ಬೆಂಗಳೂರು: ವಿಧಾನಸಭೆ ಚುನಾವಣೆ ಎದುರಿಸಲು ಭರ್ಜರಿ ತಯಾರಿಯಲ್ಲಿರುವ ಕಾಂಗ್ರೆಸ್ ಗೆ ಅತೃಪ್ತಿಯ ಬಿಸಿ ತಾಗುತ್ತಿದೆ. ಪ್ರಮುಖ ನಾಯಕರಾದ ಡಾ.ಜಿ ಪರಮೇಶ್ವರ್ ಮತ್ತು ಎಂ.ಬಿ ಪಾಟೀಲ್ ಮುನಿಸಿಕೊಂಡಿದ್ದು, ಪಕ್ಷದ ಪ್ರಚಾರ ವೇಗಕ್ಕೆ ತಡೆಯಾದಂತಾಗಿದೆ.
‘ಪ್ರಮುಖ ನಾಯಕರು’ ತಮ್ಮನ್ನು ಪರಿಗಣಿಸದೆ ತಾವೇ ಘೋಷಣೆಗಳನ್ನು ಮಾಡುತ್ತಿದ್ದಾರೆ. ಪ್ರಣಾಳಿಕೆ ಸಮಿತಿಯ ಅಧ್ಯಕ್ಷ ತಾನಾದರೂ ತಮ್ಮನ್ನು ಸಂಪೂರ್ಣ ನಿರ್ಲ್ಯಕ್ಷ ಮಾಡಿ ತಾವೇ ಪ್ರಮುಖ ಘೋಷಣೆಗಳನ್ನು ಮಾಡುತ್ತಿದ್ದಾರೆ ಎಂದು ಕೆಪಿಸಿಸಿ ಪ್ರಣಾಳಿಕೆ ಸಮಿತಿ ಅಧ್ಯಕ್ಷರಾಗಿರುವ ಡಾ.ಜಿ.ಪರಮೇಶ್ವರ್ ಬೇಸರಗೊಂಡಿದ್ದಾರೆ. ಅದರಲ್ಲೂ ಕರಾವಳಿಯ ಪ್ರಜಾಧ್ವನಿ ಯಾತ್ರೆಯಲ್ಲಿ ತಮ್ಮ ಗಮನಕ್ಕೆ ತಾರದೆ ಪ್ರಣಾಳಿಕೆ ವಿಚಾರಗಳನ್ನು ಘೋಷಣೆ ಮಾಡಿದ್ದು ಪರಮೇಶ್ವರ್ ಕೋಪಕ್ಕೆ ಕಾರಣವಾಗಿದೆ ಎನ್ನಲಾಗಿದೆ.
ಈ ಅಸಮಾಧಾನದಿಂದಲೇ ಜಿ.ಪರಮೇಶ್ವರ್ ಅವರು ಕೆಲವು ದಿನಗಳ ಹಿಂದೆಯೇ ಪ್ರಣಾಳಿಕೆ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆಂಬ ವದಂತಿ ಹಬ್ಬಿದೆ. ಮತ್ತೊಂದೆಡೆ ಪರಂ ಬೇಸರದ ವಿಚಾರ ಹೈಕಮಾಂಡ್ ಮಟ್ಟಕ್ಕೂ ತಲುಪಿದ್ದು, ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ಪರಮೇಶ್ವರ್ ಮನೆಗೆ ತೆರಳಿ ಉಪಹಾರದ ಜೊತೆಗೆ ಸಂಧಾನ ಮಾಡುವ ಪ್ರಯತ್ನ ಕೂಡಾ ನಡೆಸಿದ್ದಾರೆ. ಮೀಸಲು ಕ್ಷೇತ್ರಗಳ ಅಭ್ಯರ್ಥಿ ಆಯ್ಕೆ ವೇಳೆ ತಮ್ಮ ಅಭಿಪ್ರಾಯ ಪರಿಗಣಿಸುತ್ತೇವೆ ಎಂದು ಹೇಳಿದ್ದಾರೆ ಎನ್ನುತ್ತಿದೆ ವರದಿ.
ಇತ್ತ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷರಾಗಿರುವ ಎಂ.ಬಿ.ಪಾಟೀಲ್ ಕೂಡಾ ಹಿರಿಯರ ನಡೆಯಿಂದ ಮುನಿಸಿಕೊಂಡಿದ್ದಾರೆ. ತಾವು ಪ್ರಚಾರ ಸಮಿತಿಯ ಅಧ್ಯಕ್ಷರಾದರೂ ತಮಗೆ ಪ್ರಚಾರ ಸಿಗುತ್ತಿಲ್ಲ ಎನ್ನುವುದು ಬಬಲೇಶ್ವರ್ ಶಾಸಕರ ಅಳಲು. ಕಾಂಗ್ರೆಸ್ ನಲ್ಲಿ ಅದ್ಧೂರಿ ಪ್ರಜಾಧ್ವನಿ ಯಾತ್ರೆ ನಡೆಯುತ್ತಿದ್ದರೂ ತಮಗೆ ಯಾವುದೇ ಪ್ರಾಮುಖ್ಯತೆ ನೀಡುತ್ತಿಲ್ಲ ಎಂದು ಎಂ.ಬಿ.ಪಾಟೀಲ್ ಅಸಮಾಧಾನಗೊಂಡಿದ್ದಾರೆ.
Related Articles
ಮೊದಲ ಹಂತದ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡುವ ತಯಾರಿಯಲ್ಲಿರುವ ಕಾಂಗ್ರೆಸ್ ಗೆ ಪ್ರಮುಖ ನಾಯಕರ ಅಸಮಾಧಾನ ತಲೆನೋವಾಗಿದೆ.