Advertisement

ಬೇಡಿಕೆ ಈಡೇರಿಕೆಗೆ ಕಾರ್ಮಿಕರ ಆಗ್ರಹ

06:13 PM Mar 29, 2022 | Team Udayavani |

ಕೊಪ್ಪಳ: ದೇಶಾದ್ಯಂತ ದುಡಿಯುವ ಕಾರ್ಮಿಕರ, ರೈತರ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಎಐಟಿಯುಸಿ ಜಿಲ್ಲಾ ಸಮಿತಿಯಿಂದ ನಗರದ ಡಿಸಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಜಿಲ್ಲಾ ಮಟ್ಟದ ಅಧಿಕಾರಿಗಳ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

Advertisement

ಕೃಷಿ ಉತ್ಪನ್ನಗಳಿಗೆ ವೈಜ್ಞಾನಿಕ ಬೆಂಬಲ ಬೆಲೆ ಖಾತ್ರಿಪಡಿಸಿ, ವಿದ್ಯುತ್ಛಕಿ ಮಸೂದೆ ಹಿಂಪಡೆಯಬೇಕು. ಯಾವುದೇ ಕಾರಣಕ್ಕೂ ಖಾಸಗೀಕರಣ ಮಾಡಬೇಡಿ. ನರೇಗಾದಲ್ಲಿ ಹೆಚ್ಚಿನ ನಿಧಿ ನೀಡಬೇಕು. ಉದ್ಯೋಗ ಖಾತ್ರಿ ಯೋಜನೆಯನ್ನು ನಗರ ಪ್ರದೇಶಗಳಿಗೆ ವಿಸ್ತರಣೆ ಮಾಡಬೇಕು. ಎಲ್ಲ ಅನೌಪಚಾರಿಕ ವಲಯದ ಕಾರ್ಮಿಕರಿಗೆ ಸಾರ್ವತ್ರಿಕ ಸಾಮಾಜಿಕ ಭದ್ರತೆ ಒದಗಿಸಿ ಕಟ್ಟಡ ಕಾರ್ಮಿಕ ಮಂಡಳಿ ಅಕ್ರಮ ತಡೆಗಟ್ಟಿ ಕಾರ್ಮಿಕರ ಸೌಲಭ್ಯಗಳನ್ನು ಹೆಚ್ಚಿಸಬೇಕು. ಅಂಗನವಾಡಿ, ಆಶಾ, ಬಿಸಿಯೂಟ ನೌಕರರಿಗೆ ಸಮಾಜಿಕ ಭದ್ರತೆಯ ಜೊತೆಗೆ ವೇತನ ಖಾತರಿ ಪಡಿಸಬೇಕು ಎಂದು ಒತ್ತಾಯಿಸಲಾಯಿತು.

ಬಿಸಿಯೂಟ ನೌಕರರ ಈಗಿರುವ ವೇತನವನ್ನು 21,000 ರೂ.ಗೆ ಹೆಚ್ಚಿಸಬೇಕು. ಬಾಕಿ ಇರುವ ವೇತನ ಹಾಗೂ ಪ್ರೋತ್ಸಾಹ ಧನವನ್ನು ತಕ್ಷಣ ಪಾವತಿಸಬೇಕು. ಅನಗತ್ಯವಾಗಿ ಬಿಸಿಯೂಟ ನೌಕರರಿಂದ ಮಾಡಿಸುವ ಕೆಲಸಗಳನ್ನು ಕೈಬಿಡಬೇಕು. ಕಳಪೆ ಗುಣಮುಟ್ಟದ ಹಾಗೂ ಕಡಿಮೆ ತೂಕದ ರೇಷನ್‌ ಪೂರೈಕೆಯಾಗುತ್ತಿದ್ದು, ಆ ಕುರಿತಂತೆ ತನಿಖೆಯಾಗಬೇಕು. ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಈಗಿರುವ ಬಿಸಿಯೂಟ ನೌಕರರ ಸಂಖ್ಯೆಯನ್ನು ಸಹ ಹೆಚ್ಚಿಸಬೇಕು. ಕೊರೊನಾ ಮಹಾಮಾರಿ ನಡುವೆ ಜನರಿಗೆ ಸೇವೆ ಸಲ್ಲಿಸುತ್ತಿರುವ ಮುಂಚೂಣಿ ಕಾರ್ಮಿಕರಿಗೆ ಸೂಕ್ತ ರಕ್ಷಣೆ ಮತ್ತು ವಿಮಾ ಸೌಲಭ್ಯಗಳನ್ನು ಖಚಿತಪಡಿಸಬೇಕು ಎಂದು ಒತ್ತಾಯಿಸಿದರು.

ಶ್ರೀಮಂತರಿಗೆ ಆಸ್ತಿ ತೆರಿಗೆ ಇತ್ಯಾದಿಗಳನ್ನು ವಿಧಿಸುವ ಮೂಲಕ ಕೃಷಿ, ಶಿಕ್ಷಣ, ಆರೋಗ್ಯ ಮತ್ತು ಇತರ ನಿರ್ಣಾಯಕ ಸಾರ್ವಜನಿಕ ಸೇವೆಗಳಿಗೆ ಹೂಡಿಕೆಯನ್ನು ಹೆಚ್ಚಿಸುವುದು. ಕೊಪ್ಪಳದ ಇಎಸ್‌ಐ ಆಸ್ಪತ್ರೆಯಲ್ಲಿ ಅತ್ಯಾಧುನಿಕ ಚಿಕಿತ್ಸಾ ಸೌಲಭ್ಯಗಳನ್ನು ಒದಗಿಸಬೇಕು. ಇಪಿಎಫ್‌ ಬಡ್ಡಿದರ ಕಡಿತ ನೀತಿ ಹಿಂತೆಗೆದುಕೊಳ್ಳಬೇಕು. ಸಣ್ಣ ರೈತರು, ಕೈಷಿ ಕಾರ್ಮಿಕರು ಮತ್ತು ಎಲ್ಲಾ ವಲಯದ ಕಾರ್ಮಿಕರಿಗೆ ತಿಂಗಳಿಗೆ ಕನಿಷ್ಠ 10,000 ರೂ. ಪಿಂಚಣಿ ನಿಗದಿಪಡಿಸಿ ರಾಷ್ಟ್ರೀಯ ಪಿಂಚಣಿ ಯೋಜನೆ ರದ್ದುಗೊಳಿಸಿ, ಹಳೆ ಪಿಂಚಣಿ ವ್ಯವಸ್ಥೆ ಮುಂದುವರಿಸಬೇಕು ಎಂದು ಒತ್ತಾಯಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next