ಭಟ್ಕಳ: ಶಾಸಕ ಮಂಕಾಳ ವೈದ್ಯರು ತಾಲೂಕಿನ ತಲಗೋಡ, ಕರಿಕಲ್, ಬಂದರ, ಮಾವಿನಕುರ್ವೆ, ಜಾಲಿ ಕೋಡಿಗಳಲ್ಲಿ ಬಿರುಸಿನ ಪ್ರಚಾರ ನಡೆಸಿದರು.
ಬೆಳಗ್ಗೆಯಿಂದಲೇ ಕಾರ್ಯಕರ್ತರ ಭೇಟಿ, ಬೂತ್ ಮಟ್ಟದ ಕಾರ್ಯಕರ್ತರಿಗೆ ಮಾಹಿತಿ ನೀಡುವ ಕಾರ್ಯಕ್ರಮ ಹಮ್ಮಿಕೊಂಡಿದ್ದ ಅವರು ವಿವಿಧ ಭಾಗಗಳಲ್ಲಿ ಮುಖಂಡರು, ಪ್ರಮುಖರನ್ನು ಭೇಟಿ ಮಾಡಿ ಚುನಾವಣೆ ಕುರಿತು ಚರ್ಚಿಸಿದರು.
ವಸಂತ ಖಾರ್ವಿ ಮಾತನಾಡಿ, 2013ರ ಚುನಾವಣೆಯಲ್ಲಿ ಪಕ್ಷೇತರರಾಗಿ ನಿಂತು ಮಂಕಾಳ ವೈದ್ಯ ಬಹುಮತದಿಂದ ಆಯ್ಕೆಯಾಗಿದ್ದರೂ ಕ್ಷೇತ್ರದಲ್ಲಿ ಐದು ವರ್ಷ ಸಾಕಷ್ಟು ಕೆಲಸ ಮಾಡಿದ್ದಾರೆ. ಕೋಟ್ಯಂತರ ರೂ. ಕಾಮಗಾರಿಗಳನ್ನು ಮಾಡಿದ ಅವರು ಈ ಬಾರಿ ಮತ್ತೆ ಚುನಾವಣೆಗೆ ನಿಂತಿದ್ದಾರೆ. ಜನರು ಸಹಕರಿಸಬೇಕು ಎಂದರು
ಮಂಕಾಳ ವೈದ್ಯರು ಶಾಸಕರಾದ ನಂತರ ಭಟ್ಕಳದಲ್ಲಿ ನೂರಾರು ಗುಡಿ ಗೋಪುರಗಳಿಗೆ ಧನ ಸಹಾಯ ಮಾಡಿ ಜೀರ್ಣೋದ್ಧಾರಕ್ಕೆ ಶ್ರಮಿಸಿದ್ದಾರೆ. ಅವರ ನೆರವಿನಿಂದ ಅನೇಕ ಬಡ ರೋಗಿಗಳಿಗೆ ಮುಖ್ಯಮಂತ್ರಿ ಪರಿಹಾರ ನಿಧಿ ದೊರಕಿದೆ. ಕೋಟ್ಯಂತರ ರೂ. ಅಭಿವೃದ್ಧಿ ಕಾರ್ಯಗಳನ್ನು ಮಾಡಿದ ಅವರು, ಇನ್ನೊಮ್ಮೆ ಅತೀ ಹೆಚ್ಚು ಮತಗಳಿಂದ ಆರಿಸಿಬರುವಂತೆ ನೋಡಿಕೊಳ್ಳುವುದು ಎಲ್ಲರ ಕರ್ತವ್ಯ ಎಂದರು. ಬೂತ್ ಮಟ್ಟದ ಕಾರ್ಯಕರ್ತರು ಹೆಚ್ಚಿನ ಕೆಲಸ ಮಾಡುವಂತೆಯೂ ಅವರು ಕರೆ ನೀಡಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿಠಲ ನಾಯ್ಕ ಮಾತನಾಡಿ ಈ ಬಾರಿ ಭಟ್ಕಳ ವಿಧಾನಸಭಾ ಕ್ಷೇತ್ರದಲ್ಲಿ ಮಂಕಾಳ ವೈದ್ಯ ಅವರನ್ನು ಅತೀ ಹೆಚ್ಚಿನ ಮತಗಳಿಂದ ಗೆಲ್ಲಿಸಲು ಕಾರ್ಯಕರ್ತರು ಶ್ರಮಿಸಬೇಕು. ಬೂತ್ ಮಟ್ಟದಲ್ಲಿ ಯಾವ ರೀತಿಯಲ್ಲಿ ಕೆಲಸ ಮಾಡಬೇಕೆನ್ನುವುದು ಈಗಾಗಲೇ ತಿಳಿಸಿದ್ದು ಪ್ರತಿಯೊಬ್ಬರೂ ಅದೇ ರೀತಿಯಲ್ಲಿ ಕೆಲಸ ಮಾಡುವಂತೆ ಕರೆ ನೀಡಿದರು. ಜಿಪಂ ಅಧ್ಯಕ್ಷೆ ಜಯಶ್ರೀ ಮೊಗೇರ, ತಾಪಂ ಅಧ್ಯಕ್ಷ ಈಶ್ವರ ನಾಯ್ಕ, ಎಪಿಎಂಸಿ ಅಧ್ಯಕ್ಷ ಗೋಪಾಲ ನಾಯ್ಕ, ವೈಕುಂಠ ಖಾರ್ವಿ, ರಾಜೇಂದ್ರ ಖಾರ್ವಿ ಮುಂತಾದವರು ಉಪಸ್ಥಿತರಿದ್ದರು.