ಬೆಂಗಳೂರು: ಕೆಲವು ಖಾಸಗಿ ಸಂಸ್ಥೆಗಳಿಂದಾಗಿ ಶಿಕ್ಷಣ, ವ್ಯಾಪಾರದ ಸರಕಾಗಿದ್ದು, ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳ ಅಗತ್ಯಕ್ಕೆ ತಕ್ಕಂತೆ ಸೌಲಭ್ಯ ಕಲ್ಪಿಸುತ್ತಿಲ್ಲ ಎಂದು ಆರೋಗ್ಯ ಸಚಿವ ರಮೇಶ್ ಕುಮಾರ್ ಹೇಳಿದರು.
ಯಲಹಂಕದ ರೇವಾ ವಿಶ್ವವಿದ್ಯಾಲಯದ ಅತಿಥಿ ಗೃಹ ಹಾಗೂ ಆರೋಗ್ಯ ಕೇಂದ್ರವನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದ ಅವರು, ಇತ್ತೀಚಿನ ವರ್ಷಗಳಲ್ಲಿ ಎಲ್ಲೆಂದರಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳು ಹುಟ್ಟಿಕೊಳ್ಳುತ್ತಿವೆ. ಆದರೆ, ಬಹುತೇಕ ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ಅರ್ಧದಷ್ಟು ಸೀಟು ಕೂಡ ಭರ್ತಿಯಾಗುವುದಿಲ್ಲ. ವಿದ್ಯಾರ್ಥಿಗಳ ವೃತ್ತಿ ಬದುಕಿಗೆ ಬೇಕಾದ ಯಾವ ಕೌಶಲ್ಯವನ್ನೂ ಸಂಸ್ಥೆಗಳು ಕಲಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಪಾಲಕರು ಕಷ್ಟಪಟ್ಟು ಲಕ್ಷಾಂತರ ರೂಪಾಯಿ ಕೂಡಿಟ್ಟು ಮಕ್ಕಳಿಗೆ ವಿದ್ಯಾಭ್ಯಾಸ ನೀಡುತ್ತಿದ್ದಾರೆ. ಕೆಲವೊಂದು ಸಂಸ್ಥೆಗಳು ಅದನ್ನೇ ಬಂಡವಾಳ ಮಾಡಿಕೊಳ್ಳುತ್ತಿವೆ. ಪದವಿ, ಸ್ನಾತಕೋತ್ತರ ಪದವಿ ಪಡೆದು ವೃತ್ತಿರಂಗ ಪ್ರವೇಶಿಸುವ ಅಭ್ಯರ್ಥಿಗಳ ಅಂಕ ಚೆನ್ನಾಗಿರುತ್ತದೆ. ಆದರೆ, ಸಂದರ್ಶನ ಎದುರಿಸುವುದು ಹೇಗೆ ಎಂಬುದು ತಿಳಿದಿರುವುದಿಲ್ಲ ಎಂದರು.
ರಾಜಕೀಯ, ಕ್ರೀಡೆ ಅಥವಾ ಸಾಮಾಜಿಕ, ಆರ್ಥಿಕ ವಿಚಾರವಾಗಿ ನಮ್ಮ ದೇಶ ಉನ್ನತ ಸ್ಥಾನದಲ್ಲಿ ಇಲ್ಲದೇ ಇರಬಹುದು. ಆದರೆ, ಭಾರತದ ಸಂಸ್ಕೃತಿ ಮತ್ತು ಸಂಪ್ರದಾಯ ನಾವೆಲ್ಲರೂ ಹೆಮ್ಮಪಡುವಂತಿದೆ. ಅದನ್ನು ಉಳಿಸಿ, ಬೆಳೆಸಬೇಕು. ವಿದ್ಯಾರ್ಥಿಗಳನ್ನು ಕ್ರಿಯಾಶೀಲಗೊಳಿಸುವುದು ಒಂದು ವೈಜ್ಞಾನಿಕ ಪ್ರಕ್ರಿಯೆ, ಅದನ್ನು ಶಿಕ್ಷಣ ಸಂಸ್ಥೆಗಳು ಅರ್ಥಮಾಡಿಕೊಳ್ಳಬೇಕು ಎಂದು ಹೇಳಿದರು.
ರೇವಾ ವಿವಿಯ ಕುಲಾಧಿಪತಿ ಡಾ.ಪಿ.ಶ್ಯಾಮರಾಜು, ಅಧಿಕಾರಿಗಳಾದ ಡಾ.ವಿ.ಜಿ.ತಳವಾರ, ಡಾ.ಎಸ್.ಎಸ್. ಮಾನ್ವಿ, ಡಾ. ಧನಂಜಯ, ಡಾ.ಕೆ.ಕುಲಕರ್ಣಿ, ಪ್ರೊ.ಜಿ.ಬೀನಾ, ಪ್ರೊ.ಸುಭಾ ಮೊದಲಾದವರು ಉಪಸ್ಥಿತರಿದ್ದರು.