ಕಲಬುರಗಿ: ಜಿಲ್ಲಾದ್ಯಂತ ಅತಿವೃಷ್ಟಿಯಿಂದ ರೈತರ ಬೆಳೆಗಳೆಲ್ಲ ಸಂಪೂರ್ಣ ಹಾಳಾಗಿದ್ದು, ಪ್ರಮುಖ ವಾಣಿಜ್ಯ ಬೆಳೆ ತೊಗರಿ ಬೆಳೆಯು ಹೊಲದಲ್ಲಿ ನೀರು ಹರಿಯುತ್ತಿರುವ ಪರಿಣಾಮ ಸಂಪೂರ್ಣ ಕೊಳೆತು ಹೋಗಿದೆ. ಹೀಗಾಗಿ ತಕ್ಷಣವೇ ಪರಿಹಾರ ನೀಡುವಂತೆ ಕೆಪಿಸಿಸಿ ಸದಸ್ಯ ಹಣಮಂತರಾವ ಭೂಸನೂರ ರಾಜ್ಯ ಸರಕಾರವನ್ನು ಆಗ್ರಹಿಸಿದ್ದಾರೆ.
ಮೊದಲೇ ಕೋವಿಡ್ ಸಂಕಷ್ಟದಲ್ಲಿರುವ ರೈತರ ಪಾಲಿಗೆ ಪ್ರಸಕ್ತ ಮಳೆ ಮರಣ ಶಾಸನ ಬರೆದಿದೆ. ತಕ್ಷಣ ಸಮೀಕ್ಷೆ ನಡೆಸಿ ರೈತರಿಗೆ ಯೋಗ್ಯ ಪರಿಹಾರ ನೀಡಬೇಕೆಂದಿದ್ದಾರೆ.
ಈ ಕುರಿತಂತೆ ಹೇಳಿಕೆ ನೀಡಿರುವ ಅವರು ಕಲಬುರಗಿಯಲ್ಲಿ ಸೆಪ್ಟೆಂಬರ್ 1, 300 ಮಿ.ಮೀ. ಗಿಂತಲೂ ಹೆಚ್ಚಿನ ಮಳೆ ಸುರಿದಿದೆ, ಅಕ್ಟೋಬರ್‌ನಲ್ಲಿ ಮಳೆ ಹಾಗೇ ಮುಂದುವರಿದಿದೆ. ಮಳೆಯಿಂದ ತೊಗರಿ, ಬಾಳೆ, ಕಬ್ಬು ಹಾನಿಗೊಳಗಾಗಿವೆ. ಒಟ್ಟು ಬೇಸಾಯದಲ್ಲಿ 2 ಲಕ್ಷ ಹೆಕ್ಟೇರ್ ಮಳೆಯಿಂದಲೇ ಹಾನಿಗೊಳಗಾಗಿದೆ. ಈ ಪೈಕಿ 1 ಲಕ್ಷ ಹೆಕ್ಟೇರ್‌ಗೂ ಹೆಚ್ಚಿನ ತೊಗರಿ ಬೆಳೆ ಹಾಳಾಗಿದೆ. ಮುಂದಿನ ದಿನಗಳಲ್ಲಿ ಈ ಪ್ರಮಾಣ ಹೆಚ್ಚಾಗಲಿದೆ. ರೈತರು ಇಂದು ಮತ್ತೆ ಬಿತ್ತನೆ ಮಾಡುವ ಅನಿವಾರ್ಯತೆ ಎದುರಿಸುತ್ತಿದ್ದಾರೆ. ತಕ್ಷಣ ಬೆಳೆಹಾನಿಯ ಸಮೀಕ್ಷೆ ನಡೆಯಬೇಕು, ತೋಟಗಾರಿಕೆ ಹಾಗೂ ಖುಷ್ಕಿ ಎರಡೂ ಬೆಳೆಗಳ ಹಾನಿ ಲೆಕ್ಕಹಾಕಿ ರೈತರಿಗೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಕಲಬುರಗಿಯಲ್ಲಂತೂ ತೊಗರಿ ಬೆಳೆ ಭಾರಿ ಪ್ರಮಾಣದಲ್ಲಿ ಹಾಳಾಗುವ ಸೂಚನೆಗಳಿವೆ. ಮಳೆನೀರು ಹೊಲಗದ್ದೆಯಲ್ಲಿ ನಿಂತಿದೆ. ಇನ್ನೂ ಬಿಸಿಲು ಬಿದ್ದರೆ ಸಾಕು, ಫಸಲು ಒಣಗಲಿದೆ. ಬಾಳೆ, ಕಬ್ಬು ನೆಲಕ್ಕುರುಳಿದೆ. ಕಬ್ಬಿನ ಹೊಲದಲ್ಲಿಯೂ ನೀರು ನಿಂತಿದೆ. ಇದೆಲ್ಲವೂ ರೈತರನ್ನು ಸಾಲದ ಸುಳಿಗೆ ತಳ್ಳಲಿದೆ. ಪರಿಹಾರ ಬೇಗ ಕೈ ಸೇರಿದರೆ ಮತ್ತೆ ಬಿತ್ತನೆಗೆ ಮುಂದಾಗುತ್ತಾನೆ. ಇಲ್ಲದೆ ಹೋದಲ್ಲಿ ಹೊಲಗದ್ದೆ ಹಾಗೇ ಬಿಟ್ಟು ಬಿಡುವ ಸಂದರ್ಭಗಳೇ ಹೆಚ್ಚು ಎದುರಾಗಲಿವೆ ಎಂದು ಭೂಸನೂರ್ ರೈತರ ಸಂಕಷ್ಟ ವಿವರಿಸುತ್ತ ಆತಂಕ ಹೊರ ಹಾಕಿದ್ದಾರೆ.