Advertisement

ಕೆಲವು ಕ್ಷೇತ್ರದಲ್ಲಿ ಆಶ್ಚರ್ಯಕರ ಫ‌ಲಿತಾಂಶ ಬರಲಿದೆ: ಸಿಎಂ ಬೊಮ್ಮಾಯಿ

11:16 PM Apr 04, 2023 | Team Udayavani |

ಬೆಂಗಳೂರು: ಕಳೆದ ಮೂರು ನಾಲ್ಕು ದಿನಗಳ ಬೆಳವಣಿಗೆ ಗಮನಿಸಿದರೆ ಬಿಜೆಪಿಗೆ ಮತ್ತೆ ಸಂಪೂರ್ಣ ಬಹುಮತ ದೊರೆಯಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

Advertisement

ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ಕೆಲವು ಕ್ಷೇತ್ರದಲ್ಲಿ ಆಶ್ಚರ್ಯಕರ ಫ‌ಲಿತಾಂಶ ಬರಲಿದೆ. ಕಾರ್ಯಕರ್ತರು ಮತ್ತು ನಾಯಕರಿಗೆ ಆತ್ಮವಿಶ್ವಾಸವಿದೆ. ವಾಸ್ತವಾಂಶ ಆಧರಿಸಿ ಅಭ್ಯರ್ಥಿ ಆಯ್ಕೆಯಾಗುತ್ತಿದೆ. ರಾಜ್ಯ ಸಮಿತಿ ಸಭೆ ಬಳಿಕ ಕೇಂದ್ರಕ್ಕೆ ಅಭ್ಯರ್ಥಿಗಳ ಪಟ್ಟಿ ಕಳುಹಿಸಲಾಗುವುದು. 8ನೇ ತಾರೀಖು ಕೇಂದ್ರದಲ್ಲಿ ಚರ್ಚೆಯಾಗಿ ಪಟ್ಟಿ ಬಿಡುಗಡೆಯಾಗಲಿದೆ ಎಂದರು.

ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಖಾಸಗಿ ಚಾನಲ್‌ ಸಂದರ್ಶನವೊಂದರಲ್ಲಿ ಮತ್ತೆ ಸಿಎಂ ಆಗುವ ಇಚ್ಛೆ ವ್ಯಕ್ತಪಡಿಸಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಅವರೇನೋ ಬಯಸಿದ್ದಾರೆ. ಆದರೆ ಜನರ ನಾಡಿ ಮಿಡಿತ ಏನಿದೆಯೋ ಯಾರಿಗೆ ಗೊತ್ತು ? ಫ‌ಲಿತಾಂಶ ಬಂದ ಮೇಲೆ ಜನರ ಅಭಿಮತ ತಿಳಿಯಲಿದೆ. ಜನರ ಬೆಂಬಲ ಇದ್ದವರು ಮಾತ್ರ ಶಾಸಕನಾಗಲು ಸಾಧ್ಯ. ಸಿದ್ದರಾಮಯ್ಯ ಅವರು ಹೊಸದೇನೂ ಹೇಳಿಲ್ಲ ಎಂದರು.

ಕಾಂಗ್ರೆಸ್‌ ಪಕ್ಷ ಅಧಿಕಾರಕ್ಕೆ ಬರುವುದಿಲ್ಲ. ಇಲ್ಲದಿರುವ ಸೀಟಿಗಾಗಿ ಗುದ್ದಾಡುತ್ತಿದ್ದಾರೆ. ಮುಖ್ಯಮಂತ್ರಿ ಸ್ಥಾನಕ್ಕಾಗಿ ಹೊರಾಡುತ್ತಿದೆ. ಜನರಿಗೆ, ಕರ್ನಾಟಕಕ್ಕೆ ಒಳ್ಳೆಯದು ಮಾಡಬೇಕು ಎಂಬ ಯೋಚನೆ ಇಲ್ಲ. ಸಿದ್ದರಾಯಮಯ್ಯ ಹೇಳಿಕೆ ಕಾಂಗ್ರೆಸ್‌ ಆಂತರಿಕ ವಿದ್ಯಮಾನಗಳ ಪ್ರತಿಬಿಂಬ. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌ ಹೋದ ಕಡೆಯಲೆಲ್ಲ ನಾನೇ ಸಿಎಂ ನನಗೆ ಆಶೀರ್ವಾದ ಮಾಡಿ ಎಂದು ಹೇಳಿಕೊಂಡು ತಿರುಗುತ್ತಿದ್ದಾರೆ. ಸಿದ್ದರಾಮಯ್ಯ ನಾನೇ ಮುಖ್ಯಮಂತ್ರಿ ಎನ್ನುತ್ತಾರೆ. ಇಬ್ಬರ ಕನಸು ನನಸಾಗುವುದಿಲ್ಲ ಎಂದು ಟೀಕಿಸಿದರು.

ಆಯನೂರು ಮಂಜುನಾಥ್‌ ಬಂಡಾಯಕ್ಕೆ ಪ್ರತಿಕ್ರಿಯಿಸಿ ಬಿಜೆಪಿಯಿಂದ ಮತ್ತೆ ಯಾರು ಹೊರ ಹೋಗುವುದಿಲ್ಲ .ಡಿ.ಕೆ.ಶಿವಕುಮಾರ್‌ ಸುಮ್ಮನೆ ಹೆಸರುಗಳನ್ನು ತೇಲಿ ಬಿಡುತ್ತಿದ್ದಾರೆ ಎಂದರು.

Advertisement

ಬಂಡೀಪುರಕ್ಕೆ ಪ್ರಧಾನಿ: ಅಧಿಕಾರಿಗಳಿಂದ ಸ್ಥಳ ಪರಿಶೀಲನೆ
ಗುಂಡ್ಲುಪೇಟೆ: ತಾಲೂಕಿನ ಬಂಡೀಪುರ ಅಭಯಾರಣ್ಯಕ್ಕೆ ಎ.9ಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡುವ ಸಾಧ್ಯತೆ ಹಿನ್ನೆಲೆಯಲ್ಲಿ ಎಡಿಜಿಪಿ ಅಲೋಕ್‌ ಕುಮಾರ್‌ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು.

ಬಂಡೀಪುರ ಸಫಾರಿ ಕೇಂದ್ರದ ಸಮೀಪವೇ ಮೂರು ಹೆಲಿಪ್ಯಾಡ್‌ ನಿರ್ಮಾಣಗೊಳ್ಳುತ್ತಿದ್ದು, ಸಾರ್ವಜನಿಕರು, ಅಭಿಮಾನಿಗಳನ್ನು ನಿಯಂತ್ರಿಸಲು ಸೂಕ್ತ ಬ್ಯಾರಿಕೇಡ್‌, ಕಾಂಪೌಂಡ್‌ ವ್ಯವಸ್ಥೆ ಇರಬೇಕು. ವನ್ಯಜೀವಿಗಳು ರಸ್ತೆ ದಾಟದಂತೆ ನಿಗಾ ಇಡಬೇಕು ಸೇರಿದಂತೆ ಇತರೆ ಸೂಚನೆಗಳನ್ನು ಐಜಿಪಿ ಪ್ರವೀಣ್‌ ಮಧುಕರ್‌ ಪವಾರ್‌ ಹಾಗೂ ಚಾಮರಾಜನಗರ ಎಸ್ಪಿ ಪದ್ಮಿನಿ ಸಾಹೋ ಅವರಿಗೆ ಎಡಿಜಿಪಿ ಅಲೋಕ್‌ ಕುಮಾರ್‌ ನೀಡಿದರು.

ಎ.8, 9ರಂದು ಸಫಾರಿ ಬಂದ್‌: ಬಂಡೀಪುರಕ್ಕೆ ಎ.9ರಂದು ಪ್ರಧಾನಿ ಭೇಟಿ ನೀಡುವ ಹಿನ್ನೆಲೆ ಎ.8, 9ರಂದು ಸಫಾರಿಯನ್ನು ಸಂಪೂರ್ಣ ಬಂದ್‌ ಮಾಡಲು ಅರಣ್ಯ ಇಲಾಖೆ ಅಧಿಕಾರಿಗಳು ತೀರ್ಮಾನಿಸಿದ್ದಾರೆ. ಬಂಡೀಪುರ ಅಭಯಾರಣ್ಯ ವ್ಯಾಪ್ತಿಯಲ್ಲಿ ಎ.4ರಿಂದ 9ರವರೆಗೆ ಅತಿಥಿ ಗೃಹ ಹಾಗೂ ಕಾಟೇಜ್‌ಗಳೂ ಬಂದ್‌ ಆಗಲಿದೆ. ಈ ಕಾರಣದಿಂದ ಪ್ರವಾಸಿಗರು ಬಂಡೀಪುರದಲ್ಲಿ ವಾಸ್ತವ್ಯ ಹೂಡಲು 5ದಿನ ನಿಷೇಧ ಹೇರಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next