Advertisement

ಗದಗ: ಗುಜರಿ ಅಂಗಡಿಯಂತಾದ ನರೇಗಲ್ಲ ಪಟ್ಟಣ ಪಂಚಾಯತ್‌ ಆವರಣ

12:43 PM Dec 01, 2024 | Team Udayavani |

ಉದಯವಾಣಿ ಸಮಾಚಾರ
ನರೇಗಲ್ಲ: ಕೆಟ್ಟು ನಿಂತ ವಾಹನಗಳಿಂದಾಗಿ ನರೇಗಲ್ಲ ಪಟ್ಟಣ ಪಂಚಾಯತ್‌ ಆವರಣ ಗುಜರಿ ಅಂಗಡಿ ಆವರಣದಂತೆ ಕಾಣಿಸುತ್ತಿದೆ. ಟ್ರ್ಯಾ ಕ್ಟರ್‌, ಜೆಸಿಬಿ, ಲಾಟ್ರಿನ್‌ ಸ್ವಚ್ಛಗೊಳಿಸುವ ಟ್ಯಾಂಕರ್‌, ಕಸ ಎತ್ತುವ ಯಂತ್ರ ಎಲ್ಲವೂ ಸಾರ್ವಜನಿಕರಿಗೆ ಉಪಯುಕ್ತವಿಲ್ಲದೇ ಹಾಗೆಯೆ ನಿಂತಿವೆ.

Advertisement

ಪಟ್ಟಣ ಪಂಚಾಯಿತಿಯ ಪಕ್ಕದಲ್ಲೇ ಇರುವ ಗ್ರಂಥಾಲಯದ ಹಿಂಭಾಗದಲ್ಲಿ ಕೆಟ್ಟು ನಿಂತಿರುವ ಮೂರು ಟಂಟಂಗಳಿವೆ. ಮುಖ್ಯ ಕಟ್ಟಡದ ಪಕ್ಕದಲ್ಲಿ ಮತ್ತು ಹಿಂಭಾಗದಲ್ಲೂ ಒಂದೊಂದು ಟ್ರ್ಯಾಕ್ಟರ್‌ ಕೆಟ್ಟು ನಿಂತಿದ್ದು, ಇವೆಲ್ಲವೂ ಧೂಳು ತಿಂದು ಗುರುತು ಸಿಗದಂತೆ ಆಗಿವೆ. ಅಷ್ಟೇ ಅಲ್ಲದೇ ಪಪಂ ‌ಸುತ್ತಲಿನ ವಾತಾವರಣವನ್ನೇ ಹದಗೆಡಿಸುತ್ತಿವೆ. ಈ ವಾಹನಗಳು ಇಲ್ಲಿ ಹೀಗೆ ಕೆಟ್ಟು ನಿಂತು ದಶಕವೇ ಕಳೆದಿವೆ. ಹತ್ತು ಹನ್ನೆರಡು ವರ್ಷಗಳಿಂದಲೂ ಕೆಟ್ಟು ನಿಂತಿರುವ ಈ ವಾಹನಗಳನ್ನು ಪಟ್ಟಣ ಪಂಚಾಯಿತಿಯವರು ಪ್ರದರ್ಶನಕ್ಕೆ ಇಟ್ಟಿದ್ದಾರೇನೋ ಎಂಬ ಅನುಮಾನ ಸಾರ್ವಜನಿಕರನ್ನು ಕಾಡುತ್ತಿದೆ.

ಇದನ್ನು ಕಂಡಾಗ ಸಾರ್ವಜನಿಕರ ತೆರಿಗೆ ದುಡ್ಡು ಅದ್ಹೇಗೆ ಪೋಲಾಗುತ್ತಿದೆ ನೋಡಿ ಎಂದು ಜನ ಮಾತನಾಡಿಕೊಳ್ಳುತ್ತಿರುವುದು ಕಂಡು ಬರುತ್ತಿದೆ. ಕೆಟ್ಟಿರುವ ಈ ವಾಹನಗಳನ್ನು ಆವರಣದ ಲ್ಲಿಟ್ಟುಕೊಂಡು ಪಪಂ ಯಾವ ಸಾಧನೆಗೆ ಮುಂದಾಗುತ್ತಿದೆ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ. ಇವುಗಳನ್ನು ಗುಜರಿಗೆ ಹಾಕಿದರೆ ಒಂದಿಷ್ಟಾದರೂ ದುಡ್ಡು ಬರುವುದರ ಜೊತೆಗೆ
ಪಟ್ಟಣ ಪಂಚಾಯತ್‌ಗೆ ಆದಾಯವಾದರೂ ಆಗುತ್ತದೆ. ಆದ್ದರಿಂದ ಈ ವಾಹನಗಳನ್ನು ವಿಲೇವಾರಿ ಮಾಡುವುದರ ಮೂಲಕ ಪಟ್ಟಣ ಪಂಚಾಯತ್‌ ಆವರಣವನ್ನು ಸ್ವಚ್ಛ ವಾಗಿಟ್ಟುಕೊ ಳ್ಳಬೇಕು ಮತ್ತು ಆದಾಯವನ್ನು ಪಡೆಯ ಬೇಕೆಂಬುದು ಸಾರ್ವಜನಿಕರ ಒತ್ತಾಸೆಯಾಗಿದೆ.

ಈ ಹಿಂದೆಯೂ ನಾನು ಇಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾಗಲೂ ಈ ವಾಹನಗಳ ವಿಲೇವಾರಿಗೆ ಅನುಮತಿ ಕೋರಿ ಪತ್ರ ಬರೆದಿದ್ದೇವೆ. ಈವರೆಗೂ ನಮಗೆ ಅನುಮತಿ ದೊರಕಿಲ್ಲ. ಅನುಮತಿ ಸಿಕ್ಕ ತಕ್ಷಣವೇ ಎಲ್ಲ ವಾಹನಗಳನ್ನು ವಿಲೇವಾರಿ ಮಾಡಲಾಗುತ್ತದೆ.
●ಮಹೇಶ ನಿಡಶೇಷಿ,
ಪಪಂ ಮುಖ್ಯಾಧಿಕಾರಿ

ನಾವು ಯಾವಾಗ ಪಟ್ಟಣ ಪಂಚಾಯಿತಿಗೆ ಹೋಗುತ್ತೇವೆಯೋ ಆಗೆಲ್ಲ ಈ ಕೆಟ್ಟು ನಿಂತ ವಾಹನಗಳನ್ನು ನೋಡಿ ನೋಡಿ
ತುಂಬಾ ಬೇಜಾರಾಗಿದೆ. ಅದರ ಮೇಲೆ ಕುಳಿತಿರುವ ಕಸದ ರಾಶಿ ಅವರಿಗೇಕೆ ಕಾಣುತ್ತಿಲ್ಲವೋ ತಿಳಿಯದಾಗಿದೆ. ಆದ್ದರಿಂದ ಪಟ್ಟಣ ಪಂಚಾಯಿತಿಯವರು ಬೇಗನೆ ಇವುಗಳನ್ನು ವಿಲೇವಾರಿ ಮಾಡಬೇಕು.
●ಚನ್ನಬಸಪ್ಪ ಕುಷ್ಟಗಿ, ಸಾರ್ವಜನಿಕರು

Advertisement

ಇವುಗಳನ್ನು ವಿಲೇವಾರಿ ಮಾಡಲು ಅನುಮತಿ  ನೀಡಲು ವಿನಂತಿಸಿ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ ನಾವು ಅಧಿಕಾರಕ್ಕೆ ಬಂದ ಕೂಡಲೇ ಪತ್ರ ಬರೆದಿದ್ದೇವೆ. ಈ ಹಿಂದೆಯೂ ಪತ್ರ ಬರೆಯಲಾಗಿತ್ತು ಎಂಬುದು ತಿಳಿದಿದೆ. ಆದರೆ ಸಾರಿಗೆ ಅಧಿಕಾರಿಗಳಿಂದ ಇನ್ನೂ ಅನುಮತಿ ದೊರಕಿಲ್ಲ.
●ಫಕೀರಪ್ಪ ಮಳ್ಳಿ, ಪಪಂ ಅಧ್ಯಕ್ಷ

ಬಹುಶಃ ಹದಿನೈದು ವರ್ಷದ ಅವಧಿ ಮೀರಿದ ವಾಹನಗಳಿಗೆ ಮಾತ್ರ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಅವುಗಳನ್ನು ಮಾರಲು ಅನುಮತಿ ಕೊಡುತ್ತಾರೋ ಏನೋ? ಅವರು ಅದೆಷ್ಟು ಬೇಗ ಅನುಮತಿ ಕೊಡುತ್ತಾರೆಯೋ ಅಷ್ಟು ಬೇಗನೆ ಅವುಗಳನ್ನು ವಿಲೆವಾರಿ ಮಾಡಲಾಗುತ್ತದೆ.
●ಕುಮಾರಸ್ವಾಮಿ ಕೋರಧಾನ್ಯಮಠ,
ಉಪಾಧ್ಯಕ್ಷರು, ಪಪಂ

*ಅರುಣ ಬಿ. ಕುಲಕರ್ಣಿ

Advertisement

Udayavani is now on Telegram. Click here to join our channel and stay updated with the latest news.

Next