Advertisement

Govt ಮಟ್ಟದಲ್ಲಿ ನ್ಯಾಯ ದೊರಕಿಸಿ ಕೊಡಲು ಪೂರ್ಣ ನೆರವು: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌

11:07 PM Nov 17, 2023 | Team Udayavani |

ಉಡುಪಿ/ಮಲ್ಪೆ: ಜಿಲ್ಲೆಯನ್ನೇ ಬೆಚ್ಚಿ ಬೀಳಿಸಿದ ನಾಲ್ವರ ಕೊಲೆ ಪ್ರಕರಣ ನಡೆದ ನೇಜಾರಿನ ಮನೆಗೆ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಶುಕ್ರವಾರ ಭೇಟಿ ನೀಡಿ ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದರು.

Advertisement

ಮೃತ ಹಸೀನಾ ಅವರ ಪತಿ ನೂರ್‌ ಮೊಹಮದ್‌, ಮಗ ಆಸಾದ್‌ ಹಾಗೂ ಕುಟುಂಬದ ಸದಸ್ಯರನ್ನು ಭೇಟಿಯಾಗಿ ಆರೋಪಿಯನ್ನು ತ್ವರಿತವಾಗಿ ಬಂಧಿಸುವ ಮೂಲಕ ಪೊಲೀಸ್‌ ಇಲಾಖೆ ಒಳ್ಳೆಯ ಕೆಲಸ ಮಾಡಿದ್ದು, ಆದಷ್ಟು ಬೇಗ ನಿಮ್ಮ ಕುಟುಂಬಕ್ಕೆ ನ್ಯಾಯ ದೊರಕಿಸಲು ಪ್ರಯತ್ನ ಮಾಡುತ್ತೇವೆ ಎಂದರು.

ಕುಟುಂಬದ ನಾಲ್ಕು ಸದಸ್ಯರನ್ನು ಅಮಾನುಷವಾಗಿ ಕೊಂದ ವ್ಯಕ್ತಿ ರಾಕ್ಷಸ ಕೃತ್ಯ ಎಸಗಿದ್ದಾನೆ. ಮೃತರ ಕುಟುಂಬದ ಓಜತೆ ಸರಕಾರವಿದೆ. ಶಾಂತಿ ಪ್ರಿಯ ಜಿಲ್ಲೆಯಲ್ಲಿ ಹೀಗಾಗಬಾರದಿತ್ತು. ಮುಂಜಾಗೃತ ಕ್ರಮ ಕೈಗೊಂಡು ಕಾನೂನು ಸುವ್ಯವಸ್ಥೆ ಕಾಪಾಡುತ್ತೇವೆ ಎಂದು ಭರವಸೆ ನೀಡಿದರು.

ಆರೋಪಿ ಸೈಕೋ ಕಿಲ್ಲರ್‌ ರೀತಿಯಲ್ಲಿ ವರ್ತಿಸಿದ್ದಾನೆ. ಆತನಿಗೆ ಮದುವೆಯಾಗಿ ಇಬ್ಬರು ಮಕ್ಕಳಿದ್ದಾರೆ. 20 ನಿಮಿಷದಲ್ಲಿ ಕೃತ್ಯವೆಸಗಿದ ಆತನ ಮಾನಸಿಕ ಸ್ಥಿತಿ ಎಷ್ಟು ವಿಕೃತ ಇರಬಹುದು ಎಂದು ಊಹಿಸಲು ಸಾಧ್ಯವಿಲ್ಲ. ತ್ವರಿತ (ಫಾಸ್ಟ್‌ ಟ್ರ್ಯಾಕ್‌) ನ್ಯಾಯಾಲಯದ ಮೂಲಕ ತನಿಖೆಗೆ ಕುಟುಂಬಸ್ಥರು ಒತ್ತಾಯಿಸಿದ್ದಾರೆ. ಸೂಕ್ತ ರೀತಿಯಲ್ಲಿ ತನಿಖೆ ಮಾಡಿಸಲಾಗುವುದು ಎಂದರು.

ಕುಟುಂಬಸ್ಥರ ಮನವಿಯಂತೆ ಕಾನೂನು ಚೌಕಟ್ಟಿನಲ್ಲಿ ಸರಕಾರದ ವತಿಯಿಂದ ಏನೇನು ಮಾಡಲು ಸಾಧ್ಯವಿದೆಯೋ ಎಲ್ಲವನ್ನೂ ಮಾಡಲಾಗುವುದು. ಭದ್ರತೆಗೆ ಏನೇನು ಬೇಕೋ ಆದೆಲ್ಲವನ್ನು ಜಿಲ್ಲಾಧಿಕಾರಿ, ಪೊಲೀಸ್‌ ವರಿಷ್ಠಾಧಿಕಾರಿಗಳ ಜತೆಗೆ ಮಾತನಾಡಿ ಎಲ್ಲ ವ್ಯವಸ್ಥೆ ಕಲ್ಪಿಸಲಾಗುವುದು ಎಂದರು. ಜಿಲ್ಲಾಧಿಕಾರಿ ಡಾ| ವಿದ್ಯಾಕುಮಾರಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ| ಕೆ. ಅರುಣ್‌, ಜಿಲ್ಲಾ ಪಂಚಾಯತ್‌ ಸಿಇಒ ಪ್ರಸನ್ನ ಎಚ್‌. ಮೊದಲಾದವರು ಜತೆಗಿದ್ದರು.

Advertisement

ಸಚಿವೆಗೆ ಮನವಿ
ತ್ವರಿತಗತಿಯಲ್ಲಿ ನ್ಯಾಯದಾನ ದೊರಕುವಂತೆ ವಿಶೇಷ ತ್ವರಿತ ನ್ಯಾಯಾಲಯದ ( ಫಾಸ್ಟ್‌ ಟ್ರ್ಯಾಕ್‌) ಮೂಲಕ ಪ್ರಕರಣದ ವಿಚಾರಣೆ ನಡೆಸಿ ಅಪರಾಧಿಗೆ ಕಠಿನ ಶಿಕ್ಷೆ ವಿಧಿಸಬೇಕು. ವಿಶೇಷ ಸರಕಾರಿ ಅಧಿಯೋಜಕರನ್ನು ನೇಮಿಸಿ ವಿಶೇಷ ಪ್ರಕರಣವಾಗಿ ಪರಿಗಣಿಸಬೇಕು. ಹಿರಿಯ ನ್ಯಾಯವಾದಿ ಶಿವಪ್ರಸಾದ್‌ ಆಳ್ವರನ್ನು ಸರಕಾರಿ ಅಭಿಯೋಜಕರನ್ನಾಗಿ ನೇಮಿಸಬೇಕು ಎಂದು ಮನೆಯ ಯಜಮಾನ ನೂರ್‌ ಮೊಹಮದ್‌ ಅವರು ಸಚಿವರಿಗೆ ಮನವಿ ಸಲ್ಲಿಸಿದರು.

ಪತ್ರಕರ್ತರೊಂದಿಗೆ ಎಸ್ಪಿ ಮಾತಿನ ಚಕಮಕಿ
ಸಾಂತ್ವನ ನೀಡಲು ನೇಜಾರಿನ ಮನೆಗೆ ಉಸ್ತುವಾರಿ ಸಚಿವರು ಬಂದಾಗ ಪತ್ರಕರ್ತರು ಚಿತ್ರೀಕರಣ ಮಾಡಲು ಮನೆಯೊಳಗೆ ಪ್ರವೇಶಿಸಲು ಮುಂದಾದರು. ಆ ವೇಳೆ ಪೊಲೀಸರು ತಡೆದಾಗ ಮಧ್ಯೆ ಪ್ರವೇಶಿಸಿದ ಎಸ್ಪಿ ಡಾ| ಕೆ. ಅರುಣ್‌ ಅವರು ಪತ್ರಕರ್ತರ ಜತೆ ರೇಗುತ್ತಾ, ಸಚಿವರು ಕುಟುಂಬಕ್ಕೆ ಸಾಂತ್ವನ ಹೇಳಲು ಬಂದಿದ್ದು ನೀವು ನಿಮ್ಮ ಟಿಆರ್‌ಪಿ ಹೆಚ್ಚಿಸಿಕೊಳ್ಳಲು ಮುಂದಾಗುತ್ತಿದ್ದೀರಿ ಎಂದು ಮಾತಿಗಿಳಿದರು. ಈ ವೇಳೆ ಎಸ್ಪಿ ಮತ್ತು ಪತ್ರಕರ್ತರ ನಡುವೆ ಕೆಲವು ಹೊತ್ತು ಮಾತಿಕ ಚಕಮಕಿ ನಡೆಯಿತು.

ಗಗನಸಖಿ ಮಗಳ ಆಸೆ
ಮಗಳು ಸೌದಿಯಲ್ಲಿ ನನ್ನ ಜತೆ ಇರುವಾಗ ವಿಮಾನದಲ್ಲಿ ಊರಿಗೆ ಬಂದು ಹೋಗುತ್ತಿದ್ದಾಗ ಗಗನಸಖಿಯರನ್ನು ನೋಡಿ ನಾನು ಕೂಡ ಇದೇ ಕೆಲಸ ಮಾಡುತ್ತೇನೆ ಎಂದು ವಿನಂತಿಸಿದ್ದಳು. ಮಗಳ ಆಸೆಯಂತೆ ಗಗನಸಖಿ ಕೆಲಸಕ್ಕೆ ಸೇರುವಂತೆ ಪ್ರೋತ್ಸಾಹ ನೀಡಿದೆ. ಕೊಲೆಯಾಗುವ ಮುನ್ನ ದಿನ ಆಯ್ನಾಝ್ ಅಬುಧಾಬಿಯಿಂದ ಬರುವಾಗ ತಮ್ಮ ಆಸಿಮ್‌ಗಾಗಿ ಶೂ, ಮನೆಯಲ್ಲಿ ಕೆಲಸ ಮಾಡುವ ಮಹಿಳೆಯ ಮಗನ ಹುಟ್ಟುಹಬ್ಬಕ್ಕೆ ಸಿಹಿತಿಂಡಿ, ಬ್ಯಾಗ್‌ ತೆಗೆದುಕೊಂಡು ಬಂದಿದ್ದಳು. ಅದನ್ನು ಕೊಡುವುದ್ದಾಕ್ಕಾಗಿಯೇ ಅಕೆ ಶನಿವಾರ ರಾತ್ರಿ ನೇಜಾರಿನ ಮನೆಗೆ ಬಂದಿದ್ದಾಳೆ. ರವಿವಾರ ರಾತ್ರಿ 8ಕ್ಕೆ ಮತ್ತೆ ದುಬಾೖಗೆ ಹೋಗಬೇಕಿರುವುದರಿಂದ ಮನೆಯಿಂದ ಬೆಳಗ್ಗೆ 11 ಗಂಟೆಗೆ ಹೋಗಬೇಕು ಎಂದಿದ್ದಳು ಇದು ಆಕೆ ನನ್ನಲ್ಲಿ ಹೇಳಿದ ಕೊನೆ ಮಾತು ಎಂದು ತಂದೆ ನೂರ್‌ ಮೊಹಮ್ಮದ್‌ ಹೇಳುತ್ತಾ ಗದ್ಗರಿತರಾದರು.

ಮಹಿಳೆಯರಿಗೆ ರಕ್ಷಣೆ ಕೊಡಿ
ರಾಜ್ಯದಲ್ಲಿ ಮಹಿಳೆಯರಿಗೆ ಇಂತಹ ಸಮಸ್ಯೆ ಉಂಟಾದಾಗ ಹೇಳಿಕೊಳ್ಳಲು ಸರಕಾರ ವ್ಯವಸ್ಥೆ ಕಲ್ಪಿಸಿಕೊಡಬೇಕು ಎಂದು ಮೃತ ಆಯ್ನಾಝ್ ಸಹೋದರ ಆಸಾದ್‌ ಆಗ್ರಹಿಸಿದರು. ನಮಗೆ ಇಲ್ಲಿ ಭಯವಾಗುತ್ತಿದೆ. ಪರಿಸರದಲ್ಲಿ ಎಲ್ಲರೂ ಭಯ ಭೀತರಾಗಿದ್ದಾರೆ. ನಮಗೆ ತಾತ್ಕಾಲಿಕ ಭದ್ರತೆ ನೀಡುವುದರಿಂದ ಯಾವುದೇ ಪ್ರಯೋಜನವಿಲ್ಲ. ನಮಗೆ ಸಹಾಯವಾಣಿ ಬೇಕು. ಜತೆಗೆ ನ್ಯಾಯ ಒದಗಿಸಬೇಕು ಎಂದು ಮೃತರ ಸಂಬಂಧಿ ಫಾತಿಮಾ ಆಝಾ¾ ಒತ್ತಾಯಿಸಿದರು.

ಮುಂದುವರಿದ ಮಹಜರು ಪ್ರಕ್ರಿಯೆ
ಪದವಿನಂಗಡಿಯಲ್ಲಿ ಆಯುಧಕ್ಕೆ ಶೋಧ
ಉಡುಪಿ: ಆರೋಪಿ ಪ್ರವೀಣ್‌ ಚೌಗಲೆಯ ಮಹಜರು ಪ್ರಕ್ರಿಯೆಯನ್ನು ಪೊಲೀಸರು ಶುಕ್ರವಾರವೂ ಮುಂದುವರಿಸಿದ್ದು, ಮಂಗಳೂರಿನಲ್ಲಿರುವ ಆತನ ಫ್ಲ್ಯಾಟ್‌, ನಿವೇಶನಗಳು, ಸ್ವಂತ ಮನೆಯನ್ನು ಮಹಜರು ಮಾಡಿದರು. ಮಂಗಳೂರು ಸಮೀಪದ ಪದವಿನಂಗಡಿಯಲ್ಲಿ ಪೊಲೀಸರು ಆರೋಪಿ ಕೃತ್ಯ ನಡೆಸಲು ಬಳಸಿದ್ದ ಆಯುಧಕ್ಕಾಗಿ ಶೋಧ ಕಾರ್ಯ ನಡೆಸಿದರು. ಮಹಜರು ಪ್ರಕ್ರಿಯೆ ಶನಿವಾರವೂ ಮುಂದುವರಿಯಲಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ. ತನಿಖೆ ಸಂಪೂರ್ಣಗೊಂಡ ಬಳಿಕ ಹೆಚ್ಚಿನ ವಿವರಗಳನ್ನು ನೀಡುವುದಾಗಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ| ಅರುಣ್‌ ಕೆ. ತಿಳಿಸಿದ್ದಾರೆ.

ಕೊಂಚಾಡಿಯ ರವಿಶಂಕರ ವಿದ್ಯಾಮಂದಿರ ರಸ್ತೆ ಬಳಿಯೂ ಒಂದು ಗಂಟೆಗೂ ಅಧಿಕ ಸಮಯ ಪೊಲೀಸರು ಶೋಧ ಕಾರ್ಯ ನಡೆಸಿದ್ದಾರೆ.

ಹಂತಕನ ಐಷಾರಾಮಿ ಜೀವನ
ಮಂಗಳೂರು: ಉಡುಪಿ ನೇಜಾರಿನಲ್ಲಿ ನಾಲ್ವರನ್ನು ಹತ್ಯೆಗೈದ ಹಂತಕ ಪ್ರವೀಣ್‌ ಅರುಣ್‌ ಚೌಗಲೆ ಸುಮಾರು 8 ತಿಂಗಳ ಹಿಂದೆ 18 ಲಕ್ಷ ರೂ. ಮೌಲ್ಯದ ಹೊಸ ಕಾರನ್ನು ಖರೀದಿಸಿದ್ದ. ಮಂಗಳೂರಿನ ಕೆಪಿಟಿ ಬಳಿ ಫ್ಲ್ಯಾಟ್‌, ಮಂಗಳೂರಿನಲ್ಲಿ ಎರಡು ನಿವೇಶನ, ಸುರತ್ಕಲ್‌ನಲ್ಲಿ ಸ್ವಂತ ಮನೆ ಹೊಂದಿದ್ದ ಎನ್ನಲಾಗಿದ್ದು, ಏರ್‌ ಇಂಡಿಯಾದಲ್ಲಿ ಉದ್ಯೋಗಿಯಾಗಿದ್ದ ಈತ ಇಷ್ಟು ಐಷಾರಾಮಿ ಜೀವನ ಹೇಗೆ ನಡೆಸುತ್ತಿದ್ದ? ಆತನಿಗೆ ಆದಾಯದ ಬೇರೆ ಮೂಲಗಳು ಇದ್ದವೆ? ಯಾವುದಾದರೂ ಬೇನಾಮಿ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದನೇ? ಇನ್ನಿತರ ಅಂಶಗಳ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆಂದು ತಿಳಿದುಬಂದಿದೆ.

ಲಾಠಿಚಾರ್ಜ್‌; ಪ್ರಕರಣ ದಾಖಲು
ಆರೋಪಿಯನ್ನು ಗುರುವಾರ ಸ್ಥಳ ಮಹಜರಿಗಾಗಿ ಕೃತ್ಯ ಎಸಗಿದ ನೇಜಾರಿನ ಮನೆಗೆ ಕರೆತಂದ ವೇಳೆ 30ರಿಂದ 40 ಜನರು ಗುಂಪು ಕಟ್ಟಿಕೊಂಡು ಕರ್ತವ್ಯಕ್ಕೆ ಅಡ್ಡಿಪಡಿಸಿರುವ ಬಗ್ಗೆ ಮಲ್ಪೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆರೋಪಿಯನ್ನು ವಾಪಸ್‌ ಕರೆದುಕೊಂಡು ಹೋಗುವ ಸಂದರ್ಭದಲ್ಲಿ ಸಾರ್ವಜನಿಕರು ಆತನಿಗೆ ಹಲ್ಲೆ ನಡೆಸಲು ಮುಂದಾದಾಗ ಪೊಲೀಸರು ಲಘು ಲಾಠಿಚಾರ್ಜ್‌ ನಡೆಸಿದ್ದರು. ಆರೋಪಿಯನ್ನು ವಾಹನದಿಂದ ಕೆಳಗೆ ಇಳಿಸುತ್ತಿದ್ದಂತೆ ಅಲ್ಲಿ ಸೇರಿದ್ದ 100ರಿಂದ 200 ಮಂದಿ ಸಾರ್ವಜನಿಕರು ಆರೋಪಿಯನ್ನು ಗಲ್ಲಿಗೇರಿಸುವಂತೆ ಘೋಷಣೆ ಕೂಗಿದ್ದರು. ಆತನನ್ನು ಇಲಾಖೆಯ ವಾಹನದಲ್ಲಿ ಕುಳ್ಳಿರಿಸಿ ಕೊಂಡೊಯ್ಯುವ ವೇಳೆ ಆರೋಪಿಯನ್ನು ನಮಗೆ ಕೊಡಿ ಇಲ್ಲಿಯೇ ಶಿಕ್ಷೆ ನೀಡುತ್ತೇವೆ ಎಂದು ಇಲಾಖೆಯ ವಾಹನವನ್ನು ಅಡ್ಡ ಹಾಕಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದರು. ಈ ವೇಳೆ ಕೆಎಸ್‌ಆರ್‌ಪಿ ಕಾನ್‌ಸ್ಟೆಬಲ್‌ ಒಬ್ಬರು ಆಯತಪ್ಪಿ ಚರಂಡಿಗೆ ಬಿದ್ದು ಗಾಯಗೊಂಡಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ಕಳುಹಿಸಿ ಚಿಕಿತ್ಸೆ ನೀಡಲಾಗಿತ್ತು.

52 ಗಂಟೆಗಳಲ್ಲಿ ಅಪರಾಧಿಯನ್ನು ಪತ್ತೆಹಚ್ಚಿ ಬಂಧಿಸಿರುವುದು ಸಮಾಧಾನ ತಂದಿದೆ. ತ್ವರಿತ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಲು ಸಚಿವರಿಗೆ ಮನವಿ ಮಾಡಲಾಗಿದ್ದು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ.
– ನೂರ್‌ ಮೊಹಮದ್‌, ಮೃತ ಹಸೀನಾ ಅವರ ಪತಿ

 

Advertisement

Udayavani is now on Telegram. Click here to join our channel and stay updated with the latest news.

Next