ಗದಗ: ಕಪ್ಪತ್ತಗುಡ್ಡ ಸೆರಗಿನಲ್ಲಿರುವ ಡಂಬಳ ಗ್ರಾಮದಲ್ಲಿ ಹತ್ತಾರು ಹಕ್ಕಿಗಳು ಅನುಮಾನಾಸ್ಪದವಾಗಿ ಮೃತಟ್ಟಿದ್ದರಿಂದ ಸ್ಥಳೀಯರಲ್ಲಿ ಹಕ್ಕಿ ಜ್ವರದ ಭೀತಿ ಶುರುವಾಗಿದೆ. ಇದರ ಬೆನ್ನಲ್ಲೇ ಪಕ್ಷಗಳ ಮೃತದೇಹವನ್ನು ಸಂಗ್ರಹಿಸಿರುವ ಪಶು ಸಂಗೋಪನೆ ಇಲಾಖೆ ವೈದ್ಯರು, ಹಕ್ಕಿಗಳ ಮರಣೋತ್ತರ ಪರೀಕ್ಷೆಗಾಗಿ ಭೂಪಾಲ್‌ನ ಪ್ರಯೋಗಾಲಯಕ್ಕೆ ರವಾನಿಸಿದರು.
ಗ್ರಾಮದ ಪ್ರವಾಸಿ ಮಂದಿರ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಕಳೆದ ರಾತ್ರಿಯಿಂದೀಚೆಗೆ ವಿವಿಧ ಪ್ರಭೇದದ ೫೦ಕ್ಕೂ ಹೆಚ್ಚು ಹಕ್ಕಿಗಳು ಮೃತಟ್ಟಿವೆ. ಈ ಪೈಕಿ ರೆಡ್‌ವೆಂಟೆಡ್ ಬುಲ್‌ಬುಲ್ ಮತ್ತು ವೈಟ್ ರಂಪಡ ಸೇರಿದಂತೆ ಬಣ್ಣ ಬಣ್ಣಗಳಿಂದ ಕೂಡಿರುವ ಅಪರೂಪದ ಹಕ್ಕಿಗಳು ಮೃತಟ್ಟಿವೆ ಎಂದು ಹೇಳಲಾಗಿದೆ.
ಇದನ್ನೂ ಓದಿ:ಶೌಚಾಲಯ ಅನುದಾನ ಬಳಕೆ ವರದಿ ನೀಡಿ; ಉಪ ಲೋಕಾಯುಕ್ತ ಪಾಟೀಲ ತಾಕೀತು
ಈ ಕುರಿತು ಮಾಹಿತಿ ತಿಳಿಯುತ್ತಿದ್ದಂತೆ ಪಶುವೈದ್ಯಕೀಯ ಇಲಾಖೆಯ ಡಾ|ಜಟ್ಟೆಣ್ಣವರ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ಪರಿಶೀಲಿಸಿದರು. ಈ ಪೈಕಿ ೮ ರೆಡ್‌ವೆಂಟೆಡ್ ಬುಲ್‌ಬುಲ್ ಮತ್ತು ೧ ವೈಟ್ ರಂಪಡ ಪಕ್ಷಿಗಳ ಮೃತ ದೇಹವನ್ನು ಸಂಗ್ರಹಿಸಿದ್ದು, ಪಕ್ಷಿಗಳ ಸಾವಿನ ನಿಖರ ಕಾರಣ ತಿಳಿಯಲು ಮರಣೋತ್ತರ ಪರೀಕ್ಷೆಗಾಗಿ ಭೂಪಾಲ್‌ನಲ್ಲಿರುವ ಕೇಂದ್ರ ನಿಶಾದ್ ಪ್ರಯೋಗಾಲಯಕ್ಕೆ ರವಾನಿಸಲಾಗಿದೆ ಎಂದು ಪಶುವೈದ್ಯಕೀಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು.
ಜೊತೆಗೆ ಮುಂಜಾಗ್ರತಾ ಕ್ರಮವಾಗಿ ಪ್ರವಾಸಿ ಮಂದಿರದ ಸುತ್ತಮುತ್ತಲಿನ ಪ್ರದೇಶದಲ್ಲಿ ಸಾರ್ವಜನಿಕರ ಸಂಚಾರವನ್ನು ನಿಷಧಿಸಿದೆ.