Advertisement

ಅತಿವೃಷ್ಟಿಗೆ 150 ಕೋಟಿಗೂ ಹೆಚ್ಚು ಹಾನಿ! ಕೊಚ್ಚಿ ಹೋದ 111ಸೇತುವೆಗಳು

01:13 PM Oct 13, 2020 | sudhir |

ಗದಗ: ಜಿಲ್ಲೆಯಲ್ಲಿ ಗರಿಷ್ಠ ಪ್ರಮಾಣದ ಮಳೆ ಸುರಿದಿದ್ದರಿಂದ ಅಪಾರ ಪ್ರಮಾಣದ ಬೆಳೆ ಹಾನಿಗೀಡಾಗಿದ್ದು, ರಸ್ತೆ, ಸಂಪರ್ಕ
ಸೇತುವೆಗಳು ಕೊಚ್ಚಿ ಹೋಗಿವೆ. ಈ ಬಾರಿ ಆವರಿಸಿರುವ ಅತಿವೃಷ್ಟಿಯಿಂದ ಜಿಲ್ಲೆಯಲ್ಲಿ ಸುಮಾರು 158 ಕೋಟಿ ರೂ. ನಷ್ಟ ಸಂಭವಿಸಿದೆ ಎಂದು ಜಿಲ್ಲಾಡಳಿತ ಅಂದಾಜಿಸಿದೆ.

Advertisement

ಜಿಲ್ಲೆಯ ವಾಡಿಕೆ ಮಳೆ 656 ಮಿ.ಮೀ. ಆಗಿದೆ. ಆದರೆ, ಈ ಬಾರಿ ವರ್ಷಾಂತ್ಯಕ್ಕೆ ಇನ್ನೂ ಎರಡು ತಿಂಗಳು ಬಾಕಿ ಇರುವಾಗಲೇ ಗರಿಷ್ಠ ಪ್ರಮಾಣಕ್ಕಿಂತ ಹೆಚ್ಚು ಮಳೆ ಸುರಿದಿದೆ. ಆಗಸ್ಟ್‌ನಿಂದ ಈಚೆಗೆ ಸುರಿದ ಸತತ ಮಳೆಯಿಂದ ಅ.7 ರವರೆಗೆ 700.4 ಮಿ.ಮೀ. ನಷ್ಟು ಮಳೆಯಾಗಿದ್ದು, ಜಿಲ್ಲೆಯಲ್ಲಿ ಅತಿವೃಷ್ಟಿ ಆವರಿಸಿದೆ. ತಿಂಗಳು ಕಾಲ ಎಡೆಬಿಡದೆ ಸುರಿದ ಮಳೆಯಿಂದ 150 ಕೋಟಿಗೂ ಹೆಚ್ಚು ಆಸ್ತಿಪಾಸ್ತಿ ಹಾನಿಗೀಡಾಗಿದೆ.

110 ಕೋಟಿ ರೂ. ಮೂಲ ಸೌಕರ್ಯ ಹಾನಿ: ಸತತ ಮಳೆಯಿಂದ ಲಿಂಗದಾಳ-ಬಳಗಾನೂರು ನಡುವಿನ ದೊಡ್ಡ ಹಳ್ಳದ ರಸ್ತೆ ಸೇತುವೆ ಸಂಪೂರ್ಣ ಕೊಚ್ಚಿ ಹೋಗಿದೆ. ಪರಿಣಾಮ ಈ ಮಾರ್ಗದ ಮೂಲಕ ರೋಣ ತಾಲೂಕಿನ ಹೊಳೆಆಲೂರು, ಯರೆಬೇಲೇರಿ ಯತ್ತ ಸಾಗುವ ವಾಹನಗಳು ಸುತ್ತಿ ಬಳಸಿ ಸಂಚರಿಸುವಂತಾಗಿದೆ. ನರಗುಂದ ತಾಲೂಕಿನ ಕಣಕಿಕೊಪ್ಪ ಒಳ ರಸ್ತೆಯ ಹಿರೇಹಳ್ಳ ಸೇತುವೆ ಕೊಚ್ಚಿ ಹೋಗಿದೆ. ಲೋಕೋಪಯೋಗಿ ಇಲಾಖೆಗೆ ಸೇರಿದ 22, ಆರ್‌ಡಿಪಿಆರ್‌ ಗೆ ಸಂಬಂಧಿ ಸಿದ 89 ಸೇರಿದಂತೆ ಜಿಲ್ಲೆಯ 111 ಸೇತುವೆಗಳು ಕೊಚ್ಚಿ ಹೋಗಿದ್ದು, ಸುಮಾರು 27.72 ಕೋಟಿ ರೂ. ನಷ್ಟ ಸಂಭವಿಸಿದೆ.

ಇದನ್ನೂ ಓದಿ:ಸಂತೋಷದಿಂದ, ಸಂಪೂರ್ಣ ಒಪ್ಪಿಗೆಯಿಂದ ಸಮಾಜ ಕಲ್ಯಾಣ ಇಲಾಖೆ ಖಾತೆ ಒಪ್ಪಿಕೊಂಡಿದ್ದೇನೆ: ರಾಮುಲು

Advertisement

ಲೋಕೋಪಯೋಗಿ ಇಲಾಖೆಯ 103.95 ಕಿ.ಮೀ., ಆರ್‌ಡಿಪಿಆರ್‌ 624.11 ಕಿ.ಮೀ. ಹಾಗೂ ನಗರ ಸ್ಥಳೀಯ ಸಂಸ್ಥೆಗಳ 62.81 ಕಿ.ಮೀ. ಉದ್ದದಷ್ಟು ರಸ್ತೆಗಳು ಹಾಳಾಗಿವೆ. ಇದರಿಂದ 93.69 ಕೋಟಿ ರೂ. ನಷ್ಟವಾಗಿದೆ. ಅದರಂತೆ ಹೆಸ್ಕಾಂಗೆ ಸಂಬಂಧಿ ಸಿದಂತೆ 39 ಕಂಬಗಳು ನೆಲಕ್ಕುರುಳಿದ್ದು, 3.31ಲಕ್ಷ ರೂ., ಯುಎಲ್‌ಬಿ, ಆರ್‌ಡಬ್ಲೂ ಎಸ್‌ಗೆ ಸಂಬಂಧಿಸಿದ ಕುಡಿಯುವ ನೀರಿನ ಮೂಲಸೌಕರ್ಯಕ್ಕೆ ಸಂಬಂಧಿಸಿ 46.7 ಲಕ್ಷ ರೂ. ಹಾನಿಯಾಗಿದೆ ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ.

ಹಲವು ಮನೆಗಳು ಹಾನಿ: ಜಿಲ್ಲೆಯಲ್ಲಿ ಅಕ್ಟೋಬರ್‌ 7ರವರೆಗೆ ಉಂಟಾದ ಅತಿವೃಷ್ಟಿಯಿಂದ 1.74 ಕೋಟಿ ರೂ. ಮೊತ್ತದಷ್ಟು
ಮನೆಗಳು ಹಾನಿಯಾಗಿವೆ. ಕಳೆದ ಸೆಪ್ಟೆಂಬರ್‌ನಲ್ಲಿ ಜಿಲ್ಲೆಯ ನರಗುಂದ ಭಾಗದಲ್ಲಿ ಮಲಪ್ರಭಾ ನದಿಯಿಂದ ಕೊಣ್ಣೂರಿನ
ಹಲವು ಮನೆಗಳು ಕುಸಿದು ಬಿದ್ದಿವೆ. ಗಜೇಂದ್ರಗಡ ತಾಲೂಕಿನ ರಾಜೂರು, ಗದಗ ನಗರದ ಹೊಂಬಳ ನಾಕಾ, ತಾಲೂಕಿನ
ಮುಳಗುಂದ ಹಾಗೂ ಶಿರಹಟ್ಟಿ ಪಟ್ಟಣದಲ್ಲಿ ಭಾಗಶಃ ಹಾಗೂ ಪೂರ್ಣ ಪ್ರಮಾಣದಲ್ಲಿ ಕೆಲ ಮನೆಗಳು ಕುಸಿದು ಬಿದ್ದಿವೆ. ಜನರು ನಿರಾಶ್ರಿತರಾಗಿದ್ದಾರೆ. ಈ ಕುರಿತು ಪರಿಹಾರ ಒದಗಿಸುವಂತೆ ಈಗಾಗಲೇ ಜಿಲ್ಲಾಡಳಿತ ಸರಕಾರಕ್ಕೆ ವರದಿ ಸಲ್ಲಿಸಿದ್ದು, ಸಂತ್ರಸ್ತರು ಪರಿಹಾರ ನಿರೀಕ್ಷೆಯಲ್ಲಿದ್ದಾರೆ.

– ವೀರೇಂದ್ರ ನಾಗಲದಿನ್ನಿ

Advertisement

Udayavani is now on Telegram. Click here to join our channel and stay updated with the latest news.

Next