Advertisement

ಕೃಷಿ ಚಟುವಟಿಕೆಗೆ ಪೂರ್ಣ ಸಹಕಾರ: ಸಚಿವ ಕೋಟ

09:51 AM Apr 21, 2020 | mahesh |

ಸುಬ್ರಹ್ಮಣ್ಯ: ಕೋವಿಡ್-19   ಕಾರಣದಿಂದ ದೇಶ ಲಾಕ್‌ಡೌನ್‌ ಆಗಿದ್ದರೂ ಅದರಿಂದ ಕೃಷಿ ಕಾರ್ಯಕ್ಕೆ ಅಡ್ಡಿಯಾಗಬಾರದು. ಕೃಷಿ ಕಾರ್ಯಗಳು ಸರಾಗವಾಗಿ ಸಾಗಲು ರೈತರಿಗೆ ಬೇಕಾದ ಎಲ್ಲ ಸೌಲಭ್ಯಗಳನ್ನೂ ಕಲ್ಪಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ರಾಜ್ಯ ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ. ಕುಕ್ಕೆ ಸುಬ್ರಹ್ಮಣ್ಯಕ್ಕೆ ರವಿವಾರ ಭೇಟಿ ನೀಡಿದ ಸಚಿವರು ಸುದ್ದಿಗಾರರೊಂದಿಗೆ ಮಾತನಾಡಿದರು. ಸುಳ್ಯ ತಾಲೂಕಿನ ರೈತ ಮುಖಂಡರು ನನ್ನನ್ನು ಭೇಟಿಯಾಗಿ ಸಮಸ್ಯೆಗಳನ್ನು ಮನವರಿಕೆ ಮಾಡಿದ್ದಾರೆ. ಜಿಲ್ಲೆಯ ಎಲ್ಲ ರೈತರ ಆಶೋತ್ತರಗಳನ್ನು ಈಡೇರಿಸಲು ಸರಕಾರ ಬದ್ಧವಾಗಿದೆ ಎಂದರು.

Advertisement

ದೇಗುಲಗಳಿಂದ ಆಹಾರ
ಕುಕ್ಕೆ ಶ್ರೀ ಸುಬ್ರಹ್ಮಣ್ಯ ಸೇರಿದಂತೆ ಮುಜರಾಯಿ ಇಲಾಖೆಗೆ ಸೇರಿದ ಸಿರಿವಂತ ದೇವಸ್ಥಾನಗಳಿಂದ ಲಾಕ್‌ಡೌನ್‌ ಸಂತ್ರಸ್ತರಿಗೆ ಆಹಾರ ಸಾಮಗ್ರಿ ನೀಡಲು ಬೇಕಾದ ವ್ಯವಸ್ಥೆ ಮಾಡಲಾಗುವುದು. ಕುಕ್ಕೆ ದೇವಳದಿಂದ ಈಗಾಗಲೇ ಆಹಾರ ಸಾಮಗ್ರಿ ಒದಗಿಸಲಾಗಿದೆ. ಪಡಿತರ ಚೀಟಿ ಹೊಂದಿರದ ಜನರಿಗೆ ಅಗತ್ಯ ಆಹಾರ ವಸ್ತುಗಳ ವಿತರಣೆಗೆ ಸೂಕ್ತ ಕ್ರಮ ಜರಗಿಸಲಾಗುವುದು ಎಂದು ಸಚಿವರು ಹೇಳಿದರು. ಕೋವಿಡ್-19 ದಿಂದ ಮಹಿಳೆಯೊಬ್ಬರು ಮೃತಪಟ್ಟಿರುವ ಬಂಟ್ವಾಳದಲ್ಲಿ ಸೋಂಕು ವ್ಯಾಪಿಸದಂತೆ ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೊಳಿಸುವಂತೆ ಜಿಲ್ಲಾಡಳಿತಕ್ಕೆ ಸೂಚಿಸಿರುವುದಾಗಿ ಸಚಿವರು ಹೇಳಿದರು.

ಜನರ ಸ್ಪಂದನೆ: ಅಂಗಾರ
ಪ್ರಸ್ತುತ ದೇವಸ್ಥಾನ ಬಂದ್‌ ಆಗಿರುವುದರಿಂದ ಮುಜರಾಯಿ ಸಚಿವರು ಗೋಪುರದ ಬಳಿಯಿಂದಲೇ ದೇವರಿಗೆ ನಮಸ್ಕರಿಸಿದರು. ಬಳಿಕ ಶಾಸಕ ಎಸ್‌. ಅಂಗಾರ ಅವರೊಂದಿಗೆ ದೇವಸ್ಥಾನದ ಆಡಳಿತ ಕಚೇರಿಯಲ್ಲಿ ತಾಲೂಕಿನ ಸ್ಥಿತಿಗತಿ ಬಗ್ಗೆ ಚರ್ಚಿಸಿದರು. ದೇವಸ್ಥಾನದಲ್ಲಿ ಸರ್ಪಸಂಸ್ಕಾರ ಸೇವೆ ನಿರ್ವಹಿಸುವ ಪುರೋಹಿತರಿಗೆ ಆಹಾರ ಭದ್ರತೆ ಒದಗಿಸಲು ಕ್ರಮ ಕೈಗೊಳ್ಳಲಾಗುವುದು. ಸುಳ್ಯ ವಿಧಾನಸಭೆ ಕ್ಷೇತ್ರದಲ್ಲಿ ಲಾಕ್‌ಡೌನ್‌ಗೆ ಸಾರ್ವಜನಿಕರು ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ ಎಂದು ಎಸ್‌. ಅಂಗಾರ ಅವರು ಹೇಳಿದರು.

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಕಾರ್ಯ ನಿರ್ವಹಣಾಧಿಕಾರಿ ರವೀಂದ್ರ ಎಂ.ಎಚ್‌., ಪ್ರಮುಖರಾದ ವೆಂಕಟ್‌ ವಳಲಂಬೆ, ಹರೀಶ್‌ ಕಂಜಿಪಿಲಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next