ನವ ದೆಹಲಿ: ಮೃತಪಟ್ಟ ಹಿಂದೂ ಪುರುಷನಿಗೆ ಮುಸ್ಲಿಂ ಸಂಪ್ರದಾಯದಲ್ಲಿ ಅಂತ್ಯ ಸಂಸ್ಕಾರ ನಡೆಸಿದ ವಿಲಕ್ಷಣ ಘಟನೆ ಸೌದಿ ಅರೇಬಿಯಾದಲ್ಲಿ ನಡೆದಿದ್ದು, “ಅಲ್ಲಿನ ಭಾರತೀಯ ದೂತವಾಸದ ಪ್ರಮಾದದಿಂದಲೇ ಈ ಅಚಾತುರ್ಯ ಸಂಭವಿಸಿದೆ’ ಎಂದು ಆರೋಪಿಸಿ ಪತ್ನಿ ದೆಹಲಿ ಹೈಕೋರ್ಟ್‌ನ ಮೆಟ್ಟಿಲೇರಿದ್ದಾರೆ.
ಸೌದಿ ಅರೇಬಿಯಾದಲ್ಲಿ ನೆಲೆಸಿದ್ದ ಸಂಜೀವ್ ಕುಮಾರ್ ಎಂಬವರು ಜ.24ರಂದು ಹೃದಯಾಘಾತದಿಂದ ಮೃತರಾಗಿದ್ದರು. ಇವರ ಮೃತ ದೇಹವನ್ನು ಭಾರತಕ್ಕೆ ಕಳುಹಿಸಿಕೊಡುವಂತೆ ಪತ್ನಿ, ಜೆಡ್ಡಾದ ದೂತವಾಸಕ್ಕೆ ಮನವಿ ಮಾಡಿದ್ದರು. ಆದರೆ, ಭಾರತದಲ್ಲಿದ್ದ ಪತ್ನಿಗೆ ಫೆ.18ರಂದು “ನಿಮ್ಮ ಪತಿಯ ಮೃತ ದೇಹವನ್ನು ಮುಸ್ಲಿಂ ವಿಧಿವಿಧಾನಗಳೊಂದಿಗೆ ದಫನ್ ಮಾಡಲಾಗಿದೆ’ ಎಂಬ ಆಘಾತಕಾರಿ ಸುದ್ದಿ ಅಪ್ಪಳಿಸಿತ್ತು.
ತಪ್ಪು ಮಾಹಿತಿ: ಮರಣ ಪ್ರಮಾಣ ಪತ್ರದಲ್ಲಿ ಹಿಂದೂ ಬದಲಾಗಿ ಮುಸ್ಲಿಂ ಎಂದು ನಮೂದಿಸಿ, ದೂತವಾಸ ಅಧಿಕಾರಿಗಳು ತಪ್ಪೆಸಗಿದ್ದೇ ಇದಕ್ಕೆ ಕಾರಣವಾಗಿತ್ತು. “ಕನಿಷ್ಠ ಪಕ್ಷ ಹೂಳಿರುವ ಮೃತದೇಹವನ್ನಾದರೂ ಹೊರತೆಗೆದು ಭಾರತಕ್ಕೆ ಮರಳಿಸಿ’ ಎಂದು ಪತ್ನಿ ಕೋರಿಕೆಗೆ ದೂತವಾಸ ನಿರ್ಲಕ್ಷ್ಯ ತೋರಿತ್ತು.
ಇದನ್ನೂ ಓದಿ :‘ನಮ್ಮ ವಿಷಯದಿಂದ ದೂರವಿದ್ದರೆ ಒಳಿತು’ : ಬೈಡನ್‌ಗೆ ಉತ್ತರ ಕೊರಿಯಾ ಎಚ್ಚರಿಕೆ
ಜಡ್ಜ್ ಖಂಡನೆ: ಈ ಸಂಬಂಧ ಪತ್ನಿ ಕೋರ್ಟ್ ಮೆಟ್ಟಿಲೇರಿದ್ದರು. ದೂತವಾಸದ ವರ್ತನೆಯನ್ನು ನ್ಯಾಯಾಧೀಶರು ಖಂಡಿಸಿದ್ದು, ಪಾರ್ಥೀವ ಶರೀರ ಮರಳಿಸಲು ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ವಿದೇಶಾಂಗ ಇಲಾಖೆಗೆ ಸೂಚಿಸಿದೆ. ಅಲ್ಲದೆ, ಮರಣ ಪ್ರಮಾಣ ಪತ್ರದಲ್ಲಿ “ಹಿಂದೂ ಧರ್ಮ’ ಎಂದು ಉಲ್ಲೇಖೀಸಲೂ ಆದೇಶಿಸಿದೆ.