Advertisement

ಗದಗ: ವರ್ಷದಲ್ಲಿ ನಡೆದದ್ದು ಒಂದೇ ಉದ್ಯೋಗ ಮೇಳ

06:12 PM Jun 17, 2023 | Team Udayavani |

ಗದಗ: ಸರಕಾರ ಯುವಕರಿಗೆ ಉದ್ಯೋಗ ನೀಡುವಲ್ಲಿ ಎಡವುತ್ತಿದೆ. ಸರಕಾರಿ ಕೆಲಸ ವಿರಲಿ, ಖಾಸಗಿ ಉದ್ಯೋಗ ಒದಗಿಸಲು
ಸಹ ಉದ್ಯೋಗ ಮೇಳದಂತಹ ಅವಕಾಶ ಕಲ್ಪಿಸದಿರುವುದು ವಿಪರ್ಯಾಸದ ಸಂಗತಿ. ಹೌದು… ಮಾಜಿ ಸಿಎಂ ಬಸವರಾಜ
ಬೊಮ್ಮಾಯಿ ಸರಕಾರದ ಅವಧಿಯ 2022-23ನೇ ಸಾಲಿನಲ್ಲಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ವತಿಯಿಂದ ಜಿಲ್ಲೆಯಲ್ಲಿ
ನಡೆದಿದ್ದು ಕೇವಲ ಒಂದೇ ಒಂದು ಉದ್ಯೋಗ ಮೇಳ. ಅದರಲ್ಲಿ ಆಯ್ಕೆಯಾಗಿದ್ದು, ಬರೀ 52 ಯುವಕರು ಮಾತ್ರ.

Advertisement

ವರ್ಷದಿಂದ ವರ್ಷಕ್ಕೆ ಸಾವಿರಾರು ವಿದ್ಯಾರ್ಥಿಗಳು ಪದವಿ, ಡಿಪ್ಲೊಮಾ, ಐಟಿಐ ಸೇರಿ ಇತರೆ ಕೋರ್ಸ್‌ಗಳನ್ನು ಮುಗಿಸಿ
ಹೊರಬರುತ್ತಿದ್ದಾರೆ. ಆದರೆ, ಸರಕಾರ ಒಂದೆಡೆ ಖಾಲಿಯಿರುವ ಉದ್ಯೋಗಗಳನ್ನು ಭರ್ತಿ ಮಾಡಿಕೊಳ್ಳುತ್ತಿಲ್ಲ. ಮತ್ತೂಂದೆಡೆ
ಕಾಲಕಾಲಕ್ಕೆ ಉದ್ಯೋಗ ಮೇಳಗಳನ್ನು ನಡೆಸದೆ ಕೈಚೆಲ್ಲಿ ಕುಳಿತಿದೆ.

ಜಿಲ್ಲೆಯ ಕೆಲವು ಕಾಲೇಜುಗಳಲ್ಲಿ ಕೆಲವು ವಿದ್ಯಾರ್ಥಿಗಳು ಕ್ಯಾಂಪಸ್‌ ಸಂದರ್ಶನದ ಮೂಲಕ ಉದ್ಯೋಗ ಪಡೆದುಕೊಳ್ಳುತ್ತಾರೆ.
ಇನ್ನು ಸಂಘ-ಸಂಸ್ಥೆಗಳು, ಮಠ-ಮಂದಿರಗಳು ಉದ್ಯೋಗದಾತರನ್ನು ಕರೆಸುವ ಮೂಲಕ ಸಣ್ಣ ಪ್ರಮಾಣದಲ್ಲಿ ಉದ್ಯೋಗ
ಮೇಳ, ಸಂದರ್ಶನಗಳ ಮೂಲಕ ಕೆಲವು ವಿದ್ಯಾರ್ಥಿಗಳು ಉದ್ಯೋಗಾವಕಾಶ ಪಡೆದುಕೊಳ್ಳುತ್ತಾರೆ. ಆದರೆ, ಉದ್ಯೋಗದಾತರನ್ನು ಕರೆಸುವ ಮೂಲಕ ಉದ್ಯೋಗ ಮೇಳ ಆಯೋಜಿಸಿ ಸಾವಿರಾರು ಉದ್ಯೋಗಗಳನ್ನು ಕಲ್ಪಿಸುವ ಜವಾಬ್ದಾರಿ
ಮರೆತಿರುವ ಸರಕಾರಗಳೇ ಯುವಕರನ್ನು ನಿರುದ್ಯೋಗಿಗಳನ್ನಾಗಿಸುತ್ತಿವೆ ಎಂಬ ಆರೋಪ ಸಾರ್ವಜನಿಕ ವಲಯದಲ್ಲಿ
ಕೇಳಿಬರುತ್ತಿದೆ.

2022ರಲ್ಲಿ ಒಂದೇ ಬಾರಿ ಉದ್ಯೋಗ ಮೇಳ: 2022ರಲ್ಲಿ ಗದಗ ಜಿಲ್ಲೆಯಲ್ಲಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ವತಿಯಿಂದ ಉದ್ಯೋಗ ಮೇಳ ನಡೆದಿದ್ದು ಡಿ. 29ರಲ್ಲಿ ಮಾತ್ರ. ಗದಗ ನಗರದ ಶ್ರೀ ಬಸವೇಶ್ವರ ಕಲಾ, ವಾಣಿಜ್ಯ ಮತ್ತು
ವಿಜ್ಞಾನ ಮಹಾವಿದ್ಯಾಲಯದಲ್ಲಿ ನಡೆದಿದ್ದ ಉದ್ಯೋಗ ಮೇಳದಲ್ಲಿ ಎಸ್‌ಎಸ್‌ಎಲ್‌ಸಿ, ಪಿಯುಸಿ, ಐಟಿಐ, ಡಿಪ್ಲೊಮಾ ಹಾಗೂ
ಪದವಿ ಹೊಂದಿರುವ 447 ಪುರುಷ ಮತ್ತು ಮಹಿಳಾ ಆಭ್ಯರ್ಥಿಗಳು ಭಾಗವಹಿಸಿದ್ದರು. ಆ ಪೈಕಿ ಉದ್ಯೋಗ ದೊರೆತಿದ್ದು ಕೇವಲ 52 ಯುವಕರಿಗೆ ಮಾತ್ರ. ಆನಂತರ ಜಿಲ್ಲೆಯಲ್ಲಿ ಈವರೆಗೆ ಯಾವ ಉದ್ಯೊಗ ಮೇಳಗಳು ನಡೆಯದಿರುವುದು ವಿಪರ್ಯಾಸ.

ಮೇಳದಲ್ಲಿ ಭಾಗಾಯಾಗಿದ್ದ ಕಂಪನಿಗಳು: 2022ರ ಡಿ. 29ರಂದು ಗದಗ ನಗರದ ಶ್ರೀ ಬಸವೇಶ್ವರ ಕಲಾ, ವಾಣಿಜ್ಯ ಮತ್ತು
ವಿಜ್ಞಾನ ಮಹಾವಿದ್ಯಾಲಯದಲ್ಲಿ ನಡೆದಿದ್ದ ಉದ್ಯೋಗ ಮೇಳದಲ್ಲಿ ಅನ್ನಪೂರ್ಣ ಫೈನಾನ್ಶಿಯಲ್‌ ಸರ್ವಿಸ್‌ ಪ್ರೈ.ಲಿ., ಕನೆಕ್ಟ್
ಧಾರವಾಡ, ಕರಾವಳಿ ಟೀಚರ್ಸ್‌ ಹೆಲ್ಪ್ ಲೈನ್ಸ್‌, ಶೈನ್‌ ಹೆಲ್ತ್‌ ಕೇರ್‌ ಹುಬ್ಬಳ್ಳಿ ಸೇರಿದಂತೆ 10ಕ್ಕೂ ಹೆಚ್ಚು ವಿವಿಧ ಕಂಪನಿಗಳು
ಪಾಲ್ಗೊಂಡಿದ್ದವು.

Advertisement

ಪ್ರಸ್ತುತ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರಕಾರ ಖಾಲಿಯಿರುವ ಸರಕಾರಿ ಹುದ್ದೆಗಳನ್ನು ತುಂಬಿಕೊಳ್ಳಬೇಕು.
ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಮೂಲಕ ನಾಲ್ಕು ತಿಂಗಳಿಗೊಮ್ಮೆ ಬೃಹತ್‌ ಉದ್ಯೋಗ ಮೇಳಗಳನ್ನು ಆಯೋಜಿಸುವ ಮೂಲಕ ಯುವರಿಗೆ ಉದ್ಯೋಗ ಕಲ್ಪಿಸಬೇಕು. ಇದರಿಂದ ನಿರುದ್ಯೋಗ ಸಮಸ್ಯೆ ನೀಗುತ್ತದೆ.
ಸಂತೋಷ ಬಡಿಗೇರ,
ಸಾಮಾಜಿಕ ಕಾರ್ಯಕರ್ತರು, ಗದಗ

ಸರಕಾರ ಸೂಚಿಸಿದಂತೆ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಿಂದ 2022ರ ಡಿಸೆಂಬರ್‌ನಲ್ಲಿ ಮಾತ್ರ ಉದ್ಯೋಗ ಮೇಳ ನಡೆಸುವ ಮೂಲಕ 52 ಯುವಕರಿಗೆ ಉದ್ಯೋಗ ಕಲ್ಪಿಸಲಾಗಿದೆ. ಇನ್ನು, ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಸಹಯೋಗದಲ್ಲಿ ವಿವಿಧ ಶಾಲಾ-ಕಾಲೇಜುಗಳಲ್ಲಿ ಕ್ಯಾಂಪಸ್‌ ಸಂದರ್ಶನ ಹಾಗೂ ವಾಕ್‌ ಇನ್‌ ಇಂಟರ್‌ವ್ಯೂ ನಡೆಸುವ ಮೂಲಕ ಯುವಕರಿಗೆ ಉದ್ಯೋಗದ ಅವಕಾಶಗಳನ್ನು ಕಲ್ಪಿಸಲಾಗಿದೆ.
ಬಸವಂತ್‌ ಪಿ.ಎನ್‌., ಪ್ರಭಾರಿ ಉದ್ಯೋಗಾಧಿಕಾರಿ, ಜಿಲ್ಲಾ ಉದ್ಯೋಗ
ವಿನಿಮಯ ಕಚೇರಿ

*ಅರುಣಕುಮಾರ ಹಿರೇಮಠ

Advertisement

Udayavani is now on Telegram. Click here to join our channel and stay updated with the latest news.

Next