ಗದಗ: ಜಿಲ್ಲೆಯಲ್ಲಿ ರಾಜೀ ಸಂಧಾನಕ್ಕೆ ಆಯ್ಕೆ ಮಾಡಿಕೊಳ್ಳಲಾದ 1,895 ಪ್ರಕರಣಗಳು, 8,724 ವ್ಯಾಜ್ಯ ಪೂರ್ವ ಪ್ರಕರಣಗಳು ಸೇರಿ ಒಟ್ಟು 10,619 ಪ್ರಕರಣಗಳನ್ನು ರಾಜೀ ಸಂಧಾನದ ಮೂಲಕ ಇತ್ಯರ್ಥಪಡಿಸಲಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಬಸವರಾಜ ಹೇಳಿದರು.
ನಗರದ ಜಿಲ್ಲಾ ನ್ಯಾಯಾಲಯದಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ಮಾತನಾಡಿದ ಅವರು, ಇತ್ಯರ್ಥಗೊಂಡ ಪ್ರಕರಣಗಳಲ್ಲಿ 21 ಮೋಟಾರು ವಾಹನ ಅಪಘಾತ ಪ್ರಕರಣಗಳು, 124 ಚೆಕ್ ಬೌನ್ಸ್ ಪ್ರಕರಣಗಳು, 20 ಕ್ರಿಮಿನಲ್ ಕಂಪೌಂಡೆಬಲ್ ಪ್ರಕರಣಗಳು, 200 ಅಸಲುದಾವೆ ಪ್ರಕರಣಗಳು, 50 ಬ್ಯಾಂಕ್ ಹಾಗೂ ಹಣ ವಸೂಲಾತಿ ಪ್ರಕರಣಗಳು, 13 ವೈವಾಹಿಕ ಪ್ರಕರಣಗಳು, 34 ವಿದ್ಯುತ್ಛಕ್ತಿ ಪ್ರಕರಣಗಳು ಸೇರಿದಂತೆ ಒಟ್ಟು 1,895 ಚಾಲ್ತಿ ಪ್ರಕರಣಗಳಲ್ಲಿ 13,13,24,852 ರೂ. ಗಳಿಗೆ ಪರಿಹಾರ ಒದಗಿಸುವುದರ ಮೂಲಕ ರಾಜೀ ಸಂಧಾನ ಮೂಲಕ ಇತ್ಯರ್ಥಪಡಿಸಲಾಗಿದೆ ಎಂದರು.
ಅದೇ ರೀತಿ ವ್ಯಾಜ್ಯಪೂರ್ವ ಪ್ರಕರಣಗಳಿಗೆ ಸಂಬಂಧಿಸಿದಂತೆ 91 ವಿವಿಧ ಬ್ಯಾಂಕ್ ಪ್ರಕರಣಗಳು, 645 ಕಂದಾಯ ಅದಾಲತ್ ಪ್ರಕರಣಗಳು ಸೇರಿ ಒಟ್ಟು 8,724 ವ್ಯಾಜ್ಯಪೂರ್ವ ಪ್ರಕರಣಗಳಲ್ಲಿ 1,50,02,637 ರೂ. ಗಳಿಗೆ ರಾಜೀ ಸಂಧಾನವಾಗಿದೆ ಎಂದು ವಿವರಿಸಿದರು.
ಪ್ರಧಾನ ಕೌಟುಂಬಿಕ ನ್ಯಾಯಾಲಯದಲ್ಲಿ ಹಾಗೂ ಹೆಚ್ಚುವರಿ ಕೌಟುಂಬಿಕ ನ್ಯಾಯಾಲಯದಲ್ಲಿ 6 ಪ್ರಕರಣಗಳಲ್ಲಿ ದಂಪತಿಗಳನ್ನು ಪುನಃ ಒಂದುಗೂಡಿಸಿ ಹಾರ ಬದಲಾಯಿಸಿ ಅವರಿಗೆ ಸಿಹಿ ಹಂಚಿ ಕಳುಹಿಸಿಕೊಡಲಾಯಿತು. ಅದೇ ರೀತಿ ಮುಂಡರಗಿ ನ್ಯಾಯಾಲಯದಲ್ಲಿ 2 ಜೋಡಿ, ರೋಣದಲ್ಲಿ 1 ಜೋಡಿ, ಲಕ್ಷ್ಮೇಶ್ವರದಲ್ಲಿ 1 ಜೋಡಿ, ನರಗುಂದದಲ್ಲಿ ಸೇರಿ ಒಟ್ಟು 11 ಜೋಡಿಗಳು ಪುನಃ ಒಂದು ಗೂಡಿಸಿರುವುದು ವಿಶೇಷವಾಗಿದೆ ಎಂದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಕೆ. ಗುರುಪ್ರಸಾದ, 1ನೇ ಹೆಚ್ಚುವರಿ ಕೌಟುಂಬಿಕ ನ್ಯಾಯಾಲಯದ ಪ್ರಧಾನ ನ್ಯಾಯಾಧೀಶ ಖಾದರಸಾಬ, ಪ್ರಧಾನ ಹಿರಿಯ ದಿವಾಣಿ ನ್ಯಾಯಾಧೀಶ ಪಿ.ಸಿ. ಕುರುಬೆಟ್ಟ, ಜೆಎಂಎಫ್‌ಸಿ 1ನೇ ನ್ಯಾಯಾಲಯದ ದಿವಾಣಿ ನ್ಯಾಯಾಧೀಶ ಅರುಣ ಚೌಗಲೆ, ಜೆಎಂಎಫ್‌ಸಿ 2ನೇ ನ್ಯಾಯಾಲಯದ ದಿವಾಣಿ ನ್ಯಾಯಾಧೀಶೆ ಪುಷ್ಪಾ ಜೋಗೋಜಿ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಂ.ಎ. ಮೌಲ್ವಿ, ಉಪಾಧ್ಯಕ್ಷ ವಿ.ವಿ. ಪಾಟೀಲ, ಪ್ರಧಾನ ಕಾರ್ಯದರ್ಶಿ ಎಂ.ಬಿ. ಮತ್ತೂರ ಸೇರಿ ಹಲವರು ಇದ್ದರು.