ಪಣಜಿ: ಗೋವಾದಲ್ಲಿ ನಡೆಯಲಿರುವ ಜಿ-20 ಶೃಂಗ ಸಭೆಗಳ ತಯಾರಿಗಾಗಿ ಗೋವಾ ಕದಂಬ ಸಾರಿಗೆ ಸಂಸ್ಥೆ (ಜಿಟಿಸಿ) 10 ಹೊಸ ಎಲೆಕ್ಟ್ರಿಕ್ ಬಸ್‍ಗಳನ್ನು ಸಜ್ಜುಗೊಳಿಸಲು ನಿರ್ಧರಿಸಿದೆ. ಇದು ರಾಜ್ಯದಲ್ಲಿ ಸುಸ್ಥಿರ ಪ್ರಯಾಣವನ್ನು ಉತ್ತೇಜಿಸುವ ಗೋವಾ ಸರ್ಕಾರದ ಪ್ರಯತ್ನಗಳ ಭಾಗವಾಗಿದೆ. ಪಣಜಿ ಸ್ಮಾರ್ಟ್ ಸಿಟಿ ಯೋಜನೆಯಡಿ 48 ಹೊಸ ಎಲೆಕ್ಟ್ರಿಕ್ ಬಸ್‍ಗಳನ್ನು (ಇವಿ) ಖರೀದಿಸುವ ಪ್ರಕ್ರಿಯೆಯನ್ನು ಗೋವಾ ಸರ್ಕಾರ ಆರಂಭಿಸಿದೆ. ಏಪ್ರಿಲ್‍ನಿಂದ ಗೋವಾದಲ್ಲಿ ನಡೆಯಲಿರುವ ಜಿ-20 ಶೃಂಗ ಸಭೆಗಳಿಗೆ ಬರುವ ಅತಿಥಿಗಳ ಸೇವೆಗೆ 10 ಎಲೆಕ್ಟ್ರಿಕ್ ಬಸ್‍ಗಳು ಸಿದ್ಧವಾಗಲಿವೆ ಎಂದು ಗೋವಾ ಕದಂಬ ಮಹಾಮಂಡಳ ಮಾಹಿತಿ ನೀಡಿದೆ.
ಅಜೆರ್ಂಟೀನಾ, ಆಸ್ಟ್ರೇಲಿಯಾ, ಬ್ರೆಜಿಲ್, ಕೆನಡಾ, ಚೀನಾ, ಫ್ರಾನ್ಸ್, ಜರ್ಮನಿ, ಭಾರತ, ಇಂಡೋನೇಷ್ಯಾ, ಇಟಲಿ, ಜಪಾನ್, ಮೆಕ್ಸಿಕೋ, ರಿಪಬ್ಲಿಕ್ ಆಫ್ ಕೊರಿಯಾ, ರಿಪಬ್ಲಿಕ್ ಆಫ್ ಸೌತ್ ಆಫ್ರಿಕಾ, ರಷ್ಯಾ, ಸೌದಿ ಅರೇಬಿಯಾ, ಟರ್ಕಿ, ಯುನೈಟೆಡ್ ಕಿಂಗ್‍ಡಮ್, ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾ ಮತ್ತು ಯುರೋಪಿಯನ್ ಯೂನಿಯನ್ ಈ ದೇಶಗಳ ಪ್ರತಿನಿಧಿಗಳು ಜಿ-20 ಶೃಂಗ ಸಭೆಯಲ್ಲಿ ಭಾಗವಹಿಸಲಿದ್ದಾರೆ ಎನ್ನಲಾಗಿದೆ.
ಗೋವಾ ಸರ್ಕಾರವು ಖರೀದಿಸಿದ 10 ಎಲೆಕ್ಟ್ರಿಕ್ ಮಿನಿ ಬಸ್ಸುಗಳನ್ನು ಕದಂಬ ಕಾರ್ಪೊರೇಷನ್ ಜಿ-20 ಶೃಂಗ ಸಭೆಗಳಿಗೆ ಸಜ್ಜುಗೊಳಿಸುತ್ತಿದೆ. ಜಿ-20 ಶೃಂಗಸಭೆಯ ಪ್ರಯಾಣದ ವ್ಯವಸ್ಥೆಗಳ ಕುರಿತು ಪಣಜಿಯಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಸಾರಿಗೆ ಇಲಾಖೆ ನಿರ್ದೇಶಕ ರಾಜನ್ ಸತಾರ್ಡೇಕರ್ ಮಾಹಿತಿ ನೀಡಿ- ಜಿ-20 ಶೃಂಗ ಸಭೆಯಲ್ಲಿ ಭಾಗವಹಿಸುವ ಪ್ರತಿನಿಧಿಗಳಿಗೆ ಸುಗಮ ಸಂಚಾರವನ್ನು ಕಲ್ಪಿಸಲು ಸರ್ಕಾರ ಸನ್ನದ್ಧವಾಗಿದೆ. ಈ ನಿಟ್ಟಿನಲ್ಲಿ ಸಿದ್ಧತಾ ಕಾರ್ಯ ಕೈಗೊಳ್ಳಲಾಗಿದೆ. ಶೃಂಗಸಭೆಯು ಒಂದು ದೇಶಕ್ಕೆ ಪ್ರತಿಷ್ಠಿತ ಕಾರ್ಯಕ್ರಮವಾಗಿದೆ ಎಂದರು.
ಗೋವಾದಲ್ಲಿ ಸಭೆಗಳ ಯಶಸ್ಸಿನಲ್ಲಿ ಎಲೆಕ್ಟ್ರಿಕ್ ಬಸ್ ಮತ್ತೊಂದು ಮಾನದಂಡವನ್ನು ಸ್ಥಾಪಿಸುತ್ತದೆ. ಪ್ರತಿನಿಧಿಗಳಿಗೆ ಜವಾಬ್ದಾರಿಯುತ ಆತಿಥ್ಯ ನೀಡಲು ಮತ್ತು ಈ ಸಭೆಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಲು ಸರ್ಕಾರ ಉತ್ಸುಕವಾಗಿದೆ ಮತ್ತು ಆದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಸಣ್ಣ ವಾಹನಗಳನ್ನು ಬಳಸುವುದಕ್ಕಿಂತ ಎಲೆಕ್ಟ್ರಿಕ್ ಬಸ್‍ಗಳ ಬಳಕೆ ಉತ್ತಮವಾಗಿದೆ ಎಂದು ಸಾರಿಗೆ ಇಲಾಖೆ ನಿರ್ದೇಶಕ ರಾಜನ್ ಸಾತಾರ್ಡೆಕರ್ ವಿವರಿಸಿದರು.