ಕಲಬುರಗಿ: ಸಾವಿತ್ರಿಬಾಯಿ ಫುಲೆ ಜನ್ಮದಿನವನ್ನು ರಾಜ್ಯ ಸರ್ಕಾರವೇ ಎಲ್ಲ ಶಾಲೆಗಳಲ್ಲಿ ಆಚರಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ ವಾದ) ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದ ಪ್ರತಿಭಟನಾಕಾರರು ಪ್ರೊ| ಎಸ್.ಜಿ. ಸಿದ್ದರಾಮಯ್ಯ ಅಧ್ಯಕ್ಷರಾಗಿರುವ ಸರ್ಕಾರಿ ಶಾಲಾ ಸಬಲೀಕರಣ ಸಮಿತಿ-2017ರ ವರದಿಯನ್ನು ಕೂಡಲೇ ಜಾರಿಗೆ ತರಬೇಕು. ಸಮಿತಿ ವರದಿಯಲ್ಲಿ ಹೇಳಿರುವ ಶಿಫಾರಸ್ಸುಗಳನ್ನು ಕೂಡಲೇ ಅನುಷ್ಠಾನಗೊಳಿಸಬೇಕು.
ಸಾವಿತ್ರಿಬಾಯಿ ಫುಲೆಯವರ ಜೀವನ, ಸಾಧನೆ ಹಾಗೂ ಹೋರಾಟಗಳನ್ನು ಪಠ್ಯದಲ್ಲಿ ಅಳವಡಿಸಬೇಕು. ಇದೇ ವರ್ಷದಿಂದ ಮೂರು ವರ್ಷದಿಂದ ಆರು ವರ್ಷದ ಮಕ್ಕಳಿಗೆ ಪೂರ್ವ ಪ್ರಾಥಮಿಕ ಶಾಲೆಗಳನ್ನು ಆರಂಭಿಸಬೇಕು. ಹೊಸ ಶಿಕ್ಷಣ ನೀತಿ ರೂಪಿಸಲು ತಕ್ಷಣ ಸಮಿತಿ ರಚಿಸಬೇಕು ಎಂದು ಆಗ್ರಹಿಸಿದರು. ಸರ್ಕಾರಿ ಹುದ್ದೆ, ಸರ್ಕಾರಿ ಸೌಲತ್ತು, ರಾಜಕೀಯ ಸ್ಥಾನಮಾನ ಪಡೆದ ಎಲ್ಲ ಕುಟುಂಬದವರು ಅವರ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ದಾಖಲಿಸುವುದನ್ನು ಕಡ್ಡಾಯಗೊಳಿಸಬೇಕು.
ಶಿಕ್ಷಣದ ಖಾಸಗೀಕರಣದ ಎಲ್ಲಾ ವಿಧಾನಗಳನ್ನು ಕೈಬಿಡಬೇಕು. ಕನ್ನಡ ಭಾಷಾ ಮಾಧ್ಯಮದವರಿಗೆ ಪ್ರಾಥಮಿಕ ಹಂತದಿಂದಲೇ ಉತ್ತಮ ಇಂಗ್ಲಿಷ ಭಾಷಾ ಕಲಿಕೆಯನ್ನು ಸರ್ಕಾರಿ ಶಾಲೆಗಳಲ್ಲಿ ಕಡ್ಡಾಯಗೊಳಿಸಬೇಕು. ಭೀಮಾ ಕೋರೆಗಾಂವ ವಿಜಯೋತ್ಸವದಲ್ಲಿ ದಲಿತನನ್ನು ಹತ್ಯೆ ಮಾಡಿದವರನ್ನು ಕೂಡಲೇ ಬಂಧಿಸಿ, ಗಡಿಪಾರು ಮಾಡಬೇಕು. ಹಾನಿಗೊಳಗಾದ ವಾಹನ, ಹತ್ಯೆಗೊಳಗಾದ ಸಂತ್ರಸ್ತ ಕುಟುಂಬಕ್ಕೆ 50 ಲಕ್ಷ ರೂ. ಗಳ ಪರಿಹಾರ ವಿತರಿಸಬೇಕು. ಸಂಘಟನೆಗಳಾದ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಹಾಗೂ ಶ್ರೀರಾಮ ಸೇನೆಯನ್ನು ನಿಷೇಧಿಸಬೇಕು ಎಂದು ಆಗ್ರಹಿಸಿದರು.
ಸಮಿತಿಯ ವಿಭಾಗಿಯ ಸಂಚಾಲಕ ಅರ್ಜುನ ಗೊಬ್ಬೂರ, ಸಂಜೀವಕುಮಾರ ಜವಳಕರ, ಗೋಪಾಲ ರಾಂಪೂರೆ, ಬಾಬುರಾವ ಶೆಳ್ಳಗಿ, ಶ್ರೀಹರಿ ಕರಕಳ್ಳಿ, ಪಾಂಡುರಂಗ ಧನ್ನಿ, ಮಾರುತಿ ಹುಳಗೊಳಕರ, ವಿಜಯಕುಮಾರ ಅಂಕಲಗಿ, ಮಾರುತಿ ಮಾಳಗಿ, ಶಿವಕುಮಾರ ಗುತ್ತೇದಾರ, ಶ್ರೀನಿವಾಸ ಖೇಳಗಿ, ಮಹಾಂತೇಶ ದೊರೆ, ಅಶೋಕ ಸಂಗೀತಕರ, ಮಲ್ಲಿಕಾರ್ಜುನ ಗಂವಾರ, ಸೋಮಶೇಖರ ಬೆಡಗಪಳ್ಳಿ ಹಾಗೂ ಇತರರಿದ್ದರು.