Advertisement

Gadag-Betageri: ಆಟೋ ಚಾಲಕರಿಗೆ ಬಿಸಿ ಮುಟ್ಟಿಸಿದ ಪೊಲೀಸ್ ಇಲಾಖೆ

08:54 PM Feb 07, 2024 | Team Udayavani |

ಗದಗ: ಗದಗ-ಬೆಟಗೇರಿ ಅವಳಿ ನಗರದಲ್ಲಿ ವಾಹನ ಚಾಲನಾ ಲೈಸೆನ್ಸ್, ಶಹರ/ಗ್ರಾಮೀಣ ಪರವಾನಿಗೆ, ಯುನಿಫಾರ್ಮ್ ಮತ್ತು ನೋಂದಣಿ ಹೀಗೆ ವಿವಿಧ ದಾಖಲಾತಿ ಪರಿಶೀಲಿಸಿದ ಪೊಲೀಸ್ ಇಲಾಖೆಯು ಆಟೋ ಚಾಲಕರಿಗೆ ಬಿಸಿ ಮುಟ್ಟಿಸಿದೆ.

Advertisement

ಗದಗ-ಬೆಟಗೇರಿ ನಗರದ 8 ಪ್ರಮುಖ ಸರ್ಕಲ್‌ಗಳಲ್ಲಿ ವಿಶೇಷ ಅಧಿಕಾರಿಗಳ ತಂಡಗಳ ಮೂಲಕ ಕಾರ್ಯಾಚರಣೆ ನಡೆಸಿದ ಜಿಲ್ಲಾ ಪೊಲೀಸ್ ಇಲಾಖೆಯು ದೋಷಪೂರಿತ ದಾಖಲಾತಿಯ 116 ಆಟೋಗಳನ್ನು ಸೀಜ್ ಮಾಡುವ ಮೂಲಕ ಸೂಕ್ತ ಕಾನೂನು ಕ್ರಮಕ್ಕೆ ಮುಂದಾಗಿದೆ.

ಅವಳಿ ನಗರದಲ್ಲಿ ಆಟೋಗಳ ಸಂಖ್ಯೆ ದಿನೇ ದಿನೆ ಹೆಚ್ಚುತ್ತಿದ್ದು, ಪ್ರಯಾಣಿಕರಿಗಾಗಿ ರಸ್ತೆ ಮಧ್ಯೆ ನಿಲ್ಲಿಸುವುದು, ಡ್ರೈವರ್ ಪಕ್ಕದಲ್ಲಿ ಪ್ರಯಾಣಿಕರನ್ನು ಕೂಡಿಸುವುದು, ಅಡ್ಡಾದಿಡ್ಡಿ ಚಾಲನೆ ಮಾಡುವುದು, ಪ್ರಯಾಣಿಕರಿಗೆ ಪೀಡಿಸುವಂತಹ ಘಟನೆಗಳು ನಡೆಯುತ್ತಿರುವಂತಹ ಘಟನೆಗಳಿಗೆ ಬ್ರೇಕ್ ಹಾಕಲು ಜಿಲ್ಲಾ ಪೊಲೀಸ್ ಇಲಾಖೆ ದಿಟ್ಟ ಕ್ರಮ ಕೈಗೊಂಡಿತು.

ಕಳೆದ ತಿಂಗಳು ಜಿಲ್ಲಾ ಪೊಲೀಸಸ್ ಇಲಾಖೆಯು ಹೆಲ್ಮೆಟ್ ಧರಿಸದೇ ಇರುವುದು, ಸಿಗ್ನಲ್ ಬ್ರೇಕ್ ಮಾಡುವುದು, ಒನ್ ವೇ ನಲ್ಲಿ ಸಂಚಾರ ಹೀಗೆ ಸಂಚಾರಿ ನಿಯಮಗಳನ್ನು ಪಾಲಿಸದೇ ಇರುವ ದ್ವಿಚಕ್ತ ವಾಹನ ಸವಾರರಿಗೆ ಬಿಸಿ ಮುಟ್ಟಿಸಿ, 145 ಬೈಕ್‌ಗಳನ್ನು ಮಾಡಿತ್ತು. ಈಗ ಆಟೋಗಳ ಚಾಲಕರಿಗೆ ಬಿಸಿ ಮುಟ್ಟಿಸಲಾಗಿದೆ.

ಕಳೆದ ಕೆಲವು ದಿನಗಳಿಂದ ಸೂಕ್ಷ್ಮವಾಗಿ ಗಮನಿಸಿದ್ದ ಜಿಲ್ಲಾ ಪೊಲೀಸ್ ಇಲಾಖೆಯು ಜಿಲ್ಲೆಯ ಎಲ್ಲಾ ಪೊಲೀಸ್ ಠಾಣೆಯ ಅಧಿಕಾರಿಗಳನ್ನು ಬ‍‍ಳಸಿಕೊಂಡು ಗದಗ-ಬೆಟಗೇರಿ ಅವಳಿ ನಗರದ ಮಹಾತ್ಮ ಗಾಂಧೀ ವೃತ್ತ, ಮುಳಗುಂದ ನಾಕಾ, ಹಳೆ ಜಿಲ್ಲಾಧಿಕಾರಿ ಕಚೇರಿ, ಕೆ.ಎಚ್. ಪಾಟೀಲ ವೃತ್ತ, ಬಸವೇಶ್ವರ ವೃತ್ತ, ಹಾತಲಗೇರಿ ನಾಕಾ ಸೇರಿ 8 ಪ್ರಮುಖ ವೃತ್ತಗಳಲ್ಲಿ ಏಕಕಾಲಕ್ಕೆ ಕಾರ್ಯಾಚರಣೆ ನಡೆಸಿ 116ಕ್ಕೂ ಅಧಿಕ ಆಟೋಗಳನ್ನು ಸೀಜ್ ಮಾಡಿ, ಕಾನೂನು ಉಲ್ಲಂಘಿಸುವವರಿಗೆ ಚುರುಕು ಮುಟ್ಟಿಸಿದರು. ಮುಂದಿನ ದಿನಗಳಲ್ಲಿ ಇದೇ ರೀತಿಯ ವರ್ತನೆ ಮುಂದುವರಿಸಿದಲ್ಲಿ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದ ಎಚ್ಚರಿಕೆ ನೀಡಿ ದಂಡ ಭರಿಸಿದ ನಂತರ ವಾಹನಗಳನ್ನು ರಿಲೀಸ್ ಮಾಡಿದರು.

Advertisement

ಗ್ರಾಮೀಣ ಪರವಾನಿಗೆ, ಸಿಟಿಯಲ್ಲಿ ಸಂಚಾರ
ಗದಗ ತಾಲೂಕಿನ ವಿವಿಧ ಗ್ರಾಮಗಳ ಹೆಸರಿನಲ್ಲಿ ಆಟೋ ಹಾಗೂ ಟಂಟಂ ವಾಹನಗಳನ್ನು ಖರೀದಿಸಿ ಗ್ರಾಮೀಣ ಭಾಗದಲ್ಲಿ ಸಂಚರಿಸುವ ಪರವಾನಗಿ ಪಡೆದ ವಾಹನಗಳು ನಗರದಲ್ಲಿ ಸಂಚರಿಸುತ್ತಿದೆ. ಹೀಗಾಗಿ ನಗರದ ಆಟೋಗಳು ಹಾಗೂ ಗ್ರಾಮೀಣ ಭಾಗದ ಆಟೋಗಳ ಚಾಲಕರು ನಿತ್ಯ ಒಂದಿಲ್ಲೊಂದು ವಿಷಯಗಳಿಗೆ ಗಲಾಟೆ, ಗೊಂದಲ ಉಂಟಾಗುವುದು ಸಾಮಾನ್ಯವಾಗಿದೆ. ಜೊತೆಗೆ ಅವಳಿ ನಗರದಲ್ಲಿ ಟ್ರಾಫಿಕ್ ಸಮಸ್ಯೆಗೂ ಕಾರಣವಾಗಿದೆ. ಆದ್ದರಿಂದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್. ನೇಮಗೌಡ ಅವರು ಸ್ಪೇಶಲ್ ಡ್ರೈವ್ ಮೂಲಕ ಆಟೋ ಚಾಲಕರಿಗೆ ಎಚ್ಚರಿಕೆಯ ಜೊತೆಗೆ ತಿಳಿವಳಿಕೆ ನೀಡಿದ್ದಾರೆ.

ಗದಗ ಜಿಲ್ಲಾ ಪೊಲೀಸ್ ವತಿಯಿಂದ ಟ್ರಾಫಿಕ್ ಕಾರ್ಯಾಚರಣೆ ಮೂಲಕ ಚಾಲನಾ ಲೈಸೆನ್ಸ್, ಶಹರ/ಗ್ರಾಮೀಣ ಪರವಾನಿಗೆ, ಯುನಿಫಾರ್ಮ್ ಮತ್ತು ನೋಂದಣಿ ಹೀಗೆ ವಿವಿಧ ದಾಖಲಾತಿ ಪರಿಶೀಲಿಸಿ ದೋಷಪೂರಿತ ದಾಖಲಾತಿ ಹೊಂದಿದ್ದ 116 ಆಟೋಗಳನ್ನು ವಶಪಡಿಸಿಕೊಂಡು ದಂಡ ವಿಧಿಸಿ ಕಾನೂನು ಕ್ರಮ ಕೈಗೊಳ್ಳಲಾಗಿದೆ. ವಾಹನ ಸವಾರರು ಸಂಚಾರಿ ನಿಯಮಗಳನ್ನು ಪಾಲಿಸುವುದರೊಂದಿಗೆ, ಸುರಕ್ಷತಾ ಕ್ರಮಗಳನ್ನು ಅನುಸರಿಬೇಕು. ಇಲ್ಲವಾದಲ್ಲಿ ಟ್ರಾಫಿಕ್ ಪೊಲೀಸರಿಂದ ದಂಡಕ್ಕೆ ಗುರಿಯಾಗಬೇಕಾಗುತ್ತದೆ.

-ಬಿ.ಎಸ್. ನೇಮಗೌಡ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಗದಗ

Advertisement

Udayavani is now on Telegram. Click here to join our channel and stay updated with the latest news.

Next