Advertisement

Gadag: ಕಾನೂನು ಸಚಿವರ ತವರಲ್ಲಿ ವ್ಯಾಜ್ಯ ಮುಕ್ತ ಗ್ರಾಮಕ್ಕಾಗಿ ಜಾಗೃತಿ ಅಭಿಯಾನ

01:06 PM Oct 07, 2024 | Team Udayavani |

ಗದಗ: ಹುಲಕೋಟಿ ಸಹಕಾರಿ ಶಿಕ್ಷಣ ಸಂಸ್ಥೆಯ ಕಾನೂನು ಮಹಾವಿದ್ಯಾಲಯದ ವತಿಯಿಂದ ವ್ಯಾಜ್ಯಮುಕ್ತ ಗ್ರಾಮಕ್ಕಾಗಿ ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗಿದ್ದು, ಅದರ ಭಾಗವಾಗಿ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ 4 ಗ್ರಾಮಗಳನ್ನು ದತ್ತು ಪಡೆದುಕೊಂಡು ಕಾನೂನು ನೆರವನ್ನು ನೀಡಲಾಗುತ್ತಿದೆ ಎಂದು ಎಚ್.ಸಿ.ಇ.ಎಸ್ ಕಾನೂನು ಮಹಾವಿದ್ಯಾಲಯದ ಅಧ್ಯಕ್ಷ ಎಸ್.ಕೆ. ಪಾಟೀಲ ಹೇಳಿದರು.

Advertisement

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈವರೆಗೆ ಗ್ರಾಮಗಳಲ್ಲಿ, ಹೈಕೋರ್ಟ್, ಜಿಲ್ಲಾ ಹಾಗೂ ತಾಲೂಕು ನ್ಯಾಯಾಲಯಗಳಲ್ಲಿ 35 ಲಕ್ಷ ಪ್ರಕರಣಗಳು ಚಾಲ್ತಿಯಲ್ಲಿವೆ. ರಾಜಿ ಸಂಧಾನದ ಮೂಲಕ‌ ಹೆಚ್ಚು ಹೆಚ್ಚು ಪ್ರಕರಣಗಳು ಇತ್ಯರ್ಥವಾದರೆ ಸಮಾಜದಲ್ಲಿ‌ ಸೌಹಾರ್ದತೆ ಸ್ಥಾಪನೆಯಾಗಿ, ಉತ್ತಮ ಜೀವನ ಮುಂದುವರಿಸಲು ಅನುಕೂಲಕರವಾಗಿರುತ್ತದೆ ಎಂದರು.

ಈಗಾಗಲೇ ರಾಷ್ಟ್ರೀಯ ಹಾಗೂ ರಾಜ್ಯ ಕಾನೂನು ಪ್ರಾಧಿಕಾರಗಳು ಲೋಕ ಅದಾಲತ್ ಮೂಲಕ ರಾಜೀ ಸಂಧಾನ ಮೂಲಕ ಪ್ರಕರಣಗಳನ್ನು ಇತ್ಯರ್ಥಗೊಳಿಸಲಾಗುತ್ತಿದೆ. ಅದಕ್ಕೆ ಪೂರಕವಾಗಿ ಎಚ್.ಸಿ.ಇ.ಎಸ್. ಕಾನೂನು ಮಹಾವಿದ್ಯಾಲಯ ನ್ಯಾಯಾಲಯಗಳ ಮೂಲಕವೇ ರಾಜಿ ಸಂಧಾನದ ಮೂಲಕ ಪ್ರಕರಣಗಳ ಇತ್ಯರ್ಥಕ್ಕೆ ಶ್ರಮಿಸಲಾಗುತ್ತಿದೆ ಎಂದು ಹೇಳಿದರು.

ದೇಶದ ಪ್ರತಿಯೊಬ್ಬ ನಾಗರಿಕನಿಗೂ ಮಾನವ ಹಕ್ಕುಗಳು, ನ್ಯಾಯ ದೊರಕಿಸಬೇಕು, ಸೌಹಾರ್ದ ವ್ಯವಸ್ಥೆ ಕಲ್ಪಿಸಬೇಕು ಎಂಬ ಉದ್ದೇಶದಿಂದ ಲಕ್ಷ್ಮೇಶ್ವರ ತಾಲೂಕಿನ ಗೊಜನೂರ, ಶ್ಯಾಬಳ, ಸಂಕದಾಳ, ಕೊಂಡಿಕೊಪ್ಪ ಗ್ರಾಮಗಳನ್ನು ದತ್ತು ಪಡೆದು ವ್ಯಾಜ್ಯ ಮುಕ್ತ ಗ್ರಾಮಗಳನ್ನಾಗಿಸಲು ಕೆಲಸ ನಿರ್ವಹಿಸಲಾಗುತ್ತಿದೆ ಎಂದರು.

ಈಗಾಗಲೇ ದತ್ತು‌ ಪಡೆದ ನಾಲ್ಕು ಗ್ರಾಮಗಳಲ್ಲಿ ಕಾನೂನು ಮಹಾವಿದ್ಯಾಲಯದ ವಿದ್ಯಾರ್ಥಿಗಳು ಪ್ರತಿ ಮನೆ-ಮನೆಗಳಿಗೆ ಹೋಗಿ ಪ್ರಕರಣಗಳು ಬಾಕಿ ಇರುವ ಮಾಹಿತಿ ಸಂಗ್ರಹಿಸುತ್ತಿದ್ದು, ತಾಲೂಕು ಹಾಗೂ ಜೆಎಂಎಫ್ ಸಿ ನ್ಯಾಯಾಲಯಗಳಲ್ಲಿರುವ ಪ್ರಕರಣಗಳನ್ನು ರಾಜಿ ಮಾಡಲು ಪ್ರಯತ್ನಿಸಲಾಗುತ್ತಿದೆ ಎಂದರು.

Advertisement

ಕಾನೂನು ಸಚಿವ ಎಚ್.ಕೆ. ಪಾಟೀಲ ಅವರು ಈ ಹಿಂದೆ ಪ್ರತಿ ಜಿಲ್ಲೆಗಳಲ್ಲಿ ತ್ವರಿತ ನ್ಯಾಯಾಲಯ (ಫಾಸ್ಟ್ ಟ್ರ್ಯಾಕ್) ಆರಂಭಿಸಿ ನ್ಯಾಯಾಲಯಗಳಲ್ಲಿನ ಪ್ರಕರಣಗಳ ತ್ವರಿತ ಇತ್ಯರ್ಥಕ್ಕೆ ಸಹಕಾರಿಯಾಗಿ, ಉತ್ತಮ ಫಲಿತಾಂಶ ಹೊರಬಂದಿತ್ತು. ಅದೇ ಮಾದರಿಯಲ್ಲಿ ಸಚಿವ ಎಚ್.ಕೆ. ಪಾಟೀಲ ಅವರು ವ್ಯಾಜ್ಯಗಳಿರುವ ಗ್ರಾಮೀಣ ಭಾಗದ ಜನರು ತಾಲೂಕು, ಜಿಲ್ಲೆಗೆ ಅಲೆದಾಡುವುದನ್ನು ತಪ್ಪಿಸಲು, ನ್ಯಾಯ ಒದಗಿಸುವಲ್ಲಿ ಆಗುತ್ತಿರುವ ವಿಳಂಬವನ್ನು ತಪ್ಪಿಸಲು, ನ್ಯಾಯ ವ್ಯವಸ್ಥೆಯನ್ನು ಗ್ರಾಮ ಮಟ್ಟದ ಜನರ ಮನೆಯ ಬಾಗಿಲಿಗೆ ಕೊಂಡೊಯ್ಯುವುದು ಹಾಗೂ ಯಾವುದೇ ವ್ಯಕ್ತಿ ಸಾಮಾಜಿಕ, ಆರ್ಥಿಕ ಹಾಗೂ ಬಲಹೀನತೆ ಕಾರಣದಿಂದ ನ್ಯಾಯ ಪಡೆಯಲು ವಂಚಿತನಾಗಬಾರದು ಎಂಬ ಉದ್ದೇಶದಿಂದ ಗ್ರಾಮ ನ್ಯಾಯಾಲಯ ಆರಂಭಿಸಲು ಪ್ರಯತ್ನ ನಡೆಸಿದ್ದು, ಮುಂದಿನ ದಿನಗಳಲ್ಲಿ ಗ್ರಾಮ ನ್ಯಾಯಾಲಯ ಆಕ್ಟ್ ಅಡಿಯಲ್ಲಿ ಗ್ರಾಮ ನ್ಯಾಯಾಲಯ ಆರಂಭವಾಗಲಿವೆ ಎಂದರು.

ರಾಜ್ಯದಲ್ಲಿರುವ ಎಲ್ಲ ಕಾನೂನು ವಿಶ್ವವಿದ್ಯಾಲಯಗಳು ಕೂಡ ತಮ್ಮ ತಮ್ಮ ಭಾಗದ ಗ್ರಾಮಗಳಲ್ಲಿ ಪ್ರಕರಣಗಳನ್ನು ವಿದ್ಯಾರ್ಥಿಗಳ ಮೂಲಕ ಸರ್ವೇ ಮಾಡಿ ಅಧ್ಯಯನಕ್ಕೆ ಮುಂದಾದರೆ ಅವರ ಮುಂದಿನ ವೃತ್ತಿಗೂ ಅನುಕೂಲಕರವಾಗಲಿದೆ. ಅಲ್ಲದೇ, ಸಮಾಜದಲ್ಲಿ ಶಾಂತಿ, ಸುವ್ಯವಸ್ಥೆ ಕಾಪಾಡುವುದು ಕಾನೂನಿನ ಉದ್ದೇಶವಾಗಿದ್ದು, ಗ್ರಾಮೀಣ ಭಾಗದ ಜನರಿಗೆ ಕಾನೂನು ಎಂದರೇನು, ಕಾನೂನಿನ ಪ್ರಯೋಜನಗಳ ಕುರಿತು ಕಾನೂನು ವಿದ್ಯಾರ್ಥಿಗಳು ತಿಳಿಸಿಕೊಡಬೇಕಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಹುಲಕೋಟಿ ಸಹಕಾರ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಆರ್.ಎಂ. ಮೂಲಿಮನಿ, ಕಾನೂನು ಮಹಾವಿದ್ಯಾಲಯದ ಉಪಾಧ್ಯಕ್ಷ ಎಸ್.ಕೆ. ನದಾಫ್, ಪ್ರಾಚಾರ್ಯೆ ಪಲ್ಲವಿ ಬುಯ್ಯಾರ್, ಕಾನೂನು ಅರಿವು-ನೆರವು ಮತ್ತು ಮಾನವ ಹಕ್ಕುಗಳ ಘಟಕದ ಸಂಯೋಜಕ ನಾಜೀಮಾ ಮುಲ್ಲಾ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next