Advertisement

ಭಾರತ ಕ್ರಿಕೆಟ್‌ನ ಭವಿಷ್ಯದ ಭರವಸೆ ಪೃಥ್ವಿ ಶಾ

12:23 PM Jan 27, 2018 | |

ಭಾರತ ಕ್ರಿಕೆಟ್‌ ತಂಡದ ಮಾಜಿ  ನಾಯಕ ರಾಹುಲ್‌ ದ್ರಾವಿಡ್‌ ಗರಡಿಯಲ್ಲಿ ಬೆಳೆಯುತ್ತಿರುವ ಮುಂಬೈನ 18ರ ಹರೆಯದ ಕ್ರಿಕೆಟಿಗ ಪೃಥ್ವಿ ಶಾ ಭವಿಷ್ಯದಲ್ಲಿ ಕ್ರಿಕೆಟ್‌ ದೇವರು ಸಚಿನ್‌ ತೆಂಡುಲ್ಕರ್‌ ಹಾಗೂ ರನ್‌ ಮೆಷಿನ್‌ ವಿರಾಟ್‌ ಕೊಹ್ಲಿಗೆ ಸರಿಸಾಟಿಯಾಗಿ ನಿಲ್ಲುವ ಭರವಸೆ ಮೂಡಿಸಿದ್ದಾರೆ. 

Advertisement

ಪ್ರಥಮ ದರ್ಜೆಯ ಎಲ್ಲ ಮಾದರಿಯ ಪಂದ್ಯಗಳಲ್ಲಿ ಅಮೋಘ ಪ್ರದರ್ಶನ ನೀಡುತ್ತಿರುವ ಶಾ, ಭಾರತ 19 ವರ್ಷದೊಳಗಿನವರ ವಿಶ್ವಕಪ್‌ ಕ್ರಿಕೆಟ್‌ ಟೂರ್ನಿಯಲ್ಲಿ ಭಾರತ ತಂಡವನ್ನು ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ. ವೈಯಕ್ತಿಕವಾಗಿಯೂ ಉತ್ತಮ ಪ್ರದರ್ಶನ ನೀಡುತ್ತಿರುವ ಶಾ ಮೂರು ಪಂದ್ಯಗಳಲ್ಲಿ ಎರಡು ಪಂದ್ಯಗಳಲ್ಲಿ ಬ್ಯಾಟ್‌ ಮಾಡಿದ್ದು, ಕ್ರಮವಾಗಿ 94 ಹಾಗೂ 57 ರನ್‌ ಬಾರಿಸಿ ತಂಡವನ್ನು ಗೆಲುವಿನ ದಡ ಸೇರಿಸಿದ್ದಾರೆ. 

ಭಾರತ ಕ್ರಿಕೆಟ್‌ನ ಗೋಡೆ ಖ್ಯಾತಿಯ ರಾಹುಲ್‌ ದ್ರಾವಿಡ್‌ ಗರಡಿಯಲ್ಲಿ ಬೆಳೆಯುತ್ತಿರುವ ಯುವ ಕ್ರಿಕೆಟಿಗ ಈಗಾಗಲೇ ಹಲವಾರು ದಾಖಲೆಗಳನ್ನು ತನ್ನದಾಗಿಸಿಕೊಂಡಿದ್ದಾನೆ. ರಣಜಿ ಟೂರ್ನಿಯಲ್ಲಿ 9 ಪಂದ್ಯಗಳನ್ನಾಡಿರುವ ಶಾ 5 ಶತಕ ಹಾಗೂ 3 ಅರ್ಧ ಶತಕಗಳೊಂದಿಗೆ ಒಟ್ಟು 961 ರನ್‌ ಗಳಿಸಿದ್ದಾರೆ. ಜತೆಗೆ ಪ್ರಥಮ ದರ್ಜೆಯ ಟೆಸ್ಟ್‌, ಏಕದಿನ ಹಾಗೂ ಟಿ20 ಮಾದರಿಗಳಲ್ಲಿಯೂ ಶತಕ ದಾಖಲಿಸಿದ್ದಾರೆ. ಜತೆಗೆ ದುಲೀಪ್‌ ಟ್ರೋಫಿಯಲ್ಲಿ ಇಂಡಿಯಾ ರೆಡ್‌ ಪರ ಶತಕ ದಾಖಲಿಸಿದ ಅತ್ಯಂತ ಕಿರಿಯ ಆಟಗಾರ ಎಂಬ ಶ್ರೇಯಕ್ಕೆ ಪಾತ್ರವಾಗಿದ್ದು, ಈ ಮೊದಲು ಈ ದಾಖಲೆಯನ್ನು ಸಚಿನ್‌ ಅವರ ಹೆಸರಿನಲ್ಲಿತ್ತು.    

ಒಟ್ಟಾರೆಯಾಗಿ ಶಾ ಎಲ್ಲ ಮಾದರಿಯ ಕ್ರಿಕೆಟ್‌ನಲ್ಲಿ ತನ್ನ ಪ್ರತಿಭೆ ಅನಾವರಣಗೊಳಿಸುತ್ತಿದ್ದು, ಹಿರಿಯ ಆಟಗಾರರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ. ಪೃಥ್ವಿ ಶಾ ಬ್ಯಾಟಿಂಗ್‌ ಶೈಲಿಯ ಮೇಲೆ ಸಚಿನ್‌ ಪ್ರಭಾವವಿದ್ದು, ವಿರಾಟ್‌ ಕೊಹ್ಲಿಯಂತೆ ವೇಗವಾಗಿ ರನ್‌ ಗಳಿಸುವ ಸಾಮರ್ಥಯವನ್ನು ಹೊಂದಿದ್ದಾರೆ ಎಂದು ಕೆಲ ಹಿರಿಯ ಆಟಗಾರರು ಭವಿಷ್ಯ ನುಡಿದಿದ್ದಾರೆ. 

546 ರನ್‌ ಚಚ್ಚಿದ ವೀರ
14 ವರ್ಷ ವಯಸ್ಸಿದ್ದಾಗಲೇ ಶಾ ತನ್ನ ಪ್ರತಿಭೆಯನ್ನು ವಿಶ್ವಕ್ಕೆ ಪರಿಚಯಿಸಿದ್ದರು. ಮುಂಬೈನ ಹ್ಯಾರೀಸ್‌ ಶೀಲ್ಡ್‌ ಶಾಲೆ ಟೂರ್ನಿಯಲ್ಲಿ 546 ರನ್‌ ಗಳಿಸಿ ಹೊಸ ವಿಶ್ವದಾಖಲೆ ಬರೆದಿದ್ದರು. ಈ ಸಾಧನೆ ಮಾಡಿದ ಅತ್ಯಂತ ಚಿಕ್ಕ ವಯಸ್ಸಿನ ಆಟಗಾರ ಎನಿಸಿಕೊಂಡಿದ್ದರು. ಇದೇ ಟೂರ್ನಿಯಲ್ಲಿ ಸಚಿನ್‌ ಅವರು 326 ರನ್‌ ಹೊಡೆದು ನಾಟೌಟ್‌ ಆಗಿ ಉಳಿದಿದ್ದರು. 

Advertisement

ಪಾದಾರ್ಪಣೆ ಪಂದ್ಯದಲ್ಲಿ ಶತಕ ದಾಖಲೆ
ರಣಜಿ ಟ್ರೋಫಿಯ ಪಾದರ್ಪಣೆಯ ಪಂದ್ಯದಲ್ಲಿಯೇ ಶತಕ ದಾಖಲಿಸಿದ ಸಾಧನೆಯನ್ನು ಪೃಥ್ವಿ ಶಾ ಹೊಂದಿದ್ದು, ಇದಕ್ಕೂ ಮೊದಲು ಬಾಬು ಭಾಯಿ ಪಟೇಲ್‌ ಅವರು ಮುಂಬೈ ಪರವಾಗಿ 1935   -36 ರಲ್ಲಿ ಸಾಧನೆ ಮಾಡಿದ್ದರು. ಆನಂತರದಲ್ಲಿ 1988-89ರಲ್ಲಿ ಸಚಿನ್‌ ಈ ಸಾಧನೆ ಮಾಡಿದ್ದರು.  ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) 11ನೇ ಆವೃತ್ತಿಯ ಆಟಗಾರರ ಹರಾಜು ಪ್ರಕ್ರಿಯೆಯಲ್ಲಿ ಪೃಥ್ವಿ ಶಾ ಕೊಂಡುಕೊಳ್ಳಲು ಫ್ರಾಂಚೈಸಿಗಳು ಮುಗಿಬಿದ್ದಿದ್ದಾರೆ. 

ವೆಂ.ಸುನೀಲ್‌ ಕುಮಾರ್‌

Advertisement

Udayavani is now on Telegram. Click here to join our channel and stay updated with the latest news.

Next