ಹೊಸದಿಲ್ಲಿ: 20 ರಾಷ್ಟ್ರಗಳ ಗುಂಪಿನ ಭಾರತದ ಅಧ್ಯಕ್ಷತೆಯ G20 ಶೃಂಗಸಭೆಯಲ್ಲಿ ಭಾಗಿಯಾಗಲು ಅಮೆರಿಕ ಅಧ್ಯಕ್ಷ ಜೋ ಬಿಡನ್ ಅವರು ಶುಕ್ರವಾರ ಸಂಜೆ ದೆಹಲಿಗೆ ವಿಶೇಷ ವಿಮಾನದಲ್ಲಿ ಬಂದಿಳಿದಿದ್ದಾರೆ.ಬಿಡೆನ್ ಅವರನ್ನು ನಾಗರಿಕ ವಿಮಾನಯಾನ ರಾಜ್ಯ ಖಾತೆ ಸಚಿವ ಜನರಲ್ (ನಿವೃತ್ತ) ವಿಕೆ ಸಿಂಗ್ ಅವರು ಬರಮಾಡಿಕೊಂಡರು.
ಜೋ ಬಿಡನ್ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ.
G20 ಶೃಂಗಸಭೆಗಾಗಿ ಆಗಮಿಸಿರುವ ಯುಕೆ ಪ್ರಧಾನಿ ರಿಷಿ ಸುನಕ್, ‘ಭಾರತ ಮತ್ತು ಯುಕೆ ಸಂಬಂಧವು ಬಹಳ ಆರೋಗ್ಯಯುತವಾಗಿದೆ. ಎರಡೂ ರಾಷ್ಟ್ರಗಳು ಸಂಬಂಧವನ್ನು ಗಾಢವಾಗಿಸಲು ಉತ್ಸುಕವಾಗಿವೆ. ಮುಕ್ತ ವ್ಯಾಪಾರ ಒಪ್ಪಂದವು (FTA) ನಮಗೆ ಒಂದು ಸ್ಪಷ್ಟವಾದ ಮಾರ್ಗವಾಗಿದೆ, ಅದಕ್ಕಾಗಿಯೇ ನಮ್ಮ ಆದ್ಯತೆಯಾಗಿ ಉಳಿದಿದೆ. ನಾವು ಯಶಸ್ವಿ FTA ಅನ್ನು ತೀರ್ಮಾನಿಸಬಹುದು. ನಮ್ಮ ಭದ್ರತಾ ಸಂಬಂಧವನ್ನು ಬಲಪಡಿಸಬಹುದು ಎಂದು ನಾನು ಭಾವಿಸುತ್ತೇನೆ ಎಂದು ಹೇಳಿದ್ದಾರೆ.
“ಸಂಶೋಧಕರು, ನಮ್ಮ ವೈಜ್ಞಾನಿಕ ಸಮುದಾಯ, ನಮ್ಮ ವಿಶ್ವವಿದ್ಯಾನಿಲಯಗಳ ನಡುವಿನ ಸಹಯೋಗವನ್ನು ಹೆಚ್ಚಿಸುವ ಬಗ್ಗೆ ನಾನು ವಿಶೇಷವಾಗಿ ಉತ್ಸುಕನಾಗಿದ್ದೇನೆ” ಎಂದು ಹೇಳಿದ್ದಾರೆ.
ಆಸ್ಟ್ರೇಲಿಯ ಪ್ರಧಾನಿ ಆಂಥೋನಿ ಅಲ್ಬನೀಸ್, ದಕ್ಷಿಣ ಕೊರಿಯಾದ ಅಧ್ಯಕ್ಷ ಯುನ್ ಸುಕ್ ಯೋಲ್ ದೆಹಲಿಗೆ ಆಗಮಿಸಿದ್ದಾರೆ.
ಜಿ20 ಶೃಂಗಸಭೆಗೆ ಆಗಮಿಸಿರುವ ಬಾಂಗ್ಲಾದೇಶ ಪ್ರಧಾನಿ ಶೇಖ್ ಹಸೀನಾ ಅವರು ಪ್ರಧಾನಿ ಮೋದಿ ಅವರೊಂದಿಗೆ ಶುಕ್ರವಾರ ಸಂಜೆ ದ್ವಿಪಕ್ಷೀಯ ಸಭೆ ನಡೆಸಿದರು.