ಹೊಸದಿಲ್ಲಿ: ನೋಟುಗಳ ಅಪಮೌಲ್ಯ ಬಳಿಕದ ಎರಡು ತಿಂಗಳ ಅವಧಿಯಲ್ಲಿ ರಾಜಕೀಯ ಪಕ್ಷಗಳು ಠೇವಣಿಯಿಟ್ಟ ಹಳೆಯ ನೋಟುಗಳ ಮೊತ್ತ ಎಷ್ಟು ಗೊತ್ತಾ ?
ಬರೋಬ್ಬರಿ 167 ಕೋಟಿ ರೂ.! ಆದಾಯ ತೆರಿಗೆ ಇಲಾಖೆ ಮತ್ತು ಹಣಕಾಸು ಗುಪ್ತಚರ ಘಟಕ ನಡೆಸಿದ ದತ್ತಾಂಶ ವಿಶ್ಲೇಷಣೆ ಯಿಂದ ಈ ವಿಚಾರ ಬಹಿರಂಗವಾಗಿದೆ.
ದೇಶದ ಪ್ರಮುಖ 15 ಪಕ್ಷ ಗಳು ನವೆಂಬರ್-ಡಿಸೆಂಬರ್ ತಿಂಗಳಲ್ಲಿ ಒಟ್ಟು 167 ಕೋಟಿ ರೂ.ಗಳನ್ನು ಬ್ಯಾಂಕ್‌ಗಳಲ್ಲಿ ಠೇವಣಿ ಇಟ್ಟಿವೆ ಎಂದು ಈ ವರದಿ ತಿಳಿಸಿದೆ. ಈ ಪೈಕಿ ಅತ್ಯ ಧಿಕ ಮೊತ್ತ ಅಂದರೆ 104 ಕೋಟಿ ರೂ.ಗಳನ್ನು ಠೇವಣಿಯಿಟ್ಟಿದ್ದು ಉತ್ತರ ಪ್ರದೇಶದ ಮಾಜಿ ಸಿಎಂ ಮಾಯಾವತಿ ನೇತೃತ್ವದ ಬಿಎಸ್‌ಪಿ. ಉಳಿದ 14 ಪಕ್ಷಗಳ ಠೇವಣಿ 63 ಕೋಟಿ ರೂ. ಇದರಲ್ಲಿ ಬಿಜೆಪಿ 4.75 ಕೋಟಿ ರೂ. ಹಾಗೂ ಕಾಂಗ್ರೆಸ್ 3.2 ಕೋಟಿ ರೂ.ಗಳನ್ನು ದೇಶದ ವಿವಿಧ ಭಾಗಗಳಲ್ಲಿ ಠೇವಣಿ ಇಟ್ಟಿವೆ ಎಂಬ ವಿಚಾರವನ್ನೂ ವರದಿ ತಿಳಿಸಿದೆ. ಉಳಿದ ಸಣ್ಣಪುಟ್ಟ ಪಕ್ಷಗಳ ಠೇವಣಿಯು 80 ಲಕ್ಷದಿಂದ 3 ಕೋಟಿ ರೂ.ವರೆಗಿದೆ.
ಕೆಲವೇ ಪಕ್ಷಗಳ ಆಯ್ಕೆ: ದೇಶದಾದ್ಯಂತ 250ರಷ್ಟು ರಾಜಕೀಯ ಪಕ್ಷಗಳ ನೋಂದಣಿ ಯಾಗಿವೆ. ಈ ಪೈಕಿ ಬಹುತೇಕ ಪಕ್ಷಗಳು ಕಾಗದಕ್ಕಷ್ಟೇ ಸೀಮಿತ. ಇವುಗಳ ಕುರಿತ ಮಾಹಿತಿ ಯನ್ನು ಮುಂದಿನ ಹಂತದಲ್ಲಿ ಪ್ರತ್ಯೇಕವಾಗಿ ಸಂಗ್ರಹಿಸಲಾಗುತ್ತದೆ ಎಂದು ಹೆಸರು ಹೇಳಲಿ ಚ್ಛಿಸದ ಅಧಿಕಾರಿಗಳು ತಿಳಿಸಿದ್ದಾರೆ. ಈಗ ಬಹಿರಂಗವಾಗಿರುವ ವರದಿಯಲ್ಲಿ ಎಲ್ಲ 6 ರಾಷ್ಟ್ರೀಯ ಪಕ್ಷಗಳು ಹಾಗೂ ವಿವಿಧ ರಾಜ್ಯಗಳಲ್ಲಿ ಅಧಿಕಾರದಲ್ಲಿರುವ 9 ಪ್ರಾದೇಶಿಕ ಪಕ್ಷಗಳ ಠೇವಣಿ ಮಾಹಿತಿಯನ್ನಷ್ಟೇ ಪಡೆಯಲಾಗಿದೆ. ಅದರಲ್ಲೂ ಡಿಎಂಕೆ, ಶಿವಸೇನೆ, ಆರ್‌ಜೆಡಿಯಂಥ ಪಕ್ಷಗಳ ಮಾಹಿತಿಯನ್ನು ಸಂಗ್ರಹಿಸಿಲ್ಲ ಎಂದೂ ಅಧಿಕಾರಿಗಳು ಹೇಳಿದ್ದಾರೆ.