜಾಟವಿಲ್ಲ. ಕಡಿಮೆ ಬಡ್ಡಿ ದರದಲ್ಲಿ ಸ್ವಸಹಾಯ ಸಂಘದ ಮೂಲಕ ಮಹಿಳೆಯರು ಸಾಲ ಪಡೆಯಬಹುದಾಗಿದೆ. ಹೀಗಾಗಿ ಸಣ್ಣ-ಪುಟ್ಟ ವ್ಯಾಪಾರ ಆರಂಭಿಸಬೇಕು. ಕುಟುಂಬದ ಆರ್ಥಿಕ ಸ್ಥಿತಿ ಉತ್ತಮಗೊಳಿಸಬೇಕೆಂಬ ಕನಸು ಕಾಣುವ ಜಿಲ್ಲೆಯ ನಗರ ಮತ್ತು ಗ್ರಾಮೀಣ ಭಾಗದ ಅದೆಷ್ಟೋ ಬಡ ಮಹಿಳೆಯರಿಗೆ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ ಭರವಸೆ ಬೆಳಕಾಗಿದೆ. ಹತ್ತಾರು ಬ್ಯಾಂಕ್‌ಗಳು, ನೂರಾರು ಸಾಲ ಸೌಲಭ್ಯದ ಯೋಜನೆಗಳಿದ್ದರೂ, ಜಿಲ್ಲೆಯ ಸ್ವಸಹಾಯ ಮಹಿಳಾ ಸಂಘದ ಸದಸ್ಯೆಯರಿಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯೇ ಅಚ್ಚುಮೆಚ್ಚು.
430 ಕೋಟಿ ರೂ. ವಿನಿಯೋಗ: ಜಿಲ್ಲೆಯಲ್ಲಿ 2009ರಲ್ಲಿ ಆರಂಭಗೊಂಡಿರುವ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ, ಕಳೆದ 10 ವರ್ಷಗಳಲ್ಲಿ ಒಟ್ಟು 8,103 ಸ್ವಸಹಾಯ ಸಂಘ ರಚಿಸಿದೆ. ಸಂಘದ ಸದಸ್ಯರ ಕಾರ್ಯಚಟುವಟಿಕೆಗಳು ಹಾಗೂ ಬೇಡಿಕೆಗೆ ತಕ್ಕಂತೆ ಈ ವರೆಗೆ 430 ಕೋಟಿ ರೂ. ಸಾಲದ ರೂಪದಲ್ಲಿ ವಿನಿಯೋಗಿಸಿದೆ. ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯಿಂದ ಸಾಲ ಪಡೆದಿರುವ ಮಹಿಳಾ ಸ್ವಸಹಾಯ ಸಂಘದ ಸದಸ್ಯರ ಪೈಕಿ 40ಕ್ಕೂ ಹೆಚ್ಚು ಸದಸ್ಯೆಯರು ಹಿಟ್ಟಿನ ಗಿರಣಿ, ರೊಟ್ಟಿ ಮಷೀನ್, ಶಾವಿಗೆ ಯಂತ್ರ ಆರಂಭಿಸಿದ್ದಾರೆ.
ಸಾಲ ಸದ್ವಿನಿಯೋಗ: ಅದರಲ್ಲಿ ನಾಲ್ಕೈದು ಮಹಿಳೆಯರಿಗೆ ಉದ್ಯೋಗ ಕಲ್ಪಿಸಿದ್ದು ರೊಟ್ಟಿಗಳನ್ನು ಹುಬ್ಬಳ್ಳಿ, ಬೆಂಗಳೂರು ಇನ್ನಿತರೆ ಮಹಾನಗರಗಳ ಹೋಟೆಲ್‌ಗಳಿಗೆ ಸಾಗಿಸುತ್ತಿದ್ದಾರೆ. ಇನ್ನೂ ಕೆಲವರು ಪತಿ, ಮಗನಿಗೆ ಆಟೋ ಕೊಡಿಸಲು ಸಾಲ ಪಡೆದಿದ್ದಾರೆ. ಲಕ್ಕುಂಡಿ ಭಾಗದ ಮಹಿಳೆಯರು ಸೇವಂತಿ, ಗುಲಾಬಿ, ಸುಗಂಧ ಪುಷ್ಪ ಬೆಳೆ ಬೆಳೆಯುತ್ತಿದ್ದಾರೆ. ಕೃಷಿ ಯಂತ್ರೋಪಕರಣ, ತೋಟಗಾರಿಕೆ ಬೆಳೆ, ಹೈನುಗಾರಿಕೆಯಲ್ಲಿ ಸಾಲ ಹೂಡಿಕೆ ಮಾಡಿದ್ದಾರೆ. ನಗರ ಪ್ರದೇಶದ ಮಹಿಳೆಯರು ತರಕಾರಿ ವ್ಯಾಪಾರ, ಲೇಡಿಸ್ ಟೇಲರ್ ಅಂಗಡಿ, ಬ್ಯೂಟಿ ಪಾರ್ಲರ್ ಸೇರಿದಂತೆ 16,493 ಮಹಿಳೆಯರು ಸ್ವಯಂ ಉದ್ಯೋಗ ಕಂಡುಕೊಂಡಿದ್ದು, ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಸಾಲ ಸದ್ವಿನಿಯೋಗಿಸಿದ್ದಾರೆ ಎಂಬುದು ವಿಶೇಷ. ಅದರೊಂದಿಗೆ ನಮ್ಮೂರು ನಮ್ಮ ಕೆರೆ ಯೋಜನೆಯಡಿ ಜಿಲ್ಲೆಯ ಮಲ್ಲಾಪುರ, ನಿಡಗುಂದಿ, ಸವಡಿ ಹಾಗೂ ಪೆಟಾಲೂರು ಕೆರೆಗಳನ್ನು ಅಭಿವೃದ್ಧಿ ಪಡಿಸಿದೆ. 26 ಮದ್ಯವರ್ಜನ ಶಿಬಿರಗಳ ಮೂಲಕ 1,319 ಮಂದಿಯನ್ನು ಮದ್ಯಪಾನ ಮುಕ್ತರನ್ನಾಗಿಸಿದೆ. 13 ಸಾವಿರ ಕುಟುಂಬಗಳಿಗೆ ಶೌಚಾಲಯ ಒದಗಿಸಿದೆ. ಇನ್ನುಳಿದಂತೆ 164 ಮಂದಿ ನಿರ್ಗತಿಕರಿಗೆ ಮಾಸಾಶನ ಒದಗಿಸುವ ಮೂಲಕ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡಿದೆ ಎಂದು ಹೇಳಲಾಗಿದೆ. ಒಟ್ಟಾರೆ, ಸರ್ಕಾರದ ಸಬ್ಸಿಡಿ ಸಹಿತ ಸಾಲ, ನೇರ ಸಾಲ ಸೌಲಭ್ಯ ಪಡೆಯಲು ನೂರಾರು ದಾಖಲೆಗಳನ್ನೊತ್ತು ಕಚೇರಿಗಳಿಗೆ ಅಲೆಯುವುದು ಅನಿವಾರ್ಯ. ಆದರೆ, ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಮಹಿಳಾ ಸಶಕ್ತೀಕರಣಕ್ಕೆ ನೈಜವಾಗಿ ಶ್ರಮಿಸುತ್ತಿರುವುದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
ಮಹಿಳೆಯರು ಆರ್ಥಿಕ, ಸಾಮಾಜಿಕವಾಗಿ ಸದೃಢರಾಗಲು ಗ್ರಾಮಾಭಿವೃದ್ಧಿ ಯೋಜನೆ ಪ್ರಗತಿನಿಧಿ, ಜ್ಞಾನ ವಿಕಾಸ, ತರಬೇತಿ ಕಾರ್ಯಕ್ರಮಗಳು ಸ್ವಸಹಾಯ ಸಂಘದ ಸದಸ್ಯರಿಗೆ ತುಂಬ ಉಪಯುಕ್ತವಾಗಿವೆ. ಸಂಘದಿಂದ 1 ಲಕ್ಷ ರೂ. ಸಾಲ ಪಡೆದು ಬ್ಯೂಟಿ ಪಾರ್ಲರ್ ನಡೆಸುತ್ತಿದ್ದೇನೆ. ಮನೆ ಆರ್ಥಿಕ ಸಮಸ್ಯೆ ಕಡಿಮೆಯಾಗಿದ್ದು, ನೆಮ್ಮದಿ ತಂದಿದೆ.
ದೀಪಾ, ನಾಗಸಮುದ್ರ ನಿವಾಸಿ
ಜಿಲ್ಲೆಯಲ್ಲಿ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಕಳೆದ 10 ವರ್ಷಗಳಲ್ಲಿ ಉತ್ತಮ ಸಾಧನೆ ತೋರಿದೆ. 60 ಸಾವಿರ ಮಹಿಳೆಯರನ್ನು ಆರ್ಥಿಕ ಸ್ವಾವಲಂಬಿಯನ್ನಾಗಿಸಿದೆ. ಸಾಲ ಸೌಲಭ್ಯ ನೀಡುವ ಜತೆಗೆ ಅವರು ತೊಡಗಿಸಿಕೊಳ್ಳುವ ಕ್ಷೇತ್ರದ ಬಗ್ಗೆ ಮಾರ್ಗದರ್ಶನ, ಮಾರುಕಟ್ಟೆ ಅವಕಾಶಗಳ ಬಗ್ಗೆ ತರಬೇತಿ ನೀಡಲಾಗುತ್ತದೆ. ಜಿಲ್ಲೆಯಲ್ಲಿ ಸಂಸ್ಥೆ ಆರಂಭಗೊಂಡು ದಶಮಾನೋತ್ಸವ ಆಚರಿಸುತ್ತಿದ್ದು, ಜ.26ರಂದು ನಡೆಯುವ ಜಿಲ್ಲಾ ಮಹಿಳಾ ಸಮಾವೇಶದಲ್ಲಿ ಸಂಸ್ಥೆಯಿಂದ ಲಾಭಾಂಶ ವಿತರಿಸಲಾಗುತ್ತದೆ.
ಸುಕೇಶ್.ಎ.ಎಸ್.
ಗದಗ ತಾಲೂಕು ಯೋಜನಾಧಿಕಾರಿ
•ವಿಶೇಷ ವರದಿ