Advertisement

ಗದಗ: ಮಾರುಕಟ್ಟೆಗೆ ಲಗ್ಗೆಯಿಟ್ಟ ಹಣ್ಣುಗಳ ರಾಜ- ದರದಲ್ಲಿ ವ್ಯತ್ಯಾಸ

05:43 PM Mar 26, 2024 | Team Udayavani |

ಉದಯವಾಣಿ ಸಮಾಚಾರ
ಗದಗ: ಜಿಲ್ಲೆಯಲ್ಲಿ ಎಲ್ಲೆಡೆ ಮಾವಿನ ಸುಗ್ಗಿ ಆರಂಭವಾಗಿದೆ. ಆಫೂಸ್‌, ಸಿಂಧೂರ ತಳಿಗಳ ಮಾವಿನ ಹಣ್ಣುಗಳ ಜತೆಗೆ ವಿವಿಧ ಮಾವಿನ ಹಣ್ಣು ಮಾರುಕಟ್ಟೆಗೆ ಲಗ್ಗೆಯಿಟ್ಟಿವೆ. ಭರಪೂರ ಮಾರಾಟವಾಗುತ್ತಿದೆ.

Advertisement

ಜನರ ಬಾಯಿ ಸಿಹಿ ಮಾಡಲು ಮದರಪಲ್ಲಿ, ಅಂಕೋಲಾ ಕಲ್ಮಿ, ಕಲ್ಮಿ, ಆಫೂಸ್‌, ಸಿಂಧೂರ ಹಣ್ಣುಗಳು ಮಾರುಕಟ್ಟೆಯಲ್ಲಿ ಲಭ್ಯವಿದ್ದು, ಇನ್ನು ವಿವಿಧ ತಳಿಯ ಹಣ್ಣುಗಳು ಆಗಮಿಸುತ್ತಿವೆ. ಜಿಲ್ಲೆಯ ಗದಗ, ರೋಣ, ಮುಂಡರಗಿ ತಾಲೂಕುಗಳ ಕೆಲ ಕಡೆಗಳಲ್ಲಿ ರತ್ನಗಿರಿ, ಆಫೂಸ್‌, ಮಲ್ಲಿಕಾ, ಅಲ್ಫಾನ್ಸೋ ಮಾವು ಹೆಚ್ಚಿನ ಕ್ಷೇತ್ರದಲ್ಲಿ ಬೆಳೆಯುತ್ತಿದ್ದಾರೆ. ತೋತಾಪುರಿ(ಗೋವಾ), ನೀಲಂ ತಳಿ ಮಾವುಗಳನ್ನು ಕೂಡ ಕೆಲ ರೈತರು ಬೆಳೆದಿದ್ದಾರೆ. ಉತ್ತಮ ಬೆಲೆಗೆ ಮಾರಾಟ ಮಾಡುತ್ತಿದ್ದು, ಹೆಚ್ಚಿನ ಆದಾಯ ನಿರೀಕ್ಷಿಸಲಾಗಿದೆ. ಕಳೆದ ಬಾರಿಗಿಂತ ಈ ಬಾರಿ ಮಾವಿನ ಇಳುವರಿ ಕುಂಠಿತಗೊಂಡಿದ್ದರಿಂದ ದರದಲ್ಲಿ ವ್ಯತ್ಯಾಸವಾಗಿದೆ.

ಮಾವು ಉತ್ಪಾದನೆಯಲ್ಲಿ ಕುಂಠಿತ: ಜಿಲ್ಲೆಯಲ್ಲಿ 2020-21ನೇ ಸಾಲಿನಲ್ಲಿ 1,025 ಹೆಕ್ಟೇರ್‌ ಪ್ರದೇಶದಲ್ಲಿ 3,007 ಟನ್‌, 2021-22ನೇ ಸಾಲಿನಲ್ಲಿ 1,116.80 ಹೆಕ್ಟೇರ್‌ನಲ್ಲಿ 9,726.72 ಟನ್‌, 2022-23ನೇ ಸಾಲಿನಲ್ಲಿ 1,139 ಹೆಕ್ಟೇರ್‌ ಪ್ರದೇಶದಲ್ಲಿ 4,500 ಟನ್‌ ಉತ್ಪಾದನೆಯಾಗಿತ್ತು. ಪ್ರಸಕ್ತ ಸಾಲಿನಲ್ಲಿ ಮಾವು ಇಳುವರಿಯಲ್ಲಿ ಕುಂಠಿತವಾಗಿದ್ದು, 3,000 ಟನ್‌ ನಿರೀಕ್ಷಿಸಲಾಗಿದೆ.

ಹಣ್ಣುಗಳ ದರ: ಆಂಧ್ರ ಮದರಪಲ್ಲಿ ಕೆಜಿಗೆ 250-300 ರೂ., ಅಂಕೋಲಾ ಕಲ್ಮಿ ಕೆಜಿಗೆ 300-400 ರೂ., ಕಲ್ಮಿ ಕೆಜಿಗೆ 350ರಿಂದ 400 ರೂ., ಆಫೂಸ್‌ ಕೆಜಿಗೆ 300ರಿಂದ 1,110 ರೂ. ಮಾರಾಟವಾಗುತ್ತಿದೆ.

ಹೂವಿನಂಚಿನಲ್ಲೇ ಉದುರಿದ ಮಾವು: ಮಾವು ಹೂವು ಬಿಡುವ ಅವಧಿಯಲ್ಲಿ ಉತ್ತಮ ವಾತಾವರಣವಿದ್ದ ಕಾರಣ ಹೆಚ್ಚಿನ ಪ್ರಮಾಣದಲ್ಲಿ ಹೂವು ಬಿಟ್ಟಿತ್ತು. ಅದೇ ಸಮಯಕ್ಕೆ ಬೂದು ರೋಗ, ಚಿಕ್ಕೆ ರೋಗ, ರಸ ಹೀರುವ ಕೀಟಗಳ ಬಾಯಿಯಿಂದ ಹೂವು, ಮಿಡಿಕಾಯಿ ಹಂತದಲ್ಲೇ ಸಾಕಷ್ಟು ಪ್ರಮಾಣದಲ್ಲಿ ಉದುರಿದ್ದರಿಂದ ಮಾವಿನ ಇಳುವರಿಯಲ್ಲಿ ಕುಂಠಿತಗೊಂಡು ಬೆಲೆ ಹೆಚ್ಚಳಕ್ಕೆ ಕಾರಣವಾಗಿದೆ ಎನ್ನುತ್ತಾರೆ ತೋಟಗಾರಿಕೆ ಇಲಾಖೆ ಅಧಿಕಾರಿಗಳು

Advertisement

ಬೇಸಿಗೆಯಲ್ಲಿ ಮಾವಿನ ಹಣ್ಣಿಗೆ ಬೇಡಿಕೆ ಇರುವುದು ಸಹಜ. ಈ ಬಾರಿ ಮಾವಿನ ಹಣ್ಣಿನ ಬೆಲೆ ಹೆಚ್ಚಳವಾಗಿದೆ. ಆದರೂ ಮಾವಿನ ಹಣ್ಣು ತಿನ್ನಬೇಕೆಂಬ ಆಸೆಯಿಂದ ಚೌಕಾಸಿ ಮಾಡಿ ಹಣ್ಣು ಖರೀದಿಸಿದ್ದೇವೆ.
*ಸಚಿನ್‌ ಹೊಸಮನಿ, ಗ್ರಾಹಕ.

ಪ್ರಸಕ್ತ ಸಾಲಿನಲ್ಲಿ ಮಾವು ಇಳುವರಿ ಕುಂಠಿತಗೊಂಡಿದ್ದು, ಕೆಲವೇ ಕೆಲವು ತಳಿಗಳು ಆಗಮಿಸಿವೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಜಿಲ್ಲೆಯಲ್ಲಿ ಬೆಳೆದ ಮಾವಿನ ಹಣ್ಣುಗಳ ಗಾತ್ರ ಸ್ವಲ್ಪ ಚಿಕ್ಕದಾಗಿವೆ. ಆದರೂ ಮಾವಿನ ಹಣ್ಣಿಗೆ ಬೇಡಿಕೆ ಇದ್ದು, ಬೆಲೆ ಏರಿಕೆಯಿದ್ದರೂ ಉತ್ತಮ ವ್ಯಾಪಾರವಾಗುತ್ತಿದೆ.
*ಮೆಹಬೂಬ್‌ ಕಾತರಕಿ,
ಮಾವಿನ ಹಣ್ಣಿನ ವ್ಯಾಪಾರಿ.

ಆರಂಭದಲ್ಲಿ ಬಂಪರ್‌ ಇಳುವರಿ ನಿರೀಕ್ಷೆ ಮಾಡಲಾಗಿತ್ತು. ಆದರೆ ಮಳೆ ಅಭಾವ, ವಾತಾವರಣದಲ್ಲಿ ತೇವಾಂಶ ಕೊರತೆ ಹಾಗೂ ರಸ ಹೀರುವ ಕೀಟಗಳ ಪ್ರಮಾಣ ಹೆಚ್ಚಿದ್ದರಿಂದ ಇಳುವರಿ ಕುಂಠಿತಗೊಂಡಿದೆ. ಮಾವಿನ ಗಿಡಗಳು ಕಾಳು ಕಟ್ಟಿದ ಸಂದರ್ಭ ಮಳೆಯಾಗಿದ್ದರೆ ನಾವು ಅಂದುಕೊಂಡ ಇಳುವರಿ ನಿರೀಕ್ಷಿಸಬಹುದಿತ್ತು. ಆದರೆ ಹೂವು, ಮಿಡಿಕಾಯಿ ಹಂತದಲ್ಲಿ ಉದುರುತ್ತಿರುವುದರಿಂದ ರೈತರ ನಿರೀಕ್ಷೆ ಹುಸಿಯಾಗಿದೆ.
*ಶಶಿಕಾಂತ ಕೋಟಿಮನಿ,
ಉಪನಿರ್ದೇಶಕರು, ತೋಟಗಾರಿಕೆ ಇಲಾಖೆ.

*ಅರುಣಕುಮಾರ ಹಿರೇಮಮಠ

Advertisement

Udayavani is now on Telegram. Click here to join our channel and stay updated with the latest news.

Next