Advertisement

ಪತ್ರಕರ್ತೆ ಗೌರಿ ಹತ್ಯೆಯೂ, ಪೂರ್ವಗ್ರಹ ಪೀಡಿತ ಹೇಳಿಕೆಗಳೂ

01:26 PM Sep 13, 2017 | Sharanya Alva |

ಪತ್ರಕರ್ತೆ ಹಾಗೂ ಸಾಮಾಜಿಕ ಹೋರಾಟಗಾರ್ತಿ ಗೌರಿ ಲಂಕೇಶ್‌ ಹತ್ಯೆಗೆ ಸಂಬಂಧಿಸಿದಂತೆ ಪೂರ್ವಗ್ರಹ ಪೀಡಿತ
ಚಿಂತನೆಗಳು ಹಾಗೂ ಹೇಳಿಕೆಗಳು ಪುಂಖಾನುಪುಂಖವಾಗಿ ಪ್ರಕಟವಾಗುತ್ತಲೇ ಇವೆ. ಈ ನಡುವೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ರಾಜ್ಯದ ಗೃಹ ಸಚಿವ ರಾಮಲಿಂಗಾ ರೆಡ್ಡಿ ಈ ಹತ್ಯೆಯ ಕುರಿತಾಗಿ ಹೇಳಿಕೆ ನೀಡುವಾಗ ತುಂಬಾ ತಾಳ್ಮೆ ವಹಿಸಿದ್ದಾರೆ; ಕನಿಷ್ಠ ಸಾರ್ವಜನಿಕ ಮಟ್ಟದಲ್ಲಾದರೂ ಈ ಪ್ರಕರಣದ ಸಂಬಂಧವಾಗಿ ಯಾರ ಮೇಲೂ ಆರೋಪ ಹೊರಿಸಿಲ್ಲ. ಗೌರಿ ಲಂಕೇಶ್‌ ಭದ್ರತೆ ಒದಗಿಸುವಂತೆ ಕೋರಿದ್ದರೂ ಅದನ್ನು ಒದಗಿಸುವಲ್ಲಿ ರಾಜ್ಯ ಸರಕಾರ ವಿಫ‌ಲವಾಗಿದೆ ಎಂಬ ಕೇಂದ್ರದ ಕಾನೂನು ಸಚಿವ
ರವಿಶಂಕರ್‌ ಪ್ರಸಾದ್‌ ಅವರ ಹೇಳಿಕೆಗೆ ಸಿದ್ಧರಾಮಯ್ಯ ಭಿನ್ನಾಭಿಪ್ರಾಯ ವ್ಯಕ್ತಪಡಿಸಿದ್ದಾರಷ್ಟೆ. ಈ ಪ್ರಕರಣ ಒಂದು
ಸಂಘಟಿತ ಅಪರಾಧ ಕೃತ್ಯದಂತೆ ತೋರುತ್ತಿದೆ, ಸಿಬಿಐ ತನಿಖೆಗೆ ಆದೇಶಿಸಬೇಕಿದ್ದರೆ ಸರಕಾರ ಅದಕ್ಕೆ ಬೇಡವೆನ್ನುವುದಿಲ್ಲ ಎಂದೂ ಹೇಳಿದ್ದಾರೆ. ಸಾಮಾನ್ಯವಾಗಿ ರಾಜ್ಯ ಸರಕಾರಗಳು ಯಾವುದೇ ಪ್ರಕರಣಗಳನ್ನು ಸಿಬಿಐ ಕೈಗೊಪ್ಪಿಸಲು ನಕಾರ ಸೂಚಿಸುತ್ತವೆ.

Advertisement

ಈ ನಡುವೆ ಇನ್ನೂ ಒಂದು ಶ್ಲಾಘನೀಯ ವಿದ್ಯಮಾನವೆಂದರೆ, ಮುಖ್ಯಮಂತ್ರಿಗಳು ಎಐಸಿಸಿ ಉಪಾಧ್ಯಕ್ಷ ರಾಹುಲ್‌
ಗಾಂಧಿಯವರ ದುಡುಕಿನ ಹೇಳಿಕೆಯಿಂದ ಪ್ರಭಾವಿತರಾಗಿಲ್ಲ. ಈ ಪ್ರಕರಣಕ್ಕೆ ಹಿಂದೂಪರ ಶಕ್ತಿಗಳೇ ಕಾರಣ ಎಂಬ ಗುರುತರ ಆರೋಪವನ್ನು ಮಾಡಿದ್ದಾರೆ ರಾಹುಲ್‌ ಗಾಂಧಿ. ಸಾಮಾನ್ಯವಾಗಿ ರಾಜ್ಯದ ಕಾಂಗ್ರೆಸ್‌ ನಾಯಕರು ಹೈಕಮಾಂಡ್‌ ಹೇಳಿಕೆಯನ್ನು ಪ್ರತಿಧ್ವನಿಸುತ್ತಿರುತ್ತಾರೆ. ರಾಹುಲ್‌ ಎಂದರೆ ಇಂದು ಬಹುತೇಕ ಪಕ್ಷದ ಹೈಕಮಾಂಡ್‌ ಇದ್ದಂತೆಯೇ. 2008ರ ಮಾಲೇಗಾಂವ್‌ ಸ್ಫೋಟ ಪ್ರಕರಣದ ಆರೋಪಿಗಳಲ್ಲೊಬ್ಬರಾದ ಲೆ|ಕ| ಶ್ರೀಕಾಂತ್‌ ಪುರೋಹಿತ್‌ ಅವರನ್ನು ಸುಪ್ರೀಂ ಕೋರ್ಟ್‌ ಜಾಮೀನು ಮೇಲೆ ಬಿಡುಗಡೆ ಮಾಡುವಂತೆ ಆದೇಶ ಹೊರಡಿಸಿದ್ದು, ಸರ್ವೋಚ್ಚ ನ್ಯಾಯಾಲಯದ ಈ ಆದೇಶದಿಂದ ರಾಹುಲ್‌ ಗಾಂಧಿ ಯಾವುದೇ ಪಾಠವನ್ನೂ ಕಲಿತಂತಿಲ್ಲ. ಈ ಸ್ಫೋಟ ಪ್ರಕರಣಕ್ಕೆ ಹಿಂದೂ ಭಯೋತ್ಪಾದಕರೇ ಕಾರಣ ಎಂದು ಯುಪಿಎ ಸರಕಾರ ಗೂಬೆ ಕೂರಿಸಿತ್ತು. ಸ್ವಲ್ಪ ಲಘು ಧಾಟಿಯಲ್ಲಿ ಹೇಳಬೇಕೆಂದರೆ ಗೌರಿಯವರ ಹತ್ಯೆಯ ಪ್ರಕರಣದ ಹಿನ್ನೆಲೆಯಲ್ಲೀಗ ಯಾವೆಲ್ಲ ಸಾಹಿತಿಗಳು ಹಾಗೂ ಪತ್ರಕರ್ತರಿಗೆ ಪೊ ಲೀಸ್‌ ಭದ್ರತೆ  ಒದಗಬೇಕೆಂಬ ಪ್ರಸ್ತಾವಕ್ಕೆ ಮಂಜೂರಾತಿ ದೊರಕಿದೆಯೋ,
ಅವರೆಲ್ಲ ಒಂದು ರೀತಿಯಲ್ಲಿ ಅದೃಷ್ಟವಂತರೆಂದೇ ಹೇಳಬಹುದು. ಇವರುಗಳಿಗೆ ನೈಜ ಬೆದರಿಕೆ ಅಥವಾ ಕಾಲ್ಪನಿಕ ಬೆದರಿಕೆಗಳು ಬಂದಿರುವ ಹಿನ್ನೆಲೆಯಲ್ಲಿ ಇವರಿಗೆಲ್ಲ ಭದ್ರತೆ ಒದಗಿಸಬೇಕೆಂಬ ಪ್ರಸ್ತಾವಕ್ಕೆ ಸರಕಾರ ಅಸ್ತು ಎಂದಿದೆ.

ಪೊಲೀಸ್‌ ಭದ್ರತೆಯೆನ್ನುವುದು ಒಂದು ಪ್ರತಿಷ್ಠೆಯ ಸಂಕೇತವೂ ಹೌದು. ಹೀಗೆ ದಿನದ 24 ತಾಸುಗಳಲ್ಲೂ ಭದ್ರತೆ ಒದಗಿಸುತ್ತದೆಂಬ ಹಿನ್ನೆಲೆಯಲ್ಲಿ ವಿವಾದಾತ್ಮಕ ಹೇಳಿಕೆ ನೀಡಿ ಸಮಾಜದಲ್ಲಿ ಅನಗತ್ಯ ಘರ್ಷಣೆಗಳಿಗೆ ನಾಂದಿ ಹಾಡುವಂತಾಗಬಾರದು. ರಾಹುಲ್‌ ಗಾಂಧಿಯವರಂತೆಯೇ ಇನ್ನೊಬ್ಬರಿದ್ದಾರೆ. ದೇಶದಲ್ಲಿ ಏನೇ ತಪ್ಪು ನ ಡೆದರೂ ಹಿಂದುತ್ವ ಪ್ರತಿಪಾದಕ ಸಂಘಟನೆಗಳನ್ನು ಮಾತಿನ ಮೂಲಕ ಥಳಿಸುವ ಛಾತಿಯವರು. ಅವರೇ, ಇತಿಹಾಸಕಾರ ರಾಮಚಂದ್ರ ಗುಹಾ.

ಗೌರಿ ಲಂಕೇಶರನ್ನು ಕೊಂದವರು ಹಿಂದುತ್ವ ಪ್ರತಿಪಾದಕ ಶಕ್ತಿಗಳೇ ಎಂದವರು ಅಪ್ಪಣೆ ಕೊಡಿಸಿದ್ದಾರೆ. ಇದುವರೆಗೂ ಈ ಹತ್ಯೆಗೆ ನಕ್ಸಲೀಯರೇ ಕಾರಣ ಎಂದು ಶಂಕಿಸಲಾಗುತ್ತಿತ್ತಾದರೂ ಇದೀಗ ಹಿಂದೂ ಸಂಘಟನೆಗಳ ಮೇಲೆ ಆಪಾದನೆ ಹೊರಿಸುವ
ಖಯಾಲಿ ಇದ್ದಕ್ಕಿದ್ದಂತೆ ತೀವ್ರಗೊಂಡಿದೆ. ಹತ್ಯೆ ನಡೆದು ಕೆಲವೇ ತಾಸುಗಳೊಳಗೆ ವಾಮಪಂಥೀಯ ಸಂಘಟನೆಗಳ ನಾಯಕರು ಹಾಗೂ ಗೌರಿ ಲಂಕೇಶ್‌ ಅವರ ನಿಕಟ ಸ್ನೇಹಿತ-ಸ್ನೇಹಿತೆಯರು ಹಿಂದೂ ಸಂಘಟನೆಯನ್ನು ದೂರಲಾರಂಭಿಸಿದರು! ಕೆಲ ಟಿವಿ ಚಾನೆಲ್‌ಗ‌ಳು ಯಾವುದೇ ಅಡ್ಡಿ ಎಗ್ಗು ಇಲ್ಲದೆ ನಿರಂತರವಾಗಿ ಊಹಾತ್ಮಕ ಆಟದಲ್ಲಿ ನಿರತವಾಗಿವೆ. ಈಗ ವಿಶೇಷ ತನಿಖಾ ತಂಡ
ನಡೆಸುತ್ತಿರುವ ಪೊಲೀಸ್‌ ತನಿಖೆಯ ಮೇಲೆ, ಮಾಧ್ಯಮಗಳೀಗ ಏರ್ಪಡಿಸಿರುವ “ಸಮಾನಾಂತರ ತನಿಖೆ’ ಯಾವುದೇ ರೀತಿಯ ಪ್ರಭಾವ ಬೀರದೆ ಇರಲಿ ಎಂದೇ ಆಶಿಸುವಂತಾಗಿದೆ. ವಿಶೇಷ ತನಿಖಾ ತಂಡ ಈಗ ಆಂಧ್ರ ಪೊಲೀಸರ ಸಹಕಾರದೊಂದಿಗೆ ಈ ಕೊಲೆಯಲ್ಲಿ ನಕ್ಸಲೀಯರ ಪಾತ್ರವಿದೆಯೇ ಎಂಬ ಪರಿಶೀಲನೆ ನಡೆಸುತ್ತಿದೆ. ಈ ತನಿಖೆ ಸದ್ಯಕ್ಕೆ ಸರಿಯಾದ ಹಾದಿಯಲ್ಲೇ ಮುಂದುವರಿಯುತ್ತಿದೆ. ಹೀಗೆಯೇ ಇದರ ಹಿಂದೆ ಹಿಂದೂ ಶಕ್ತಿಗಳ ಕೈವಾಡವಿದೆಯೇ ಎಂಬ ಬಗೆಗೂ ತನಿಖೆಯಾಗಬೇಕು ಎಂದು ಪ್ರತ್ಯೇಕವಾಗಿ ಹೇಳಬೇಕಾದ ಅಗತ್ಯವಿಲ್ಲ. ಗೌರಿ ಲಂಕೇಶ್‌ ಹತ್ಯೆಯ ಕೇಸು ನಿಜಕ್ಕೂ ಒಂದು ಸಂಕೀರ್ಣ ಪ್ರಕರಣ.

ಆಕೆ ದಿಟ್ಟ ಪತ್ರಕರ್ತೆ; ಓರ್ವ ಧೀರ-ಧೀಮಂತ ಸಾಮಾಜಿಕ  ಹೋರಾಟಗಾರ್ತಿ. ಅಧಿಕಾರದಲ್ಲಿರುವವರನ್ನು ತರಾಟೆಗೆ
ತೆಗೆದುಕೊಳ್ಳಲು ಆಕೆ ಹಿಂಜರಿಯುತ್ತಿರಲಿಲ್ಲ; ಯಾರಿಗೂ ಮಣೆ ಹಾಕದೆ, ಯಾರಿಂದಲೂ ಜಾಹೀರಾತುಗಳನ್ನು ಪಡೆಯದೆ
ಪತ್ರಿಕೆ ನಡೆಸುತ್ತಿದ್ದವರು. ಕನ್ನಡ ಪತ್ರಿಕೋದ್ಯಮದಲ್ಲಿ ಅವರಿಗೆ ಸರಿದೊರೆಯಾದ ಪತ್ರಿಕೋದ್ಯಮಿಗಳು ಎಲ್ಲೋ ಕೆಲವರಷ್ಟೆ; ಅಥವಾ ಇಲ್ಲವೇ ಇಲ್ಲ ಎಂದರೂ ನಡೆದೀತು. ದೇಶಕ್ಕೆ ಸ್ವಾತಂತ್ರ್ಯ ದೊರೆತ ಬಳಿಕ ಕೆಲ ವರ್ಷಗಳ ಕಾಲ ಪತ್ರಕರ್ತ ಶೇಷಪ್ಪನವರು “ಕಿಡಿ’ ಎಂಬ ಟ್ಯಾಬ್ಲಾಯನ್ನು ಸರಕಾರದ ಇಲ್ಲವೆ ಇತರ ಖಾಸಗಿ ಜಾಹೀರಾತುಗಳನ್ನು ಪಡೆಯದೆ ನಡೆಸುತ್ತಿದ್ದರು. ಭ್ರಷ್ಟ, ಕಳಪೆ ವ್ಯಕ್ತಿತ್ವದ ಕಾಂಗ್ರೆಸ್‌ ಮಂತ್ರಿಗಳ ಸುತ್ತ ವ್ಯಕ್ತಿ ಪೂಜೆಯ ಪಿಡುಗು  ಅಮರಿಕೊಂಡಾಗ ಅಂಥವರನ್ನು ಬತ್ತಲೆಗೊಳಿಸಲು ಅವರು ಹಿಂಜರಿಯುತ್ತಿರಲಿಲ್ಲ. ಈಚಿನ ದಿನಗಳಲ್ಲಿ ವಿದ್ವಾಂಸ ಡಾ| ಎಂ. ಎಂ. ಕಲಬುರ್ಗಿ ಹಾಗೂ ಮಹಾರಾಷ್ಟ್ರದ ಇನ್ನಿಬ್ಬರು ವಿಚಾರವಾದಿಗಳಂಥ ಕೇವಲ ಕೆಲವೇ ಕೆಲವು ಪ್ರಮುಖ ವ್ಯಕ್ತಿಗಳ ಹತ್ಯಾಪ್ರಕರಣಗಳಲ್ಲಿ ಆರೋಪಿಗಳ ಪತ್ತೆಯೇ ಆಗಿಲ್ಲ ಎಂದು ಹೇಳಲಾಗುತ್ತಿದೆಯಾದರೂ ಈ ರೀತಿ ಹತ್ಯೆಯಾದವರು ಇನ್ನೂ ಅನೇಕರಿದ್ದಾರೆ. 

Advertisement

ಕರ್ನಾಟಕದಲ್ಲಾಗಲಿ ಕೇರಳದಲ್ಲಾಗಲಿ ಆರೆಸ್ಸೆಸ್‌ ಕಾರ್ಯಕರ್ತರ ಹತ್ಯೆ ನಡೆದರೆ ಮಾಧ್ಯಮಗಳಾಗಲಿ, ಬುದ್ಧಿಜೀವಿಗಳೆಂದು ಕರೆದುಕೊಳ್ಳುವವರಾಗಲಿ ಇಂಥ ಘಟನೆಗಳಿಗೆ ಪ್ರಾಮುಖ್ಯ ನೀಡುವುದಿಲ್ಲ ಎಂದು ಬಿಜೆಪಿ ನಾಯಕರು ಹೇಳುತ್ತಿದ್ದರೆ, ಅವರ ಈ ಹೇಳಿಕೆಯಲ್ಲಿ ಅರ್ಥವಿಲ್ಲದೆ ಇಲ್ಲ. 1953ರಲ್ಲಿ ನಡೆದ ಭಾರತೀಯ ಜನಸಂಘದ ನಾಯಕ ಹಾಗೂ ಅವಿಭಜಿತ ಬಂಗಾಲದ ಮೇರುವ್ಯಕ್ತಿತ್ವದ ನಾಯಕ ಡಾ| ಶ್ಯಾಮ ಪ್ರಸಾದ್‌ ಮುಖರ್ಜಿ ಹಾಗೂ 1968ರ ಫೆಬ್ರವರಿಯಲ್ಲಿ ಕೊಲೆಗೀಡಾದ ಪಂಡಿತ್‌ ದೀನದಯಾಳ ಉಪಾಧ್ಯಾಯ ಇವರುಗಳ ಸಾವಿನ ಹಿಂದಿನ ರಹಸ್ಯವನ್ನು ಹಾಗೂ ಸಂಚನ್ನು ಪತ್ತೆ ಹಚ್ಚುವ ಕಾರ್ಯ ನಡೆದೇ ಇಲ್ಲ. ಡಾ| ಮುಖರ್ಜಿ 1953 ಮೇ ತಿಂಗಳಲ್ಲಿ ಜಮ್ಮು ಮತ್ತು ಕಾಶ್ಮೀರದ ಜೈಲೊಂದರಲ್ಲಿ ನಿಗೂಢ ರೀತಿಯಲ್ಲಿ ಸಾವನ್ನಪ್ಪಿದರು. ರಾಜ್ಯದಲ್ಲಿ ನೆಲೆಸಲು ಎಲ್ಲ ಭಾರತೀಯರಿಗೂ ಹಕ್ಕಿರಬೇಕೆಂದು ಆಗ್ರಹಿಸುತ್ತಿದ್ದರೆಂಬ ಕಾರಣಕ್ಕೆ ಶೇಖ್‌ ಅಬ್ದುಲ್ಲಾ ಸರಕಾರ ಅವರನ್ನು ಬಂಧಿಸಿ ಜೈಲಿಗೆ ತಳ್ಳಿತ್ತು. ಆ ರಾಜ್ಯದಲ್ಲಿ ಸಂವಿಧಾನದ 35ಎ ಮತ್ತು 370ನೆಯ ವಿಧಿಗಳನ್ನು ಪುನರೂರ್ಜಿತಗೊಳಿಸಬೇಕೆಂಬ ಬೇಡಿಕೆಗೆ ಸಂಬಂಧಿಸಿದ ವಿವಾದವೆದ್ದಿರುವ ಹಿನ್ನೆಲೆಯಲ್ಲಿ ಡಾ| ಮುಖರ್ಜಿಯವರ ಆಂದೋಲನ ಇಂದಿಗೂ ಪ್ರಸ್ತುತ.

ಆರೆಸ್ಸೆಸ್‌ ನಾಯಕ ಹಾಗೂ ಜನಸಂಘದ ಮುಂದಾಳು ದೀನದಯಾಳ್‌ ಉಪಾಧ್ಯಾಯರ ಹತ್ಯೆ ಸಂಭವಿಸಿದ್ದು, ಅವರು  ಲಕ್ನೋದಿಂದ ಪಟ್ನಾಕ್ಕೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದಾಗ. ಈ ಹತ್ಯೆಯ ಕುರಿತು ಹೊಸದಾಗಿ ತನಿಖೆ ಶುರು ಮಾಡಬೇಕೆಂದು ಬಿಜೆಪಿ ನಾಯಕ ಡಾ| ಸುಬ್ರಹ್ಮಣ್ಯ ಸ್ವಾಮಿ ಎರಡು ವರ್ಷಗಳ ಹಿಂದೆಯೇ ಪ್ರಧಾನಿ ನರೇಂದ್ರ ಮೋದಿಯವರನ್ನು ಆಗ್ರಹಿಸಿದ್ದರು. ಉಪಾಧ್ಯಾಯ ಅವರಲ್ಲಿದ್ದ ಬೆಲೆಬಾಳುವ ವಸ್ತುಗಳನ್ನು ಕಿತ್ತು ರೈಲಿನಿಂದ ಹೊರದಬ್ಬಿದ್ದ ಇಬ್ಬರು ದರೋಡೆಕೋರರನ್ನು ಸಿಬಿಐ ಬಂಧಿಸಿದ್ದೇನೋ ಹೌದು. ಬಳಿಕ ಇಬ್ಬರನ್ನು ಸೆಶನ್ಸ್‌ ನ್ಯಾಯಾಲಯವೊಂದು ಖುಲಾಸೆಗೊಳಿಸಿತು.

ಕೊಲೆ ಸಂಬಂಧದ ತನಿಖೆಗಾಗಿ ಭಾರತ ಸರಕಾರ ಭಾರತದ ನಿವೃತ್ತ ಶ್ರೇಷ್ಠ ನ್ಯಾಯಮೂರ್ತಿ ವೈ. ವಿ. ಚಂದ್ರಚೂಡ್‌ ಅವರ
ನೇತೃತ್ವದ ಆಯೋಗವೊಂದನ್ನು ಅಸ್ತಿತ್ವಕ್ಕೆ ತಂದಿತ್ತು. ಆದರೆ ಈ ತನಿಖಾ ಆಯೋಗ ಪ್ರಕರಣಕ್ಕೆ ಸಂಬಂಧಿಸಿದ ಸೂಕ್ಷ್ಮ ಅಂಶಗಳ ಮೇಲೆ ಹೆಚ್ಚಿನ ಬೆಳಕನ್ನೇನೂ ಚೆಲ್ಲಿಲ್ಲ. ಅಷ್ಟೇಕೆ, ಮಹಾತ್ಮಾಗಾಂಧಿಯವರ ಹತ್ಯೆಯ ವಿಷಯವನ್ನೇ
ತೆಗೆದುಕೊಳ್ಳಿ. ಅವರ ಹಂತಕ ನಾಥೂರಾಂ ಗೋಡ್ಸೆಯೇ ಕೋರ್ಟಿನಲ್ಲಿ ನೀಡಿದ್ದ ತಪ್ಪೊಪ್ಪಿಗೆ ಹೇಳಿಕೆ ಕನ್ನಡ ಸೇರಿದಂತೆ ಎಲ್ಲ ಭಾಷೆಗಳಲ್ಲೂ ಪ್ರಕಟವಾಗಿದ್ದರೂ ಈ ಪ್ರಕರಣದ ಸಂಬಂಧದಲ್ಲಿ ನಿರ್ಣಾಯಕ ಎನ್ನಬಹುದಾದ ಮಾತನ್ನು ಇನ್ನೂ ಯಾರೂ ಹೇಳಿಲ್ಲ. ಗೋಡ್ಸೆ ಹಾಗೂ ಗೋಪಾಲ್‌ ಆಪ್ಟೆಗೆ ಮರಣದಂಡನೆ ವಿಧಿಸಿ ಆದೇಶ ನೀಡಿದ್ದ ಆಗಿನ ಪೂರ್ವ ಪಂಜಾಬ್‌ ಹೈಕೋರ್ಟಿನ ನ್ಯಾಯಾಧೀಶ ಗೋಪಾಲ್‌ದಾಸ್‌ ಖೋಸ್ಲಾ ಅವರೇ 1963ರಲ್ಲಿ ಗಾಂಧೀಜಿ ಹತ್ಯೆ ಕುರಿತ ಗ್ರಂಥವೊಂದನ್ನು ಪ್ರಕಟಿಸಿದ್ದರು (“ದ ಮರ್ಡರ್‌ ಆಫ್ ಮಹಾತ್ಮಾಗಾಂಧಿ ಆ್ಯಂಡ್‌ ಅದರ್‌ ಕೇಸಸ್‌ – ಫ್ರಂ ಎ ಜಡ್ಜಸ್‌ ನೋಟ್‌ಬುಕ್‌’).

ಗಾಂಧೀಜಿ ಹತ್ಯೆಯ ಪ್ರಕರಣಕ್ಕೆ  ಸಂಬಂಧಿಸಿದ್ದಂತೆ ಆಗಿನ ಕಾಂಗ್ರೆಸ್‌ ಸರಕಾರಗಳಿಗೆ ಸಂದೇಹವಿದ್ದೇ ಇತ್ತು. ಸುಪ್ರೀಂಕೋರ್ಟಿನ ಭೂತಪೂರ್ವ ನ್ಯಾಯಾಧೀಶ ಜೀವನ್‌ಲಾಲ್‌ ಕಪೂರ್‌ ಅವರ ನೇತೃತ್ವದಲ್ಲೊಂದು ವಿಚಾರಣಾ ಆಯೋಗವೊಂದನ್ನು ರೂಪಿಸಿದ್ದೇ ಈ ಮಾತಿಗೆ ಸಾಕ್ಷಿ. ಪ್ರಖ್ಯಾತ ನ್ಯಾಯವಾದಿ ಹಾಗೂ ಲೇಖಕ ಕೆ. ಎಲ್‌. ಕೌಬಾ ಅವರು ಗಾಂಧೀಜಿ ಹತ್ಯೆ ಪ್ರಕರಣವನ್ನು ತಮ್ಮದೇ ದೃಷ್ಟಿಕೋನವನ್ನು ತಮ್ಮ “ದಿ ಅಸಾಸಿನೇಶನ್‌ ಆಫ್ ಮಹಾತ್ಮಾಗಾಂಧಿ’ (1968) ಎಂಬ ಗ್ರಂಥದಲ್ಲಿ ಮಂಡಿಸಿದ್ದಾರೆ. ಅಮೆರಿಕದಲ್ಲೂ ಇದೇ ಕತೆ.

ಅಲ್ಲಿನ ಮಾಜಿ ಅಧ್ಯಕ್ಷ ಜೆ.ಎಫ್.ಕೆನಡಿಯವರನ್ನು 1963ರಲ್ಲಿ ಡಲ್ಲಾಸ್‌(ಟೆಕ್ಸಾಸ್‌)ನಲ್ಲಿ ಹತ್ಯೆಗೈಯಲಾದ ಪ್ರಕರಣದ ಕುರಿತಂತೆ ಇನ್ನೂ ಸಂಶಯ ಹೊಗೆಯಾಡುತ್ತಲೇ ಇದೆ. ಅಮೆರಿಕದ  ಸುಪ್ರೀಂಕೋರ್ಟಿನ ಮುಖ್ಯ ನ್ಯಾಯಮೂರ್ತಿಯಾಗಿದ್ದ ಅರ್ಲ್ ವಾರನ್‌ ನೇತೃತ್ವದ ತನಿಖಾ ಆಯೋಗ ಕೆನಡಿಯವರ ಹಂತಕ ಲೀ ಹಾರ್ವೆ ಓಸ್ವಾಲ್ಡ್‌ ಈ ಕೃತ್ಯವನ್ನು ಏಕಾಂಗಿಯಾಗಿ ಎಸಗಿದ್ದ ಎಂದು ಅಭಿಪ್ರಾಯ ಪಟ್ಟಿದ್ದರೂ ಈ ವಿಷಯದಲ್ಲಿ ಇನ್ನೂ ಅನುಮಾನವಿದ್ದೇ ಇದೆ. ಓಸ್ವಾಲ್ಡ್‌ನನ್ನು ಪೊಲೀಸ್‌ ಭದ್ರತೆಯೊಂದಿಗೆ ಕರೆದೊಯ್ಯುತ್ತಿದ್ದಾಗ ಆತನನ್ನು ಗುಂಡಿಕ್ಕಿ ಸಾಯಿಸಿದ ಜ್ಯಾಕ್‌ ರೂಬಿಯದು ಕೂಡ ಏಕಾಂಗಿ ಕೃತ್ಯ ಎಂದೂ ವಾರನ್‌ ಆಯೋಗ ಹೇಳಿತ್ತು. ಈ ಪ್ರಕರಣದಲ್ಲಿ ಸಂಚು ನಡೆದಿದೆಯೆಂಬ ವಾದವನ್ನು ಆಯೋಗ ತಳ್ಳಿಹಾಕಿತ್ತು. ವಾಸ್ತವವಾಗಿ ಈ ಘಟನೆಗೆ, ಓಸ್ವಾಲ್ಡ್‌ನನ್ನು ಒಯ್ಯುತ್ತಿದ್ದಾಗ ಪತ್ರಕರ್ತರು ಅಲ್ಲಿ ಮುಕುರಿಕೊಂಡದ್ದೇ ಕಾರಣ ಎಂದೂ ಆಯೋಗ ಆಕ್ಷೇಪ ವ್ಯಕ್ತಪಡಿಸಿತ್ತು. ಪತ್ರಿಕೆಗಳನ್ನು ಪ್ರತಿನಿಧಿಸುವ ಅಧಿಕೃತ ರುಜುವಾತು ಪತ್ರಗಳನ್ನು ದಾಖಲೆಗಳನ್ನು ಸರಿಯಾದ ರೀತಿಯಲ್ಲಿ ಹೊಂದಿರದೆ ಇದ್ದ ವ್ಯಕ್ತಿಗಳಿಗೆ ಇಂಥ ಸುದ್ದಿಗಳ ವರದಿಗಾರಿಕೆಗೆ ಅವಕಾಶ ಮಾಡಿಕೊಡಲಾಯಿತೆಂದೇ ಅಪರಾಧಿಯಿದ್ದ ಜಾಗದಲ್ಲಿ ಜನಜಂಗುಳಿ ಏರ್ಪಟ್ಟಿತ್ತು.

ಪತ್ರಿಕೋದ್ಯೋಗಿಗಳಿಗೆ ಹೊಸದೇ ನೀತಿ ಸಂಹಿತೆ ರೂಪಿಸಬೇಕಾದ ಅಗತ್ಯವಿದೆ ಎಂದೂ ನ್ಯಾ| ವಾರನ್‌ ಹೇಳಿದ್ದರು. ನಮ್ಮಲ್ಲೂ ಗುಹಾರಂಥ ವ್ಯಕ್ತಿಗಳಿ ಗೆ, ಮಾಧ್ಯಮದವರಿಗೆ ಅಚ್ಚುಕಟ್ಟಾದ ನೀತಿ ಸಂಹಿತೆಯೊಂದು ಇದ್ದಿದ್ದರೆ! ಗೌರಿ ಲಂಕೇಶ್‌ ಹತ್ಯಾ ಪ್ರಕರಣಗಳಂಥ ವಿಷಯಗಳಲ್ಲಿ ಉದ್ರೇಕದಾರಿ ಹೇಳಿಕೆಗಳನ್ನು ನೀಡದಂತೆ ತಡೆಯಬಲ್ಲಂಥ ನೀತಿ ವ್ಯವಸ್ಥೆ ಇದ್ದಿದ್ದರೆ…ಎಂದೇ ನಾವೀಗ ಆಶಿಸುವಂತಾಗಿದೆ.

*ಅರಕೆರೆ ಜಯರಾಮ್

Advertisement

Udayavani is now on Telegram. Click here to join our channel and stay updated with the latest news.

Next