Advertisement

ಗದಗ: ಅಂಗಾಂಗ ಕಸಿಗೂ ಆರ್‌ಎಂಎಸ್‌ಎಸ್‌ ಸಿದ್ಧ-ಅತ್ಯಾಧುನಿಕ ಆಪರೇಷನ್‌ ಥಿಯೇಟರ್

01:44 PM Feb 02, 2024 | Team Udayavani |

ಉದಯವಾಣಿ ಸಮಾಚಾರ
ಗದಗ: ಸಚಿವ ಎಚ್‌.ಕೆ. ಪಾಟೀಲ ಅವರ ತವರು ಕ್ಷೇತ್ರ ಹುಲಕೋಟಿ ಹತ್ತಾರು ಹೊಸತನಕ್ಕೆ ಮುನ್ನುಡಿ ಬರೆದಿರುವ ಗ್ರಾಮವಾಗಿದೆ. ಪ್ರಸ್ತುತ ಅಂಗಾಂಗ ಕಸಿ(ಟ್ರಾನ್ಸ್‌ ಪ್ಲ್ಯಾಂ ಟ್‌)ಕೂಡ ಹುಲಕೋಟಿ ಗ್ರಾಮದಲ್ಲಿನ ರೂರಲ್‌ ಮೆಡಿಕಲ್‌ ಸರ್ವೀಸ್‌ ಸೊಸೈಟಿ(ಆರ್‌ಎಂಎಸ್‌ಎಸ್‌) ಆಸ್ಪತ್ರೆ ಅತ್ಯಾಧುನಿಕ ಸೌಲಭ್ಯ ನೀಡುತ್ತಿರುವ ಉತ್ತರ ಕರ್ನಾಟಕ ಭಾಗದ ಮೊದಲ ಗ್ರಾಮೀಣ ಆಸ್ಪತ್ರೆ ಎನ್ನುವ ಹೆಗ್ಗಳಿಕೆ ಪಡೆದಿದೆ.

Advertisement

ಆರ್‌ಎಂಎಸ್‌ಎಸ್‌ ಆಸ್ಪತ್ರೆ ರೂರಲ್‌ ಮೆಡಿಕಲ್‌ ಸರ್ವಿಸಸ್‌ ಒಂದು ಭಾಗವಾಗಿದ್ದು, ಇದು ಸಚಿವ ಎಚ್‌.ಕೆ. ಪಾಟೀಲರ ಕನಸಿನ ಕೂಸಾಗಿದೆ. ಪ್ರಸ್ತುತ ಇಲ್ಲಿ 3 ಕೋಟಿ ರೂ. ಗೂ ಅಧಿಕ ವೆಚ್ಚದಲ್ಲಿ ಅತ್ಯುನ್ನತ ಚಿಕಿತ್ಸಾ ಉಪಕರಣ ಅಳವಡಿಸಲಾಗಿದೆ. ಉತ್ತರ ಕರ್ನಾಟಕದಲ್ಲೇ ಅತ್ಯಾಧುನಿಕ ಮಾಡ್ಯುಲರ್‌ ಆಪರೇಷನ್‌ ಥೇಟರ್‌ ಹೊಂದಿದೆ. ಒಂದು ನಿಮಿಷಕ್ಕೆ 75 ಬಾರಿ ಗಾಳಿ ನವೀಕರಣ(ಎಎಚ್‌ ಯು) ಸಾಮರ್ಥ್ಯ ಹೊಂದಿರುವ ಅತ್ಯುತ್ತಮ ಉಪಕರಣವನ್ನು ಆಪರೇಷನ್‌ ಥೇಟರ್‌ನಲ್ಲಿ ಅಳವಡಿಸಲಾಗಿದೆ.

ಸಚಿವರ ಹೆಸರಿನಲ್ಲಿ ಎಚ್‌.ಕೆ. ಪಾಟೀಲ ಸೇವಾ ತಂಡ ಎಂದು ಪ್ರಾರಂಭಿಸಲಾಗಿರುವ ಈ ಸೇವಾ ತಂಡ ಗದಗ ಮತಕ್ಷೇತ್ರ ವ್ಯಾಪ್ತಿಯಲ್ಲಿನ ಸಾರ್ವಜನಿಕರಿಗೆ ಅತ್ಯುತ್ತಮ, ಗುಣಮಟ್ಟದ ಆರೋಗ್ಯ ಸೇವೆ ನೀಡುತ್ತಿದೆ. 2023ರ ಆಗಸ್ಟ್‌ 15ರಂದು ಈ ಯೋಜನೆಗೆ ಚಾಲನೆ ನೀಡಿದ್ದು, ಅಲ್ಲಿಂದ ಇಲ್ಲಿಯವರೆಗೂ ಉಚಿತ ನೇತ್ರ ತಪಾಸಣೆ, ಶಸ್ತ್ರ ಚಿಕಿತ್ಸೆ, ಹೃದಯ ಸಂಬಂಧಿ  ಚಿಕಿತ್ಸೆಗಳನ್ನು ಸಮರ್ಥವಾಗಿ ನೀಗಿಸುತ್ತಿದೆ.

3,500 ಜನರಿಗೆ ಉಚಿತ ಚಿಕಿತ್ಸೆ: ದೃಷ್ಟಿ ಹೀನ ಚಿಕಿತ್ಸೆ, ಕಣ್ಣಿನ ಪೊರೆ ಚಿಕಿತ್ಸೆ, ಕಣ್ಣಿನ ದುರ್ಮಾಂಸ ತೆಗೆಯುವುದು ಸೇರಿ ಹಲವು ಚಿಕಿತ್ಸೆ ಮಾಡಲಾಗುತ್ತಿದೆ. ಕಳೆದ ಆಗಸ್ಟ್‌ನಿಂದ ಈವರೆಗೆ 2,900 ಜನರಿಗೆ ಉಚಿತ ಕಣ್ಣಿನ ಚಿಕಿತ್ಸೆ, 54 ಹೃದಯ ಸಂಬಂಧಿ ಚಿಕಿತ್ಸೆ, ಎಲುವು-ಕೀಲು, ಇಬ್ಬರಿಗೆ ಮೊಣಕಾಲು ಚಿಪ್ಪು ಬದಲಾವಣೆ ಚಿಕಿತ್ಸೆ ಸೇರಿದಂತೆ ಒಟ್ಟು 3,500ಕ್ಕೂ ಹೆಚ್ಚು ಜನರಿಗೆ ಉಚಿತ ಆರೋಗ್ಯ ಸೌಲಭ್ಯ ಕಲ್ಪಿಸಿದೆ.

ಆರ್‌.ಎಂ.ಎಸ್‌ ಮತ್ತು ಎಂ.ಎಂ. ಜೋಶಿ ಸಹಯೋಗದಲ್ಲಿ ಈ ಸೇವೆ ನಡೆಯುತ್ತಿದ್ದು, ಡಾ| ಎಸ್‌.ಆರ್‌. ನಾಗನೂರು, ಡಾ| ಸವಿತಾ
ಹೊಂಬಾಲಿ, ಜಗದೀಶ ಗಡ್ಡೆಪ್ಪನವರ, ಡಾ| ಚಿಂತಾಮಣಿ ಸೇರಿದಂತೆ ನುರಿತ ವೈದ್ಯರ ತಂಡ ಚಿಕಿತ್ಸೆಗೆ ಲಭ್ಯವಿದೆ.

Advertisement

ಮಾರ್ಚ್‌ 16ಕ್ಕೆ ಆರಂಭ
ಅಂಗಾಂಗ ಕಸಿಗೆ ಬೇಕಾಗುವ ಅತ್ಯಾಧುನಿಕ ಸೌಲಭ್ಯವುಳ್ಳ ಆಪರೇಶನ್‌ ಥೇಟರ್‌ ಕೂಡ ಸಿದ್ಧವಾಗಿದೆ. ಇಲಾಖೆ ನಿಯಮದಂತೆ ಎಲ್ಲಾ ವ್ಯವಸ್ಥೆಗಳು ಪೂರ್ಣಗೊಂಡಿದ್ದು, ಅಂಗಾಂಗ ಕಸಿಗೆ ಅನುಮತಿ ನೀಡುವ ನಿಟ್ಟಿನಲ್ಲಿ ಫೆ. 15ರಂದು ಆರೋಗ್ಯ ಇಲಾಖೆಯಲ್ಲಿನ ವಿಶೇಷ ತಂಡ ಆರ್‌ಎಂಎಸ್‌ಎಸ್‌ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಅನುಮತಿ ನೀಡಲಿದೆ. ಮಾ.16ಕ್ಕೆ ಈ ಆಸ್ಪತ್ರೆಯಲ್ಲಿಯೇ ಅಂಗಾಂಗ ಕಸಿ ನಡೆಯುವ ಸಾಧ್ಯತೆ ಇದೆ.

ವಿಧಾನಸಭಾ ಚುನಾವಣೆ ನಂತರ ಎರಡನೇ ಅವಧಿಗೆ ಸೇವಾ ತಂಡದಿಂದ ಉಚಿತ ಕಣ್ಣಿನ ಚಿಕಿತ್ಸೆ ಆರಂಭಿಸಲಾಗಿದೆ. ಈ
ವಾರ 48 ಜನರನ್ನು ಆಯ್ಕೆ ಮಾಡಲಾಗಿದೆ. ಸೋಮವಾರ, ಮಂಗಳವಾರ ತಲಾ 24  ಜನರ ಕಣ್ಣಿನ ಚಿಕಿತ್ಸೆ ನೆರವೇರಿಸಲಾಗುವುದು.
*ಡಾ|ವೇಮನ್‌ ಸಾಹುಕಾರ,ನೇತ್ರತಜ್ಞ.

ಹುಲಕೋಟಿ ಗ್ರಾಮದ ರೂರಲ್‌ ಮೆಡಿಕಲ್‌ ಸರ್ವಿಸ್‌ ಸೊಸೈಟಿ ಆಸ್ಪತ್ರೆ ಮೂಲಕ ಬಡವರಿಗೆ ಗುಣಮಟ್ಟದ ಆರೋಗ್ಯ ಸೇವೆ ನೀಡಲಾಗುತ್ತಿದೆ. ನಮ್ಮ ಆಸ್ಪತ್ರೆ ಆಪರೇಷನ್‌ ಥೇಟರ್‌ಗಳಲ್ಲಿ ಅತ್ಯಾಧುನಿಕ ಸೌಲಭ್ಯ ಅಳವಡಿಸುತ್ತಿರುವ ಹಿನ್ನೆಲೆ ಕಳೆದ
6 ತಿಂಗಳಿಂದ ಆಪರೇಶನ್‌ನ್ನು ತಾತ್ಕಾಲಿಕ ನಿಲ್ಲಿಸಲಾಗಿತ್ತು. ಈಗ ಮತ್ತೆ ಆರಂಭಿಸಲಾಗಿದೆ.
*ಡಾ| ಎಸ್‌.ಆರ್‌. ನಾಗನೂರ,
ಹಿರಿಯ ವೈದ್ಯಾಧಿಕಾರಿ, ಆರ್‌ಎಂಎಸ್‌ ಹುಲಕೋಟಿ

*ಅರುಣಕುಮಾರ ಹಿರೇಮಠ

Advertisement

Udayavani is now on Telegram. Click here to join our channel and stay updated with the latest news.

Next