ಹನೋಯ್: ದೆಹಲಿಯಲ್ಲಿ ಜಿ 20 ಶೃಂಗಸಭೆಯ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾದ ಸಂದರ್ಭದಲ್ಲಿ ಮಾನವ ಹಕ್ಕುಗಳನ್ನು ಗೌರವಿಸುವುದು, ನಾಗರಿಕ ಸಮಾಜದ ಪಾತ್ರ ಮತ್ತು ಮುಕ್ತ ಮಾಧ್ಯಮ ಸೇರಿದಂತೆ ವಿವಿಧ ವಿಷಯಗಳನ್ನು ಪ್ರಸ್ತಾಪಿಸಿದ್ದೇನೆ ಎಂದು ಯುಎಸ್ ಅಧ್ಯಕ್ಷ ಜೋ ಬಿಡನ್ ಭಾನುವಾರ ಹೇಳಿದ್ದಾರೆ.
ದೆಹಲಿಯಲ್ಲಿ ಜಿ20 ನಾಯಕರ ಶೃಂಗಸಭೆಯಲ್ಲಿ ಭಾಗವಹಿಸಿದ ನಂತರ ಅಧಿಕೃತ ಭೇಟಿಯಲ್ಲಿರುವ ವಿಯೆಟ್ನಾಂನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಬಿಡೆನ್ ಈ ಹೇಳಿಕೆಗಳನ್ನು ನೀಡಿದ್ದಾರೆ.
“ನಾನು ಯಾವತ್ತೂ ಮಾಡುವಂತೆ, ಮೋದಿ ಅವರೊಂದಿಗೆ ಮಾನವ ಹಕ್ಕುಗಳನ್ನು ಗೌರವಿಸುವುದು, ನಾಗರಿಕ ಸಮಾಜದ ಪಾತ್ರ, ಮುಕ್ತ ಮಾಧ್ಯಮ ಮತ್ತು ಬಲವಾದ ಮತ್ತು ಸಮೃದ್ಧ ದೇಶವನ್ನು ನಿರ್ಮಿಸುವ ಕುರಿತಂತೆ ಚರ್ಚೆ ನಡೆಸಿದ್ದೇನೆ” ಎಂದು ಹನೋಯ್ ನಲ್ಲಿ ಯುಎಸ್ ಅಧ್ಯಕ್ಷರು ಹೇಳಿದ್ದಾರೆ.
ಬಿಡೆನ್ ಪತ್ರಿಕಾಗೋಷ್ಠಿಯ ಬಳಿಕ ಭಾರತದಲ್ಲಿ ವಿರೋಧ ಪಕ್ಷ ಕಾಂಗ್ರೆಸ್ ಮೋದಿ ಸರ್ಕಾರದ ವಿರುದ್ಧ ಟೀಕೆ ಮಾಡಿದೆ. ಹಿರಿಯ ಕಾಂಗ್ರೆಸ್ ನಾಯಕ ಜೈ ರಾಮ್ ರಮೇಶ್ ಅವರು ಎಕ್ಸ್ ಜಾಲತಾಣದಲ್ಲಿ ಈ ಬಗ್ಗೆ ಬರೆದಿದ್ದು, “ನಾ ಪ್ರೆಸ್ ಕಾನ್ಫರೆನ್ಸ್ ಕರುಂಗಾ, ನಾ ಕರ್ನೆ ದೂಂಗಾ” (ಪತ್ರಿಕಾಗೋಷ್ಠಿ ನಡೆಸುವುದಿಲ್ಲ, ನಡೆಸಲೂ ಬಿಡುವುದಿಲ್ಲ) ಯಾವುದೇ ಪರಿಣಾಮ ಬೀರಿಲ್ಲ” ಎಂದು ಹೇಳಿದ್ದಾರೆ.
ಇದನ್ನೂ ಓದಿ:ICC World Cup 2023; ನ್ಯೂಜಿಲ್ಯಾಂಡ್ ತಂಡ ಪ್ರಕಟ; ಜೇಮಿಸನ್- ಮಿಲ್ನೆಗಿಲ್ಲ ಅವಕಾಶ
“ಮಾನವ ಹಕ್ಕುಗಳು, ನಾಗರಿಕ ಸಮಾಜದ ಪಾತ್ರ ಮತ್ತು ಮುಕ್ತ ಪತ್ರಿಕಾ ಮಾಧ್ಯಮವನ್ನು ಗೌರವಿಸುವ ಕುರಿತು ಬಿಡೆನ್ ಅವರು ಭಾರತದಲ್ಲಿ ಮೋದಿಯವರ ಮುಖಕ್ಕೆ ಹೇಳಿದ್ದನ್ನು ವಿಯೆಟ್ನಾಂನಲ್ಲಿ ಹೇಳುತ್ತಿದ್ದಾರೆ” ಎಂದು ಅವರು ಹೇಳಿದರು.
ಈ ಹಿಂದೆ, ದೆಹಲಿಯಲ್ಲಿ ನಡೆದ ದ್ವಿಪಕ್ಷೀಯ ಸಭೆಯ ನಂತರ ಬಿಡೆನ್ ಅವರ ತಂಡವು ಮಾಧ್ಯಮಗಳೊಂದಿಗೆ ಸಂವಹನ ನಡೆಸಲು ಮತ್ತು ಪ್ರಧಾನಿ ಮೋದಿ ಅವರನ್ನು ಭೇಟಿಯಾದ ಬಗ್ಗೆ ಪ್ರಶ್ನೆಗಳನ್ನು ಕೇಳಲು ಬಿಡೆನ್ ಅವರ ತಂಡಕ್ಕೆ ಅವಕಾಶ ನೀಡಲಿಲ್ಲ ಎಂದು ರಮೇಶ್ ಆರೋಪಿಸಿದ್ದರು.