Advertisement

ಭಾವಿ ಶಿಕ್ಷಕರ ಪರದಾಟ

03:16 PM Sep 08, 2018 | Team Udayavani |

ರಾಯಚೂರು: ಕೆಲವರು ಮಣ್ಣಿನ ನೆಲದ ಮೇಲೆ ಕುಳಿತು ದಾಖಲೆ ಸಿದ್ಧಗೊಳಿಸುತ್ತಿದ್ದರು. ಕೆಲವರು ಕಿಟಕಿಗೆ ಅಳವಡಿಸಿದ ತಂತಿ ಜಾಲರಿಯನ್ನೇ ಆಸರೆ ಮಾಡಿಕೊಂಡು ನಿಂತಿದ್ದರು. ಇನ್ನೂ ಕೆಲವರು ನಿಂತಲ್ಲಿಯೇ ದಾಖಲೆ ಹೊಂದಿಸಿಕೊಳ್ಳುತ್ತಿದ್ದರು.

Advertisement

ಇದು ನಗರದ ಡಿಡಿಪಿಐ ಕಚೇರಿಯಲ್ಲಿ ಕಂಡು ಬಂದ ದೃಶ್ಯಗಳು. ಶಿಕ್ಷಣ ಇಲಾಖೆ 6-8ನೇ ತರಗತಿವರೆಗಿನ ಶಿಕ್ಷಕರ ನೇಮಕಾತಿ ಸಂಬಂಧಿಸಿದಂತೆ ಅರ್ಹ ಅಭ್ಯರ್ಥಿಗಳಿಂದ ದಾಖಲೆ ಪರಿಶೀಲನೆಗೆ ಕರೆ ಮಾಡಿತ್ತು. ಜಿಲ್ಲೆಯ 78 ಹುದ್ದೆಗಳಿಗೆ 1:3 ಅನುಪಾತದಡಿ ಸುಮಾರು 234 ಜನ ಅಭ್ಯರ್ಥಿಗಳು ಬಂದಿದ್ದರು. ಅಭ್ಯರ್ಥಿಗಳ ಜತೆಗೆ ಕುಟುಂಬ ಸದಸ್ಯರೂ ಬಂದಿದ್ದರು. ಕೆಲ ಮಹಿಳೆಯರು ಹಸುಗೂಸುಗಳನ್ನು ಜತೆಗೆ ಕರೆ ತಂದಿದ್ದರು. ಆದರೆ, ಇಲ್ಲಿ ಮಾತ್ರ ಇಲಾಖೆ ಕನಿಷ್ಠ ಸೌಲಭ್ಯ ಸಹ ಕಲ್ಪಿಸಿರಲಿಲ್ಲ. ಅದೆಷ್ಟರ ಮಟ್ಟಿಗೆ ಎಂದರೆ ದಾಖಲೆ ಹೊಂದಿಸಿಕೊಳ್ಳಲು ಟೇಬಲ್‌ಗ‌ಳನ್ನೂ ಹಾಕಿರಲಿಲ್ಲ. ಹೀಗಾಗಿ ಭಾವಿ ಶಿಕ್ಷಕರು ನೆಲದ ಮೇಲೆಯೇ ಕುಳಿತು ಎಲ್ಲವನ್ನು  ದಿಸಿಕೊಳ್ಳುತ್ತಿರುವುದು ಕಂಡು ಬಂತು. ಆಕಾಂಕ್ಷಿಗಳು ಸಾಕಷ್ಟು ಪ್ರಯಾಸ ಪಡುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು.

ಸರ್ಕಾರ 10 ಸಾವಿರ ಶಿಕ್ಷಕರ ನೇಮಕಾತಿಗೆ ಅರ್ಜಿ ಆಹ್ವಾನಿಸಿದೆ. ಅದರಲ್ಲಿ ಸಾಕಷ್ಟು ಅಭ್ಯರ್ಥಿಗಳು ಅರ್ಹರಾಗಿದ್ದಾರೆ. ಅವರಲ್ಲಿ ಅರ್ಹತಾ ಆಧಾರದ ಮೇಲೆ ದಾಖಲೆ ಪರಿಶೀಲನೆಗೆ ಕರೆ ಮಾಡಲಾಗಿದೆ. ಗುರುವಾರದಿಂದ ದಾಖಲೆ ಪರಿಶೀಲನೆ ಕಾರ್ಯ ನಡೆದಿದೆ. ಆದರೆ, ಅಭ್ಯರ್ಥಿಗಳು ಬರುತ್ತಾರೆ ಎಂದು ಗೊತ್ತಿದ್ದೂ ಶಿಕ್ಷಣ ಇಲಾಖೆ ಮಾತ್ರ ಯಾವುದನ್ನು ಸುಸಜ್ಜಿತ ರೀತಿಯಲ್ಲಿ ಮಾಡಿಲ್ಲ. ದಾಖಲೆ ಸ್ವೀಕರಿಸಲು ಕಿಟಕಿ ಬಳಿ ಸರದಿ ಸಾಲಿನಲ್ಲಿ ನಿಲ್ಲುವ ವ್ಯವಸ್ಥೆ ಮಾಡಿಲ್ಲ. ಹೀಗಾಗಿ ಎಲ್ಲ ಆಕಾಂಕ್ಷಿಗಳು ಏಕಕಾಲಕ್ಕೆ ಕಿಟಕಿಗೆ ಜೋತು ಬಿದ್ದಿದ್ದರು. ಆದರೆ, ಅಲ್ಲಿ ಸರಿಯಾಗಿ ನಿಲ್ಲುವುದಕ್ಕೂ ಸ್ಥಳಾವಕಾಶ ಇಲ್ಲದ ಕಾರಣಕ್ಕೆ ಕಿಟಕಿ ತಂತಿಗಳನ್ನು ಹಿಡಿದು ನೇತಾಡುವಂತಾಗಿತ್ತು. ಕ್ರಮ ಸಂಖ್ಯೆ
ಆಧಾರದಡಿ ಕರೆಯಲು ಮೈಕ್‌ ವ್ಯವಸ್ಥೆ ಮಾಡಿರಲಿಲ್ಲ. 

ಕುಡಿಯಲು ನೀರಿನ ವ್ಯವಸ್ಥೆ ಕೂಡ ಇರಲಿಲ್ಲ. ಶಾಮಿಯಾನ ಕೂಡ ಹಾಕಿಸಿರಲಿಲ್ಲ. ಸಾವಿರಾರು ಮಕ್ಕಳಿಗೆ ಶಿಸ್ತಿನ ಪಾಠ
ಹೇಳಿಕೊಡುವ ಭಾವಿ ಶಿಕ್ಷಕರನ್ನೇ ಹೀಗೆ ನಡೆಸಿಕೊಳ್ಳುತ್ತಿರುವ ಬಗ್ಗೆ ದೂರದೂರುಗಳಿಂದ ಬಂದ ಅಭ್ಯರ್ಥಿಗಳು ಬೇಸರ ವ್ಯಕ್ತಡಿಸಿದರು. ಸರ್ಕಾರ ಅರ್ಜಿ ಕರೆಯುವಾಗ ಶುಲ್ಕವನ್ನು ಮಾತ್ರ ಕಡ್ಡಾಯವಾಗಿ ಸ್ವೀಕರಿಸುತ್ತದೆ. ನೇಮಕಾತಿ ಮಾಡುವಾಗ ಯಾಕಿಷ್ಟು ತಾತ್ಸಾರ ಮಾಡುತ್ತದೆ ಎಂದು ಆಕ್ರೋಶ ಹೊರ ಹಾಕಿದ ಪ್ರಸಂಗ ನಡೆಯಿತು. 

Advertisement

Udayavani is now on Telegram. Click here to join our channel and stay updated with the latest news.

Next