ಉಡುಪಿ: ಕೋವಿಡ್ ನಿಂದ ಮೃತಪಟ್ಟ ಇಬ್ಬರ ಅಂತ್ಯಸಂಸ್ಕಾರವನ್ನು ನಾಗರಿಕ ಸಮಿತಿಯ ನಿತ್ಯಾನಂದ ಒಳಕಾಡು ನಗರಸಭೆ ಪ್ರತಿನಿಧಿಗಳ ಸಮಕ್ಷಮದಲ್ಲಿ ಬೀಡಿನಗುಡ್ಡೆ ಹಿಂದು ರುದ್ರಭೂಮಿಯಲ್ಲಿ ಶನಿವಾರ ನಡೆಸಿದರು.
ಕಳೆದ ಮೇ.15 ರಂದು, ಕೋವಿಡ್ ಸೋಂಕಿನಿಂದ ಮೃತಪಟ್ಟಿರುವ ಎರಡು ಶವಗಳ ಅಂತ್ಯಸಂಸ್ಕಾರವನ್ನು ನಾಗರಿಕ ಸಮಿತಿ ನಡೆಸಿತ್ತು.
ಈ ವೇಳೆ ಸಮಾಜಸೇವಕ ಕೃಷ್ಣಮೂರ್ತಿ ಆಚಾರ್ಯ, ಅವರ ಮಿತ್ರ ಬಳಗದ ಚರಣ್ ರಾಜ್ ಬಂಗೇರ, ಸೌರಭ್ ಬಲ್ಲಾಳ್, ಸಜ್ಜನ್ ಶೆಟ್ಟಿ, ರಿಯಾನ್, ಗಣೇಶ್ ಶೇರಿಗಾರ್, ಯುವರಾಜ್ ಪುತ್ತೂರು, ಜಮೀರ್ ಭಾಗಿಯಾದ್ದರು. ಪ್ಲವರ್ ವಿಷ್ಣು ಉಡುಪಿ, ಚಿನ್ನ ಬೆಳ್ಳಿ ಕೆಲಸಗಾರರ ಸಂಘದ ಸದಸ್ಯರು, ಸಹಕರಿಸಿದರು.
ಕೆಲವು ದಿನಗಳ ಹಿಂದೆ ಉಡುಪಿ ಮೆಸ್ಕಾಂ ಕಛೇರಿ ಬಳಿಯ ಬಾಡಿಗೆ ಮನೆಯಲ್ಲಿ ಒಂಟಿಯಾಗಿ ವಾಸಿಸುತ್ತಿದ್ದ ಚಿನ್ನಾಭರಣ ಕೆಲಸಗಾರ ಅಸೌಖ್ಯದಿಂದ ಮನೆಯಲ್ಲಿ ಮೃತಪಟ್ಟಿದ್ದರು. ಹಾಗೂ ನಿಟ್ಟೂರು ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ವಲಸೆ ಕಾರ್ಮಿಕ ಅಸೌಖ್ಯದ ಕಾರಣದಿಂದ ಮನೆಯಲ್ಲಿ ಮೃತಪಟ್ಟಿದ್ದರು. ಎರಡು ಶವಗಳನ್ನು ನಾಗರಿಕ ಸಮಿತಿಯ ನಿತ್ಯಾನಂದ ಒಳಕಾಡು ಅವರು ಜಿಲ್ಲಾಸ್ಪತ್ರೆಗೆ ಸಾಗಿಸಿದ್ದರು.
ಶವಗಳ ಗಂಟಲು ದ್ರವ ಪರೀಕ್ಷೆಗೆ ಒಳಪಡಿಸಿದಾಗ, ಮೃತರಿಗೆ ಕೋವಿಡ್ ಸೋಂಕು ಇರುವುದು ದೃಢ ಪಟ್ಟಿತು. ಎರಡು ಶವಗಳನ್ನು ಸಂಬಂಧಿಕರ ಬರುವಿಕೆಗಾಗಿ ಜಿಲ್ಲಾಸ್ಪತ್ರೆಯ ಶವಗಾರದಲ್ಲಿ ರಕ್ಷಿಸಿ ಇಡಲಾಗಿತ್ತು. ಕುಟುಂಬಿಕರು ಅಂತ್ಯಸಂಸ್ಕಾರ ನಡೆಸಲು ಅಸಹಾಯಕತೆ ವ್ಯಕ್ತಪಡಿಸಿದಾಗ ನಾಗರಿಕ ಸಮಿತಿಯು ಅಂತ್ಯಸಂಸ್ಕಾರವನ್ನು ನೆಡೆಸಲು ನೆರವಾಯಿತು.
ನಾವು ಕೋವಿಡ್ ಸೋಂಕಿನಿಂದ ಮೃತ ಪಟ್ಟಿರುವ ನಾಲ್ಕು ಶವಗಳ ಅಂತ್ಯಸಂಸ್ಕಾರವನ್ನು, ಮೃತರ ಕುಟುಂಬಿಕರ ಅಸಹಾಯಕತೆಗೆ ಸ್ಪಂದಿಸಿ ಮಾನವಿಯತೆ ನೆಲೆಯಲ್ಲಿ ನಡೆಸಿದ್ದೇವೆ. ಪೊಲೀಸ್ ಇಲಾಖೆ, ನಗರಸಭೆ ಸಹಕರಿಸಿದೆ. ಮೃತ ನಾಲ್ವರು ಸೋಂಕಿನ ಲಕ್ಷಣಗಳಿದ್ದರೂ, ಯಾವೊಂದು ಚಿಕಿತ್ಸೆಗೆ ಒಳಗಾಗದೆ ಮನೆಯಲ್ಲಿ ದುರಂತ ಸಾವು ಕಂಡವರು. ಎದುರಾಗಿರುವ ತುರ್ತು ಸಂದರ್ಭದಲ್ಲಿ ಕೋವಿಡ್ ಸೋಂಕಿನ ಯಾವುದೇ ಲಕ್ಷಣಗಳು ಕಂಡುಬಂದಲ್ಲಿ ಸಮೀಪದ ಕೋವಿಡ್ ಆರೋಗ್ಯ ಕೇಂದ್ರಗಳಲ್ಲಿ ಪರೀಕ್ಷೆಗೆ ಒಳಗಾಬೇಕು. ಆರೋಗ್ಯ ಇಲಾಖೆ, ಜಿಲ್ಲಾಡಳಿತದ ಆದೇಶಗಳನ್ನು ತಪ್ಪದೆ ಪಾಲಿಸಬೇಕೆಂದು ನಾಗರಿಕ ಸಮಿತಿಯ ಸಂಚಾಲಕ ನಿತ್ಯಾನಂದ ಒಳಕಾಡು ಸಾರ್ವಜನಿಕರಲ್ಲಿ ವಿನಂತಿಸಿಕೊಂಡಿದ್ದಾರೆ.