ಕೊಳ್ಳೇಗಾಲ: ರಾಜ್ಯ ಮತ್ತು ಕೇಂದ್ರ ಸರ್ಕಾರ ಸಂವಿಧಾನದ ಆಶಯಗಳನ್ನು ಸಂಪೂರ್ಣ ಜಾರಿಗೆ ತರಬೇಕು ಎಂದು ಹರಿಹರ ವಾಲ್ಮೀಕಿ ಮಠದ ಶ್ರೀ ಪ್ರಸನ್ನಾನಂದಪುರಿ ಸ್ವಾಮೀಜಿ ಹೇಳಿದರು.
ಪಟ್ಟಣದ ದೊಡ್ಡ ನಾಯಕರ ಬೀದಿಯಲ್ಲಿ ವೇದಿಕೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮುಂಬರುವ ಫೆ.5 ಮತ್ತು 6ರಂದು ದಾವಣಗೆರೆ ಜಿಲ್ಲೆಯ ಹರಿಹರದ ರಾಚನಹಳ್ಳಿ ಯಲ್ಲಿ ಎರಡು ದಿನಗಳ ಕಾಲ ನಡೆಯಲಿರುವ ಸಾಧನ ಸಮಾವೇಶ ಜಾತ್ರಾ ಮಹೋತ್ಸವದಲ್ಲಿ ಅಪಾರ ಸಂಖ್ಯೆಯಲ್ಲಿ ಬಂದು ಸಮಾವೇಶ ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.
ವೀರಶೈವದಂತಹ ಉನ್ನತ ಸಮಾಜದವರು ಯಾವುದೇ ಬೇಡಿಕೆ ಗಳನ್ನು ಸರ್ಕಾರದ ಮುಂದೆ ಇಟ್ಟ ಕೂಡಲೇ ಪರಿಗಣಿಸುತ್ತಾರೆ. ಆದರೆ ಹಿಂದುಳಿದ ಸಮಾಜಗಳು ಎರಡು ಕೋಟಿಗೂ ಅಧಿಕ ಮತದಾರರು ಇದ್ದು, ಜನರ ಸಮಸ್ಯೆಗಳನ್ನು ಆಲಿಸುವಲ್ಲಿ ಮಲತಾಯಿ ಧೋರಣೆ ತಾಳುತ್ತಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಶಾಸಕ ಎನ್.ಮಹೇಶ್ ಮಾತನಾಡಿ, ಎಲ್ಲಾ ಹಿಂದುಳಿದ ಸಮಾಜ ದವರು ಮತ್ತು ವಿವಿಧ ಪಕ್ಷದ ಮುಖಂಡರು ಸ್ವಾಮೀಜಿಯವರ ಹೋರಾಟಕ್ಕೆ ಬೆಂಬಲ ಸೂಚಿಸಿದ ಹಿನ್ನೆಲೆಯಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರ ಪುರಸ್ಕಾರ ನೀಡಿ ಮೀಸಲಾತಿ ಸೌಲಭ್ಯ ಕಲ್ಪಿಸಿಕೊಟ್ಟಿದೆ. ಇದರ ಹೋರಾಟ ಸ್ವಾಮೀಜಿಯವರಿಗೆ ಸಲ್ಲುತ್ತದೆ ಎಂದರು.
ಮಾಜಿ ಶಾಸಕರಾದ ಎಸ್.ಜಯಣ್ಣ, ಎ.ಆರ್.ಕೃಷ್ಣಮೂರ್ತಿ, ಎಸ್.ಬಾಲರಾಜ್, ಜಿ.ಎನ್.ನಂಜುಂಡಸ್ವಾಮಿ, ನಗರಸಭೆಯ ಅಧ್ಯಕ್ಷೆ ರೇಖಾ ರಮೇಶ್, ಉಪಾಧ್ಯಕ್ಷೆ ಸುಶೀಲಾ, ನಗರಸಭಾ ಸದಸ್ಯರಾದ ಕವಿತಾ, ಸುರೇಶ್, ಮನೋಹರ್, ರಾಘವೇಂದ್ರ, ಸ್ಥಾಯಿ ಸಮಿತಿ ಅಧ್ಯಕ್ಷ ಶಂಕರ ನಾರಾಯಣಗುಪ್ತ, ಪಾಳ್ಯ ಗ್ರಾಪಂ ಅಧ್ಯಕ್ಷ ರವಿ, ಮುಖಂಡರಾದ ಕೊಪ್ಪಾಳಿ ಮಹದೇವನಾಯಕ, ಪಾಳ್ಯ ಕೃಷ್ಣ, ಲೋಕೇಶ್, ಕೃಷ್ಣಪ್ಪ ಇತರರು ಇದ್ದರು.