Advertisement

Gadag: ಕಸಾಪದಿಂದ ಡಾ| ಶಿವರಾಮ ಕಾರಂತ ಸ್ಮರಣೆ

06:12 PM Oct 17, 2023 | Team Udayavani |

ಗದಗ: ಕಾದಂಬರಿಕಾರ, ಪರಿಸರವಾದಿ, ಪ್ರಗತಿಶೀಲ ಚಿಂತಕ, ಯಕ್ಷಗಾನತಜ್ಞ, ಸ್ವಾತಂತ್ರ್ಯ ಹೋರಾಟಗಾರ, ಚಿತ್ರ ನಿರ್ದೇಶಕ ಹೀಗೆ ಹತ್ತು ಹಲವು ಕ್ಷೇತ್ರಗಳ ಮೂಲಕ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಮೇರು ಸಾಹಿತಿ ಡಾ| ಶಿವರಾಮ ಕಾರಂತ ಅವರು ಕನ್ನಡ ಸಾಹಿತ್ಯ ಸಂವರ್ಧನೆಗೆ ಮಹತ್ವದ ಕೊಡುಗೆ ನೀಡಿದ್ದಾರೆ. ಅವರ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕೃತಿ ಮೂಕಜ್ಜಿಯ ಕನಸುಗಳು ಪ್ರಸ್ತುಪ ದಿನಮಾನದ ಸಾಮಾಜಿಕ ವ್ಯವಸ್ಥೆಯನ್ನು ಬಿಂಬಿಸುತ್ತದೆ ಎಂದು ಉಪನ್ಯಾಸಕ ಬಿ.ಸಿ. ಹನಮಂತಗೌಡ್ರ ಹೇಳಿದರು.

Advertisement

ನಗರದ ತೋಂಟದ ಸಿದ್ಧಲಿಂಗ ಶ್ರೀಗಳ ಕನ್ನಡ ಭವನದ ಕಸಾಪ ಕಾರ್ಯಾಲಯ ಜ್ಞಾನಪೀಠ ಪುರಸ್ಕೃತ ಡಾ| ಶಿವರಾಮ ಕಾರಂತ ಅವರ ಜನ್ಮದಿನದ ಅಂಗವಾಗಿ ಮೂಕಜ್ಜಿಯ ಕನಸುಗಳು ಕೃತಿ ಪರಿಚಯ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಬಾಲ್ಯದಲ್ಲಿಯೇ ವೈಧವ್ಯವನ್ನು ಅನುಭವಿಸಿದ ಮೂಕಾಂಬಿಕೆ ಮೂಕಜ್ಜಿಯಾಗಿರುವುದು ಇತಿಹಾಸ. ಪರಂಪರೆಯ ಕೊಂಡಿಯಾಗಿ, ಬದುಕಿನ ಬವಣೆಗಳಿಗೆ ಪರಿಹಾರವಾಗಿ, ಸಮತೂಕದ ಜೀವನ ನಡೆಸುವ ದಿಸೆಯಲ್ಲಿ ಸಮಾಜದ ಜನರಿಗೆ ಮಾರ್ಗದರ್ಶಕಳಾಗಿ ಕಾಣುವುದರ ಜೊತೆಗೆ ಪೌರಾಣಿಕ ಸಂಗತಿಗಳನ್ನು ಪ್ರಶ್ನೆ ಮಾಡುವ ಮೂಲಕ ಯುವಕರನ್ನು ಚಿಂತನೆಗೆ ಹಚ್ಚುವ ಅವಳ ಆಲೋಚನಾ ಕ್ರಮ ಓದುಗರಲ್ಲಿ ಬೆರಗು ಹುಟ್ಟಿಸುತ್ತದೆ. ಡಾ| ಶಿವರಾಂತ ಕಾರಂತರು ಈ ಕೃತಿ ಮೂಲಕ ಸಮಾಜದ ವಿವಿಧ ಸ್ತರಗಳನ್ನು ಪರಿಚಯಿಸುವಲ್ಲಿ ಯಶಸ್ವಿಯಾಗಿದ್ದಾರೆ ಹೇಳಿದರು.

ಜಿಲ್ಲಾ ಕಸಾಪ ಅಧ್ಯಕ್ಷ ವಿವೇಕಾನಂದಗೌಡ ಪಾಟೀಲ ಅಧ್ಯಕ್ಷತೆ ವಹಿಸಿ ಮಾತನಾಡಿ, ಕನ್ನಡ ಸಾರಸ್ವತ ಲೋಕಕ್ಕೆ ಅತ್ಯಮೂಲ್ಯವಾದ ಕೃತಿಗಳನ್ನು ನೀಡಿದ ಡಾ| ಕಾರಂತರು ಕಡಲ ತೀರದ ಭಾರ್ಗವರೆಂದು ಪ್ರಸಿದ್ದರು. ಬಹು ಆಯಾಮಗಳಲ್ಲಿ ತೆರೆದುಕೊಂಡು ಸಾಹಿತ್ಯ ಹಾಗೂ ಸಾಂಸ್ಕೃತಿಕ ಲೋಕವನ್ನು ಬೆಳಗಿದರೆಂದು ಹೇಳಿದರು.

ಕಾರ್ಯಕ್ರಮದಲ್ಲಿ ಡಾ| ಜಿ.ಬಿ. ಪಾಟೀಲ, ಡಾ| ಅರ್ಜುನ ಗೊಳಸಂಗಿ, ಬಿ.ಎಫ್‌. ಚೇಗರಡ್ಡಿ, ಕೆ.ಎಚ್‌. ಬೇಲೂರ, ಶಶಿಕಾಂತ ಕೊರ್ಲಹಳ್ಳಿ, ಎಸ್‌.ಜೆ. ಪಾಟೀಲ, ಸಿ.ಕೆ.ಎಚ್‌. ಕಡಣಿಶಾಸ್ತ್ರಿ, ಡಾ| ರಾಜೆಂದ್ರ ಗಡಾದ, ಬಿ.ಎಸ್‌. ಹಿಂಡಿ, ಎಂ.ಎಚ್‌. ಸವದತ್ತಿ, ರತ್ನಕ್ಕ ಪಾಟೀಲ ಸೇರಿದಂತೆ ಅನೇಕರು ಇದ್ದರು. ಎಸ್‌. ಎಂ. ಕಾತರಕಿ ಸ್ವಾಗತಿಸಿದರು. ಶಿವಾನಂದ ಗಿಡ್ನಂದಿ ನಿರೂಪಿಸಿದರು. ಕಿಶೋರಬಾಬು ನಾಗರಕಟ್ಟಿ ವಂದಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next