Advertisement

ನಿಷ್ಕ್ರಿಯಗೊಳ್ಳುತ್ತಿರುವ ಫ‌ುಕುಶಿಮಾ ಪರಮಾಣು ರಿಯಾಕ್ಟರ್‌

12:47 PM Aug 09, 2020 | sudhir |

1945ರ ಆ. 6 ಮತ್ತು ಆ. 9ರಂದು ಜಪಾನ್‌ನ ಹಿರೋಶಿಮಾ ಮತ್ತು ನಾಗಸಾಕಿ ನಗರಗಳ ಮೇಲೆ ವಿಶ್ವದಲ್ಲಿಯೇ ಮೊದಲ ಬಾರಿಗೆ ಅಮೆರಿಕ ಪರಮಾಣು ಬಾಂಬ್‌ನ್ನು ಪ್ರಯೋಗಿಸಿ ಅಪಾರ ಸಂಖ್ಯೆಯ ಪ್ರಾಣಹಾನಿ ಮತ್ತು ಪರಿಸರ ನಾಶಕ್ಕೆ ಕಾರಣವಾಯಿತು. ಈ ಘಟನೆಗೆ ಈಗ 75 ವರ್ಷಗಳು. 2011ರ ಮಾ. 11ರಂದು ಭೂಕಂಪ ಮತ್ತು ಸುನಾಮಿಯಿಂದಾಗಿ ಫ‌ುಕುಶಿಮಾ ಅಣುಸ್ಥಾವರದಲ್ಲಿನ ರಿಯಾಕ್ಟರ್‌ಗಳಿಂದ ಹೊರಸೂಸಲ್ಪಟ್ಟ ವಿಕಿರಣಗಳು ಕೂಡಾ ಇಂತಹುದೇ ಅನಾಹುತವನ್ನು ಸೃಷ್ಟಿಸಿತು. ಸದ್ಯ ಫ‌ುಕುಶಿಮಾ ಚೇತರಿಕೆಯ ಹಾದಿಯಲ್ಲಿದೆ.

Advertisement

ಅದು 2011ರ ಮಾರ್ಚ್‌ 11. ಪ್ರಬಲವಾದ ಭೂಕಂಪ ಮತ್ತು ಅದರ ಬೆನ್ನಿಗೆ ಬಂದೆರಗಿದ ಸುನಾಮಿಯಿಂದ ಜಪಾನ್‌ನ ಕರಾವಳಿಯ ಪ್ರಾಂತ್ಯವಾಗಿರುವ ಫ‌ುಕುಶಿಮಾ ಮತ್ತು ಇತರ ಕೆಲವು ನಗರಗಳಲ್ಲಿ ಭಾರೀ ಹಾನಿ ಸಂಭವಿಸಿತು.
ಸುನಾಮಿಯಿಂದ ಫ‌ುಕುಶಿಮಾ ನಗರದಲ್ಲಿರುವ ಅಣು ಸ್ಥಾವರ (Nuclear Reactor)ಕ್ಕೆ ಬಹಳಷ್ಟು ಹಾನಿಯಾಗಿತ್ತು. ಪರಮಾಣು ರಿಯಾಕ್ಟರ್‌ಗಳು ಹೊರಸೂಸುವ ವಿಕಿರಣ (radioactivity) ಪರಿಸರಕ್ಕೆ ಸೇರಿದರೆ ಆಹಾರ ಮತ್ತು ಇತರ ಉತ್ಪನ್ನಗಳೂ ಮಲಿನಗೊಳ್ಳುತ್ತವೆ. ಮನುಷ್ಯ ತನ್ನನ್ನು ತಾನು ವಿಕಿರಣಕ್ಕೆ ಒಡ್ಡಿಕೊಂಡಲ್ಲಿ (exposure) ಆತನ ಆರೋಗ್ಯದ ಮೇಲಾಗುವ ತೊಂದರೆಗಳು ಊಹಿಸಲೂ ಅಸಾಧ್ಯವಾದದ್ದು. ಆದರೆ ಸುನಾಮಿಯ ಅನಂತರದ ತತ್‌ಕ್ಷಣದ ಹಾನಿಕಾರಕ ಪರಿಣಾಮಗಳಿಗಿಂತಲೂ ಇದಕ್ಕೆ ಸಂಬಂಧಪಟ್ಟಂತೆ ಹರಡುವ ವದಂತಿಗಳು ಮತ್ತು ಊಹಾಪೋಹಗಳೇ ಅತ್ಯಂತ ವಿಷಕಾರಿಯಾದುದಾಗಿವೆ.

ರಿಕ್ಟರ್‌ ಮಾಪಕದಲ್ಲಿ 9ರ ತೀವ್ರತೆ ದಾಖಲಾಗಿದ್ದ ಭಾರೀ ಭೂಕಂಪ ಸುನಾಮಿಯನ್ನು ಸೃಷ್ಟಿಸಿತ್ತು. ಇದರಿಂದಾಗಿ ಜಪಾನಿನ ಈಶಾನ್ಯ ತೋಹೊಕು ಪ್ರಾಂತ್ಯದ ಹಲವು ಪ್ರದೇಶಗಳು ಅಕ್ಷರಶಃ ನಿರ್ನಾಮವಾದರೆ ಕರಾವಳಿ ಫ‌ುಕುಶಿಮಾದ ಡಾಯಿ-ಇಚಿ (Fukushima Dai-ichi) ಪರಮಾಣು ವಿದ್ಯುತ್‌ ಸ್ಥಾವರದಲ್ಲಿ ಮೂಲ ರಿಯಾಕ್ಟರ್‌ನ ಕರಗುವಿಕೆಗೂ ಕಾರಣವಾಯಿತು. ಈ ತ್ರಿವಳಿ (ಭೂಕಂಪ, ಸುನಾಮಿ ಮತ್ತು ಪರಮಾಣು ಕೇಂದ್ರಕ್ಕಾದ ಹಾನಿ) ದುರಂತದಿಂದಾಗಿ 18,500 ಮಂದಿ ಸಾವನ್ನಪ್ಪಿದ್ದರು ಮತ್ತು 1,74,000 ಮಂದಿಯನ್ನು ಸ್ಥಳಾಂತರಿಸಲಾಗಿತ್ತು.

ಫ‌ುಕುಶಿಮಾ ಡಾಯಿ-ಇಚಿ ಪರಮಾಣು ಕೇಂದ್ರದ ಭೇಟಿ
ನಾನು ಮತ್ತು ಸಿಂಗಾಪುರ ನ್ಯಾಶನಲ್‌ ವಿಶ್ವ ವಿದ್ಯಾನಿಲಯದ ವಿದ್ಯಾರ್ಥಿಗಳು ಟೋಕಿಯೊದಿಂದ ಇವಾಕಿ ನಗರಕ್ಕೆ ಮುನ್ನಾ ದಿನ ರಾತ್ರಿ ಬಂದು ಹೊಟೇಲ್‌ ಒಂದರಲ್ಲಿ ಉಳಿದುಕೊಂಡೆವು. ಕೆಲವು ವಿದ್ಯಾರ್ಥಿಗಳು ಟೋಕಿಯೊ ದಿಂದಲೇ ತಿಂಡಿ ಪ್ಯಾಕ್‌ ಮಾಡಿಕೊಂಡೇ ಬಂದಿದ್ದರು. ಅವರಿಗೆ ಫ‌ುಕುಶಿಮಾ ಜಿಲ್ಲೆಯ ತಿನಿಸುಗಳೆಲ್ಲ ವಿಕಿರಣದಿಂದ ಮಲಿನವಾಗಿರಬಹುದು ಎನ್ನುವ ಅಂಜಿಕೆ ಮತ್ತು ಭಯ. ಬೆಳಗ್ಗೆ ಎದ್ದು ಹೊರಟಾಗ ನಾಲ್ವರು ವಿದ್ಯಾರ್ಥಿಗಳು ಹೆದರಿಕೆಯಿಂದ ಪರಮಾಣು ಕೇಂದ್ರಕ್ಕೆ ಬರಲು ಹಿಂಜರಿದರು. ಉಳಿದ ನಾವು 7 ಮಂದಿ ರೈಲಿನ ಮೂಲಕ ಫ‌ುಕುಶಿಮಾ ಅಣುಸ್ಥಾವರಕ್ಕೆ ಅತೀ ಹತ್ತಿರದಲ್ಲಿರುವ ರೈಲ್ವೇ ನಿಲ್ದಾಣ ಟೊಮಿಯೊಕವನ್ನು ತಲುಪಿದೆವು. ಅಲ್ಲಿಂದ ನಮ್ಮ ಪ್ರಯಾಣ ಜನರಲ್‌ ಎಲೆಕ್ಟ್ರಿಕ್‌ ಮತ್ತು ಟೋಕಿಯೊ ಎಲೆಕ್ಟ್ರಿಕ್‌ ಪವರ್‌ ಕಂಪೆನಿ (ಟೆಪ್ಕೊ) ಜತೆಯಲ್ಲಿ ವಿನ್ಯಾಸಗೊಳಿಸಿ, ನಿರ್ಮಿಸಿದ ಮತ್ತು ನಿರ್ವಹಿಸುತ್ತಿರುವ ಫ‌ುಕುಶಿಮಾ ಡಾಯಿ-ಇಚಿ ಪರಮಾಣು ಕೇಂದ್ರದತ್ತ ಸಾಗಿತು.

ಪರಮಾಣು ಕೇಂದ್ರ- ಇಂದಿನ ಸ್ಥಿತಿ: ರಿಯಾಕ್ಟರ್‌ ಸೈಟಿಗೆ ಹೋಗಲು ನಾವು ಬಸ್‌ ಹತ್ತಿದೆವು. ಅನಂತರ ನಮಗೆಲ್ಲರಿಗೂ ವಿಕಿರಣಶೀಲತೆಯನ್ನು ಅಳೆಯುವ ಸಾಧನವಾದ ಸಣ್ಣ ವಿಕಿರಣ ಡೋಸಿಮೀಟರ್‌ (Pocket Radiation Dosimeter) ಕೊಟ್ಟರು.

Advertisement

2011ರಲ್ಲಿ ಫ‌ುಕುಶಿಮಾ ಡಾಯಿ-ಇಚಿ ಪರಮಾಣು ವಿದ್ಯುತ್‌ ಸ್ಥಾವರದಲ್ಲಿ ಸಂಭವಿಸಿದ ರಿಯಾಕ್ಟರ್‌ನ ಕರಗುವಿಕೆಯು ಇತಿಹಾಸದಲ್ಲಿ ಅತ್ಯಂತ ಭೀಕರವಾದ ಪರಮಾಣು ದುರಂತವಾಗಿದೆ. ದುರಂತ ಸಂಭವಿಸಿದಾಗ ಕಾರ್ಯನಿರತವಾಗಿದ್ದ ಈ ರಿಯಾಕ್ಟರ್‌ನಲ್ಲಿ ನಿರಂತರವಾಗಿ ವಿದ್ಯುತ್‌ ಉತ್ಪಾದಿಸಲಾಗುತ್ತಿತ್ತು. ಈಗ ಕಾರ್ಮಿಕರೆಲ್ಲ ಬೇರೆ ಕೆಲಸದಲ್ಲಿ ನಿರತರಾಗಿದ್ದಾರೆ. ಅದಕ್ಕೆ ಈ ರಿಯಾಕ್ಟರನ್ನು dead or dying reactor ಎಂದರೂ ತಪ್ಪಾಗಲಿಕ್ಕಿಲ್ಲ. ಫ‌ುಕುಶಿಮಾ ಡಾಯಿ-ಇಚಿ ರಿಯಾಕ್ಟರ್‌ನಲ್ಲಿ 6 ಘಟಕ (unit)ಗಳಿವೆ. ಘಟಕಗಳ ಕಟ್ಟಡಗಳ ಹತ್ತಿರವಿರುವ ಪ್ರದೇಶಗಳಲ್ಲಿ ವಿಕಿರಣ ಪ್ರಮಾಣದ ಮಟ್ಟ ಕೆಲವೊಮ್ಮೆ ಕ್ರಿಯಾತ್ಮಕವಾಗಿ ಬದಲಾಗುತ್ತಿತ್ತು ಮತ್ತು ತುಂಬ ಹೆಚ್ಚು ತೋರಿಸುತ್ತಿತ್ತು. ಆರಂಭಿಕ ಭೂಕಂಪದ ಅನಂತರ ಪೆಸಿಫಿಕ್‌ ಮಹಾಸಾಗರದಲ್ಲಿ ಸೃಷ್ಟಿಯಾದ 50 ಅಡಿ ಎತ್ತರದ ಅಲೆಗಳು ನೇರವಾಗಿ ಫ‌ುಕುಶಿಮಾ ಡಾಯಿ-ಇಚಿಯಲ್ಲಿ ತುರ್ತು  ಸಮಯದಲ್ಲಿ ಸಮುದ್ರದ ನೀರಿನಿಂದ ತಂಪಾಗಿಸುವ ವ್ಯವಸ್ಥೆಯನ್ನು ನಡೆಸುವ ಡೀಸೆಲ್‌ ಜನರೇಟರ್‌ಗಳಿಗೆ ಅಪ್ಪಳಿಸಿ ಅವನ್ನು ನಿಷ್ಕ್ರಿಯಗೊಳಿಸಿ ದವು. ಜನರೇಟರ್‌ಗಳು ಸ್ಥಗಿತಗೊಂಡಿದ್ದರಿಂದ ರಿಯಾಕ್ಟರ್‌ಗಳೊಳಗಿನ ತಾಪಮಾನವು 2,800 ಡಿಗ್ರಿ ಸೆಲ್ಸಿಯಸ್‌ಗೆ ಏರಿತ್ತು.

ಘಟಕಗಳಿಂದ ವಿಕಿರಣ ಸೋರಿಕೆಯಾಗಲು ಇದೇ ಮುಖ್ಯ ಕಾರಣ. ಈ ಸೋರಿಕೆ 2011ರಲ್ಲಿ ಮತ್ತು ಅನಂತರದ ಎಲ್ಲ ಪರಿಣಾಮಗಳಿಗೆ ಕಾರಣವಾಗಿದೆ. ಈಗ ದೂರದಿಂದ ನಿಯಂತ್ರಿ ಸುವ (ರಿಮೋಟ್‌) ಕೆಮರಾಗಳು ಮತ್ತು ರೊಬೊಟಿಕ್ಸ್‌ ಬಳಸಿ, ತಂತ್ರಜ್ಞರು ಘಟಕಗಳ ಒಳಭಾಗವನ್ನು 350 ಮೀ. ದೂರ ದಲ್ಲಿರುವ ಕೇಂದ್ರ ನಿಯಂತ್ರಣ ಕೊಠಡಿಯಿಂದ ಗಮನಿಸು ತ್ತಾರೆ. ಈಗ ಹೆಚ್ಚಿನ ಕೆಲಸಗಳು ಪರಿಶೋಧನಾತ್ಮಕವಾಗಿದ್ದು, ತಂತ್ರಜ್ಞರಿಗೆ ಅದರೊಳಗಿನ ಪರಿಸ್ಥಿತಿಗಳನ್ನು ವಿವರಿಸುತ್ತವೆ.

ವಿಕಿರಣ ಮಟ್ಟಗಳು: ವಿಕಿರಣ ಪ್ರಮಾಣ ರಿಯಾಕ್ಟರ್‌ಗಳ ಬಳಿ ಸಹಜ ಪ್ರಮಾಣ ಕ್ಕಿಂತ ಸುಮಾರು 3,500 ಪಟ್ಟು ಹೆಚ್ಚಿರುತ್ತದೆ. ಕುತೂಹಲ ವೆಂದರೆ 2011ರಲ್ಲಿ ಸುನಾಮಿ ಅಪ್ಪಳಿಸಿದಾಗ ಘಟಕ 5 ಕಾರ್ಯನಿರ್ವಹಿಸುತ್ತಿರಲಿಲ್ಲ. ಹೀಗಾಗಿ ಇತರ ಘಟಕಗಳಲ್ಲಿ ಆದಂತಹ ದುರಂತ ಪರಿಸ್ಥಿತಿಯಿಂದ ಪಾರಾಗಿದೆ.

ಫ‌ುಕುಶಿಮಾ ಡಾಯಿ-ಇಚಿ ಪರಮಾಣು ವಿದ್ಯುತ್‌ ಸ್ಥಾವರ ಇರುವ 860 ಎಕರೆ ಸುಂದರ ಕಡಲತೀರದ ತಾಣವು ಒಂದು ಕಾಲದಲ್ಲಿ ಉರುಳುತ್ತಿರುವ ಹಸುರು ಬೆಟ್ಟಗಳಂತಿತ್ತು. ಆದರೆ 2011ರ ದುರಂತದ ಅನಂತರ ವಿಕಿರಣದಿಂದ ಕಲುಷಿತವಾದ ಮಣ್ಣು ಸಮುದ್ರವನ್ನು ಸೇರದಂತೆ ಕಾಂಕ್ರೀಟ್‌ ಪದರಗಳನ್ನು ನಿರ್ಮಿಸಲಾಗಿದೆ. ಬಂಜರು ಕೈಗಾರಿಕಾ ಅಪೋಕ್ಯಾಲಿಪ್ಸಿನ ಭೂದೃಶ್ಯದಂತೆ ತೋರುತ್ತಿದ್ದರೂ ನೈಸರ್ಗಿಕ ಪ್ರಪಂಚದ ಚಿಹ್ನೆಗಳು ಇನ್ನೂ ಅಸ್ತಿತ್ವದಲ್ಲಿವೆ. ಟೆಪ್ಕೊ ಬಸ್‌ ನಮ್ಮನ್ನು ದಿಗ್ಭ್ರಮೆಗೊಳಿಸುವ ಚಕ್ರವ್ಯೂಹದಂತಿರುವ ರಸ್ತೆಗಳ ಮೂಲಕ ಫ‌ುಕುಶಿಮಾ ಡಾಯಿ- ಇಚಿಯ ಕೈಗಾರಿಕಾ ವಲಯದ ಭೂದೃಶ್ಯದ ಭೇಟಿಗೆ ಕರೆ ದೊಯ್ದಿತು. ನೀರಸ, ಸಂಕೀರ್ಣ ಮತ್ತು ಬೂದು ಬಣ್ಣದಿಂದ ಮುಚ್ಚಿರುವಂತೆ ಕಾಣುವ ಈ ಕೇಂದ್ರವು ಬೇರೊಂದು ಪ್ರಪಂಚ ದಂತೆ ಭಾಸವಾಗುತ್ತದೆ; ಕೆಲವೆಡೆ ಶ್ಮಶಾನದ ಹಾಗೆ ಕಾಣಿಸುತ್ತದೆ.

ಘಟಕ ಒಂದರಲ್ಲಿನ ವಿಕಿರಣ ತುಂಬಾ ಹೆಚ್ಚಾಗಿದೆ ಎಂದು ಕಂಡುಬಂದಿದೆ ಮತ್ತು ಇದು ವಿಕಿರಣ ಕಾಯಿಲೆಯನ್ನು ಉಂಟುಮಾಡುವ ಡೋಸೇಜ್‌ಗೆ ಸಮನಾಗಿರುತ್ತದೆ. ಇದನ್ನು ಡಾಯಿ-ಇಚಿಯ ಹಾಟ್‌ಸ್ಪಾಟ್‌ (Hot – Spot) ಅಂತಲೂ ಗುರುತಿಸಬಹುದು.

ಪರಿಸ್ಥಿತಿಯಲ್ಲಿ ಸುಧಾರಣೆ: ಫ‌ುಕುಶಿಮಾ ಡಾಯಿ- ಇಚಿ ನಿಷ್ಕ್ರಿಯಗೊಂಡ ಅಥವಾ ನಿಷ್ಕ್ರಿಯಗೊಳ್ಳುತ್ತಿರುವ ಪರಮಾಣು ವಿದ್ಯುತ್‌ ಕೇಂದ್ರ ವಾಗಿದ್ದರೂ ಉಸಿರಾಟಕಾರಕಗಳು, ಜಂಪ್‌ಸೂಟ್‌ಗಳು ಮತ್ತು ಹಳದಿ ಬೂಟುಗಳನ್ನು ಧರಿಸಿ ಮುಖಗವಸು ಹಾಕಿದ ಕಾರ್ಮಿಕರು ಕಾರ್ಯನಿರತರಾಗಿದ್ದಾರೆ. ಎಂಜಿನಿಯರ್‌ಗಳು ವಿಶೇಷವಾಗಿ ವಿನ್ಯಾಸಗೊಳಿಸಿದ ರೋಬಾಟಿಕ್ಸ್‌ ಅನ್ನು ರಿಯಾಕ್ಟರ್‌ಗಳ ಒಳಗೆ ಸ್ವತ್ಛಗೊಳಿಸುವ ಕಾರ್ಯಗಳಿಗೆ ಬಳಸುತ್ತಿದ್ದಾರೆ. ಅಲ್ಲಿ ಮನುಷ್ಯರು ಹೋಗಲು ಸಾಧ್ಯವೇ ಇಲ್ಲ. ಏಕೆಂದರೆ ವಿಕಿರಣದ ಮಟ್ಟ ತುಂಬ ಹೆಚ್ಚು. ಅಲ್ಲಿಗೇನಾದರೂ ಮನುಷ್ಯರು ಹೋದರೆ ಕೂಡಲೇ ಸಾಯುವ ಸಾಧ್ಯತೆಗಳೂ ಇವೆ.

ರಿಯಾಕ್ಟರ್‌ ಒಳಗಿನ ಭೇಟಿಯ ಅನಂತರ ನಮಗೆಲ್ಲ ಕೊಟ್ಟಿದ್ದ ವಿಕಿರಣ ಡೋಸಿಮೀಟರನ್ನು ವಿದ್ಯಾರ್ಥಿಗಳೆಲ್ಲರೂ ಕುತೂಹಲದಿಂದ ಹಾಗೂ ಭಯದಿಂದ ಪರಿಶೀಲಿಸಿದರು. ಅದೃಷ್ಟವಶಾತ್‌ ನಾವು ಈ ಭೇಟಿಯಿಂದ ಪಡೆದ ವಿಕಿರಣದ ಮಟ್ಟ (Radiation Dose) ಒಂದು ಹಲ್ಲಿನ-ಕ್ಷ-ಕಿರಣದ (Dental X-ray) ಪ್ರಮಾಣದಷ್ಟು (5 to 10 microSv). ಬಸ್‌ನಲ್ಲಿ ಕುಳಿತು ವಿದ್ಯುತ್‌ ಕೇಂದ್ರದ ಪ್ರವೇಶದ್ವಾರಕ್ಕೆ ಹೋಗುವ ದಾರಿಯಲ್ಲಿ ಪರಿತ್ಯಕ್ತ ಹಳ್ಳಿಗಳ ಪೆಟ್ರೋಲ್‌ ಸ್ಟೇಶನ್‌ಗಳು, ಪ್ಯಾಚಿಂಕೊ ಸ್ಲಾಟ್‌ಗಳು, ಮಕ್ಕಳ ಆಟದ ಕೇಂದ್ರಗಳು ಮತ್ತು ಮನೆಗಳು ಅವಶೇಷಗಳಾಗಿ ಕಂಡುಬಂದವು. ರೆಸ್ಟೋರೆಂಟ್‌ಗಳು, ಕಿರಾಣಿ ಅಂಗಡಿಗಳು, ಜಪಾನಿಗೆ ಅನನ್ಯ ಮತ್ತು ಸೀಮಿತವಾಗಿರುವ ಸೋನಿಕ್‌ ಹೆಡ್ಜ್ ಹಾಗ್‌ ವೀಡಿಯೋ ಗೇಮ್‌ ಸೆಂಟರ್‌ಗಳು ಕುಸಿದಿವೆ. ರಸ್ತೆಗಳ ಮೇಲೆ, ಬದಿಗಳಲ್ಲಿ ವಿಕಿರಣ ಮಾನಿಟರಿಂಗ್‌ ಸಾಧನ ಇಟ್ಟಿದ್ದಾರೆ.

ಭವಿಷ್ಯದ ಸುನಾಮಿಯಿಂದ ರಕ್ಷಿಸಿಕೊಳ್ಳಲು ಫ‌ುಕುಶಿಮಾ ಪ್ರಾಂತ್ಯದಲ್ಲಿ ಕರಾವಳಿಯ ಅನೇಕ ಭಾಗಗಳಲ್ಲಿ 41 ಅಡಿ ಎತ್ತರದ ಬೃಹತ್‌ ಕಾಂಕ್ರೀಟ್‌ ಗೋಡೆಗಳನ್ನು ಸಮುದ್ರಕ್ಕೆ ಅಡ್ಡವಾಗಿ ನಿರ್ಮಿಸಲಾಗಿದೆ. ಈ ನೈಸರ್ಗಿಕ ವಿಪತ್ತುಗಳಿಂದ ಉಂಟಾದ ಬೃಹತ್‌ ಹಾನಿಯಿಂದ ಚೇತರಿಸಿಕೊಳ್ಳಲು ಸಮಯ, ತಾಳ್ಮೆ ಮತ್ತು ಸಾಕಷ್ಟು ಜಾಣ್ಮೆ ಬೇಕು. ವದಂತಿಗಳನ್ನು ಉತ್ತೇಜಿಸುವ ಬದಲು ಅಂತಾರಾಷ್ಟ್ರೀಯ ಸಮುದಾಯವು ಜಪಾನ್‌ಗೆ ಬೆಂಬಲ ನೀಡುವುದು ಸೂಕ್ತ.

ಕುಂದಾಪುರ ತಾಲೂಕಿನ ಮಣೂರಿನವರು. ಸಿಂಗಾಪುರದ ರಾಷ್ಟ್ರೀಯ ವಿ.ವಿ.ಯ (National University of Singapore, NUS) ತೆಂಬುಸು ರೆಸಿಡೆನ್ಸಿಯಲ್‌ ಕಾಲೇಜಿನಲ್ಲಿ ವಿಕಿರಣ ಮತ್ತು ಸಮಾಜ ಅಥವಾ ಸಾರ್ವಜನಿಕ ಗ್ರಹಿಕೆ ಕೋರ್ಸ್‌ ಅನ್ನು ಕಲಿಸುತ್ತಿದ್ದಾರೆ. ವಿವಿಧ ಕ್ಷೇತ್ರಗಳಲ್ಲಿ ಶಾಂತಿಯುತ ಉದ್ದೇಶಗಳಿಗಾಗಿ ಪರಮಾಣು ವಿಕಿರಣವನ್ನು ಹೇಗೆ ಬಳಸಲಾಗುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಲು ಸಂಶೋಧನಾ ರಿಯಾಕ್ಟರ್‌ಗಳು ಮತ್ತು ಕ್ಯಾನ್ಸರ್‌ ಕೇಂದ್ರಗಳಿಗೆ ಭೇಟಿ, ಕ್ಷೇತ್ರ ಭೇಟಿ(field visit)ಗಳನ್ನು ಕಾಲೇಜು ಏರ್ಪಡಿಸುತ್ತ ಬಂದಿದೆ. ಅದರಂತೆ ಡಾ| ಹಂದೆ ಅವರು ವಿದ್ಯಾರ್ಥಿಗಳಿಗಾಗಿ 2018ರಲ್ಲಿ ಜಪಾನಿನ ಫ‌ುಕುಶಿಮಾಕ್ಕೆ ವಿದ್ಯಾರ್ಥಿಗಳ ತಂಡದೊಂದಿಗೆ ಭೇಟಿ ನೀಡಿದ್ದರು.

– ಡಾ| ಎಂ. ಪ್ರಕಾಶ್‌ ಹಂದೆ

Advertisement

Udayavani is now on Telegram. Click here to join our channel and stay updated with the latest news.

Next