Advertisement

ಹಣ್ಣಿನ ಮಕ್ಕಳು!

10:18 PM Aug 25, 2019 | Lakshmi GovindaRaj |

ಮೂಲತಃ ಜಪಾನ್‌ ದೇಶದ ದೇಶಿ ತಳಿ ವಿಜಯಪುರದಂಥ ಬರಡು ಭೂಮಿಯ ವಾತಾವರಣದಲ್ಲಿ, ಸಾವಯವ ಪದ್ಧತಿಯ ನೆರಳಿನಲ್ಲಿ ಹುಲುಸಾಗಿ ಬೆಳೆದು, ಫ‌ಲ ನೀಡುತ್ತಿದೆ. ವಿದೇಶಿ ತಳಿಯಾದರೂ ಅನ್ನದಾತರ ಬದುಕಿಗೆ ಆರ್ಥಿಕತೆಯ ಬಲ ನೀಡಬಲ್ಲುದು ಎಂಬುದನ್ನು ಕೃಷಿಕ ಬಸವರಾಜ ಸಾಬೀತುಪಡಿಸುತ್ತಿದ್ದಾರೆ.

Advertisement

ವಿಜಯಪುರ ನಗರದಿಂದ ಅಥಣಿ ರಸ್ತೆಗೆ ಹೊಂದಿಕೊಂಡಂತೆ ಅಂದಾಜು 19 ಕಿ.ಮೀ. ಅಂತರದ ರತ್ನಾಪುರ ಕ್ರಾಸ್‌ ಹತ್ತಿರ ಬಸವರಾಜ ರಾಣಗಟ್ಟಿ ಎನ್ನುವವರ ಜಮೀನಿದೆ. ಅವರು ಡ್ರ್ಯಾಗನ್‌ ಫ್ರೂಟ್‌ ಬೆಳೆಯನ್ನು ತೆಗೆದಿರುವುದು ಇಲ್ಲೇ. ವಿದೇಶಿ ಬೆಳೆಯನ್ನು ಸಾವಯವ ಪದ್ಧತಿ ಬಳಸಿ 2 ಎಕರೆ ಪೂರ್ತಿ ಬೆಳೆದು ಈ ಭಾಗದ ರೈತರಲ್ಲಿ ಜಾಗೃತಿ ಮೂಡಿಸಿದ್ದಾರೆ.

ಕಂಬದ ಮ್ಯಾಲೆ ಡ್ರ್ಯಾಗನ್‌: ಕಂಬದಿಂದ ಕಂಬಕ್ಕೆ 7 ಅಡಿ ಅಂತರ, ಸಾಲಿನಿಂದ ಸಾಲಿಗೆ 11 ಅಡಿ ಅಂತರದಲ್ಲಿ ಸಿಮೆಂಟ್‌ ಕಂಬಗಳನ್ನು ನೆಟ್ಟಿದ್ದಾರೆ. ಒಂದು ಸಿಮೆಂಟ್‌ ಕಂಬದ ನಾಲ್ಕು ದಿಕ್ಕಿನಲ್ಲಿ ನಾಲ್ಕು ಡ್ರ್ಯಾಗನ್‌ ಸಸಿಗಳನ್ನು ನೆಟ್ಟಿದ್ದಾರೆ. ಒಂದು ಎಕರೆಗೆ 520 ಸಿಮೆಂಟ್‌ ಕಂಬಗಳನ್ನು ನೆಟ್ಟಿದ್ದು, 2080 ಡ್ರ್ಯಾಗನ್‌ ಫ್ರೂಟ್‌ ಸಸಿಗಳನ್ನು ನೆಟ್ಟಿದ್ದಾರೆ. ಅವುಗಳಿಗೆ ಹನಿ ನೀರಾವರಿ ಮೂಲಕ ನೀರು ಸರಬರಾಜು ಮಾಡಿದ್ದಾರೆ. ಚೆನ್ನಾಗಿ ಕೊಳೆತ ಸೆಗಣಿ ಗೊಬ್ಬರ, 100 ಕೆ.ಜಿ. ಬೇವಿನ ಹಿಂಡಿ, 100 ಕೆ.ಜಿ. ಕರಂಜಿ ಹಿಂಡಿ, 20 ಕೆ.ಜಿ ಮೆಗಾ ಚಾರ್ಜ್‌- ಎ.ಜಿ. ಮತ್ತು 5 ಕೆ.ಜಿ. ಪೋರೆಟ್‌ ಸಸಿ ನೆಡುವ ಮೊದಲು ಹಾಕಬೇಕು.

ಮಹಾರಾಷ್ಟ್ರ ಹಾಗೂ ಕಾಗವಾಡದಿಂದ ಕೆಂಪು, ಬಿಳಿ ಬಣ್ಣದ ಹಣ್ಣುಗಳ ಎರಡು ತಳಿಗಳ ಡ್ರ್ಯಾಗನ್‌ ಫ್ರೂಟ್‌ ಸಸಿಗಳನ್ನು ತಂದು ನೆಡಲಾಗಿದ್ದು, ಡ್ರ್ಯಾಗನ್‌ ಫ್ರೂಟ್‌ ಸಸಿ 5ರಿಂದ 6 ತಿಂಗಳಲ್ಲಿ 6 ಅಡಿ ಎತ್ತರದ ಸಿಮೆಂಟ್‌ ಕಂಬದ ವರೆಗೂ ಪ್ಲೇಟ್‌ಗಳ ತನಕ ಬೆಳೆದು ಗಿಡವಾಗುತ್ತದೆ. ಅನಂತರ 22 ತಿಂಗಳಲ್ಲಿ ಪ್ಲೇಟ್‌ನಿಂದ ಕಾರಂಜಿಯಾಕಾರದಲ್ಲಿ ವೃತ್ತಾಕಾರವಾಗಿ ಇಳಿಜಾರಾಗಿ ಬೆಳೆದ ಕಾಂಡದಲ್ಲಿ ಮೊದಲಿಗೆ ಹೂವು ಬಿಟ್ಟ ಬಳಿಕ, ನಂತರ ಡ್ರ್ಯಾಗನ್‌ ಫ್ರೂಟ್‌ ಹಣ್ಣಿನ ಇಳುವರಿ ಬರುತ್ತದೆ.

ಖರ್ಚು ಕಡಿಮೆ, ನಿರ್ವಹಣೆಯೂ ಸುಲಭ: ಮಡ್ಡಿ ಜಮೀನಿನ ನೆಲಕ್ಕೆ ಉತ್ತಮ ನೀರಿದ್ದರೆ ಸಾಕು ಡ್ರ್ಯಾಗನ್‌ ಫ್ರೂಟ್‌ ಗಿಡವನ್ನು 25 ವರ್ಷಗಳ ಕಾಲ ಬೆಳೆಯಬಹುದು. ಮಳೆಗಾಲದಲ್ಲಿ ನೀರು ಹೆಚ್ಚಾದರೆ ಕೊಳೆ ರೋಗ ಬರುವ ಸಾಧ್ಯತೆ ಇರುತ್ತದೆ. ಅದೊಂದೇ ಸಮಸ್ಯೆ. ಕೀಟ ಮತ್ತು ಇತರೆ ರೋಗಗಳು ಬಾಧಿಸುವುದು ತುಂಬಾ ಕಡಿಮೆ. ಹೀಗಾಗಿ ಕೊಂಚಮಟ್ಟಿಗೆ ನಿಗಾ ವಹಿಸಿದರೆ ಸಾಕು; ಉತ್ತಮ ಇಳುವರಿ ಪಡೆಯಲು ಸಾಧ್ಯ. ಚೆನ್ನಾಗಿ ನೀರು ಬಸಿದು ಹೋಗುವ ಸಾದಾ ಅಥವಾ ಮಧ್ಯಮ ಜಮೀನು ಮತ್ತು ಅದರ ರಸಸಾರ 6 ರಿಂದ 7.5 ಇರಬೇಕು. ಅಧಿಕ ತಾಪಮಾನವಿರುವ ಮಾರ್ಚ್‌, ಏಪ್ರಿಲ್‌ ಮತ್ತು ಮೇ ತಿಂಗಳನ್ನು ಬಿಟ್ಟು ಇತರೆ ದಿನಗಳಲ್ಲಿ ಈ ಡ್ರ್ಯಾಗನ್‌ ಫ್ರೂಟ್‌ ಸಸಿಗಳನ್ನು ನೆಡಬಹುದು.

Advertisement

ಮೊದಲ ಇಳುವರಿಯಾಗಿ ಸಿಕ್ಕ ಡ್ರ್ಯಾಗನ್‌ ಹಣ್ಣು ಸುಮಾರು 54 ಕೆ.ಜಿ.ಯಷ್ಟು. ಕೆ.ಜಿ.ಗೆ 150 ರೂ.ಗಳಂತೆ 54 ಕೆಜಿ ಹಣ್ಣುಗಳನ್ನು ಮಾರಾಟ ಮಾಡಿದ್ದು, ವಾರ್ಷಿಕ ಒಂದು ಎಕರೆಗೆ 5- 6 ಟನ್‌ ಡ್ರ್ಯಾಗನ್‌ ಫ್ರೂಟ್‌ ಇಳುವರಿ ಪಡೆಯಬಹುದು. ಮಾರುಕಟ್ಟೆಯಲ್ಲಿ ಒಂದು ಕೆ.ಜಿ ಡ್ರ್ಯಾಗನ್‌ ಹಣ್ಣಿನ ಬೆಲೆ 150 ರು.ನಷ್ಟಿದೆ. ಹೀಗಾಗಿ ಟನ್‌ಗಟ್ಟಲೆ ಬೆಳೆದ ರೈತರಿಗೆ ಲಾಭ ಕಟ್ಟಿಟ್ಟ ಬುತ್ತಿ. ಅಲ್ಲದೆ, ವರ್ಷಗಳು ಕಳೆದಂತೆ ಡ್ರ್ಯಾಗನ್‌ ಫ್ರೂಟಿನ ಇಳುವರಿಯೂ ಹೆಚ್ಚುತ್ತಾ ಸಾಗುತ್ತದೆ ಎನ್ನುವುದು ರಾಣಗಟ್ಟಿಯವರ ಅನುಭವದ ಮಾತು.

ಮಾರಾಟ ಮತ್ತು ಮಾರ್ಗದರ್ಶನ: ಪ್ರಗತಿಪರ ರೈತರಾದ ಬಸವರಾಜ ರಾಣಗಟ್ಟಿಯವರು ಡ್ರ್ಯಾಗನ್‌ ಹಣ್ಣುಗಳನ್ನು ಬೆಳೆಯುತ್ತಿರುವುದಷ್ಟೇ ಅಲ್ಲದೆ ಸಸಿಗಳ ಮಾರಾಟವನ್ನೂ ಮಾಡುತ್ತಾರೆ. ಒಂದು ಸಸಿಗೆ 50 ರು. ಬೆಲೆ ನಿಗದಿ ಪಡಿಸಿದ್ದಾರೆ. ಜೊತೆಗೆ, ರೈತರಿಗೆ ಡ್ರ್ಯಾಗನ್‌ ಫ್ರೂಟ್‌ ಕೃಷಿ ಮಾಡುವ ಬಗ್ಗೆ ಸೂಕ್ತ ಮಾಹಿತಿ ನೀಡುತ್ತಿದ್ದಾರೆ, ಮಾರ್ಗದರ್ಶನವನ್ನೂ ಮಾಡುತ್ತಿದ್ದಾರೆ.

ಇರುಳಲಿ ಅರಳುವ ಹೂ…: ಡ್ರ್ಯಾಗನ್‌ ಫ್ರೂಟ್‌ ಹೂವು ಬ್ರಹ್ಮಕಮಲದಂತೆಯೇ ರಾತ್ರಿಯ ವೇಳೆ ಅರಳುತ್ತದೆ. ಸೂರ್ಯನ ಕಿರಣಕ್ಕೆ ಬಾಡಿ ಮುದುಡುವ ಹೂವು, ಚಂದ್ರನ ಬೆಳಕಿಗೆ ಮೊಗ ಅರಳಿ ಮಂದಹಾಸ ಬೀರುತ್ತದೆ.

ಚಿತ್ರ-ಲೇಖನ: ಪರಶುರಾಮ ಶಿವಶರಣ, ವಿಜಯಪುರ

Advertisement

Udayavani is now on Telegram. Click here to join our channel and stay updated with the latest news.

Next