ಕಮತಗಿ: ಬುಧವಾರ ನಿಧನರಾದ ಶ್ರೀ ಹುಚ್ಚೇಶ್ವರ ನಾಟ್ಯ ಸಂಘದ ಸ್ಥಾಪಕರು, ಪ್ರತಿಷ್ಠಿತ ಗುಬ್ಬಿವೀರಣ್ಣ ಹಾಗೂ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ರಂಗಕರ್ಮಿ ಬಿ.ಆರ್.ಅರಿಷಿಣಗೋಡಿ ಅಂತ್ಯಕ್ರಿಯೆ ಬುಧವಾರ ನಡೆಯಿತು. ಮಲಪ್ರಭಾ ನದಿಗೆ ಹೊಂದಿಕೊಂಡಿರುವ ಅವರ ತೋಟದಲ್ಲಿ ಬಿ.ಆರ್. ಅರಿಷಿಣಗೋಡಿ ಅವರ ಪಾರ್ಥಿವ ಶರೀರಕ್ಕೆ ಮಗ ಶಶಿಧರ ಅರಿಷಿಣಗೋಡಿ ಅವರು ಅಗ್ನಿಸ್ಪರ್ಶ ಮಾಡಿದರು. ರೆಡ್ಡಿ ಸಮಾಜದ ಸಂಪ್ರದಾಯದಂತೆ ಅಂತಿಮ ವಿಧಿ ವಿಧಾನಗಳನ್ನು ನೆರವೇರಿಸಿ ಅಂತ್ಯಕ್ರಿಯೆ ನಡೆಯಿತು.
ನಿವಾಸದಿಂದ ತೆರೆದ ವಾಹನದಲ್ಲಿ ಅರಿಷಿಣಗೋಡಿ ಅವರ ಪಾರ್ಥಿವ ಶರೀರವನ್ನು ಮೆರವಣಿಗೆ ಮಾಡಲಾಯಿತು. ಕಮತಗಿ ಶ್ರೀ ಹುಚ್ಚೇಶ್ವರ ಸ್ವಾಮೀಜಿ, ಹಿರೇಮಠದ ಶ್ರೀ ಶಿವುಕುಮಾರ ಸ್ವಾಮೀಜಿ, ಮಾಜಿ ಶಾಸಕ ಎಸ್.ಜಿ. ನಂಜಯ್ಯನಮಠ, ಪಪಂ ಅಧ್ಯಕ್ಷ ಎಂ.ಪಿ. ಅಂಗಡಿ, ನಗರಸಭೆ ಮಾಜಿ ಸದಸ್ಯ ರಂಗನಗೌಡ ದಂಡಣ್ಣವರ, ನಗರಯೋಜನಾ ಪ್ರಾಧಿಕಾರ ಮಾಜಿ ಅಧ್ಯಕ್ಷ ಎಸ್.ಕೆ. ಯಡಹಳ್ಳಿ ಸೇರಿದಂತೆ ಕನ್ನಡ ಸಾಹಿತ್ಯ ಪರಿಷತ್ತು, ಕರ್ನಾಟಕ ಜನಪದ ಪರಿಷತ್ತು, ಮೇಘಮೈತ್ರಿ ಕನ್ನಡ ಮತ್ತು ಸಾಹಿತ್ಯ ವೇದಿಕೆ ಪದಾಧಿಕಾರಿಗಳು ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದರು.
ನುಡಿನಮನ: ಹಿರಿಯ ರಂಗಕರ್ಮಿ ಬಿ.ಆರ್. ಅರಿಷಿಣಗೋಡಿ ಅವರಿಗೆ ನುಡಿ ನಮನ ಸಲ್ಲಿಸಲಾಯಿತು. ಶ್ರದ್ಧಾಂಜಲಿ ಸಭೆಯಲ್ಲಿ ಮಾಜಿ ಸಚಿವೆ, ಶ್ರಿುಚ್ಚೇಶ್ವರ ನಾಟ್ಯ ಸಂಘದ ಕಲಾವಿದೆ ಉಮಾಶ್ರೀ ಮಾತನಾಡಿ, ನಾಟಕಗಳಲ್ಲಿ ಅಭಿನಯಿಸುತ್ತಿದ್ದಾಗ ಸದಾ ಕಾಳಜಿ ವಹಿಸುತ್ತಿದ್ದರು. ನಾನು ಮನೆ ನಿರ್ಮಿಸುವಾಗ ನನಗೆ 50 ಸಾವಿರ ರೂ. ನೀಡಿದ್ದಾರೆ. ನಂತರ ಅವರ ನಾಟಕಗಳಲ್ಲಿ ಅಭಿನಯಿಸಿ ಹಣ ವಾಪಸ್ ಕೊಟ್ಟಿದ್ದೆ. ದುಶ್ಚಟಗಳನ್ನು ಹೊಂದಿರುವ ಕಲಾವಿದರ ಬಗ್ಗೆ ಅರಿಷಿಣಗೋಡಿ ಅವರು ಬೇಸರ ವ್ಯಕ್ತಪಡಿಸುತ್ತಿದ್ದರು. ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಕಲಾವಿದರಿಗೆ ವಿಶೇಷವಾದ ಸಲಹೆ, ಸಹಕಾರ ನೀಡುತ್ತಿದ್ದರು. ವೃತ್ತಿರಂಗಭೂಮಿ ಉಳಿವಿಗಾಗಿ ತಮ್ಮ ಬದುಕನ್ನು ಮೀಸಲಾಗಿಟ್ಟ ಮಹಾನ್ ರಂಗಕರ್ಮಿಯಾಗಿದ್ದಾರೆ ಎಂದು ಹೇಳಿದ್ದಾರೆ. ಕಲಾವಿದ, ಚಿತ್ರನಟ ರಾಜು ತಾಳಿಕೋಟಿ, ಕಮತಗಿ ಶ್ರೀ ಹುಚ್ಚೇಶ್ವರ ಸ್ವಾಮೀಜಿ, ಉಪ್ಪಿನಬೆಟಗೇರಿ ಮೂರುಸಾವಿರಮಠದ ವಿರೂಪಾಕ್ಷ ಸ್ವಾಮೀಜಿ, ಬಯಲಾಟ ಆಕಾಡೆಮಿ ಅಧ್ಯಕ್ಷ ಶ್ರೀರಾಮ ಇಟ್ಟಣ್ಣವರ, ಶೇಖಮಾಸ್ತರ, ಮಾಜಿ ಸದಸ್ಯ ಎಸ್.ಕೆ. ಕೊನೆಸಾಗರ, ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯ ಸಿದ್ದಲಿಂಗಪ್ಪ ಬೀಳಗಿ, ಎಸ್.ಎಂ.ಖೇಡಗಿ, ಅಣ್ಣಪ್ಪ ಕಟಗೇರಿ ಮಾತನಾಡಿದರು.
ಅಮೀನಗಡ ಶಂಕರರಾಜೇಂದ್ರ ಸ್ವಾಮೀಜಿ, ಮುನವಳ್ಳಿ ಮುರುಘರಾಜೇಂದ್ರ ಸ್ವಾಮೀಜಿ, ಗುಳೇದಗುಡ್ಡ ಕಾಶೀನಾಥ ಸ್ವಾಮೀಜಿ, ಶಿವುಕುಮಾರ ಶಿವಾಚಾರ್ಯ ಸ್ವಾಮೀಜಿ, ಬಸವಣ್ಣೆಮ್ಮ ತಾಯಿ ಬಸರಕೋಡ, ಕಲಾವಿದರಾದ ಮಾಲತಿಶ್ರೀ ಮೈಸೂರ, ಮಮತಾ ಗುಡೂರ, ಪ್ರೇಮಾ ಗುಳೇದಗುಡ್ಡ, ಮಹಾಂತೇಶ ಗಜೇಂದ್ರಗಡ, ಚಿತ್ತರಗಿ ವಿಜಯಮಹಾಂತೇಶ್ವರ ನಾಟ್ಯ ಸಂಘದ ಮಾಲೀಕ ಬಸವರಾಜ ಚಿತ್ತರಗಿ, ಬಸವೇಶ್ವರ ವೀರಶೈವ ವಿದ್ಯಾವರ್ಧಕ ಗೌರವ ಕಾರ್ಯದರ್ಶಿ ಮಹೇಶ ಅಥಣಿ, ಮಾಜಿ ಶಾಸಕರಾದ ರಾಜಶೇಖರ ಶೀಲವಂತ, ಎಸ್.ಜಿ.ನಂಜಯ್ಯನಮಠ, ಬಸವಂತಪ್ಪ ಮೇಟಿ, ಜಿಪಂ ಸದಸ್ಯೆ ಬಾಯಕ್ಕ ಮೇಟಿ, ಬಿ.ಸಿ.ಅಂಟರತಾನಿ, ಕೆಎಂಎಫ್ ಅಧ್ಯಕ್ಷ ಸಂಗಣ್ಣ ಹಂಡಿ, ರವೀಂದ್ರ ಕಲಬುರ್ಗಿ, ಡಾ| ದೇವರಾಜ ಪಾಟೀಲ ಅಂತಿಮ ದರ್ಶನ ಪಡೆದರು.