ರಾಮದುರ್ಗ: ಕೊರೊನಾ ರೂಪಾಂತರಿ ವೈರಸ್ ತಡೆಗಟ್ಟುವ ಉದ್ದೇಶದಿಂದ ರಾಜ್ಯ ಸರ್ಕಾರ ಶನಿವಾರ ಹಾಗೂ ರವಿವಾರ ಜಾರಿ ಮಾಡಿದ ವೀಕೆಂಡ್ ಕರ್ಫ್ಯೂಗೆ ತಾಲೂಕಿನಲ್ಲಿ ಸಂಪೂರ್ಣ ಬೆಂಬಲ ವ್ಯಕ್ತವಾಗಿದೆ.
ಪಟ್ಟಣ ಪ್ರದೇಶ ಸೇರಿದಂತೆ ತಾಲೂಕಿನಲ್ಲಿನ ಎಲ್ಲ ಗ್ರಾಮೀಣ ಪ್ರದೇಶಗಳಲ್ಲೂ ಸಾರ್ವಜನಿಕರು ಸ್ವಯಂ ಪ್ರೇರಿತರಾಗಿ ರಸ್ತೆಗೆ ಬರದೇ ಮನೆಯಲ್ಲಿ ಕುಳಿತು ರಾಜ್ಯ ಸರ್ಕಾರದ ಆದೇಶಕ್ಕೆ ಬೆಂಬಲ ಸೂಚಿಸಿದರು. ಅಂಗಡಿ-ಮುಂಗಟ್ಟು ಬಂದ್: ಪಟ್ಟಣದಲ್ಲಿ ದಿನವಿಡೀ ಜನಜಂಗುಳಿಯಿಂದ ತುಂಬಿರುವ ಹೋಟೆಲ್, ಅಂಗಡಿ-ಮುಂಗಟ್ಟುಗಳು, ಮಾರುಕಟ್ಟೆಯನ್ನು ಕರ್ಫ್ಯೂಗೆ ಬೆಂಬಲಿಸಿ ಸ್ವಯಂ ಪ್ರೇರಣೆಯಿಂದ ಬಂದ್ ಮಾಡಲಾಗಿತ್ತು. ಇದರಿಂದ ರಾಮದುರ್ಗ ಪಟ್ಟಣ ಜನ ಹಾಗೂ ವಾಹನ ಸಂಚಾರವಿಲ್ಲದೇ ಸಂಪೂರ್ಣ ಬಿಕೋ ಎನ್ನುತ್ತಿತ್ತು.
ತರಕಾರಿ-ಕಿರಾಣಿ ವ್ಯಾಪಾರ: ವೀಕೆಂಡ್ ಕರ್ಫ್ಯೂ ಇರುವುದರಿಂದ ಬೆಳಗ್ಗೆ 6ರಿಂದ 10ರವರೆಗೆ ತರಕಾರಿ ಹಾಗೂ ಕಿರಾಣಿ ವ್ಯಾಪಾರಕ್ಕೆ ಅವಕಾಶ ನೀಡಲಾಗಿತ್ತು. ಹೀಗಾಗಿ ಜನರು ಬೇಗ ಮಾರುಕಟ್ಟೆಗೆ ಆಗಮಿಸಿ ದಿನಸಿ ಸೇರಿದಂತೆ ತರಕಾರಿ ವಸ್ತು ಖರೀದಿಸಿದರು. 10 ಗಂಟೆ ನಂತರ ಎಲ್ಲವನ್ನು ಬಂದ್ ಮಾಡಲಾಯಿತು. ರಸ್ತೆಗಿಳಿಯದ ಜನ: ಶನಿವಾರ ಹಾಗೂ ರವಿವಾರ ಕರ್ಫ್ಯೂ ಜಾರಿ ಮಾಡಿದ್ದರಿಂದ ಸಾರ್ವಜನಿಕರು ಅನವಶ್ಯಕವಾಗಿ ಮನೆಯಿಂದ ಹೊರ ಬರದಂತೆ ಸರ್ಕಾರ ಆದೇಶ ನೀಡಿದೆ.
ಮೊದಲ ದಿನದ ಕರ್ಫ್ಯೂಗೆ ಜನತೆ ಸ್ಪಂದಿಸಿದ್ದರಿಂದ ದಿನವೆಲ್ಲ ಜನಸಂಚಾರ ದಿಂದ ತುಂಬಿರುವ ಪಟ್ಟಣದ ರಸ್ತೆಗಳು ಸಂಪೂರ್ಣ ಬಿಕೋ ಎನ್ನುತ್ತಿದ್ದವು. ಸಾರಿಗೆ ಸಂಚಾರ ಆರಂಭ: ಕರ್ಫ್ಯೂ ಇದ್ದರೂ ಬೇರೆ ಬೇರೆ ನಗರ ಪ್ರದೇಶಕ್ಕೆ ತೆರಳುವ ಸಾರ್ವಜನಿಕರಿಗೆ ತೊಂದರೆ ಯಾಗದಂತೆ ಎಚ್ಚರಿಕೆ ವಹಿಸುವ ನಿಟ್ಟಿನಲ್ಲಿ ಸರ್ಕಾರ ಸಾರಿಗೆ ವ್ಯವಸ್ಥೆಗೆ ಅವಕಾಶ ನೀಡಿದ್ದರಿಂದ ಸೇವೆ ಕಲ್ಪಿಸಲಾಗಿತ್ತು. ಅಗತ್ಯ ವಸ್ತುಗಳ ಸೇವೆ ಓಪನ್: ಅಗತ್ಯ ವಸ್ತುಗಳ ಸೇವೆಗಳಾದ ಔಷಧಿ, ಹಾಲು, ಆಸ್ಪತ್ರೆ, ಗ್ಯಾಸ್ ಸೇರಿದಂತೆ ಇತರೆ ಕೆಲ ಅಗತ್ಯ ಸೇವೆ ತೆರೆಯಲಾಗಿತ್ತು