ಗದಗ: ಫಲಪುಷ್ಪ ಪ್ರದರ್ಶನ, ವಿವಿಧ ಗೋಷ್ಠಿಗಳು, ಖ್ಯಾತ ಗಾಯಕರಿಂದ ಗಾಯನ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನೊಳಗೊಂಡ ಐತಿಹಾಸಿಕ ಲಕ್ಕುಂಡಿ ಉತ್ಸವಕ್ಕೆ ರವಿವಾರ ವರ್ಣರಂಜಿತ ತೆರೆ ಬಿದ್ದಿತು.
ಮೊದಲ ದಿನ ಜಾನಪದ ಕಲಾ ತಂಡಗಳ ಮೆರವಣಿಗೆಯಿಂದ ಆರಂಭವಾದ ಐತಿಹಾಸಿಕ ಲಕ್ಕುಂಡಿ ಉತ್ಸವ ಸಿಎಂ ಬಸವರಾಜ ಬೊಮ್ಮಾಯಿ ಅವರಿಂದ ಉದ್ಘಾಟನೆಗೊಂಡು ಇತಿಹಾಸ ವಿಚಾರಗೋಷ್ಠಿ, ಕವಿ, ಕೃಷಿ, ಮಹಿಳಾ ಗೋಷ್ಠಿಗಳ ಮೂಲಕ ಸಾರ್ವಜನಿಕರಿಗೆ ಮಾಹಿತಿ ಒದಗಿಸಿತು.
ಧಾರವಾಡ ರಂಗಾಯಣದ ವೀರರಾಣಿ ಕಿತ್ತೂರು ಚನ್ನಮ್ಮ ನಾಟಕ, ಕಬಡ್ಡಿ, ಕುಸ್ತಿ, ಯೋಗ, ಕ್ರೀಡೆಗಳು, ಖ್ಯಾತ ಗಾಯಕರಾದ ಕುನಾಲ್ ಗಾಂಜಾವಾಲಾ, ಅನನ್ಯ ಭಟ್ ತಂಡದವರ ರಸಮಂಜರಿ ಕಾರ್ಯಕ್ರಮ, ಸರಿಗಮಪ ಖ್ಯಾತಿಯ ಜ್ಞಾನೇಶ- ಮೆಹಬೂಬಸಾಬ್ ಜುಗಲ್‌ಬಂದಿ, ಕಾಮಿಡಿ ಕಿಲಾಡಿಗಳು ಖ್ಯಾತಿಯ ಉಮೇಶ ಕಿನ್ನಾಳ ತಂಡ ಹಾಗೂ ಮಿಮಿಕ್ರಿ ಗೋಪಿ ಅವರಿಂದ ಹಾಸ್ಯ ಕಾರ್ಯಕ್ರಮ, ಪದ್ಮಶ್ರೀ ಪಂ| ವೆಂಕಟೇಶಕುಮಾರ, ರಾಜೇಶ್ವರಿ ಪಾಟೀಲ, ವೆಂಕಟೇಶ ಆಲ್ಕೋಡ ತಂಡದಿಂದ ಹಿಂದೂಸ್ತಾನಿ ಸಂಗೀತ, ಕಾವೆಂಶ್ರೀ ತಂಡದಿಂದ ಭಗವದ್ಗೀತೆ ರೂಪಕ, ಬೆಂಗಳೂರಿನ ಫ್ಯೂಜನ್ ತಂಡದವರಿಂದ ಕ್ಲಾಸಿಕಲ್ ಇವೆಂಟ್ ನೆರೆದಿದ್ದ ಜನರನ್ನು ಆಕರ್ಷಿಸಿದವು.
ಸಮಾರೋಪದಲ್ಲಿ ಅಧ್ಯಕ್ಷತೆ ವಹಿಸಿದ್ದ ಲೋಕೋಪಯೋಗಿ ಸಚಿವ ಸಿ.ಸಿ. ಪಾಟೀಲ ಮಾತನಾಡಿ, 2018ರ ರಾಜಕೀಯ ಬೆಳವಣಿಗೆ ನಂತರ ಬಿಜೆಪಿ ಅಧಿಕಾರಕ್ಕೆ ಬಂದ ಕೆಲವೇ ದಿನಗಳಲ್ಲಿ ಕೊರೊನಾ ಎದುರಿಸಬೇಕಾಯಿತು. ಈಗ ಕೊರೊನಾ ಕಳಚಿ ಉತ್ಸವವನ್ನು ಅರ್ಥಪೂರ್ಣ ಆಚರಿಸುತ್ತಿದ್ದೇವೆ. ಈ ಯಶಸ್ಸಿಗೆ ಜಿಲ್ಲಾಡಳಿತ ಕಾರಣವಾಗಿದೆ. ಸಮರ್ಥ ಜಿಲ್ಲಾಡಳಿತ ಸಿಬ್ಬಂದಿ ಹಾಗೂ ಲಕ್ಕುಂಡಿ ಗ್ರಾಪಂ ಸದಸ್ಯರು, ಗ್ರಾಮಸ್ಥರು, ಪ್ರತ್ಯಕ್ಷ, ಪರೋಕ್ಷವಾಗಿ ಶ್ರಮಿಸಿದ ಎಲ್ಲರಿಗೂ ಧನ್ಯವಾದ ತಿಳಿಸಿದರು.
ಲಕ್ಕುಂಡಿ ಗ್ರಾಮದಲ್ಲಿ ಮನೆಗಳ ವಿತರಣೆಗೆ ಕ್ರಮ ಜರುಗಿಸಲಾಗುವುದು. ಕೆಲವೇ ದಿನಗಳಲ್ಲಿ ಅರ್ಹ ಫಲಾನುಭವಿಗಳಿಗೆ ಪಟ್ಟಾ ವಿತರಿಸಲಾಗುವುದು. ಮುಂದಿನ ದಿನಗಳಲ್ಲಿ ಮತ್ತೆ ಶಾಸಕನಾಗಿ ಆಯ್ಕೆಯಾದರೆ ಲಕ್ಕುಂಡಿ ಉತ್ಸವವನ್ನು ಇನ್ನಷ್ಟು ಅದ್ಧೂರಿಯಾಗಿ ಆಚರಿಸೋಣ ಎಂದು ಹೇಳಿದರು. ಪತ್ರಕರ್ತ ವಿಶ್ವೇಶ್ವರ ಭಟ್, ಅಂತಾರಾಷ್ಟ್ರೀಯ ಮನ್ನಣೆ, ವಿಶ್ವ ಪಾರಂಪರಿಕ ತಾಣ ಆಗಲು ಲಕ್ಕುಂಡಿಗೆ ಎಲ್ಲ ಅರ್ಹತೆ ಇದ್ದು, ಸಚಿವ ಸಿ.ಸಿ. ಪಾಟೀಲರು ಲಕ್ಕುಂಡಿಗೆ ವಿಶ್ವಮಾನ್ಯತೆ ಕೊಡಿಸಲು ಸಫಲರಾಗುತ್ತಾರೆಂಬ ವಿಶ್ವಾಸವಿದೆ ಎಂದರು.
ಎಂಸಿಎ ಅಧ್ಯಕ್ಷ ಎಂ.ಎಸ್. ಕರಿಗೌಡ್ರ, ಗ್ರಾಪಂ ಅಧ್ಯಕ್ಷೆ ಲಲಿತಾ ಗದಗಿನ, ಉಪಾಧ್ಯಕ್ಷ ರೇವಣಸಿದ್ದಪ್ಪ ಮುಳಗುಂದ, ಗದಗ- ಬೆಟಗೇರಿ ನಗರಸಭೆ ಅಧ್ಯಕ್ಷೆ ಉಷಾ ದಾಸರ, ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಸಿದ್ದಣ್ಣ ಪಲ್ಲೇದ, ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್., ಜಿಪಂ ಸಿಇಒ ಡಾ|ಸುಶೀಲಾ ಬಿ., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್. ನೇಮಗೌಡ, ಉಪ ಅರಣ್ಯ ಸಂರಕ್ಷಣಾಧಿಕಾರಿ ದೀಪಿಕಾ ಬಾಜಪೇಯಿ, ಅಪರ ಜಿಲ್ಲಾಧಿಕಾರಿ ಮಾರುತಿ ಎಂ.ಪಿ. ಸೇರಿ ಅನೇಕರು ಇದ್ದರು.
*ಅರುಣಕುಮಾರ ಹಿರೇಮಠ