ಗದಗ: ಗದಗ-ಬೆಟಗೇರಿ ನಗರಸಭೆ ಅಧ್ಯಕ್ಷೆ ಉಷಾ ಮಹೇಶ ದಾಸರ ಅವರು ಮಂಗಳವಾರ 2022-23ನೇ ಸಾಲಿನ 3.28 ಕೋಟಿ ರೂ. ಉಳಿತಾಯದ ಚೊಚ್ಚಲ ಬಜೆಟ್ ಮಂಡಿಸಿದರು. ಆರಂಭಿಕ ಶುಲ್ಕ 38.97 ಕೋಟಿ ರೂ. ಹಾಗೂ 192.12 ಕೋಟಿ ರೂ. ಸ್ವೀಕೃತಿ ಆದಾಯ ಸೇರಿದಂತೆ ಒಟ್ಟು 230.09 ಕೋಟಿ ರೂ. ಬಜೆಟ್‌ನಲ್ಲಿ 227.81 ಕೋಟಿ ರೂ. ಖರ್ಚು ಮಾಡಲಾಗುತ್ತಿದೆ. ಹೀಗಾಗಿ, 3.28 ಕೋಟಿ ರೂ. ಉಳಿತಾಯವಾಗಲಿದೆ. ಈ ಬಾರಿ ಬಜೆಟ್‌ನಲ್ಲಿ ಅವಳಿ ನಗರದಲ್ಲಿ ಮೂಲ ಸೌಕರ್ಯ ಹೆಚ್ಚಿಸುವುದು, ಹಸಿರೀಕರಣ ಮತ್ತು ಸೌಂದರ್ಯಿಕರಣ ಸೇರಿದೆ ಎಂದರು.
ನಿರೀಕ್ಷಿತ ಆದಾಯ: ರಾಜಸ್ವ ಖಾತೆಯಲ್ಲಿ 5,799.65 ಲಕ್ಷ ರೂ., ಬಂಡವಾಳ ಖಾತೆಯಲ್ಲಿ 1,922.80 ಲಕ್ಷ ರೂ., ಅಸಾಧಾರಣ ಖಾತೆಯಲ್ಲಿ 11,490.79 ಲಕ್ಷ ರೂ. ಸೇರಿ ಒಟ್ಟು 19,212.80 ಲಕ್ಷ ರೂ. ಸ್ವೀಕೃತಿ ನಿರೀಕ್ಷಿಸಲಾಗಿದೆ. ಇದರಲ್ಲಿ ರಾಜಸ್ವ ಖಾತೆಯಲ್ಲಿ 6,298.67 ಲಕ್ಷ ರೂ. ರಾಜಸ್ವ ವೆಚ್ಚವನ್ನು ನಿರೀಕ್ಷಿಸಿ, 499.02 ಲಕ್ಷ ರೂ. ಕೊರತೆ ನಿರೀಕ್ಷಿಸಲಾಗಿದೆ. ಬಂಡವಾಳ ಖಾತೆಯಲ್ಲಿ ಆಸ್ತಿ ನಿರ್ಮಾಣಕ್ಕಾಗಿ 3,534.79 ಲಕ್ಷ ರೂ. ವೆಚ್ಚಕ್ಕಾಗಿ ಮೀಸಲಿರಿಸಿ, 1,612.43 ಲಕ್ಷ ರೂ. ಕೊರತೆ ಅಂದಾಜಿಸಲಾಗಿದೆ.
ಸರ್ಕಾರದ ಮುಕ್ತ ನಿಧಿ ಅನುದಾನ 20.2 ಕೋಟಿ ರೂ., ವೇತನ ಅನುದಾನ 1318 ಕೋಟಿ ರೂ., ವಿಚ್ಯುಚ್ಛಕ್ತಿ ಅನುದಾನದಿಂದ 1727 ಕೋಟಿ ರೂ., ನೀರು ಸರಬರಾಜು ವ್ಯವಸ್ಥೆಗಾಗಿ ಪ್ರಕೃತಿ ವಿಕೋಪ ಪರಿಹಾರ ನಿ ಧಿಯಿಂದ 15 ಲಕ್ಷ ರೂ. ನಿರೀಕ್ಷಿಸಲಾಗಿದೆ. ತೆರಿಗೆ ಆದಾಯ ದಿಂದ 95.5 ಕೋಟಿ ರೂ. ಅಭಿವೃದ್ಧಿ ಶುಲ್ಕ 25 ಕೋಟಿ ರೂ., ಕಟ್ಟಡ ಅನುಮತಿ ಶುಲ್ಕ 1.23 ಕೋಟಿ ರೂ., ವಾಣಿಜ್ಯ ಮಳಿಗೆಗಳಿಂದ 55 ಲಕ್ಷ ರೂ., ಅಂಗಡಿಗಳ ಅನುಮತಿಯಿಂದ 75 ಲಕ್ಷ ರೂ., ಖಾತಾ ನಕಲು ಶುಲ್ಕದಿಂದ 7.85 ಲಕ್ಷ ರೂ., ಖಾತಾ ಬದಲಾವಣೆಯಿಂದ 95 ಲಕ್ಷ ರೂ., ಘನ ತ್ಯಾಜ್ಯ ನಿರ್ವಹಣೆಯಿಂದ 45.66 ಲಕ್ಷ ರೂ., ನೀರು ಪೂರೈಕೆಯಿಂದ 26.6 ಕೋಟಿ ರೂ. ಆದಾಯ ನಿರೀಕ್ಷಿಸಲಾಗಿದೆ ಎಂದರು.
ಅಂದಾಜು ವೆಚ್ಚಗಳು: ಸಿಬ್ಬಂದಿ ವೇತನ, ಆಡಳಿತ ವೆಚ್ಚಕ್ಕಾಗಿ ಶೇ.16, ಆಡಳಿತ ವೆಚ್ಚಕ್ಕೆಕ್ಕೆ ಶೇ.4, ದುರಸ್ತಿ ಮತ್ತು ನಿರ್ವಹಣೆ ವೆಚ್ಚಕ್ಕಾಗಿ ಶೇ. 33.33, ಕಾರ್ಯಕ್ರಮ ವೆಚ್ಚಕ್ಕಾಗಿ ಶೇ.10.10, ನಗರದ ಬಡವರ ಏಳ್ಗೆಗಾಗಿ ಶೇ.2, ಬಂಡವಾಳ ಆಸ್ತಿ, ಸ್ವತ್ತುಗಳ ನಿರ್ಮಾಣಕ್ಕಾಗಿ ಶೇ.36ರಷ್ಟು ಖರ್ಚು ಮಾಡಲಾಗುವುದು. ರಸ್ತೆ ದುರಸ್ತಿಗೆ 43.57 ಲಕ್ಷ ರೂ., ಹೊಸ ರಸ್ತೆಗಳ ನಿರ್ಮಾಣಕ್ಕೆ 68 ಕೋಟಿ ರೂ., ಚರಂಡಿಗಳ ನಿರ್ವಹಣೆಗೆ 39 ಲಕ್ಷ ರೂ., ಹೊಸ ಚರಂಡಿಗಳ ನಿರ್ಮಾಣಕ್ಕೆ 32.96 ಕೋಟಿ ರೂ. ನೀಡಲಾಗುವುದು. ನಗರದ ಬೀದಿ ದೀಪಗಳ ನಿರ್ವಹಣೆಗೆ 1.49 ಕೋಟಿ ರೂ. ಮೀಸಲಿರಿಸಲಾಗಿದೆ.
ಹೊಸಬಡಾವಣೆಗಳಿಗೆ ಹೈಮಾಸ್ಟ್ ದೀಪ ಅಳವಡಿಕೆಗೆ 1.39 ಕೋಟಿ ರೂ. ತೆಗೆದಿರಿಸಲಾಗಿದೆ. ಹೊರಗುತ್ತಿಗೆ ಕಾರ್ಮಿಕರು, ಲೋಡರ್, ಮನೆ ಮನೆ ಕಸ ಸಂಗ್ರಹಿಸುವ ಕಾರ್ಮಿಕ ಸಿಬ್ಬಂದಿ ಸಂಬಳಕ್ಕಾಗಿ 5.10 ಕೋಟಿ ರೂ. ಮೀಸಲಿರಿಸಲಾಗಿದೆ. ಅವರ ಆರೋಗ್ಯ ಸುಧಾರಣೆಗಾಗಿ 5 ಲಕ್ಷ ರೂ., ಘನ ತ್ಯಾಜ್ಯ ನಿರ್ವಹಣೆಗೆ 1.08 ಕೋಟಿ ರೂ., ವಿವಿಧ ಕಾಮಗಾರಿಗಳ ಅನುಷ್ಠಾನಕ್ಕೆ 2.16 ಕೋಟಿ ರೂ. ತೆಗೆದಿರಿಸಲಾಗಿದೆ. ಕುಡಿಯುವ ನೀರು ಒದಗಿಸುವ ಸಲುವಾಗಿ 34.1 ಕೋಟಿ. ರೂ., ಸ್ಥಾವರ ತಂತ್ರೋಪಕರಣ ವೆಚ್ಚಕ್ಕಾಗಿ 42.1 ಕೋಟಿ ರೂ., ಜತೆಗೆ 111.3 ಕೋಟಿ ರೂ. ವಿದ್ಯುತ್ ಬಿಲ್ ಪಾವತಿಗಾಗಿ ಮೀಸಲಿರಿಸಲಾಗಿದೆ.
ಮೂಲ ಸೌಕರ್ಯಕ್ಕೆ ಒತ್ತು: ಅವಳಿ ನಗರದ ಮುಖ್ಯ ಕೊಳವೆಬಾವಿ ಉನ್ನತಿಗಾಗಿ 34.8 ಕೋಟಿ. ರೂ., ಒಳಚರಂಡಿ ಯೋಜನೆ ನಿರ್ವಹಣೆಗೆ 75 ಲಕ್ಷ ರೂ., ಉದ್ಯಾನಗಳ ನಿರ್ವಹಣೆಗೆ 46.85 ಲಕ್ಷ ರೂ., ಹೊಸ ಉದ್ಯಾನವನಗಳ ನಿರ್ಮಾಣಕ್ಕಾಗಿ 99 ಲಕ್ಷ ರೂ., ಸಾಮಾಜಿಕ ಅರಣ್ಯೀಕರಣದಡಿ ಗಿಡ ನೆಡುವ ಕಾರ್ಯಕ್ಕೆ 8.06 ಕೋಟಿ ರೂ. ನೀಡಲಾಗಿದೆ. ನಗರಸಭೆ ವ್ಯಾಪ್ತಿಯ ರುದ್ರಭೂಮಿಗಳಲ್ಲಿ ಆದ್ಯತೆ ಮೇರೆಗೆ ಪರಿಸರ ಸ್ನೇಹಿ ವಿದ್ಯುತ್ ಚಿತಾಗಾರ ಅಳವಡಿಸಲು ಉದ್ದೇಶಿಸಿದೆ. ಸ್ಮಶಾನ ಮತ್ತು ಶವ ಸಂಸ್ಕಾರಗಳ ಸ್ಥಳಗಳ ನಿರ್ವಹಣೆಗೆ 12 ಲಕ್ಷ ರೂ., ಈಜುಕೊಳ ನಿರ್ವಹಣೆಗೆ 10 ಲಕ್ಷ ರೂ. ಬಿಡುಗಡೆಗೆ ಉದ್ದೇಶಿ ಸಲಾಗಿದೆ. ಅಪೂರ್ಣಗೊಂಡಿರುವ ಈಜುಕೋಳ ಕಾಮಗಾರಿಗೆ 68 ಲಕ್ಷ ರೂ. ಮೀಸಲಿರಿಸಲಾಗಿದೆ.
ಜಿಲ್ಲಾ ಕಸಾಪ ಹಮ್ಮಿಕೊಂಡಿರುವ ಸಾಂಸ್ಕೃತಿಕ ಉತ್ಸವಕ್ಕೆ 2.50 ಲಕ್ಷ ರೂ., ಮುನ್ಸಿಪಲ್ ಹೈಸ್ಕೂಲ್ ನಿರ್ವಹಣೆಗೆ 20 ಲಕ್ಷ ರೂ., ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳು, ಕ್ರೀಡಾಪಟುಗಳಿಗೆ ಪ್ರೋತ್ಸಾಹಧನ ನೀಡಲು ತಲಾ 50 ಸಾವಿರ ರೂ. ಮೀಸಲಿಡಲಾಗಿದೆ. ಪರಿಶಿಷ್ಟ ಜಾತಿ ಮತ್ತು ಪಂಗಡ, ಹಿಂದುಳಿದವರ ಹಾಗೂ ವಿಕಲ ಚೇತನರ ಆರ್ಥಿಕ ಸ್ವಾವಲಂಬನೆಗಾಗಿ 171.83 ಲಕ್ಷ ರೂ. ಮೀಸಲಿಡಲಾಗಿದೆ. ಅಮೃತ ಯೋಜನೆಯಡಿ 9 ಕೋಟಿ ಅನುದಾನ ನಿರೀಕ್ಷಿಸ
ಲಾಗಿದೆ. ಭೀಷ್ಮ ಕೆರೆ, ಪಾರ್ಕ್, ಚರಂಡಿ, ಪಾದಚಾರಿ ಮಾರ್ಗಗಳ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು. ಅಮೃತ ನಿರ್ಮಲ ಯೋಜನೆಯಡಿ 1 ಕೋಟಿ ರೂ. ಬಿಡುಗಡೆಯಾಗಿದ್ದು, ಹೈಟೆಕ್ ಶೌಚಾಲಯ ನಿರ್ಮಾಣ, ಸ್ವಚ್ಛತೆ 66 ಲಕ್ಷ ರೂ. ವ್ಯಯಿಸಲು ಉದ್ದೇಶಿಸಲಾಗಿದೆ ಎಂದರು. ಉಪಾಧ್ಯಕ್ಷೆ ಸುನಂದಾ ಬಾಕಳೆ, ಪೌರಾಯುಕ್ತ ರಮೇಶ ಸುಣಗಾರ ಇತರರಿದ್ದರು.