Advertisement

ಗದಗ: ಹದಗೆಟ್ಟ ರಸ್ತೆಗಳಲ್ಲಿ ವಾಹನಗಳ ಸರ್ಕಸ್‌!

06:14 PM Jul 28, 2023 | Team Udayavani |

ಗದಗ: ಮಳೆಗಾಲ ಬಂತೆಂದರೆ ಸಾಕು ಗದಗ-ಬೆಟಗೇರಿ ಅವಳಿ ನಗರದ ಜನತೆಗೆ ಸಂಕಷ್ಟ ಎದುರಾಗುತ್ತದೆ. ನಗರದ ಪ್ರಮುಖ ರಸ್ತೆಗಳು ಸೇರಿದಂತೆ ವಾರ್ಡ್‌ ರಸ್ತೆಗಳು ಸಹ ಸಂಪೂರ್ಣ ಹದಗೆಟ್ಟಿರುವುದರಿಂದ ವಾಹನ ಸವಾರರು, ಸಾರ್ವಜನಿಕರು ನಗರಸಭೆಗೆ ಹಿಡಿಶಾಪ ಹಾಕುತ್ತಲೇ ಸಂಚರಿಸುವ ಸ್ಥಿತಿ ನಿರ್ಮಾಣವಾಗಿದೆ.

Advertisement

ಹೌದು, ಗದಗ-ಬೆಟಗೇರಿ ಅವಳಿ ನಗರದಲ್ಲಿ 35 ವಾರ್ಡ್‌ಗಳಿದ್ದು, ಕೆಲ ವಾರ್ಡ್‌ ಗಳನ್ನು ಹೊರತುಪಡಿಸಿ ಬಹುತೇಕ ವಾರ್ಡ್‌
ರಸ್ತೆಗಳು ತಗ್ಗು-ಗುಂಡಿಗಳಿಂದ ಕೂಡಿವೆ. ಇದರಿಂದ ಪ್ರಯಾಣಿಕರು ಹಾಗೂ ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿದೆ.

ಜು. 1ರಿಂದ ಅವಳಿ ನಗರ ಸೇರಿದಂತೆ ಜಿಲ್ಲಾದ್ಯಂತ ನಿರಂತರವಾಗಿ ಮಳೆ ಸುರಿಯುತ್ತಿದ್ದು, ತಗ್ಗು-ಗುಂಡಿಗಳಲ್ಲಿ ಮಳೆ ನೀರು ನಿಲ್ಲುತ್ತಿರುವುದರಿಂದ ಸಂಚಾರಕ್ಕೂ ತೊಂದರೆಯಾಗಿದೆ. ಇನ್ನು ಡಾಂಬರ್‌ ಮತ್ತು ಕಾಂಕ್ರೀಟ್‌ ಕಾಣದೇ ಇರುವ ಮತ್ತು ಇಂಟರ್‌ಲಾಕ್‌ ಫೇವರ್ ಅಳವಡಿಸದಿರುವ ರಸ್ತೆಗಳೆಲ್ಲವೂ ಗದ್ದೆಯಂತಾಗಿದ್ದು, ರಸ್ತೆಗಳೆಲ್ಲ ಅಯೋಮಯವಾಗಿವೆ.

ಗದಗ ನಗರದಲ್ಲಿ ಪ್ರಮುಖವಾಗಿ ಹಳೆ ಬಸ್‌ ನಿಲ್ದಾಣಕ್ಕೆ ತೆರಳುವ ರೋಟರಿ ಸರ್ಕಲ್‌ ಬಳಿಯ ರಸ್ತೆ, ಜೆಟಿ ಮಠ ರಸ್ತೆಯ ಮಹಾದ್ವಾರದ ಬಳಿ, ಮಹಾತ್ಮ ಗಾಂಧಿ  ವೃತ್ತ, ತಿಲಕ್‌ ಪಾರ್ಕ್‌, ಕೆ.ಎಚ್‌. ಪಾಟೀಲ ವೃತ್ತ, ಮಹೇಂದ್ರಕರ್‌ ಸರ್ಕಲ್‌, ಕುಮಾರವ್ಯಾಸ ಕಾಂಪ್ಲೆಕ್ಸ್‌ ಎದುರಿನ ರಸ್ತೆ, ಬೆಟಗೇರಿಯ ಹಾಕಿ ಮೈದಾನ ಬಳಿಯ ರಸ್ತೆ, ಹುಯಿಲಗೋಳ ರಸ್ತೆ, ಜುಮ್ಮಾ ಮಸೀದಿ ರಸ್ತೆ, ಜೆಟಿ ಕಾಲೇಜು ರಸ್ತೆ, ಬಳ್ಳಾರಿ ಬ್ರಿಡ್ಜ್ ಸೇರಿ ಬಹುತೇಕ ರಸ್ತೆಗಳಲ್ಲಿ ತಗ್ಗು-ಗುಂಡಿಗಳು ಬಿದ್ದು ವರ್ಷಗಳೇ ಕಳೆದರೂ
ಕೇಳುವವರು ಯಾರೂ ಇಲ್ಲದಂತಾಗಿದೆ. ಅಲ್ಲದೇ, ಹೊಸ ಬಸ್‌ ನಿಲ್ದಾಣಕ್ಕೆ ತೆರಳುವ ಚತುಷ್ಪಥ ರಸ್ತೆಯಲ್ಲಿ ಸಿಸಿ ರಸ್ತೆ ಕಾಮಗಾರಿ ನಡೆಯುತ್ತಿದ್ದು, ಒಂದು ಭಾಗದ ರಸ್ತೆ ಪೂರ್ಣಗೊಂಡಿದ್ದರೆ,

ಇನ್ನೊಂದು ಭಾಗದಲ್ಲಿ ರಸ್ತೆ ಕಾಮಗಾರಿ ಪ್ರಗತಿಯಲ್ಲಿದೆ. ಇದರಿಂದ ರಸ್ತೆಯ ಒಂದು ಭಾಗದಲ್ಲಿ ಸಂಚಾರ ಸ್ಥಗಿತಗೊಳಿಸಲಾಗಿದೆ. ಕೆಲ ವಾಹನಗಳು ಅದೇ ದಿಕ್ಕಿನಲ್ಲಿ ಸಂಚರಿಸುವುದರಿಂದ ಟ್ರಾಫಿಕ್‌ ಕಿರಿಕಿರಿ ಉಂಟಾಗುತ್ತಿದೆ. ಕೆಲವು ವಾರ್ಡ್‌ಗಳಲ್ಲಿ ರಸ್ತೆ
ಮಧ್ಯೆದಲ್ಲಿ ನೀರು ನಿಲ್ಲುತ್ತಿದ್ದು, ವಾಹನ ಸವಾರರು ಹಾಗೂ ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುವಂತಾಗಿದೆ

Advertisement

ಕೈಗೊಂಡಿಲ್ಲ ರಸ್ತೆ ದುರಸ್ತಿ ಕಾರ್ಯ
ಕಳೆದ ನಾಲ್ಕೈದು ವರ್ಷಗಳಿಂದ ತೋಂಟದಾರ್ಯ ಮಠದ ಮಹಾದ್ವಾರದ ಎದುರಿನ ರಸ್ತೆ ತಗ್ಗಿನಿಂದ ಕೂಡಿದೆ. ತೋಂಟದಾರ್ಯ ಮಠ-ಕೆಸಿ ರಾಣಿ ರಸ್ತೆ ಹಾಗೂ ಪಾಲಾ-ಬದಾಮಿ ಕೂಡು ರಸ್ತೆಯಾಗಿದ್ದರಿಂದ ಈ ಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಾಹನಗಳು ಸಂಚರಿಸುತ್ತವೆ. ಮಳೆ ನೀರು ನಿಂತು ತಗ್ಗು ಬೃಹದಾಕಾರವಾಗಿದೆ. ಇದರಿಂದ ಸಂಚಾರ ದಟ್ಟಣೆ ಹೆಚ್ಚುತ್ತಿದ್ದು, ಬೈಕ್‌ ಸವಾರರು, ಪಾದಚಾರಿಗಳು ತೊಂದರೆ ಅನುಭವಿಸುತ್ತಿದ್ದಾರೆ. ಇನ್ನು ರೋಟರಿ ಸರ್ಕಲ್‌ ಬಳಿ ರಸ್ತೆ ಕುಸಿದು ಎರಡು ವಾರಗಳು ಕಳೆಯುತ್ತ ಬಂದರೂ ದುರಸ್ತಿ ಕಾರ್ಯ ಕೈಗೊಂಡಿಲ್ಲ. ಕುಸಿದ ಜಾಗದಲ್ಲಿ ಬ್ಯಾರಿಕೇಡ್‌ ಇಡಲಾಗಿದೆ. ಇದರಿಂದ ರಸ್ತೆ ಸಂಚಾರಕ್ಕೆ ತೊಂದರೆಯಾಗುತ್ತಿದೆ

ಸಮಸ್ಯೆಗೆ ಕ್ಯಾರೆ ಎನ್ನದ ನಗರಸಭೆ
ಬಿಜೆಪಿ ಆಡಳಿತದ ನಗರಸಭೆ ಅಧ್ಯಕ್ಷರಾಗಿ ಉಷಾ ದಾಸರ ಅವರು ಕಾರ್ಯ ನಿರ್ವಹಿಸುತ್ತಿದ್ದಾರೆ. ಆದರೆ, ಅಧ್ಯಕ್ಷರಿಗೂ, ಪೌರಾಯುಕ್ತರಿಗೂ ರಸ್ತೆಯ ತಗ್ಗು-ಗುಂಡಿಗಳು ಗಮನಕ್ಕೆ ಬಾರದಿರುವುದು ದುರದೃಷ್ಟಕರ ಸಂಗತಿ. ತಗ್ಗು-ಗುಂಡಿಗಳಿಗೆ
ಡಾಂಬರೀಕರಣವಿರಲಿ ಮಣ್ಣಿನಿಂದ ಮುಚ್ಚಲು ಸಹ ಪ್ರಯತ್ನ ನಡೆಸಿಲ್ಲ. ಸಾರ್ವಜನಿಕರು ಸಂಕಷ್ಟ ಅನುಭವಿಸುತ್ತಿದ್ದರೂ ಕ್ಯಾರೆ ಎನ್ನದ ನಗರಸಭೆ ಆಡಳಿತ ಗಾಢ ನಿದ್ರೆಯಲ್ಲಿ ಮುಳುಗಿದಂತಿದೆ ಎನ್ನುತ್ತಿದ್ದಾರೆ ಸ್ಥಳೀಯ ಸಾರ್ವಜನಿಕರು.

ತಿಲಕ್‌ ಪಾರ್ಕ್‌ ಎದುರು ಕಳೆದ ಕೆಲ ವರ್ಷಗಳಿಂದ ರಸ್ತೆ ಮಧ್ಯೆ ತಗ್ಗು ಬಿದ್ದಿದ್ದು, ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ತಗ್ಗು ಪ್ರದೇಶದಲ್ಲಿ ನೀರು ನಿಂತಿದೆ. ತಗ್ಗಿನ ಆಳ ತಿಳಿಯದೇ ಕೆಲ ಬೈಕ್‌ ಸವಾರರು ಬಿದ್ದು ಗಾಯ ಮಾಡಿಕೊಂಡಿದ್ದಾರೆ. ನಗರಸಭೆ ಅಧ್ಯಕ್ಷರು, ಅಧಿ ಕಾರಿಗಳಿಗೆ ತಗ್ಗು ಮುಚ್ಚುವಂತೆ ಹಲವಾರು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ.
*ಈರಣ್ಣ ದೊಡ್ಡಮನಿ, ಆಟೋ ಚಾಲಕ

ಕಳೆದೊಂದು ವಾರದಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಗೆ ನಗರದ ಕೆಲ ವಾರ್ಡ್ ಗಳಲ್ಲಿ ಸಾರ್ವಜನಿಕರು ಮತ್ತು ಮಕ್ಕಳು ಸಂಚಾರ ಮಾಡುವುದೇ ಕಷ್ಟವಾಗಿದೆ. ಈ ಬಗ್ಗೆ ನಗರಸಭೆ ಅಧಿ ಕಾರಿಗಳು ಕಾಳಜಿ ವಹಿಸಿ ದುರಸ್ತಿಗೆ ಕ್ರಮ ಕೈಗೊಳ್ಳಬೇಕು.
ಗಂಗಮ್ಮ ಶೆಟ್ಟರ, ಗದಗ ನಿವಾಸಿ

ರೋಟರಿ ಸರ್ಕಲ್‌, ತೋಂಟದಾರ್ಯ ಮಹಾದ್ವಾರ, ಜೆಟಿ ಕಾಲೇಜು ಸೇರಿ ಪಾಲಾ-ಬದಾಮಿ ರಸ್ತೆ ಲೋಕೋಪಯೋಗಿ
ಇಲಾಖೆ ವ್ಯಾಪ್ತಿಗೆ ಬರುತ್ತದೆ. ಹಾಗಾಗಿ, ರಸ್ತೆ ದುರಸ್ತಿಗೆ ಕ್ರಮ ಕೈಗೊಳ್ಳಲು ಲೋಕೋಪಯೋಗಿ ಇಲಾಖೆಗೆ ಸೂಚಿಸಲಾಗಿದೆ. ಉಳಿದಂತೆ ನಗರಸಭೆ ವ್ಯಾಪ್ತಿಗೆ ಬರುವ ರಸ್ತೆಗಳ ದುರಸ್ತಿಗೆ ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ. ಕೂಡಲೇ ಹದಗೆಟ್ಟ ರಸ್ತೆಗಳನ್ನು ದುರಸ್ತಿಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಗುವುದು.
ಉಷಾ ದಾಸರ, ಅಧ್ಯಕ್ಷರು, ನಗರಸಭೆ, ಗದಗ-ಬೆಟಗೇರಿ

*ಅರುಣಕುಮಾರ ಹಿರೇಮಠ

Advertisement

Udayavani is now on Telegram. Click here to join our channel and stay updated with the latest news.

Next