ಗದಗ : ರಾಜ್ಯ ದ್ರಾಕ್ಷಾರಸ ಮಂಡಳಿಯ ಮಾಜಿ ಅಧ್ಯಕ್ಷ, ಜಿಲ್ಲಾ ಬಿಜೆಪಿ ಮುಖಂಡ ಕಾಂತೀಲಾಲ್ ಬನ್ಸಾಲಿ ಮೇಲೆ ದುಷ್ಕರ್ಮಿಗಳಿಬ್ಬರು ಹಾಡಹಗಲೇ ಹಲ್ಲೆ ನಡೆಸಿ 45 ಸಾವಿರ ರೂ. ದೋಚಿ ಪರಾರಿಯಾದ ಘಟನೆ ನಗರದಲ್ಲಿ ಗುರುವಾರ ಸಂಜೆ ನಡೆದಿದೆ.
ದುಷ್ಕರ್ಮಿಗಳ ಹಲ್ಲೆಯಿಂದ ಕಾಂತೀಲಾಲ್ ಬನ್ಸಾಲಿ ಅವರ ಎದೆ, ಮುಖ, ಬೆನ್ನು ಹಾಗೂ ತಲೆಗೆ ತೀವ್ರ ಗಾಯಗಳಾಗಿವೆ. ಮುಖಕ್ಕೆ ದುಷ್ಕರ್ಮಿಗಳು ಜೋರಾಗಿ ಗುದ್ದಿದ್ದರಿಂದ ಮುಖ ಬಾತಿದೆ. ದುಷ್ಕರ್ಮಿಗಳು ಕಾಂತೀಲಾಲ ಬನ್ಸಾಲಿ ಜೇಬಿನಲ್ಲಿದ್ದ ಸುಮಾರು 45 ಸಾವಿರ ರೂಪಾಯಿಗಳನ್ನು ದೋಚಿಕೊಂಡು ಪರಾರಿಯಾಗಿದ್ದಾರೆ.
ಬಿಜೆಪಿಯ ಮುಖಂಡ ಕಾಂತೀಲಾಲ ಬನ್ಸಾಲಿ ಮಧ್ಯಾಹ್ನ 2-30ರ ಸುಮಾರಿಗೆ ಸ್ನೇಹಿತರನ್ನು ಭೇಟಿ ಮಾಡಿ ಭೂಮರಡ್ಡಿ ಸರ್ಕಲ್ ಮೂಲಕ ವೀರಶೈವ ಲೈಬ್ರರಿ ರಸ್ತೆಯಲ್ಲಿ ತಮ್ಮ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದರು. ಅವರನ್ನು ಭೂಮರಡ್ಡಿ ಸರ್ಕಲ್‌ದಿಂದಲೇ ದ್ವಿಚಕ್ರ ವಾಹನದಲ್ಲಿ ಹಿಂಬಾಲಿಸಿ ಬಂದಿದ್ದ ಇಬ್ಬರು ಯುವಕರು ರಸ್ತೆಯಲ್ಲಿ ಒಮ್ಮಿಂದೊಮ್ಮೆಲೆ ಬನ್ಸಾಲಿ ದ್ವಿಚಕ್ರ ವಾಹನಕ್ಕೆ ಹಿಂದಿನಿಂದ ಡಿಕ್ಕಿ ಹೊಡೆಸಿದ್ದಾರೆ. ದ್ವಿಚಕ್ರ ವಾಹನದಿಂದ ಕೆಳಗೆ ಬಿದ್ದ ಬನ್ಸಾಲಿ ಅವರ ಮುಖಕ್ಕೆ ಗುದ್ದಿದ ದುಷ್ಕರ್ಮಿಗಳು ಜೇಬಿನಲ್ಲಿದ್ದ 45 ಸಾವಿರ ರೂಪಾಯಿಗಳನ್ನು ದೋಚಿದ್ದಾರೆ.
ದುಷ್ಕರ್ಮಿಗಳ ಹಲ್ಲೆಯಿಂದ ಮೂರ್ಛೆ ಹೋಗಿ ರಸ್ತೆಯಲ್ಲಿ ಬಿದ್ದಿದ್ದ ಕಾಂತೀಲಾಲ ಬನ್ಸಾಲಿ ಅವರನ್ನು ಕೆಲ ಅಟೋ ರಿಕ್ಷಾ ಚಾಲಕರು, ತರಕಾರಿ ಮಾರಾಟ ಮಾಡುವ ಮಹಿಳೆಯರು ಮುಖಕ್ಕೆ ನೀರು ಸಿಂಪಡಿಸಿದಾಗ ಎಚ್ಚರಗೊಂಡಿದ್ದಾರೆ. ಕಾಂತೀಲಾಲ ಬನ್ಸಾಲಿ ಈ ಬಗ್ಗೆ ಶಹರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಶಹರ ಸಿಪಿಐ ಡಿ.ಬಿ. ಪಾಟೀಲ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.
ವ್ಯಾಪಕ ಖಂಡನೆ: ಬಿಜೆಪಿ ಮುಖಂಡ ಕಾಂತೀಲಾಲ ಬನ್ಸಾಲಿ ಮೇಲೆ ದುಷ್ಕರ್ಮಿಗಳು ನಡೆಸಿದ ಹಲ್ಲೆಗೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ. ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ, ಬಿಜೆಪಿ ಜಿಲ್ಲಾಧ್ಯಕ್ಷ ರಾಜು ಕುರಡಗಿ, ಮುಖಂಡರಾದ ಬಿ.ಎಚ್. ಲದವಾ, ವಿಜಯಕುಮಾರ ಮುತ್ತಿನಪೆಂಡಿಮಠ ಮುಂತಾದವರು ತೀವ್ರವಾಗಿ ಖಂಡಿಸಿ ತಪ್ಪಿತಸ್ಥರನ್ನು ಕೂಡಲೇ ಪತ್ತೆ ಮಾಡುವಂತೆ ಆಗ್ರಹಿಸಿದ್ದಾರೆ.