Advertisement

ಆಕಾಂಕ್ಷಿಗಳಲ್ಲಿ ಮೀಸಲು ಕನವರಿಕೆ ಶುರು

09:43 PM Apr 16, 2021 | Team Udayavani |

ಗದಗ: ರಾಜ್ಯ ಚುನಾವಣಾ ಆಯೋಗವು ಈಗಾಗಲೇ ಜಿಲ್ಲೆಯ ಗ್ರಾಪಂಗಳ ಹಂಚಿಕೆಯೊಂದಿಗೆ ಜಿಪಂ ಕ್ಷೇತ್ರಗಳ ಮರು ವಿಂಗಡಣೆ ಮಾಡಿ ಅಧಿಸೂಚನೆ ಹೊರಡಿಸಿದೆ. ಈ ಬಾರಿ ಐದು ಹೊಸ ಜಿಪಂ ಕ್ಷೇತ್ರಗಳು ರಚನೆಯಾಗಿವೆ. ಇದರ ಬೆನ್ನಲ್ಲೇ ಚುನಾವಣೆಗೆ ಸ್ಪರ್ಧಿಸುವ ಆಕಾಂಕ್ಷಿಗಳಲ್ಲಿ ಮೀಸಲಾತಿಯ ಕನವರಿಕೆ ಶುರುವಾಗಿದೆ. ಜತೆಗೆ ರಾಜಕೀಯ ಪಕ್ಷಗಳಿಂದ ಚುನಾವಣಾ ಪೂರ್ವ ಸಿದ್ಧತೆಗಳೂ ಗರಿಗೆದರಿವೆ.

Advertisement

ಸದ್ಯ ಜಿಲ್ಲೆಯಲ್ಲಿ ಜಿಪಂ ಕ್ಷೇತ್ರಗಳು 19ರಿಂದ 24ಕ್ಕೆ ಏರಿಕೆಯಾಗಿವೆ. ಆದರೆ ಮುಂಬರುವ ಜಿಪಂ ಸಾರ್ವತ್ರಿಕ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಚುನಾವಣಾ ಆಯೋಗ ಕ್ಷೇತ್ರಗಳ ಪುನರ್‌ ರಚನೆ ಕೈಗೊಂಡಿದೆ. ಅದರ ಫಲವಾಗಿ ಜನಸಂಖ್ಯೆಗೆ ಅನುಗುಣವಾಗಿ 5 ತಾಲೂಕಿನಲ್ಲಿ ತಲಾ ಒಂದು ಹೊಸ ಕ್ಷೇತ್ರ ರಚನೆಯಾಗಿದೆ. ಇದರಿಂದ ಜಿಪಂ ಪ್ರವೇಶ ಬಯಸಿರುವ 2ನೇ ಹಂತದ ನಾಯಕರಲ್ಲಿ ರಾಜಕೀಯ ಮಹತ್ವಾಕಾಂಕ್ಷೆ ಹೆಚ್ಚಿಸಿದೆ. ಹಾಲಿ ಜಿಪಂ ಅವಧಿ ಒಂದೆರಡು ತಿಂಗಳಲ್ಲಿ ಪೂರ್ಣಗೊಳ್ಳಲಿದ್ದು, ಯಾವುದೇ ಸಮಯದಲ್ಲಿ ಚುನಾವಣೆ ಘೋಷಣೆಯಾಗುವ ಸಾಧ್ಯತೆಗಳಿವೆ.

ಹೀಗಾಗಿ ಹಳೇ ಹಾಗೂ ಹೊಸ ಕ್ಷೇತ್ರದಲ್ಲಿ ಚುನಾವಣಾ ಕಾತುರವೂ ಹೆಚ್ಚಾಗಿದೆ. ಬಿಜೆಪಿ, ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಪಕ್ಷಗಳಲ್ಲಿ ಜಿಪಂ ಕ್ಷೇತ್ರ ಮತ್ತು ಚುನಾವಣಾ ಲೆಕ್ಕಾಚಾರವೂ ಶುರುವಾಗಿದೆ. ಮೀಸಲು ಲೆಕ್ಕಾಚಾರ ಜೋರು: ಈಗಾಗಲೇ ಗ್ರಾಪಂ ಸಾರ್ವತ್ರಿಕ ಹಾಗೂ ಚುನಾವಣೆಗಳಲ್ಲಿ ತಮ್ಮ ಬೆಂಬಲಿತ ಕಾರ್ಯಕರ್ತರನ್ನು ಕಣಕ್ಕಿಳಿಸುವ ಮೂಲಕ ಬಲಾಬಲ ಪ್ರದರ್ಶಿಸಿರುವ ರಾಜಕೀಯ ಪಕ್ಷಗಳು ಇದೀಗ ಜಿಪಂ ಸಮರಕ್ಕಾಗಿ ಕಾಯುತ್ತಿವೆ.

ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳ ಪೈಕಿ 3 ಬಿಜೆಪಿ, ಓರ್ವ ಕಾಂಗ್ರೆಸ್‌ ಶಾಸಕರಿದ್ದರು. ಜಿಪಂ ಚುನಾವಣೆಯೂ ಪ್ರತಿಷ್ಠೆಯ ವಿಷಯವಾಗಿದೆ. ಹೀಗಾಗಿ ಯಾವ ಕ್ಷೇತ್ರಕ್ಕೆ ಯಾವ ಮೀಸಲಾತಿ ಬರುತ್ತದೆ? ಹಿಂದೆ ಯಾವ ಮೀಸಲಾತಿ ಬಂದಿತ್ತು. ಈ ಬಾರಿ ನಿಯಮದ ಸಮುದಾಯಕ್ಕೆ ಮೀಸಲಾಗಬಹುದು? ಪ್ರಕಟಗೊಳ್ಳಬಹುದಾದ ಮೀಸಲಾತಿ ಅನ್ವಯ ಪಕ್ಷದಿಂದ ಯಾರನ್ನು ಕಣಕ್ಕಿಳಿಸಬೇಕು? ಎಂಬ ಕೂಡಿಸಿ, ಗುಣಿಸುವ ರಾಜಕೀಯ ಲೆಕ್ಕಾಚಾರಗಳು ಶುರುವಾಗಿವೆ. ಕ್ಷೇತ್ರ ಪುನರ್‌ ರಚನೆಗೊಂಡ ಬಳಿಕವೂ ಮೀಸಲಾತಿ ಕೈತಪ್ಪಲ್ಲ ಎಂಬ ಅದಮ್ಯ ವಿಶ್ವಾಸದಲ್ಲಿರುವ ಕೆಲ ಹಾಲಿ ಸದಸ್ಯರು, ಈಗಾಗಲೇ ಚುನಾವಣೆ ಪೂರ್ವ ಸಿದ್ಧತೆಗೆ ಸದ್ದಿಲ್ಲದೇ ಚಾಲನೆ ನೀಡಿದ್ದಾರೆ. ಕ್ಷೇತ್ರದ ಮತದಾರರ ಭೇಟಿ, ಜನರಿಗೆ ಅಭಿವೃದ್ಧಿ ಕಾರ್ಯ ವಿವರಿಸುವುದು, ಬೆಂಬಲಿಗರು, ಕಾರ್ಯಕರ್ತರ ಮನೆಗಳಲ್ಲಿ ಆಯೋಜಿಸುವ ಸಣ್ಣಪುಟ್ಟ ಖಾಸಗಿ ಕಾರ್ಯಕ್ರಮಗಳಲ್ಲೂ ಪಾಲ್ಗೊಳ್ಳುವ ಮೂಲಕ ಜನ ಸಂಪರ್ಕ ಗಟ್ಟಿಗೊಳಿಸುತ್ತಿದ್ದಾರೆ.

ಅನ್ಯ ಕ್ಷೇತ್ರಗಳತ್ತ ಚಿತ್ತ: ಕ್ಷೇತ್ರ ಪುನರ್‌ ವಿಂಗಡಣೆ ಹಾಗೂ ಮೀಸಲಾತಿಯಿಂದ ಕ್ಷೇತ್ರ ಕಳೆದುಕೊಳ್ಳುವ ಭೀತಿಯಲ್ಲಿರುವ ಕೆಲ ಸದಸ್ಯರು ತಮಗೆ ಅನುಕೂಲಕರ ಕ್ಷೇತ್ರಗಳ ಹುಡುಕಾಟದಲ್ಲಿ ತೊಡಗಿದ್ದಾರೆ. ಕ್ಷೇತ್ರಗಳಲ್ಲಿರುವ ಜಾತಿಗಳ ಪ್ರಾಬಲ್ಯ, ಪಕ್ಷಗಳ ಬಲಾಬಲ, ಜನರ ನಾಡಿಮಿಡಿತ ಅರಿಯುವ ಪ್ರಯತ್ನ ನಡೆಸಿದ್ದಾರೆ. ಅದಕ್ಕಾಗಿ ಮೀಸಲಾತಿ ಯಾವಾಗ ಪ್ರಕಟವಾಗುತ್ತದೆ? ಚುನಾವಣೆ ಯಾವಾಗ ಘೋಷಣೆಯಾಗುತ್ತದೆ ಎಂದು ಚುನಾವಣಾ ಆಕಾಂಕ್ಷಿಗಳ ಚುನಾವಣಾ ಆಯೋಗ ಪ್ರಕಟಿಸುವ ಮೀಸಲಾತಿ ಪಟ್ಟಿಗಾಗಿ ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ.

Advertisement

ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿರುವ ಕೆಲವರು, ಕಳೆದ ಕಳೆದ 20-30 ವರ್ಷಗಳಲ್ಲಿ ತಮ್ಮ ಕ್ಷೇತ್ರಕ್ಕೆ ಅನ್ವಯಿಸಿರುವ ಮೀಸಲಾತಿ ಪಟ್ಟಿಗಾಗಿ ಉಪ ವಿಭಾಗಾಧಿಕಾರಿಗಳು, ಜಿಲ್ಲಾಧಿಕಾರಿಗಳ ಚುನಾವಣಾ ವಿಭಾಗದ ಕದ ತಟ್ಟುತ್ತಿದ್ದಾರೆ. ಒಟ್ಟಿನಲ್ಲಿ ಜಿಪಂ ಕ್ಷೇತ್ರಗಳ ಮರು ವಿಂಗಡಣೆಯಾಗಿದ್ದು, ಮೀಸಲಾತಿ ಘೋಷಣೆ, ಯಾವಾಗ ನಡೆಯಲಿದೆಯೋ ಎಂಬ ನಿರೀಕ್ಷೆ ಮಧ್ಯೆ ಕೋವಿಡ್‌-19 ನಿಂದ ಚುನಾವಣೆ ಮುಂದೂಡಬಹುದೋ ಎಂಬ ಆತಂಕವೂ ಅಭ್ಯರ್ಥಿ ಆಕಾಂಕ್ಷಿಗಳನ್ನು ಕಾಡುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next