ಗದಗ: ಕೇಂದ್ರ ಸರ್ಕಾರದ ಮಹತ್ವಕಾಂಕ್ಷೆಯ ಅಲ್ಪಸಂಖ್ಯಾತ ಸಮುದಾಯ ಅಭಿವೃದ್ಧಿಗಾಗಿ ಇರುವ ಪ್ರಧಾನ ಮಂತ್ರಿಗಳ 15 ಅಂಶಗಳ ಕಾರ್ಯಕ್ರಮ ಅನುಷ್ಠಾನ ಕುರಿತು ಜಿಲ್ಲಾಧಿಕಾರಿ ಎಂ. ಸುಂದರೇಶ ಬಾಬು ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸಭೆ ಜರುಗಿತು.
ಜಿಲ್ಲಾಧಿಕಾರಿ ಎಂ. ಸುಂದರೇಶ ಬಾಬು ಮಾತನಾಡಿ, ಅಲ್ಪಸಂಖ್ಯಾತರ ಅಭಿವೃದ್ಧಿ ಇಲಾಖೆಯಡಿ ಕಾರ್ಯನಿರ್ವಹಿಸುವ ಮೌಲಾನಾ ಆಝಾದ್ ಮಾದರಿ ಶಾಲೆಗಳಿಗೆ ಕೂಡಲೇ ನಿವೇಶನ ದೊರಕಿಸಿ ಕೊಡುವಂತೆ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಿಗೆ ಸೂಚಿಸಿದರು. ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಲ್ಲಿ ಎಷ್ಟು ಜನ ಅಲ್ಪಸಂಖ್ಯಾತರಿಗೆ ಉದ್ಯೋಗ ನೀಡಲಾಗಿದೆ ಎಂಬುದರ ಕುರಿತು ಜಿಲ್ಲಾ ಉದ್ಯೋಗ ಮತ್ತು ವಿನಿಮಯ ಕಚೇರಿ ಅಧಿಕಾರಿಗಳಿಂದ ಮಾಹಿತಿ ಪಡೆದರು.
ಜಿಲ್ಲೆಯಲ್ಲಿ ವಿವಿಧ ವಸತಿ ಯೋಜನೆಗಳಲ್ಲಿ ಅಲ್ಪಸಂಖ್ಯಾತರಿಗೆ ಇರುವ ಗುರಿ ಸಾಧನೆ ಬಗ್ಗೆ ಅವಲೋಕಿಸಿ ನಿಗದಿತ ಅವದಿಯೊಳಗೆ ಇಲಾಖಾಧಿಕಾರಿಗಳು ಪ್ರಗತಿ ಸಾಧಿಸಲು ಸೂಚಿಸಿದರು.
ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮಗಳಿಂದ ಸಾಲ ಸೌಲಭ್ಯ ನೀಡಿದ ಬಗ್ಗೆ ವಿವರಣೆ ಪಡೆದು ಫಲಾನುಭವಿಗಳ ಆಯ್ಕೆ ಪ್ರಕ್ರಿಯೆ ಬೇಗ ಮುಗಿಸಿ ಗುರಿ ಸಾಧಿಸುವಂತೆ ತಿಳಿಸಿದರು. ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಡಿಸಿ ರವಿ. ಎಲ್. ಗುಂಜೀಕರ್ ಮಾತನಾಡಿ, 15 ಅಂಶ ಕಾರ್ಯಕ್ರಮಗಳ ಬಗ್ಗೆ ಸಭೆಗೆ ವಿವರಿಸಿ, ಅಲ್ಪಸಂಖ್ಯಾತರ ಸಮುದಾಯ ಹೆಚ್ಚಾಗಿ ವಾಸಿಸುವ ಪ್ರದೇಶದಲ್ಲಿ ಉರ್ದು ಬಲ್ಲ ಅಂಗನವಾಡಿ ಕಾರ್ಯಕರ್ತರನ್ನು ನೇಮಿಸುವಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಸಲಹೆ ನೀಡಿದರು.
2020-21 ನೇ ಸಾಲಿನ ವಿದ್ಯಾರ್ಥಿ ವೇತನ ಅರ್ಜಿ ಸಲ್ಲಿಸುವ ಪರಿಶೀಲಿಸುವ ಪ್ರಕ್ರಿಯೆ ಪ್ರಗತಿಯಲ್ಲಿದ್ದು ಶುಲ್ಕ ವಿನಾಯತಿ ಕಾನೂನು ತರಬೇತಿ ಭತ್ಯೆ, ಡಿ.ಎಡ್/ಬಿ.ಎಡ್, ಪಿ.ಎಚ್.ಡಿ. ವಿದ್ಯಾರ್ಥಿಗಳಿಗೆ ಶಿಷ್ಯ ವೇತನ ಮುಂತಾದ ಶೈಕ್ಷಣಿಕ ಯೋಜನೆಗಳನ್ನು ಗದಗ ಜಿಲ್ಲೆಯಲ್ಲಿ ಅತ್ಯಂತ ಯಶಸ್ವಿಯಾಗಿ ಕೈಗೊಳ್ಳಲಾಗುತ್ತಿರುವುದಾಗಿ ಸಭೆಗೆ ತಿಳಿಸಿದರು. ವಿವಿಧ ವಸತಿ ಯೋಜನೆಗಳಲ್ಲಿ ಹಾಗೂ ಫಲಾನುಭವಿಗಳ ಆಯ್ಕೆಯಲ್ಲಿ ಅಲ್ಪಸಂಖ್ಯಾತರಿಗೆ ಕಡ್ಡಾಯವಾಗಿ ಶೇ.15ರಷ್ಟು ಮೀಸಲಾತಿ ನಿಗದಿಪಡಿಸಿ ಹಂಚಿಕೆ ಮಾಡಬೇಕೆಂದು ಇಲಾಖಾ ಅಧಿಕಾರಿಗಳಿಗೆ ತಿಳಿಸಿದರು.
ಇದನ್ನೂ ಓದಿ :ಉತ್ತರಕಾಶಿ ಗಂಗೋರಿ ಆಶ್ರಮದಲ್ಲಿ ತಪೋವನಿ ಮಾತಾ ಪಂಚಭೂತಲೀನ
ಜಿಲ್ಲಾ ನಗರಾಭಿವೃದ್ಧಿ ಕೋಶ, ಲೀಡ್ ಬ್ಯಾಂಕ್, ಕೆ.ಎಂ.ಡಿ.ಸಿ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಉದ್ಯೋಗ ಮತ್ತು ವಿನಿಮಯ ಕೇಂದ್ರ ಅಧಿಕಾರಿಗಳು ಹಾಜರಿದ್ದರು.