ಗದಗ: ಬಿಜೆಪಿ ವಿರುದ್ಧ ದಂಗೆ ಏಳಬೇಕು ಎಂಬ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ಹೇಳಿಕೆ ಖಂಡಿಸಿ ಶುಕ್ರವಾರ ನಗರದ ಮಹಾತ್ಮಗಾಂಧಿ ವೃತ್ತದಲ್ಲಿ ರೋಣ ಶಾಸಕ ಕಳಕಪ್ಪ ಬಂಡಿ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಶುಕ್ರವಾರ ಬೆಳಗ್ಗೆ 11:00ರ ಸುಮಾರಿಗೆ ಗಾಂಧಿ ವೃತ್ತದಲ್ಲಿ ಜಮಾಯಿಸಿದ ಬಿಜೆಪಿ ಕಾರ್ಯಕರ್ತರು ಮುಲಾಜಿನ ಮುಖ್ಯಮಂತ್ರಿ, ಭ್ರಷ್ಟ ಮುಖ್ಯಮಂತ್ರಿ, ಅಪವಿತ್ರ ಮೈತ್ರಿ ಸರಕಾರಕ್ಕೆ ಧಿಕ್ಕಾರ ಎಂಬ ಘೋಷಣೆ ಮೊಳಗಿಸಿದರು.
ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ, ರಾಜ್ಯ ಸಮ್ಮಿಶ್ರ ಸರಕಾರ ಅಸ್ಥಿತ್ವಕ್ಕೆ ಬಂದು ನಾಲ್ಕು ತಿಂಗಳು ಕಳೆಯುತ್ತಿದ್ದರೂ ಆಡಳಿತ ಚುರುಕುಗೊಂಡಿಲ್ಲ. ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳು ಮರೀಚಿಕೆಯಾಗಿವೆ. ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿರುವಂತೆ ಜನರಿಗೆ ನೀಡಿದ್ದ ಭರವಸೆ ಈಡೇರಿಸಲಾಗುತ್ತಿಲ್ಲ. ಅಲ್ಲದೇ, ಸಮ್ಮಿಶ್ರ ಸರಕಾರದಲ್ಲಿ ಉಂಟಾಗಿರುವ ಗೊಂದಲಗಳಿಂದ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅಧಿಕಾರ ಬಿಟ್ಟು ಹೋಗುವ ಲಕ್ಷಣಗಳು ಸ್ಪಷ್ಟವಾಗಿದ್ದು, ಹತಾಶೆಗೊಂಡಿದ್ದಾರೆ ಎಂದು ಲೇವಡಿ ಮಾಡಿದರು.
ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವ ಸಂದರ್ಭದಲ್ಲಿ ರಾಜ್ಯದಲ್ಲಿ ಶಾಂತಿ, ಕಾನೂನು ಸುವ್ಯವಸ್ಥೆ ಕಾಪಾಡುವುದಾಗಿ ಹೇಳಿದ್ದರು. ಈಗ ಅಧಿಕಾರ ದಾಹದಿಂದ ಜನರನ್ನು ಪ್ರಚೋದಿಸುತ್ತಿರುವುದು ಖಂಡನೀಯ. ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ತಮ್ಮ ಧೋರಣೆ ಬದಲಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ರಾಜ್ಯಪಾಲರು ಮಧ್ಯ ಪ್ರವೇಶಿಸಿ ಮುಖ್ಯಮಂತ್ರಿಗಳ ನಡುವಳಿಕೆ ತಿದ್ದುವ ಕೆಲಸ ಮಾಡಬೇಕು. ಇಲ್ಲವಾದರೆ, ಸರಕಾರದ ವಿರುದ್ಧ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಸಿದರು.
ಬಿಜೆಪಿ ಹಿರಿಯ ಮುಖಂಡ ಎಂ.ಎಸ್. ಕರಿಗೌಡ್ರ ಮಾತನಾಡಿ, ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಪ್ರಬುದ್ಧ ರಾಜಕಾರಣಿ ಎಂದು ಜನರು ಭಾವಿಸಿದ್ದರು. ಆದರೆ, ಇತ್ತೀಚಿನ ಅವರ ಹೇಳಿಕೆಗಳಿಂದ ಕುಮಾರಸ್ವಾಮಿ ಅವರ ಕೀಳು ಮಟ್ಟದ ರಾಜಕಾರಣ ರಾಜ್ಯದ ಜನರಿಗೆ ಗೊತ್ತಾಗಿದೆ. ಅಲ್ಲದೇ, ಸರಕಾರದ ಸಾವಿರಾರು ಎಕರೆ ಜಮೀನನ್ನು ಕಬಳಿಸಿದ ಮುಖ್ಯಮಂತ್ರಿ ಯಾರಾದರೂ ಇದ್ದರೆ ಅದು ಕುಮಾರಸ್ವಾಮಿ ಮಾತ್ರ ಎಂದು ಆರೋಪಿಸಿದರು. ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ತಮ್ಮ ಶಾಸಕರನ್ನು ಹದ್ದುಬಸ್ತಿನಲ್ಲಿಟ್ಟುಕೊಳ್ಳಬೇಕು. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ವಿರುದ್ಧ ಬಾಯಿಗೆ ಬಂದಂತೆ ಮಾತನಾಡಿದರೆ ಕಾರ್ಯಕರ್ತರು ಸಹಿಸುವುದಿಲ್ಲ. ಬಿ.ಎಸ್. ಯಡಿಯೂರಪ್ಪನವರು ಕರೆ ನೀಡಿದರೆ ಲಕ್ಷಾಂತರ ಕಾರ್ಯಕರ್ತರು ನಿಮ್ಮನ್ನು ಮುತ್ತಿಗೆ ಹಾಕುತ್ತಾರೆ ಎನ್ನುವುದನ್ನು ನೆನಪಿಟ್ಟುಕೊಳ್ಳಬೇಕು ಎಂದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಮೋಹನ ಮಾಳಶೆಟ್ಟಿ, ರಾಜು ಕುರಡಗಿ, ಶ್ರೀಪತಿ ಉಡುಪಿ, ಶಹರ ಅಧ್ಯಕ್ಷ ಜಗನ್ನಾಥಸಾ ಭಾಂಡಗೆ, ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಯಳವತ್ತಿ, ಗ್ರಾಮೀಣ ಅಧ್ಯಕ್ಷ ಭದ್ರೇಶ ಕುಸ್ಲಾಪುರ, ಬಿಜೆಪಿ ಜಿಲ್ಲಾ ಮಹಿಳಾ ಅಧ್ಯಕ್ಷೆ ಅಶ್ವಿನಿ ಜಗತಾಪ್, ಪ್ರಮುಖರಾದ ವಸಂತ ಮೇಟಿ, ಕಾಂತಿಲಾಲ ಬನ್ಸಾಲಿ, ವಂದನಾ ವರ್ಣೇಕರ, ಗೋವಿಂದರಾಜ ಪೂಜಾರ, ಇರ್ಷಾದ್ ಮಾನ್ವಿ, ಸಿ.ಜಿ. ಸೊನ್ನದ, ಸುರೇಶ ಮರಳಪ್ಪನವರ, ಶಶಿ ಕುಲಕರ್ಣಿ, ಕಿರಣ ಕಲಾಲ, ವಿನಾಯಕ ಹಬೀಬ, ಪ್ರದೀಪ ನವಲಗುಂದ, ಶ್ರೀನಿವಾಸ ಹುಬ್ಬಳ್ಳಿ, ಶಿವು ಹಿರೇಮನಿಪಾಟೀಲ, ಪ್ರಕಾಶ ಸಂಕಣ್ಣವರ, ಬಾಸ್ಕರ ರಾಯಬಾಗಿ, ಈರಣ್ಣ ಅಂಗಡಿ, ಹನುಮಂತಪ್ಪ ಬಾವಿಕಟ್ಟಿ, ಸಿ.ಎಸ್. ಪತ್ರಿ, ಕೆ.ಪಿ. ಕೋಟಿಗೌಡ್ರ, ಮೋಹನ ಮಾಳಗಿಮನಿ, ಸುರೇಶ ಚಿತ್ತರಗಿ, ವೈ.ಪಿ.ಅಟ್ನೂರ, ಬಸವರಾಜ ಶಿರಿ ಹಾಗೂ ಹಲವಾರು ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.