Advertisement

ಜಿ8 ಗುಂಪಿಗೆ ಭಾರತ ಸೇರಲು ಇದು ಸಕಾಲ

12:30 AM Jun 28, 2022 | Team Udayavani |

ಜಾಗತಿಕ ಮಟ್ಟದಲ್ಲಿ ಭಾರತದ ಸ್ಥಾನಮಾನ ಏನು ಎಂಬ ಪ್ರಶ್ನೆ ಹಲವಾರು ದಿನಗಳಿಂದಲೂ ಕಾಡುತ್ತಲೇ ಇದೆ. ಅದರಲ್ಲೂ ಉಕ್ರೇನ್‌ ಮೇಲೆ ರಷ್ಯಾ ಆಕ್ರಮಣ ಶುರುವಾದ ಮೇಲೆ ಭಾರತದ ಪಾತ್ರದ ಬಗ್ಗೆ ಹಲವಾರು ರೀತಿಯ ಚರ್ಚೆಗಳು ನಡೆಯುತ್ತಿರುವುದನ್ನು ನಾವು ನೋಡಬಹುದು. ಇದಕ್ಕೆ ಕಾರಣವೂ ಇದೆ. ರಷ್ಯಾವು ಉಕ್ರೇನ್‌ ಮೇಲೆ ದಾಳಿ ಶುರು ಮಾಡಿದ ಬಳಿಕ ಜಾಗತಿಕ ಒತ್ತಡದ ಹೊರತಾಗಿಯೂ ಭಾರತ ಯಾವುದೇ ರೀತಿಯಲ್ಲೂ ಬಗ್ಗಲಿಲ್ಲ. ರಷ್ಯಾ ಜತೆಗಿನ ತನ್ನ ದ್ವಿಪಕ್ಷೀಯ ಸಂಬಂಧವನ್ನೂ ಕಡಿತಗೊಳಿಸಿಕೊಳ್ಳಲಿಲ್ಲ. ಅಲ್ಲದೆ ಎಲ್ಲ ದೇಶಗಳು ರಷ್ಯಾದಿಂದ ಆಮದು ಮಾಡಿಕೊಳ್ಳುವುದನ್ನು ನಿಲ್ಲಿಸಿದರೆ ಭಾರತ ಮಾತ್ರ ಅಲ್ಲಿಂದ ತನಗೆ ಬೇಕಾದ ತೈಲೋತ್ಪನ್ನವನ್ನು ಹೆಚ್ಚಾಗಿ ತರಿಸಿಕೊಂಡಿತು. ಒಂದು ರೀತಿಯಲ್ಲಿ ಇದು ಅಂತಾರಾಷ್ಟ್ರೀಯ ಮಟ್ಟ ದಲ್ಲಿ ಇರುಸು ಮುರುಸಿಗೆ ಕಾರಣವಾದರೂ, ಏನೂ ಮಾಡದ ಸ್ಥಿತಿ ಯಲ್ಲಿ ಇವೆ ಎಂಬುದನ್ನು ನಂಬಲೇಬೇಕು.

Advertisement

ಇದಕ್ಕೆ ಕಾರಣ ಜಗತ್ತಿನಲ್ಲಿ ಭಾರತ ಹೊಂದಿರುವ ಸ್ಥಾನ. ಇತ್ತೀಚಿನ ವರ್ಷಗಳಲ್ಲಿ ಜಗತ್ತಿನ ವ್ಯವಹಾರಗಳಲ್ಲಿ ತಾನೊಬ್ಬ ಅತ್ಯಗತ್ಯ ಮತ್ತು ಹೆಚ್ಚು ಪ್ರಾಮುಖ್ಯವುಳ್ಳ ದೇಶ ಎಂಬುದನ್ನು ತೋರಿಸುವಲ್ಲಿ ಭಾರತ ಹಿಂದೆ ಬಿದ್ದಿಲ್ಲ. ಕೊರೊನಾ ಅವಧಿಯಲ್ಲೂ ತಾನು ಜಗತ್ತಿಗೆ ಯಾವ ರೀತಿಯಲ್ಲಿ ಬೇಕಾದರೂ ಸಹಾಯವಾಗಬಲ್ಲೇ ಎಂಬುದನ್ನು ಸಾಧಿಸಿ ತೋರಿಸಿದ ಮೇಲೆ ಅಂತಾರಾಷ್ಟ್ರೀಯ ಸಂಬಂಧದಲ್ಲಿ ಭಾರತವನ್ನು ಬಿಟ್ಟು ಮುಂದಕ್ಕೆ ಹೆಜ್ಜೆ ಇಡುವಂತಿಲ್ಲ ಎಂಬುದನ್ನು ಇತರ ದೇಶಗಳೂ ಅರಿತವು. ಹೀಗಾಗಿಯೇ ರಷ್ಯಾಗೆ ನೆರವು ನೀಡಿದ ಹಲವಾರು ದೇಶಗಳ ಮೇಲೆ ಅಮೆರಿಕ ಸೇರಿದಂತೆ ಇತರ ಹಲವಾರು ದೇಶಗಳು ಕೆಂಡ ಕಾರಿದರೂ ಭಾರತದ ವಿಚಾರದಲ್ಲಿ ಮೌನ ವಹಿಸಿದವು.

ಈ ಎಲ್ಲ ಸಂಗತಿಗಳನ್ನು ಗಮನಿಸಿದರೆ ಭಾರತ ಜಿ8 ಗುಂಪಿಗೆ ಸೇರಲು ಇದೇ ಸಕಾಲ ಎಂಬುದು ವೇದ್ಯವಾಗುತ್ತದೆ. ಜಗತ್ತಿನಲ್ಲಿ ಚೀನದ ಹಿಡಿತವನ್ನು ತಪ್ಪಿಸುವ ಉದ್ದೇಶದಿಂದ ಮತ್ತು ಇಂಡೋ-ಪೆಸಿಫಿಕ್‌ ವಲಯದಲ್ಲಿ ಅದರ ಪ್ರಭಾವ ತಗ್ಗಿಸಲು ಅಮೆರಿಕ, ಆಸ್ಟ್ರೇಲಿಯ, ಭಾರತ ಮತ್ತು ಜಪಾನ್‌ ದೇಶಗಳು ಸೇರಿ ಕ್ವಾಡ್‌ ಎಂಬ ಒಕ್ಕೂಟ ಸ್ಥಾಪನೆ ಮಾಡಿಕೊಂಡಿವೆ. ಹಾಗೆಯೇ ಬಹು ಹಿಂದೆಯೇ ಇಡೀ ಜಗತ್ತಿನಲ್ಲಿ ತಾವೇ ಶ್ರೀಮಂತ ದೇಶಗಳು, ಇತರರಿಗೆ ಸಹಾಯ ಮಾಡಲು ತಾವು ಸದಾ ಸಿದ್ಧರಿದ್ದೇವೆ ಎಂಬುದನ್ನು ತೋರಿಸಿಕೊಳ್ಳಲು ಜಿ8 ಎಂಬ ಗುಂಪನ್ನು ರಚಿಸಿಕೊಂಡಿದ್ದವು. ವಿಶೇಷವೆಂದರೆ, ಇದಕ್ಕೆ ಅಮೆರಿಕದ ನೇತೃತ್ವವಿದೆ. ಈಗ ಜಿ8ರ ಗುಂಪಿನಿಂದ ರಷ್ಯಾವನ್ನು ಹೊರಹಾಕಲಾಗಿದ್ದು, ಸದ್ಯ ಜಿ7 ಎಂಬ ಹೆಸರಿನಲ್ಲಿ ಶೃಂಗ ನಡೆಯುತ್ತಿದೆ. ಪ್ರಸ್ತುತ ಜರ್ಮನಿಯಲ್ಲಿ ಈ ಶೃಂಗ ನಡೆಯುತ್ತಿದ್ದು, ಭಾರತ ಆಹ್ವಾನಿತ ದೇಶವಾಗಿ ಅಲ್ಲಿಗೆ ಹೋಗಿದೆ. ಇದಕ್ಕೆ ಬದಲಾಗಿ ಭಾರತಕ್ಕೆ ಜಿ8ರಲ್ಲಿ ಕಾಯಂ ಸ್ಥಾನ ಕೊಟ್ಟು ಇರಿಸಿಕೊಳ್ಳುವುದು ಉತ್ತಮ.

ಅಲ್ಲದೆ, ಜಿ8ರಲ್ಲಿ ಇದ್ದ ದೇಶಗಳ ಪೈಕಿ ಇಟಲಿ ಮತ್ತು ಫ್ರಾನ್ಸ್‌ಗಿಂತಲೂ ಭಾರತವೇ ಮುಂದಿದೆ. ಈ ದೇಶಗಳು ಈಗ ಶ್ರೀಮಂತ ದೇಶಗಳಾಗಿ ಉಳಿದಿಲ್ಲ. ಜತೆಗೆ ಚೀನಕ್ಕೆ ವ್ಯೂಹಾತ್ಮಕವಾಗಿ ಪೆಟ್ಟು ನೀಡಬೇಕಾದರೆ ಭಾರತವನ್ನು ಜಿ8ರೊಳಗೆ ಸೇರಿಸಿ ಕೊಳ್ಳಲೇಬೇಕು. ಆಗಷ್ಟೇ ಚೀನಕ್ಕೆ ಪ್ರತಿಸ್ಪರ್ಧಿಯಾಗಿ ನಿಲ್ಲಲು ಸಾಧ್ಯ ಎಂಬುದು ಅಮೆರಿಕ ಸೇರಿದಂತೆ ಆ ಗುಂಪಿನಲ್ಲಿರುವ ಎಲ್ಲ ದೇಶಗಳ ಅರಿವಿಗೆ ಬರಬೇಕು.

Advertisement

Udayavani is now on Telegram. Click here to join our channel and stay updated with the latest news.

Next