Advertisement

“ಗದಗ ಕಾಂಗ್ರೆಸ್‌ ಧೃತರಾಷ್ಟ್ರನ ಆಸ್ಥಾನದಂತಿದೆ’; ಸಿ.ಸಿ.ಪಾಟೀಲ

05:28 PM Feb 04, 2022 | Team Udayavani |

ಗದಗ: ಗದಗ ಕಾಂಗ್ರೆಸ್‌ ಎಂಬುದು ಧೃತರಾಷ್ಟ್ರನ ಆಸ್ಥಾನದಂತಾಗಿದೆ. ಕಣ್ಣೆದುರೇ ದ್ರೌಪದಿಯ ವಸ್ತ್ರಾಪಹರಣವಾಗುತ್ತಿದ್ದರೂ ಜಿಲ್ಲಾ ಕಾಂಗ್ರೆಸ್‌ನ ನಾಲ್ಕಾರು ಬುದ್ಧಿಜೀವಿಗಳು ಚಕಾರವೆತ್ತುತ್ತಿಲ್ಲ ಎಂದು ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ ತೀವ್ರ ವಾಗ್ಧಾಳಿ ನಡೆಸಿದರು.

Advertisement

ನಗರದ ಶ್ರೀನಿವಾಸ ಭವನದಲ್ಲಿ ನಡೆದ ನಗರಸಭೆಗೆ ನೂತನ ಬಿಜೆಪಿ ಸದಸ್ಯರ ಅಭಿನಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಜನಾದೇಶಕ್ಕೆ ತಲೆಬಾಗದೇ ಕಾಂಗ್ರೆಸ್‌ ಹಿಂಬಾಗಿಲ ಮೂಲಕ ಗದಗ-ಬೆಟಗೇರಿ ನಗರಸಭೆ ಅಧಿ ಕಾರ ಹಿಡಿಯುವ ಕಸರತ್ತು ನಡೆಸುತ್ತಿದೆ ಎಂದು ಆರೋಪಿಸಿದರು.

ಇತ್ತೀಚೆಗೆ ನಡೆದ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಯಲ್ಲಿ ಕಾಂಗ್ರೆಸ್‌ 18 ಮತ, ಬಿಜೆಪಿ 19 ಮತಗಳನ್ನು ಪಡೆದು ಅಧಿಕಾರ ತನ್ನದಾಗಿಸಿಕೊಂಡಿದೆ. ನಗರಸಭೆಯಲ್ಲಿ ಬಿಜೆಪಿಗೆ ಸರಳ ಬಹುಮತವಿದೆ. ಆದರೆ ಸಿಬ್ಬಂದಿ ನೀಡಿದ ಪತ್ರದ ವ್ಯತ್ಯಾಸದಿಂದ ಕಾಂಗ್ರೆಸ್‌ ಸದಸ್ಯರು ನ್ಯಾಯಾಲಯ ಮೂಲಕ ತಡೆಯಾಜ್ಞೆ ತಂದಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಚುನಾವಣೆ ಘೋಷಣೆಯಾಗುತ್ತಿದ್ದಂತೆ ಅನ್ಯ ಜಿಲ್ಲೆಯ ವಿಧಾನ ಪರಿಷತ್‌ ಸದಸ್ಯರನ್ನು ನಗರದ ಮತದಾರರನ್ನಾಗಿಸುವ ವಾಮಮಾರ್ಗ ಹಿಡಿದರು. ಅದೂ ಕೈಗೂಡದಿದ್ದಾಗ ಮತ್ತೂಂದು ದಾರಿ ಹುಡುಕಿದ್ದಾರೆ. ಕಾಂಗ್ರೆಸ್ಸಿಗರು ಹುಡುಕಿರುವ ಕಾನೂನಿನ ಅಂಶಗಳು ನಮಗೂ ಗೊತ್ತಿವೆ. ಸದಾ ಪ್ರಜಾಪ್ರಭುತ್ವದ ಮೌಲ್ಯಗಳ ಬಗ್ಗೆ ಮಾತನಾಡುವ ಕಾಂಗ್ರೆಸ್‌ ನ್ಯಾಯಕರಿಗೆ ಈ ಅನ್ಯಾಯ ಕಾಣುತ್ತಿಲ್ಲವೇ ಎಂದು ಕಿಡಿಕಾರಿದರು.

ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ ಮಾತನಾಡಿ, ನಗರಸಭೆ ಅಧಿಕಾರ ಹಿಡಿಯುವಲ್ಲಿ ಬಿಜೆಪಿ ಜನಾಭಿಪ್ರಾಯ ಹೊಂದಿದ್ದರೂ, ವಿಪಕ್ಷದವರ ಕುತಂತ್ರದಿಂದ ಕಾನೂನಿನ ತೊಡಕುಂಟಾಗಿದೆ. ಕಾಂಗ್ರೆಸ್‌ ನಾಯಕರು ಇದರಲ್ಲಿ ಶಕುನಿ ಪಾತ್ರ ಮಾಡುತ್ತಿದ್ದಾರೆ. ಕೊನೆಗೆ ಮಹಾಭಾರತದಲ್ಲಿ ಗೆಲ್ಲುವುದು ಪಾಂಡವರೇ ಎನ್ನುವುದು ಗೊತ್ತಿರಲಿ ಎಂದು ಎಚ್ಚರಿಸಿದರು.

Advertisement

ನಗರಸಭೆ ನೂತನ ಸದಸ್ಯರ ಮೇಲೆ ದೊಡ್ಡ ಜವಾಬ್ದಾರಿಯಿದೆ. ಅದನ್ನರಿತು ಆಡಳಿತ ನಡೆಸಬೇಕು. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯ ನಾಲ್ಕೂ ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲಿಸಬೇಕು ಎಂದು ಮನವಿ ಮಾಡಿದರು. ನಗರಸಭೆಗೆ ನೂತನವಾಗಿ ಆಯ್ಕೆಯಾದ ಸದಸ್ಯರನ್ನು ಸನ್ಮಾನಿಸಲಾಯಿತು. ಶಾಸಕ ಕಳಕಪ್ಪ ಬಂಡಿ, ವಿಧಾನ ಪರಿಷತ್‌ ಸದಸ್ಯ ಎಸ್‌.ವಿ.ಸಂಕನೂರ, ನಗರಸಭೆ ಅಧ್ಯಕ್ಷೆ ಉಷಾ ದಾಸರ, ಉಪಾಧ್ಯಕ್ಷೆ ಸುನಂದಾ
ಬಾಕಳೆ, ರಾಜ್ಯ ಒಬಿಸಿ ಕಾರ್ಯದರ್ಶಿ ರವಿ ದಂಡಿನ, ಸಂಗಮೇಶ ದುಂದೂರ, ಕಾಂತೀಲಾಲ ಬನ್ಸಾಲಿ, ಎಂ.ಎಸ್‌. ಕರಿಗೌಡ್ರ, ಶ್ರೀಪತಿ ಉಡುಪಿ, ಮಧವ ಗಣಚಾರಿ, ವಿಜಯಲಕ್ಷ್ಮಿ ಮಾನ್ವಿ ಮುಂತಾದವರಿದ್ದರು.

ಕಾಂಗ್ರೆಸ್‌ ಪಕ್ಷ ಮೊಂಡುತನ ಬಿಟ್ಟು ಜನಾದೇಶಕ್ಕೆ ತಲೆಬಾಗಬೇಕು. ಮುಂದಿನ ಕಾನೂನು ಹೋರಾಟದಲ್ಲಿ ಮುಖಭಂಗವಾದರೆ ಶಾಸಕ ಎಚ್‌. ಕೆ.ಪಾಟೀಲ ಅವರು ಜನರಿಗೆ ಯಾವ ಉತ್ತರ ನೀಡುತ್ತಾರೆ?
ಸಿ.ಸಿ.ಪಾಟೀಲ,
ಲೋಕೋಪಯೋಗಿ ಸಚಿವರು

ಬಿ.ಎಸ್‌.ಯಡಿಯೂರಪ್ಪನವರು ಮುಖ್ಯಮಂತ್ರಿ ಆಗಬೇಕೆಂಬ ಉದ್ದೇಶದಿಂದ ಕಾಂಗ್ರೆಸ್‌ ಪಕ್ಷ ತೊರೆದ 17 ಜನ ಶಾಸಕರು ಜಾತ್ಯತೀತವಾಗಿ ಬಿಜೆಪಿ ಬೆಂಬಲಿಸಿ ಸುಭದ್ರ ಸರಕಾರವನ್ನಾಗಿ ಮಾಡಲಾಯಿತು. ಮುಂದಿನ ದಿನಗಳಲ್ಲೂ ನಾವೆಲ್ಲರೂ ಪಕ್ಷದ ಕಂಬಗಳಾಗಿ ನಿಲ್ಲುತ್ತೇವೆ.
ಬಿ.ಸಿ.ಪಾಟೀಲ,
ಜಿಲ್ಲಾ ಉಸ್ತುವಾರಿ ಸಚಿವರು

Advertisement

Udayavani is now on Telegram. Click here to join our channel and stay updated with the latest news.

Next