Advertisement

ಅನ್ನದ ಬಟ್ಟಲು ಮಲ್ಪೆಯ ಸಮಗ್ರ ಅಭಿವೃದ್ಧಿ: ಪ್ರಮೋದ್‌ ಮಧ್ವರಾಜ್‌

10:40 AM Jul 25, 2017 | Karthik A |

ಮಲ್ಪೆ: ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ ವಿವಿಧ ರಸ್ತೆ, ಪಾರ್ಕ್‌ ಸೇರಿದಂತೆ ಮಲ್ಪೆಯ ಸಮಗ್ರ ಅಭಿವೃದ್ಧಿಗೆ ಸುಮಾರು 100 ಕೋಟಿ ರೂ. ವಿನಿಯೋಗಿಸಲಾಗಿದ್ದು ಮುಂದಿನ ದಿನಗಳಲ್ಲಿ ಇನ್ನಷ್ಟು ಅಭಿವೃದ್ಧಿ ಕೆಲಸಗಳನ್ನು ಕೈಗೊಂಡು ಮಲ್ಪೆಯನ್ನು ಸುಂದರ ನಗರವನ್ನಾಗಿ ಮಾಡಲಾಗುವುದು ಎಂದು ಮೀನುಗಾರಿಕಾ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್‌ ಮಧ್ವರಾಜ್‌ ಹೇಳಿದರು. ಅವರು ಸೋಮವಾರ ಮಲ್ಪೆ ಏಳೂರು ಮೊಗವೀರ ಭವನದಲ್ಲಿ ನಡೆದ ನಗರಸಭಾ ವ್ಯಾಪ್ತಿಯ ಮಲ್ಪೆ ಸೆಂಟ್ರಲ್‌ ವಾರ್ಡ್‌ ಮಟ್ಟದ ಜನಸಂಪರ್ಕ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.

Advertisement

ಮಲ್ಪೆ ಮುಖ್ಯ ಸರ್ಕಲ್‌ನಿಂದ ಸಿಟಿಜನ್‌ ಸರ್ಕಲ್‌ವರೆಗೆ ರಸ್ತೆ ವಿಸ್ತರಣೆಗೆ ನಗರೋತ್ಥಾನ ಯೋಜನೆಯಡಿ 3.20 ಕೋಟಿ ರೂ. ಮಂಜೂರಾಗಿದೆ. ಮಲ್ಪೆಯಿಂದ ಆದಿವುಡುಪಿವರೆಗೆ ರಸ್ತೆ ವಿಸ್ತರಣೆ ಆಗಬೇಕಿದ್ದು ರಾಷ್ಟ್ರೀಯ ಹೆದ್ದಾರಿ ಆಗಿರುವುದರಿಂದ ಕೇಂದ್ರ ಸರಕಾರ ಅದಕ್ಕೆ ಬೇಕಾದ ಹಣವನ್ನು ಬಿಡುಗಡೆ ಮಾಡಬೇಕಾಗಿದೆ ಎಂದರು. ಡಲ್ಟ್ ಯೋಜನೆಯಡಿ ಮಲ್ಪೆಯಲ್ಲಿ ಸುಸಜ್ಜಿತ ಬಸ್‌ ನಿಲ್ದಾಣಕ್ಕೆ 3 ಕೋಟಿ ರೂ. ಮಂಜೂರು ಮಾಡಲಾಗಿದೆ. ಬಸ್‌ ನಿಲ್ದಾಣಕ್ಕೆ ಒಂದು ಎಕ್ರೆ ಭೂಮಿಯನ್ನು ಬಿಟ್ಟು ಕೊಡುವ ಸಂದರ್ಭದಲ್ಲಿ ಸಮೀಪದಲ್ಲಿ ಯಾರೆಲ್ಲ ಮೀನು ಒಣಗಿಸುವ ಮಹಿಳೆಯರಿದ್ದಾರೋ ಅವರಿಗೆ ಯಾವುದೇ ರೀತಿಯಲ್ಲಿ ಜಾಗದ ತೊಂದರೆಯಾಗದಂತೆ ವ್ಯವಸ್ಥೆ ಮಾಡಬೇಕೆಂದು ಅಧಿಕಾರಿಗಳಿಗೆ ಈಗಾಗಲೇ ಸೂಚನೆ ನೀಡಿದ್ದೇನೆ ಎಂದರು.

ಉಡುಪಿ ನಗರಪ್ರಾಧಿಕಾರದ ಅಧ್ಯಕ್ಷ ಬಿ. ನರಸಿಂಹ ಮೂರ್ತಿ, ಉಡುಪಿ ನಗರಸಭಾ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ಉಪಾಧ್ಯಕ್ಷೆ ಸಂಧ್ಯಾ ತಿಲಕ್‌ರಾಜ್‌, ಉಡುಪಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಸತೀಶ್‌ ಅಮೀನ್‌ ಪಡುಕರೆ, ಮಲ್ಪೆ ವಾರ್ಡ್‌ನ ನಗರಸಭಾ ಸದಸ್ಯ ವಿಜಯ ಕುಂದರ್‌, ನಾರಾಯಣ ಪಿ. ಕುಂದರ್‌, ಗಣೇಶ್‌ ನೆರ್ಗಿ, ಜನಾರ್ದನ ಭಂಡಾರ್‌ಕರ್‌, ಉಡುಪಿ ತಹಶೀಲ್ದಾರ್‌ ಮಹೇಶ್ಚಂದ್ರ, ಡಿವೈಎಸ್ಪಿ ಕುಮಾರಸ್ವಾಮಿ, ಬಂದರು ಸಮನ್ವಯಾಧಿಕಾರಿ ಗಣಪತಿ ಭಟ್‌, ಕಂದಾಯ ಅಧಿಕಾರಿ ಚಂದ್ರ ಪೂಜಾರಿ, ಸುಧಾಕರ ಶೆಟ್ಟಿ, ಗ್ರಾಮ ಲೆಕ್ಕಾಧಿಕಾರಿ ಕುಪ್ಪಯ್ಯ ಮೊದಲಾದವರು ಉಪಸ್ಥಿತರಿದ್ದರು.

ಅಂಗವಿಕಲ ವೇತನ, ವಿಧವಾ ವೇತನ, ಮನಸ್ವಿನಿ, ಸಂಧ್ಯಾ ಸುರಕ್ಷಾ, ಪ್ರಕೃತಿ ವಿಕೋಪದಡಿ ಪರಿಹಾರ, ಸಾಧ್ಯತಾ ಪತ್ರ, ಮೀನುಗಾರ ಮಹಿಳೆಯರಿಗೆ ವಿವಿಧ ಸಲಕರಣೆ, ಸೇರಿದಂತೆ ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಸವಲತ್ತುಗಳನ್ನು ವಿತರಿಸಲಾಯಿತು. ನಗರಸಭಾ ಪೌರಾಯುಕ್ತ ಡಿ. ಮಂಜುನಾಥಯ್ಯ ಸ್ವಾಗತಿಸಿ, ವಂದಿಸಿದರು.

ಬಂದರಿನ ಮೂಲ ಕಾರಣಕರ್ತರು
ಗುಜರಾತಿನ ವೆರವಲ್‌ ಬಿಟ್ಟರೆ ಮಲ್ಪೆಯು ದೇಶದ ಅತೀ ದೊಡ್ಡ ಮೀನುಗಾರಿಕಾ ಬಂದರಾಗಿದೆ. ಮಲ್ಪೆಯಲ್ಲಿ ಮೀನುಗಾರಿಕಾ ಬಂದರು ಅಗಲು ಮೂಲ ಕಾರಣ ದಿ| ಮಲ್ಪೆ ಮಧ್ವರಾಜ್‌ ಮತ್ತು ದಿ| ಟಿ.ಎ. ಪೈ ಅವರು. ನವ ಮಂಗಳೂರಿನಲ್ಲಿರುವ ವಾಣಿಜ್ಯ ಬಂದರು ಮಲ್ಪೆಗೆ ಬರುವುದಿತ್ತು. ಮಲ್ಪೆಯಲ್ಲಿ ವಾಣಿಜ್ಯ ಬಂದರು ಬೇಡ ಮೀನುಗಾರಿಕಾ ಬಂದರು ಬೇಕು ಎಂದು ಈ ಇಬ್ಬರು ನಡೆಸಿದ ಪ್ರಯತ್ನದಿಂದಾಗಿ ಇಂದು ಲಕ್ಷಾಂತರ ಜನರ ಉದರ ಪೋಷಣೆಗೆ ಮಲ್ಪೆ ಮೀನುಗಾರಿಕಾ ಬಂದರು ಅನ್ನದ ಬಟ್ಟಲಾಗಿ ಉಳಿದಿದೆ. ಹಾಗಾಗಿ ಈ ಮೂಲ ಕಾರಣಕರ್ತರನ್ನು ನೆನಪಿಸಿಕೊಳ್ಳಬೇಕಾದ ಜವಾಬ್ದಾರಿ ಬಂದರಿನಲ್ಲಿ ಕೆಲಸ ಮಾಡುವ ಎಲ್ಲ ವರ್ಗದ ಜನರದ್ದಾಗಿದೆ ಎಂದು ಸಚಿವ ಪ್ರಮೋದ್‌ ಮಧ್ವರಾಜ್‌ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next