ಬೆಂಗಳೂರು/ನವದೆಹಲಿ: ದೇಶದಲ್ಲಿ ಇಂಧನ ಬೆಲೆ ಏರಿಕೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಶುಕ್ರವಾರ (ಜೂನ್ 18) ಪೆಟ್ರೋಲ್, ಡೀಸೆಲ್ ಬೆಲೆ ಲೀಟರ್ ಗೆ ದಾಖಲೆ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ರಾಷ್ಟ್ರರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ಬೆಲೆ 27 ಪೈಸೆ ಹಾಗೂ ಡೀಸೆಲ್ ದರ 28 ಪೈಸೆ ಏರಿಕೆಯಾಗಿದೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ:ಕೋವಿಡ್ 19ರ 3ನೇ ಅಲೆಯಲ್ಲಿ ಮಹಾರಾಷ್ಟ್ರದಲ್ಲಿ ಮತ್ತೆ ಲಾಕ್ ಡೌನ್ ಸಾಧ್ಯತೆ: ವರದಿ
ಬೆಂಗಳೂರಿನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 100 ರೂಪಾಯಿ ಗಡಿ ದಾಟಿದ್ದು, ಡೀಸೆಲ್ ಲೀಟರ್ ಬೆಲೆ 92.97 ರೂಪಾಯಿಗೆ ಏರಿಕೆಯಾಗಿದೆ. ರಾಜ್ಯದ ವಿವಿಧೆಡೆ ಪೆಟ್ರೋಲ್ ಬೆಲೆ ನೂರು ರೂಪಾಯಿ ಗಡಿ ದಾಟಿದೆ ಎಂದು ವರದಿ ವಿವರಿಸಿದೆ.
ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಲೀಟರ್ ಗೆ 96.93 ರೂಪಾಯಿಯಾಗಿದ್ದು, ಡೀಸೆಲ್ ಬೆಲೆ ಲೀಟರ್ ಗೆ 87.69 ರೂಪಾಯಿಗೆ ಹೆಚ್ಚಳವಾಗಿದೆ. ಮುಂಬಯಿಯಲ್ಲಿ ಪೆಟ್ರೋಲ್ ಬೆಲೆ ಲೀಟರ್ ಗೆ 103.08 ರೂಪಾಯಿಗೆ ಏರಿಕೆಯಾಗಿದ್ದು, ಡೀಸೆಲ್ ಬೆಲೆ 95.14 ರೂಪಾಯಿಗೆ ಏರಿಕೆಯಾಗಿದೆ ಎಂದು ಇಂಡಿಯನ್ ಆಯಿಲ್ ಕಾರ್ಪೋರೇಶನ್ ವೆಬ್ ಸೈಟ್ ನ ಅಂಕಿಅಂಶ ತಿಳಿಸಿದೆ.
ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳು ಜೂನ್ ನಿಂದ ಸತತವಾಗಿ ಬೆಲೆ ಹೆಚ್ಚಿಸುತ್ತಿದೆ. ರಾಜಸ್ಥಾನ, ಮಧ್ಯಪ್ರದೇಶ, ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣ, ಲಡಾಖ್ ಮತ್ತು ಕರ್ನಾಟಕ ಸೇರಿದಂತೆ ಏಳು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶದಲ್ಲಿ ಪೆಟ್ರೋಲ್ ಬೆಲೆ ಲೀಟರ್ ಗೆ ನೂರು ರೂಪಾಯಿ ದಾಟಿರುವುದಾಗಿ ವರದಿ ತಿಳಿಸಿದೆ.