Advertisement

ಭವಿಷ್ಯದ ಸ್ಮಾರ್ಟ್‌ ಫ‌ುಡ್‌ ಸಿರಿಧಾನ್ಯ

11:59 AM Jun 09, 2018 | Team Udayavani |

ಬೆಂಗಳೂರು: ಪರಿಸರ ಹಾಗೂ ಆರೋಗ್ಯದ ಸಮತೋಲನ ಕಾಯ್ದುಕೊಳ್ಳಲು ಭವಿಷ್ಯದ “ಸ್ಮಾರ್ಟ್‌ ಫ‌ುಡ್‌’ ಎನಿಸಿರುವ ಸಿರಿಧಾನ್ಯಗಳತ್ತ ಜನ ಮುಖ ಮಾಡುವ ಅಗತ್ಯ ಮತ್ತು ಅನಿವಾರ್ಯತೆ ಇದೆ ಎಂದು ಸಚಿವ ಕೃಷ್ಣ ಭೈರೇಗೌಡ ತಿಳಿಸಿದರು. 

Advertisement

ನಗರದ ಲಾಲ್‌ಬಾಗ್‌ನ ಮರಿಗೌಡ ಸಭಾಂಗಣದಲ್ಲಿ ಗ್ರಾಮೀಣ ಕುಟುಂಬ ಸಂಸ್ಥೆ ಶುಕ್ರವಾರ ಏರ್ಪಡಿಸಿದ್ದ “ಭವಿಷ್ಯದ ಆಹಾರ ಸಿರಿಧಾನ್ಯ’ ಉತ್ಸವ ಉದ್ಘಾಟಿಸಿ ಮಾತನಾಡಿ, ಇಂದು ಬದಲಾದ ನಮ್ಮ ಜೀವನಶೈಲಿಯಿಂದಾಗಿ ಅನಾಹುತಗಳನ್ನು ನಾವೇ ಸೃಷ್ಟಿ ಮಾಡಿಕೊಳ್ಳುತ್ತಿದ್ದೇವೆ. ಆಹಾರದಲ್ಲಿ ಸಮಾತೋಲನ ಇಲ್ಲದ ಪರಿಣಾಮ, ಪರಿಸರ ಮತ್ತು ಆರೋಗ್ಯಕ್ಕೆ ಸಂಬಂಧಿಸಿದ ಹಲವಾರು ಸಮಸ್ಯೆಗಳು ಕಂಡುಬರುತ್ತಿವೆ.

ಸಂಪತ½ರಿತ ಆಹಾರವನ್ನು ದೂರವಿಟ್ಟು, ವಿಷಪೂರಿತ ಆಹಾರ ಆಯ್ಕೆ ಮಾಡಿಕೊಳ್ಳತ್ತಿರುವುದು ಇದಕ್ಕೆ ಕಾರಣ ಎಂದು ಬೇಸರ ವ್ಯಕ್ತಪಡಿಸಿದರು. ಜೀವನ ಶೈಲಿ ಸಂಬಂಧಿತ ಕಾಯಿಲೆಗಳ ನಿಗ್ರಹಕ್ಕೆ ಸಿರಿಧಾನ್ಯಗಳು ಮದ್ದು. ಇರುವಷ್ಟು ದಿನ ಆರೋಗ್ಯಕರವಾಗಿ ಜೀವನ ನಡೆಸಲು ಹಾಗೂ ಶಕ್ತಿಯುತ ಜೀವನಕ್ಕಾಗಿ ಸಿರಿಧಾನ್ಯಗಳು ಪೂರಕವಾಗಿವೆ.

ಹೀಗಾಗಿ, ನಮ್ಮ ಆಹಾರ ಪದ್ಧತಿಯಲ್ಲಿ ಸಮತೋಲವನ್ನು ಮರು ಸ್ಥಾಪಿಸಿಕೊಳ್ಳಬೇಕು. ಭವಿಷ್ಯದ ಸ್ಮಾರ್ಟ್‌ ಫ‌ುಡ್‌ ಪದ್ಧತಿಯನ್ನು ಜನರಿಗೆ ಪರಿಚಯ ಮಾಡಿಕೊಡಬೇಕು. ಈ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳು ಹೆಚ್ಚಾಗಿ ನಡೆಯಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷೆ ಡಾ.ವಸುಂಧರಾ ಭೂಪತಿ, ಸಾಹಿತಿ ಜಿ.ಎನ್‌.ಮೋಹನ್‌, ಟ್ರೇಡ್‌ ಪ್ರೊಮೋಷನ್‌ನ ವ್ಯವಸ್ಥಾಪಕಿ ಅನುರಾಯ್‌, ತೋಟಗಾರಿಕೆ ಇಲಾಖೆಯ ಆಯುಕ್ತ ವೈ.ಎಸ್‌.ಪಾಟೀಲ್‌, ಅಂಕಣಕಾರ ನಾಗೇಶ್‌ ಹೆಗಡೆ ಉಪಸ್ಥಿತರಿದ್ದರು.

Advertisement

ಇದೇ ಸಂದರ್ಭದಲ್ಲಿ ಮೇಳದ ಅಂಗವಾಗಿ ಪರಿಸರವಾದಿ ಡಾ.ಯಲ್ಲಪ್ಪರೆಡ್ಡಿ, ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಡಾ.ಜಗದೀಶ್‌, ಪ್ರಗತಿಪರ ರೈತರಾದ ಬಿ.ಆರ್‌. ಜಯಂತ್‌ನಾಥ್‌, ಹೊನ್ನೂರು ಪ್ರಕಾಶ್‌ ಸೇರಿದಂತೆ 10 ಜನರಿಗೆ  2018ನೇ ಸಾಲಿನ ಗ್ರಾಮೀಣ ಕುಟುಂಬ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಉತ್ಸವವು ಭಾನುವಾರದವರೆಗೆ (ಜೂ.10) ನಡೆಯಲಿದೆ.

ಸಸ್ಯಕಾಶಿ ಸಿರಿಧಾನ್ಯಮಯ: ಈ ಮಧ್ಯೆ ಸಸ್ಯಕಾಶಿ ಸಂಪೂರ್ಣ ಸಿರಿಧಾನ್ಯಮಯ ಆಗಿದೆ. ಎರಡು ಸಾವಿರಕ್ಕೂ ಅಧಿಕ ವೈವಿಧ್ಯಮಯ ಉತ್ಪನ್ನಗಳ ಪ್ರದರ್ಶನ ಹಾಗೂ ಮಾರಾಟ ಮಳಿಗೆಗಳಿದ್ದು, ಕಾಡುಜೇನು, ಜೋನಿಬೆಲ್ಲ, ನೈಸರ್ಗಿಕ ಬೆಲ್ಲ, ನಾಟಿ ತುಪ್ಪ, ಅಗಸೆ ಬೀಜ, ಸೂರ್ಯಕಾಂತಿ ಬೀಜ, ಚಿಯಾ ಸೀಡ್‌, ಕಲೋಂಜಿ, ಕಾಲಜೀರಾ, ತುಳಸಿಬೀಜ, ಪಾಲಿಶ್‌ ರಹಿತ ಕಾಳುಗಳು,

ರಾಗಿ, ಜೋಳ, ಸಾಮೆ, ಸಜ್ಜೆ, ನವಣೆ, ಹಾರಕ, ಬರಗು, ಊದಲು, ಕೊರಲೆ ಸಿರಿಧಾನ್ಯಗಳಿಂದ ತಯಾರಿಸಿದ ವಿವಿಧ ಉತ್ಪನ್ನಗಳು ಗಮನಸೆಳೆಯುತ್ತವೆ. ಅಷ್ಟೇ ಅಲ್ಲದೆ, ಪ್ರದರ್ಶನದಲ್ಲಿ ಗ್ರಾಮ ಧರ್ಮ ಸಂಸ್ಥೆಯು ನೈಸರ್ಗಿಕವಾಗಿ ತಯಾರಿಸಿದ ಸಾಂಬಾರು ಪುಡಿ, ರಸಂ ಪುಡಿ, ಇಡ್ಲಿ ಪುಡಿ, ಚಟ್ನಿ ಪುಡಿ, ವಾಂಗಿಬಾತ್‌ ಪುಡಿ, ರವೆ ಇಡ್ಲಿ ಪುಡಿ ಸೇರಿದಂತೆ ಹಲವು ಆಹಾರ ಉತ್ಪನ್ನಗಳನ್ನು ಪ್ರದರ್ಶಿಸುತ್ತಿದ್ದರು.

ಪಕ್ಕದಲ್ಲೇ ಇದ್ದ ಫಾರ್‌ ಯುವರ್‌ ವೆಲ್‌ನೆಸ್‌ ಮಳಿಗೆಯಲ್ಲಿ ಡಯಾಬಿಟಿಸ್‌ಗಾಗಿ ಬಿಲ್ವಸರ, ಕಫ‌, ಅಸ್ತಮಾಗೆ ವಾಸ ಸಂಜೀವಿನಿ ಹಾಗೂ ಇನ್ನಿತರೆ ಖಾಯಿಲೆಗಳಿಗೆ ಟಾನಿಕ್‌ ಮತ್ತು ಬಾಡಿ ಮಸಾಜ್‌ ಎಣ್ಣೆ, ಟೂತ್‌ಪೌಡರ್‌ ಸೇರಿದಂತೆ ವಿವಿಧ ವಸ್ತುಗಳನ್ನು ಮಾರಾಟ ಮಾಡುತ್ತಿದ್ದುದು ಕಂಡುಬಂತು.

Advertisement

Udayavani is now on Telegram. Click here to join our channel and stay updated with the latest news.

Next