Advertisement

ಕೈಗೆ ಸಿಗದ ಪರಂ: ಮುಂದುವರಿದ ಅಸಮಾಧಾನ

06:05 AM Sep 03, 2017 | Team Udayavani |

ಬೆಂಗಳೂರು: ಸಚಿವ ಸಂಪುಟ ವಿಸ್ತರಣೆಯ ಬೆನ್ನಲ್ಲೇ ಬೇಸರಗೊಂಡಿದ್ದಾರೆಂದು ಹೇಳಲಾಗಿರುವ ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್‌ ಶನಿವಾರವೂ ಮನೆಯಲ್ಲಿಯೇ ಉಳಿದು ಯಾರಿಗೂ ಭೇಟಿಗೆ ಅವಕಾಶ ನೀಡದೆ ತಮ್ಮ ಅಸಮಾಧಾನ ಮುಂದುವರಿಸಿದ್ದಾರೆ.

Advertisement

ಶುಕ್ರವಾರ ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಬೆಂಗಳೂರಿನಲ್ಲಿಯೇ ಇದ್ದರೂ ಕಾರ್ಯಕ್ರಮದಿಂದ ದೂರ ಉಳಿದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಏಕ ಪಕ್ಷೀಯ ನಿರ್ಧಾರದ ಬಗ್ಗೆ ತಮ್ಮ ಅಸಮಾಧಾನವನ್ನು ಹೊರ ಹಾಕಿದ್ದಾರೆ ಎನ್ನಲಾಗಿತ್ತು. ಈ ಕುರಿತು ಮಾಧ್ಯಮಗಳಿಗೂ ಯಾವುದೇ ಪ್ರತಿಕ್ರಿಯೆ ನೀಡದೇ ದೂರ ಉಳಿದಿದ್ದು, ತಮ್ಮ ಅಸಮಾಧಾನ ಬಹಿರಂಗವಾಗಿ ಹೇಳಿಕೊಳ್ಳಲಾಗದ ಸ್ಥಿತಿಯಲ್ಲಿ ಪರಮೇಶ್ವರ್‌ ಇದ್ದಾರೆ ಎಂದು ಅವರ ಆಪ್ತ ಮೂಲಗಳು ತಿಳಿಸಿವೆ.

ತಿಪಟೂರು ಶಾಸಕ ಷಡಕ್ಷರಿಗೆ ಸಂಪುಟದಲ್ಲಿ ಸ್ಥಾನ ಕೊಡಿಸಿ ತುಮಕೂರು ಜಿಲ್ಲೆಯಲ್ಲಿ ವಿಶೇಷವಾಗಿ ತಮ್ಮ ಕ್ಷೇತ್ರ ಕೊರಟಗೆರೆಯಲ್ಲಿ ಲಿಂಗಾಯತ ಮತದಾರರನ್ನು ಸೆಳೆಯುವ ಲೆಕ್ಕಾಚಾರ ಹಾಕಿದ್ದ ಪರಮೇಶ್ವರ್‌ ಆಸೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕೊನೆ ಕ್ಷಣದಲ್ಲಿ ಶಾಕ್‌ ನೀಡಿರುವುದು ಪರಮೇಶ್ವರ್‌ ಮುನಿಸಿಗೆ ಕಾರಣ ಎನ್ನಲಾಗಿದೆ.

ಹತ್ತು ತಿಂಗಳಲ್ಲಿ ವಿಧಾನಸಭೆ ಚುನಾವಣೆ ನಡೆಯುವುದರಿಂದ ಪಕ್ಷದ ಆಂತರಿಕ ವಿಷಯಗಳ ಬಗ್ಗೆ ಅನಗತ್ಯ ಗೊಂದಲ ಸೃಷ್ಟಿಯಾದರೆ, ಅದು ಪಕ್ಷ ಸಂಘಟನೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆ ಇರುವುದರಿಂದ ಈ ಸಂದರ್ಭದಲ್ಲಿ ಬಹಿರಂಗವಾಗಿ ಹೇಳಿಕೆಗಳನ್ನು ನೀಡಿದರೆ, ಪಕ್ಷದ ಕಾರ್ಯಕರ್ತರಲ್ಲಿ ಗೊಂದಲಕ್ಕೆ ಕಾರಣವಾಗುತ್ತದೆ ಎಂಬ ಕಾರಣಕ್ಕೆ ಪರಮೇಶ್ವರ್‌ ಎಲ್ಲವನ್ನೂ ಅನುಸರಿಸಿಕೊಂಡು ಹೋಗುವ ಮನಸ್ಥಿತಿಗೆ ಬಂದಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ.

ಪರಮೇಶ್ವರ್‌ ಮುನಿಸಿಗೆ ಸಂಬಂಧಿಸಿದಂತೆ  ಮಾಧ್ಯಮದವರ ಪ್ರಶ್ನೆಗೆ, “ಅವರನ್ನೇ ಕೇಳಿ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ.

Advertisement

ಸಿಎಂ ಮತ್ತು ಅಧ್ಯಕ್ಷರ ಮಧ್ಯೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಸುಮ್ಮನೆ ಸೃಷ್ಟಿ ಮಾಡಬೇಡಿ, ನಾವೆಲ್ಲಾ ಚೆನ್ನಾಗಿದ್ದೇವೆ. ಪರಮೇಶ್ವರ್‌ ನಮ್ಮ ನಾಯಕರು. ಈಗಷ್ಟೇ ಸಚಿವನಾಗಿದ್ದೇನೆ. ಇಲಾಖೆಯಲ್ಲಿ ಏನಾಗಿದೆ ಎಂದು ನೋಡುತ್ತೇನೆ.
– ಆರ್‌.ಬಿ. ತಿಮ್ಮಾಪುರ, ಅಬಕಾರಿ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next