ಧಾರವಾಡ: ಸುಭದ್ರವಾದ ಕಾಂಪೌಂಡ್ ಇಲ್ಲದ ಕಾರಣ ಅನೈತಿಕ ಚಟುವಟಿಕೆಗಳಿಗೆ ಇದುವೇ ತಾಣ. ಅಲ್ಲಲ್ಲಿ ಶುಚಿತ್ವದ ಕೊರತೆ. ಪೋಕರಿಗಳ ಅಡ್ಡೆಯಾಗಿರುವ ಇಲ್ಲಿ ರಾತ್ರಿ ಹೊತ್ತು ಎಣ್ಣೆ ಪಾರ್ಟಿ ಗದ್ದಲ. ಹೀಗಾಗಿ ಪ್ರತಿನಿತ್ಯ ಬೆಳಗ್ಗೆ ವಾಯುವಿಹಾರಿಗಳ ಕಣ್ಣಿಗೆ ಮದ್ಯದ ಬಾಟಲಿಗಳು ರಾರಾಜಿಸುತ್ತಿವೆ.
ಇದು ಮುರುಘಾ ಮಠದ ಶಿವಯೋಗಿ ಮಹಾಂತಪ್ಪಗಳ ಹೆಸರಿನಲ್ಲಿರುವ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಶ್ರೀ ಮಹಾಂತ ಸ್ವಾಮಿಗಳ ಮಾರುಕಟ್ಟೆ ಪ್ರಾಂಗಣದ ದುಸ್ಥಿತಿ. ಶಿವಾಜಿ ವೃತ್ತದ ಹಳೇ ಎಪಿಎಂಸಿಯಿಂದ ಹೊಸ ಎಪಿಎಂಸಿಗೆ ಸ್ಥಳಾಂತರ ಆಗಿ ಐದು ವರ್ಷಗಳೇ ಸಂದಿವೆ. ಮುರುಘಾ ಮಠದ ಹಿಂಬದಿಯೇ ಹೊಸದಾಗಿ ಸುಸಜ್ಜಿತವಾಗಿ ರೂಪಗೊಂಡ ಮಾರುಕಟ್ಟೆಗೆ ಮಹಾಂತ ಸ್ವಾಮಿಗಳ ಹೆಸರನ್ನೂ ಇಡಲಾಗಿದ್ದು, ಇಂತಹ ಪುಣ್ಯಪುರುಷರ ಹೆಸರಿನ ಈ ಪ್ರಾಂಗಣ ಅನೈತಿಕ ಚಟುವಟಿಕೆಗಳ ತಾಣವಾಗಿ ಬದಲಾಗುತ್ತಿರುವುದು ಈ ಭಾಗದ ಜನರಿಗೂ ನೋವುಂಟು ಮಾಡಿದೆ.
ಸ್ವಾಗತ ಕೋರುವ ಮದ್ಯದ ಬಾಟಲಿಗಳು: ಎಪಿಎಂಸಿ ಪ್ರಾಂಗಣದಲ್ಲಿ ದಿನನಿತ್ಯ ಬೆಳಗ್ಗೆ ಹಿರಿಯ ಜೀವಗಳು ವಾಯುವಿಹಾರ ಮಾಡುತ್ತಾರೆ. ಆದರೆ ಅವರನ್ನು ಇಲ್ಲಿ ಸ್ವಾಗತಿಸುವುದು ಬಳಕೆ ಮಾಡಿ ಬಿಸಾಕಿದ ನಿರೋಧ, ಮದ್ಯದ ಬಾಟಲಿಗಳು! ರಾತ್ರಿ ಹೊತ್ತು ಪೋಕರಿಗೆ ಅಡ್ಡೆಯಾಗಿರುವ ಇಲ್ಲಿ ತಡರಾತ್ರಿವರೆಗೂ ಗದ್ದಲ, ಪಾರ್ಟಿ ಯಾವುದೇ ವಿಘ್ನಗಳಿಲ್ಲದೇ ಸಾಗುತ್ತದೆ. ಪ್ರಾಂಗಣದ ಭದ್ರತಾ ಸಿಬ್ಬಂದಿಯೂ ಅವರೊಂದಿಗೆ ಕೈ ಜೋಡಿಸಿದ್ದಾರೆಂಬ ಆರೋಪಗಳು ಇವೆ. ಕಳೆದ ಒಂದು ವರ್ಷದಲ್ಲಿ 2-3 ಶವಗಳು ಪ್ರಾಂಗಣದಲ್ಲಿಯೇ ಪತ್ತೆಯಾಗಿದ್ದು, ಇವೆಲ್ಲ ಕೊಲೆ ಎಂಬ ಆರೋಪವೂ ಕೇಳಿಬಂದಿದೆ.
ಸುಭದ್ರ ಕಾಂಪೌಂಡ್ ಇಲ್ಲ: ಸುಮಾರು 32 ಎಕರೆ ವ್ಯಾಪ್ತಿಯಲ್ಲಿರುವ ಮಾರುಕಟ್ಟೆಗೆ ಸುಭದ್ರವಾದ ಕಾಂಪೌಂಡ್ ಇಲ್ಲ. ಪ್ರಾಂಗಣದ ಮುಖ್ಯದ್ವಾರದ ಬಳಿಯ ಗೋಡೆ ಹೊರತುಪಡಿಸಿ ಉಳಿದ ಗೋಡೆಗಳನ್ನು ಸಂಚಾರದ ನೆಪದಲ್ಲಿ ಒಡೆಯಲಾಗಿದೆ. ಇನ್ನೂ ಕಮಲಾಪುರದತ್ತ ಪ್ರಾಂಗಣಕ್ಕೆ ಗೋಡೆಗಳೇ ಇಲ್ಲ. ಅಲ್ಲಿಯೇ ದೊಡ್ಡ ದೊಡ್ಡ ಕಾಳು ದಾಸ್ತಾನು ಘಟಕಗಳಿದ್ದು, ಇದರಿಂದ ಅಭದ್ರತೆ ಸೃಷ್ಟಿಯಾಗಿದೆ. ಅಲ್ಲದೇ 90 ಕಾಳು ವ್ಯಾಪಾರಸ್ಥರು ಸಹ ತಮಗೆ ನೀಡಿರುವ ನಿವೇಶನದಲ್ಲಿ ಕಟ್ಟಡ ನಿರ್ಮಿಸಿಕೊಂಡು ಸ್ಥಳಾಂತರ ಆಗಿ ವಹಿವಾಟು ಆರಂಭಿಸಿದ್ದಾರೆ. ಆದರೆ ಅವರಿಗೆಲ್ಲ ಸುಭದ್ರ ಕಾಂಪೌಂಡ್ ಕೊರತೆಯಿಂದ ಅಭದ್ರತೆ ಎದುರಾಗಿದೆ. ಕಾಂಪೌಂಡ್ ಇಲ್ಲದ್ದರಿಂದಲೇ ಅನೈತಿಕ ಚಟುವಟಿಕೆಗಳು ಹೆಚ್ಚಾಗಿವೆ ಎಂಬುದು ಬಹಿರಂಗ ಸತ್ಯ.
ಬಂದಾಗಿರುವ ಕ್ಯಾಂಟೀನ್: ಪ್ರಾಂಗಣದ ಆವರಣದಲ್ಲಿ ಕುಡಿಯುವ ನೀರಿನ ಘಟಕ ಕಟ್ಟಲಾಗಿದ್ದು, ಈವರೆಗೆ ಅಲ್ಲಿಂದ ಒಂದು ಹನಿ ನೀರೂ ಆಚೆ ಬಂದಿಲ್ಲ. ಇದರ ಬಳಿಯೇ ಕ್ಯಾಂಟೀನ್ ನಿರ್ಮಾಣ ಮಾಡಲಾಗಿದ್ದು, ಸದಾಕಾಲ ಬಂದ್ ಆಗಿದೆ. ಇವೆರಡೂ ದಯನೀಯ ಸ್ಥಿತಿಗೆ ಬಂದು ನಿಂತಿವೆ. ಪ್ರಾಂಗಣದ ಕಾಳು ವ್ಯಾಪಾರಸ್ಥರ ಬಳಿ ಕೆಲಸ ಮಾಡುವ ಹಮಾಲಿ ಕಾರ್ಮಿಕರಿಗೆ ಅಷ್ಟೇ ಅಲ್ಲ ಕಾಳು ಮಾರಾಟ ಮಾಡಲು ಬರುವ ರೈತರಿಗೂ ಇದರಿಂದ ತೊಂದರೆ ಆಗುತ್ತಲಿದೆ. ಇನ್ನೂ ಆಡಳಿತ ಕಚೇರಿ ಬಳಿಯೇ ಇರುವ ಎರಡು ಶೌಚಾಲಯಗಳನ್ನು ಬಂದ್ ಮಾಡಿದ್ದು, ಜನರು ಪ್ರಾಂಗಣದ ಸಿಕ್ಕ ಸಿಕ್ಕಲ್ಲಿ ಮೂತ್ರ ವಿಸರ್ಜನೆ ಮಾಡುತ್ತಿದ್ದಾರೆ.
ಹರಾಜು ಕಟ್ಟೆಯೀಗ ದನದ ಕೊಟ್ಟಿಗೆ!: ಕಾಯಿಪಲ್ಲೆ ವ್ಯಾಪಾರಸ್ಥರು ಸ್ಥಳಾಂತರ ಆಗದ ಕಾರಣ ಪ್ರಾಂಗಣದಲ್ಲಿ ನಿರ್ಮಿಸಿದ ಹರಾಜು ಕಟ್ಟೆ ಖಾಲಿಯಿದ್ದು, ಕೆಲವರು ತಮ್ಮ ದನಗಳನ್ನು ಕಟ್ಟಿ ಕೊಟ್ಟಿಗೆಯನ್ನಾಗಿ ಬದಲಾಯಿಸಿಕೊಂಡಿದ್ದಾರೆ. ಇನ್ನೂ ಮಾರುಕಟ್ಟೆ ಮುಖ್ಯದ್ವಾರದ ಬಲಬದಿ ಕೆಲ ಮಳಿಗೆಗಳನ್ನು ನಿರ್ಮಿಸಿ ಟೆಂಡರ್ ಕರೆದು ಬಾಡಿಗೆ ನೀಡಲಾಗಿತ್ತು. ಆದರೆ ಯಾರೂ ಮಳಿಗೆ ಆರಂಭ ಮಾಡದ ಕಾರಣ ನೋಟಿಸ್ ನೀಡಿ ಮರಳಿ ಪಡೆಯಲಾಗಿದೆ. ಸದಾ ಬಾಗಿಲು ಮುಚ್ಚಿರುವ ಮಳಿಗೆಗಳ ಪುನಾರಂಭದ ಜೊತೆಗೆ ಹರಾಜು ಕಟ್ಟೆಯಲ್ಲಿನ ದನದ ಕೊಟ್ಟಿಗೆ ತೆರವುಗೊಳಿಸುವತ್ತ ಎಪಿಎಂಸಿ ಆಡಳಿತ ಮಂಡಳಿ ಲಕ್ಷ್ಯ ವಹಿಸಬೇಕಿದೆ.
ಸುಭದ್ರ ಕಾಂಪೌಂಡ್ ಕಟ್ಟಲು ಕ್ರಿಯಾಯೋಜನೆ ಒಳಗಡೆ ಅನುಮೋದನೆ ಪಡೆದಿದ್ದು, ಕಾಂಪೌಂಡ್ ಗೋಡೆಯ ಮೇಲೆ ತಂತಿ ಸಹ ಅಳವಡಿಸಲಾಗುವುದು. ಇದು ಸಾಕಾರಗೊಂಡರೆ ಅನೈತಿಕ ಚಟುವಟಿಕೆಗಳಿಗೆ ಕಡಿವಾಣ ಬೀಳಲಿದೆ. ಇದರೊಂದಿಗೆ ಈಗಿರುವ ಭದ್ರತಾ ಸಿಬ್ಬಂದಿಯನ್ನೂ ಬದಲಾವಣೆ ಮಾಡುತ್ತೇವೆ.
•ಮಹಾವೀರ ಜೈನ್, ಅಧ್ಯಕ್ಷ, ಎಪಿಎಂಸಿ, ಧಾರವಾಡ
•ಶಶಿಧರ್ ಬುದ್ನಿ