Advertisement

ಕೊಡಗಿಗೆ ಕೊಡುಗೆ ನೀಡಲು ನಿಧಿ ಸಂಗ್ರಹ

12:14 PM Sep 03, 2018 | |

ಬೆಂಗಳೂರು: ಆದಿಚುಂಚನಗಿರಿ ಮಹಾಸಂಸ್ಥಾನದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ನೇತೃತ್ವದಲ್ಲಿ ಭಾನುವಾರ ವಿಜಯನಗರದಲ್ಲಿ “ಕೊಡಗಿಗೆ ನಮ್ಮ ಕೊಡುಗೆ’ ಪರಿಹಾರ ನಿಧಿ ಸಂಗ್ರಹಕ್ಕಾಗಿ ಪಾದಯಾತ್ರೆ ನಡೆಯಿತು. ಪಾದಯಾತ್ರೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನ ಭಾಗವಹಿಸಿ ದೇಣಿಗೆ ನೀಡಿದರು.

Advertisement

ವಿಜಯನಗರದ ಆದಿಚುಂಚನಗಿರಿ ಮಹಾಸಂಸ್ಥಾನ ಶಾಖಾ ಮಠದಿಂದ ಆರಂಭವಾದ ಪಾದಯಾತ್ರೆ ಮಾಗಡಿ ರಸ್ತೆ, ಅಗ್ರಹಾರ ದಾಸರಹಳ್ಳಿ ಮೂಲಕ ಮಾರುತಿ ಮಂದಿರದ ಬಳಿ ಮುಕ್ತಾಯವಾಯಿತು.ಸುಮಾರು ನಾಲ್ಕು ಕಿ.ಮೀ.ವರೆಗೆ ನಡೆದ ಪಾದಯಾತ್ರೆಯಲ್ಲಿ ಸಿಖ್‌, ಬೌದ್ಧ, ಮೌಲ್ವಿಗಳು ಸಹ ಭಾಗವಹಿಸಿದ್ದರು. ಒಟ್ಟಾರೆ ನಾಲ್ಕು ಸಾವಿರಕ್ಕೂ ಅಧಿಕ ಜನ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು.

ನಂತರ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ನಿರ್ಮಲಾನಂದನಾಥ ಸ್ವಾಮೀಜಿ, ಅತಿವೃಷ್ಟಿಯಿಂದ ಕೊಡಗಿಗೆ ಸಾಕಷ್ಟು ಹಾನಿಯಾಗಿದ್ದು, ಪ್ರವಾಹದಿಂದ ತತ್ತರಿಸಿರುವ ಕೊಡಗಿನ ಜನರ ನೋವಿಗೆ ನಾವೆಲ್ಲಾ ಸ್ಪಂದಿಸಬೇಕಿದೆ. ನಮ್ಮ ಕೊಡಗನ್ನು ಪುನರ್‌ ನಿರ್ಮಿಸುವ ಕಾರ್ಯವಾಗಬೇಕಿದೆ.

ಈ ಪುನರ್‌ ನಿರ್ಮಾಣ ಕಾರ್ಯಕ್ಕೆ ರಾಜ್ಯದ ಎಲ್ಲಾ ಮಠಗಳು ಕೈಜೋಡಿಸಬೇಕು. ಯೋಜನೆ, ಅಭಿವೃದ್ಧಿಗಳ ಹೆಸರಿನಲ್ಲಿ ಪ್ರಕೃತಿಯ ನಾಶಕ್ಕೆ ನಾವು ಮುಂದಾದರೆ ವಿಕೋಪಕ್ಕೆ ಕಾರಣರಾಗುತ್ತೇವೆ. ಅದಕ್ಕೆ ಕೊಡಗಿನಲ್ಲಿದ್ದಾದ ಪ್ರಕೃತಿ ವಿಕೋಪವೇ ಉದಾಹರಣೆ. ಹಾಗಾಗಿ ಈಗಲೇ ಎಲ್ಲರೂ ಎಚ್ಚೆತ್ತುಕೊಳ್ಳಬೇಕಿದೆ ಎಂದರು.

ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಮಾತನಾಡಿ, ಕೊಡಗಿನ ನೆರೆಸಂತ್ರಸ್ತರು ಸಂಕಷ್ಟದಲ್ಲಿದ್ದು, ಅವರಿಗೆ ನಾವು ನೆರವು ನೀಡುವ ಮೂಲಕ ಧೈರ್ಯ ತುಂಬಬೇಕಿದೆ. ಈಗಾಗಲೇ ಸರ್ಕಾರದಿಂದ ಸಾಕಷ್ಟು ಸೌಲಭ್ಯ ನೀಡಲಾಗುತ್ತಿದೆ. ನಾಡಿನ ಜನತೆಯೂ ನಿರಂತರವಾಗಿ ಸ್ಪಂದಿಸುತ್ತಿದ್ದಾರೆ. ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ವಿಶೇಷ ಕಾಳಜಿ ವಹಿಸಿ ಕೊಡಗಿನ ಗತ ವೈಭವದ ಮರು ನಿರ್ಮಾಣಕ್ಕೆ ಶ್ರಮಿಸುತ್ತಿದ್ದಾರೆ ಎಂದು ಹೇಳಿದರು.

Advertisement

ವಿಜಯನಗರ ಶಾಸಕ ಎಂ. ಕೃಷ್ಣಪ್ಪ ಮಾತನಾಡಿ, ವೀರ- ಶೂರರ ನಾಡಾಗಿದ್ದ ಕೊಡಗು ಪ್ರಸ್ತುತ ವಿಪತ್ತು ಪರಿಸ್ಥಿತಿಯನ್ನು ಎದುರಿಸುತ್ತಿದೆ. ಅಲ್ಲಿನ ಜನ ನಿರಾಶ್ರಿತರಂತೆ ಬದುಕುತ್ತಿದ್ದಾರೆ. ಬೆಂಗಳೂರಿಗೆ ಕುಡಿಯಲು ಹರಿಸುವ ಕಾವೇರಿ ಹುಟ್ಟುವ ಕೊಡಗಿಗೆ ಎಲ್ಲರೂ ತಮ್ಮ ಕೈಲಾದಷ್ಟು ನೆರವು ನೀಡಬೇಕು. ಕೊಡಗು ಮರು ನಿರ್ಮಾಣಕ್ಕೆ ನಾವೆಲ್ಲ ಕೈಜೋಡಿಸಬೇಕು ಎಂದು ಕರೆ ನೀಡಿದರು.

ಕೂಡಲ ಸಂಗಮದ ಪಂಚಮಸಾಲಿ ಪೀಠದ ಜಯ ಮೃತ್ಯುಂಜಯ ಸ್ವಾಮೀಜಿ ಮಾತನಾಡಿ, ನಿರ್ಮಲಾನಂದನಾಥ ಸ್ವಾಮೀಜಿಯವರು ನಡೆಸುತ್ತಿರುವ ಪಾದಯಾತ್ರೆಗೆ ರಾಜ್ಯದ ಎಲ್ಲಾ ಮಠಗಳ ಬೆಂಬಲವಿದೆ. ರಾಜ್ಯದಲ್ಲಿರುವ ಎಲ್ಲಾ ಮಠಾಧೀಶರೊಂದಿಗೆ ಚರ್ಚಿಸಿ ಕೊಡಗಿನ ಮರು ನಿರ್ಮಾಣಕ್ಕೆ ನಮ್ಮಿಂದಾದ ಕಾಣಿಕೆ ನೀಡುತ್ತೇವೆ.

ಈಗಾಗಲೇ ಭಕ್ತರ ಬಳಿ ದೇಣಿಗೆ ಸಂಗ್ರಹಿಸಲಾಗುತ್ತಿದೆ ಎಂದು ಹೇಳಿದರು. ಶಾಸಕರಾದ ವಿ.ಸೋಮಣ್ಣ, ಸೌಮ್ಯಾರೆಡ್ಡಿ, ಮಾಜಿ ಶಾಸಕ ಎಚ್‌.ಎಂ. ವಿಶ್ವನಾಥ್‌, ಪಾಲಿಕೆ ಸದಸ್ಯೆ ಸೌಮ್ಯ ಶಿವಕುಮಾರ್‌, ಉಮೇಶ್‌ ಶೆಟ್ಟಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಹಲವು ನಾಯಕರಿಂದ ದೇಣಿಗೆ: ಪಾದಯಾತ್ರೆ ವೇಳೆ “ನಮ್ಮವರ ತಂಡ’ ಎಂಬ ಸಂಘಟನೆ ಬರೋಬ್ಬರಿ 1 ಕೋಟಿ ರೂ. ದೇಣಿಗೆ ನೀಡಿತು. ಶಾಸಕ ವಿ.ಸೋಮಣ್ಣ 20 ಲಕ್ಷ ರೂ., ವಿಜಯನಗರ ಶಾಸಕ ಎಂ. ಕೃಷ್ಣಪ್ಪ 25 ಲಕ್ಷ ರೂ., ಸಾರಿಗೆ ಸಚಿವ ಡಿ.ಸಿ. ತಮ್ಮಣ್ಣ 1 ಲಕ್ಷ ರೂ., ಶಾಸಕ ಕೆ. ಗೋಪಾಲಯ್ಯ 2 ಲಕ್ಷ ರೂ., ಕೆಪಿಸಿಸಿ ಕಾರ್ಯದರ್ಶಿ ಶ್ರೀನಾಥ್‌ 1 ಲಕ್ಷ ರೂ., ಪಾಲಿಕೆ ಸದಸ್ಯೆ ಸೌಮ್ಯ ಶಿವಕುಮಾರ್‌ 1 ಲಕ್ಷ ರೂ. ದೇಣಿಗೆ ನೀಡಿದರು. ಶನೈಶ್ವರ ದೇವಸ್ಥಾನ ಟ್ರಸ್ಟ್‌ 2 ಲಕ್ಷ ರೂ., ಭುವನೇಶ್ವರಿ ಒಕ್ಕಲಿಗರ ಸಂಘ 50 ಸಾವಿರ ರೂ., ಚಿಕ್ಕಬಳ್ಳಾಪುರದ ಒಕ್ಕಲಿಗರ ಸಂಘ 1 ಲಕ್ಷ ರೂ., ಜಯ ಮಾರುತಿ ಸಂಘ 50 ಸಾವಿರ ರೂ. ದೇಣಿಗೆ ನೀಡಿತು.

Advertisement

Udayavani is now on Telegram. Click here to join our channel and stay updated with the latest news.

Next