ಪಣಜಿ: ಉತ್ತರ ಕನ್ನಡದ ಯಲ್ಲಾಪುರದಿಂದ ಗೋಕರ್ಣಕ್ಕೆ ತೆರಳುತ್ತಿದ್ದ ಸಂದರ್ಭದಲ್ಲಿ ಕೇಂದ್ರ ಆಯುಷ್ ಮಂತ್ರಿ ಶ್ರೀಪಾದ ನಾಯ್ಕರವರ ಕಾರು ಅಪಘಾತಕ್ಕೀಡಾದ ಸಂದರ್ಭದಲ್ಲಿ ಗಂಭೀರ ಗಾಯಗೊಂಡು ಸಾವನ್ನಪ್ಪಿದ ಪತ್ನಿ ವಿಜಯಾ ನಾಯ್ಕರವರ ಪಾರ್ಥಿವ ಶರೀರವನ್ನು ಗುರುವಾರ ಸಂಜೆ ಅವರ ಮೂಲ ಊರಾದ ಪೊಂಡಾ ಸಮೀಪದ ಅಡಪೈಯಲ್ಲಿ ಅಂತ್ಯಸಂಸ್ಕಾರ ನೆರವೇರಿಸಲಾಯಿತು.
ಗುರುವಾರ ಬೆಳಿಗ್ಗೆ 8 ಗಂಟೆಯಿಂದ 9 ಗಂಟೆಯವರೆಗೆ ಶ್ರೀಪಾದ ನಾಯ್ಕರವರ ರಾಯಬಂದರ್ ಸಾಪೇಂದ್ರದಲ್ಲಿರುವ ನಿವಾಸದ ಬಳಿ ವಿಜಯಾ ನಾಯ್ಕ ರವರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಈ ಸಂದರ್ಭದಲ್ಲಿ ಭಾರಿ ಸಂಖ್ಯೆಯಲ್ಲಿ ಜನರು ಆಗಮಿಸಿ ಅಂತಿಮ ದರ್ಶನ ಪಡೆದುಕೊಂಡರು.
ನಂತರ ರಾಯಬಂದರ್ ನಿಂದ ವಿಶೇಷ ವಾಹನದ ಮೂಲಕ ವಿಜಯಾ ನಾಯ್ಕ ರವರ ಪಾರ್ಥಿವ ಶರೀರವನ್ನು ಪೊಂಡಾ ಸಮೀಪದ ಅಡಪೈಯಲ್ಲಿರುವ ಅವರ ಮೂಲ ಮನೆಗೆ ತೆಗೆದುಕೊಂಡು ಹೋಗಲಾಯಿತು. ಅಲ್ಲಿ ಸಂಜೆಯವರೆಗೂ ಸಾರ್ವಜನಿಕರಿಗೆ ಅಂತಿಮ ದರ್ಶನ ಪಡೆಯಲು ಅವಕಾಶ ಕಲ್ಪಿಸಲಾಯಿತು. ಅಲ್ಲಿಯೂ ಕೂಡ ಭಾರಿ ಸಂಖ್ಯೆಯಲ್ಲಿ ಜನರು ಆಗಮಿಸಿ ಅಂತಿಮ ದರ್ಶನ ಪಡೆದುಕೊಂಡರು. ನಂತರ ಹಿಂದೂ ಸಂಪ್ರದಾಯದಂತೆ ಅಂತ್ಯಸಂಸ್ಕಾರದ ವಿಧಿವಿಧಾನಗಳನ್ನು ಪೌರೋಹಿತರ ಮುಖೇನವಾಗಿ ನಡೆಸಲಾಯಿತು.
ಗುರುವಾರ ಸಂಜೆ ನಡೆದ ವಿಜಯಾ ನಾಯ್ಕ ರವರ ಅಂತ್ಯ ಸಂಸ್ಕಾರದ ಸಂದರ್ಭದಲ್ಲಿ ಮುಖ್ಯಮಂತ್ರಿ ಪ್ರಮೋದ್ ಸಾವಂತ್, ಬಿಜೆಪಿ ರಾಜ್ಯಾಧ್ಯಕ್ಷ ಸದಾನಂದ ತಾನಾವಡೆ, ಸೇರಿದಂತೆ ವಿವಿಧ ಪಕ್ಷದ ನಾಯಕರು ಪಾಲ್ಗೊಂಡು ಅಂತಿಮ ನಮನ ಸಲ್ಲಿಸಿದರು. ಈ ಸಂದರ್ಭದಲ್ಲಿ ಅಧಿಕ ಪೋಲಿಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು. ನಂತರ ನಡೆದ ಅಂತಿಮ ಯಾತ್ರೆಯಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ಜನರು ಪಾಲ್ಗೊಂಡಿದ್ದರು.